ಭಾರತದಲ್ಲಿ ಹೂಡಿಕೆಗೆ ವಿದೇಶಿ ರಕ್ಷಣಾ ಕಂಪನಿಗಳ ಪೈಪೋಟಿ, ಮೇಡ್ ಇನ್ ಇಂಡಿಯಾಗೆ ಭಾರಿ ಬೇಡಿಕೆ ಸಿಗುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಜಾಗತಿಕ ಮಟ್ಟದಲ್ಲಿ ರಕ್ಷಣಾ ಶಸ್ತ್ರಾಸ್ತ್ರ ತಯಾರಿಕ ಕಂಪನಿಗಳಿಗೆ ಬಹುದೊಡ್ಡ ಗ್ರಾಹಕ ಎಂದರೆ ಅದು ಭಾರತ. ಸದ್ಯ ಭಾರತ ತನ್ನ ರಕ್ಷಣಾ ಕ್ಷೇತ್ರದ ಉತ್ಪನ್ನ ಹಾಗೂ ಶಸ್ತ್ರಾಸ್ತ್ರಗಳ ಪೈಕಿ ಶೇ.90ಕ್ಕೂ ಹೆಚ್ಚಿನ ಪ್ರಮಾಣವನ್ನು ಆಮದು ಮಾಡಿಕೊಳ್ಳುತ್ತಿದ್ದು, ಸಾವಿರಾರು ಕೋಟಿಯಷ್ಟು ಹಣ ಇದಕ್ಕಾಗಿ ಮೀಸಲಿಟ್ಟಿದೆ.

ಇಷ್ಟು ದೊಡ್ಡ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿರುವ ಭಾರತ ಮುಂದಿನ ದಿನಗಳಲ್ಲಿ ತಾನು ಯಾವುದೇ ಕಂಪನಿ ಜತೆಗೆ ವ್ಯಾಪಾರ ಮಾಡಬೇಕಾದರೆ, ಆ ಕಂಪನಿ ತನ್ನ ನೆಲದಲ್ಲಿ ಆ ಉತ್ಪನ್ನವನ್ನು ತಯಾರಿಸಬೇಕು. ತಾನು ಖರೀದಿಸಬೇಕಿರುವ ಶಸ್ತ್ರಾಸ್ತ್ರ ‘ಮೇಡ್ ಇನ್ ಇಂಡಿಯಾ’ ಆಗಿರಬೇಕು ಎಂಬ ಷರತ್ತನ್ನು ಮುಂದಿಟ್ಟಿದೆ. ಆ ಮೂಲಕ ವಿದೇಶಿ ರಕ್ಷಣಾ ಉತ್ಪನ್ನ ಕಂಪನಿಗಳು ಭಾರತದಲ್ಲಿ ತಮ್ಮ ಕೇಂದ್ರಗಳನ್ನು ಸ್ಥಾಪಿಸುವಂತೆ ಭಾರತ ಆಹ್ವಾನ ನೀಡಿದೆ.

ತನ್ನ ದೊಡ್ಡ ಮಟ್ಟದ ಗ್ರಾಹಕವಾಗಿರುವ ಭಾರತದ ಈ ಷರತ್ತನ್ನು ವಿದೇಶಿ ಕಂಪನಿಗಳು ಒಪ್ಪಿಕೊಳ್ಳದೇ ನಿರಾಕರಿಸುವ ಪರಿಸ್ಥಿತಿಯಲ್ಲಂತೂ ಇಲ್ಲ. ಕಾರಣ ಭಾರತದಿಂದ ಸಿಗುವ ಲಾಭವನ್ನು ಅವುಗಳು ಕಳೆದುಕೊಳ್ಳಲು ತಯಾರಿಲ್ಲ. ಹೀಗಾಗಿ ಯೂರೋಪಿನ ಏರ್ ಬಸ್, ಅಮೆರಿಕದ ಲಾಕ್ಹೀಡ್ ಮಾರ್ಟೀನ್, ಜರ್ಮನಿಯ ಥಿಸ್ಸೆನ್ ಕ್ರೂಪ್ ಮರೀನ್ ಸಿಸ್ಟಮ್ಸ್, ಫ್ರಾನ್ಸಿನ ನಾವೆಲ್ ಗ್ರೂಪ್ ಗಳು ಭಾರತದ ಜತೆಗೆ ಈ ಒಪ್ಪಂದ ಮಾಡಿಕೊಳ್ಳಲು ಪೈಪೋಟಿ ನಡೆಸುತ್ತಿವೆ. ಜರ್ಮನಿ ಹಾಗೂ ಫ್ರಾನ್ಸ್ ಕಂಪನಿಗಳು ಭಾರತದಲ್ಲಿ ಜಲಾಂತರ್ಗಾಮಿ ನಿರ್ಮಾಣ ಕೇಂದ್ರ ಸ್ಥಾಪಿಸಲು 10 ಬಿಲಿಯನ್ ಅಮೆರಿಕನ್ ಡಾಲರ್ ಮೊತ್ತದಷ್ಟು ಒಪ್ಪಂದಕ್ಕೆ ಸಹಿ ಹಾಕಲು ತುದಿಗಾಲಲ್ಲಿ ನಿಂತಿವೆ.

ಜಾಗತಿಕ ಮಟ್ಟದಲ್ಲಿ ಅತ್ಯಂತ ಬಲಶಾಲಿ ಯುದ್ಧ ವಿಮಾನವಾಗಿರುವ ಪ್ಯಾಂಥರ್ ಹೆಲಿಕಾಪ್ಟರ್ ತಯಾರಿಸುವ ಏರ್ ಬಸ್ ಈ ಕುರಿತು ಪ್ರತಿಕ್ರಿಯೆ ನೀಡಿದ್ದು, ‘ಒಂದು ವೇಳೆ ನಾವು ಒಂದು ದಶಕದ ಅವಧಿಗೆ ಒಪ್ಪಂದ ಮಾಡಿಕೊಂಡಿದ್ದೇ ಆದರೆ, ಭಾರತ ಮುಂದಿನ ದಿನಗಳಲ್ಲಿ ಬಹು ಉಪಯೋಗಿ ಚಾಪರ್ ತಯಾರಿಕ ಕೇಂದ್ರವಾಗಿ ಮಾರ್ಪಡಾಗಲಿದೆ’ ಎಂದಿದೆ.

ಇನ್ನು ಲಾಕ್ಹೀಡ್ ಮಾರ್ಟೀನ್ ಸಂಸ್ಥೆ ಹೇಳೋದಿಷ್ಟು, ‘ಎಫ್16 ಯುದ್ಧ ವಿಮಾನ ಆಯ್ಕೆಯಾದರೆ, ನಾವು ಸ್ವೀಡನಿನ್ನ ಸಾಬ್ ಕಂಪನಿ ವಿರುದ್ಧ ಉತ್ತಮ ಪೈಪೋಟಿ ನಡೆಸಲಿದ್ದೇವೆ. ಇದಕ್ಕಾಗಿ 15 ಬಿಲಿಯನ್ ಡಾಲರ್ ನಷ್ಟು ಬಂಡವಾಳ ಹೂಡಬೇಕಾಗುತ್ತದೆ. ಇದರಿಂದ ಭಾರತದ ಉತ್ಪಾದಕ ಕಂಪನಿಗಳ ಬೆಳವಣಿಗೆಗೂ ಸಹಾಯಕವಾಗಲಿದೆ’ ಎಂದಿದೆ.

ಹೀಗೆ ಭಾರತದ ಈ ಷರತ್ತಿಗೆ ಒಪ್ಪಿ ಅನೇಕ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಕೇಂದ್ರ ಆರಂಭಿಸಲು ಮುಂದಾಗಿದೆ. ಈ ಕಂಪನಿಗಳನ್ನು ಭಾರತಕ್ಕೆ ಕರೆತರುವ ಕೇಂದ್ರ ಸರ್ಕಾರದ ತನ್ನದೇ ಆದ ಲಾಭದ ಲೆಕ್ಕಾಚಾರವನ್ನು ಹೊಂದಿದೆ.

ಅವುಗಳೆಂದರೆ, ಸದ್ಯ ವಿದೇಶಿ ಕಂಪನಿಗಳು ಭಾರತದಲ್ಲಿ ತಮ್ಮ ಕೇಂದ್ರವನ್ನು ಸ್ಥಾಪಿಸಿ, ಸ್ಥಳೀಯ ಕಂಪನಿಗಳ ಜತೆ ಕೈ ಜೋಡಿಸಿದರೆ, ನಮ್ಮ ದೇಶದ ಕಂಪನಿಗಳಿಗೆ ದೊಡ್ಡ ಪ್ರಮಾಣದ ಉತ್ತೇಜನ ಸಿಗಲಿದೆ. ಇನ್ನು ಸಾವಿರಾರು ಕೋಟಿ ಮೊತ್ತದ ಬಂಡವಾಳ ಭಾರತಕ್ಕೆ ಹರಿದು ಬರಲಿದೆ. ಇವೆಲ್ಲಕ್ಕಿಂತ ಮುಖ್ಯವಾಗಿ ಭಾರತದಲ್ಲಿ ದೊಡ್ಡ ಪ್ರಮಾಣದ ಉದ್ಯೋಗ ಸೃಷ್ಟಿಯಾಗಲಿದೆ.

2019ರ ಲೋಚಸಭೆ ಚುನಾವಣೆಗೆ ಕೇವಲ ಎರಡು ವರ್ಷ ಬಾಕಿ ಇರುವಾಗ ಕೇಂದ್ರ ಸರ್ಕಾರದ ಮುಂದೆ ಇರುವ ದೊಡ್ಡ ಸವಾಲೆಂದರೆ ಅದು ಉದ್ಯೋಗ ಸೃಷ್ಟಿ ಮಾಡುವುದು. ವರ್ಷದಿಂದ ವರ್ಷಕ್ಕೆ ಲಕ್ಷಾಂತರ ಮಂದಿ ಯುವಕರು ಉದ್ಯೋಗ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ ಇವರಿಗೆ ಸೂಕ್ತ ಅವಕಾಶ ಕಲ್ಪಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ ಮುಂದಿದೆ. ಹೀಗಾಗಿ ವಿದೇಶಿ ರಕ್ಷಣಾ ಉತ್ಪನ್ನ ಕಂಪನಿಗಳನ್ನು ಭಾರತಕ್ಕೆ ಸೆಳೆದು, ಇಲ್ಲಿ ಅವುಗಳ ಕೇಂದ್ರ ಸ್ಥಾಪಿಸಿ ಅದರಿಂದ ಉದ್ಯೋಗ ಸೃಷ್ಠಿ ಮಾಡುವುದು ಭಾರತ ಸರ್ಕಾರದ ಯೋಜನೆಯಾಗಿದೆ.

Leave a Reply