ತ್ರಿವಳಿ ತಲಾಕ್ ಅಸಿಂಧು ಎಂದು ಐತಿಹಾಸಿಕ ತೀರ್ಪು ಕೊಟ್ಟ ಸುಪ್ರೀಂ ಕೋರ್ಟ್, ಮುಸ್ಲಿಂ ಮಹಿಳೆಯರ ಮನಗೆದ್ದ ಮೋದಿ ಸರ್ಕಾರ

ಡಿಜಿಟಲ್ ಕನ್ನಡ ಟೀಮ್:

ಕಳೆದ ಆರು ತಿಂಗಳಿಂದ ದೇಶದಾದ್ಯಂತ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ತ್ರಿವಳಿ ತಲಾಕ್ ಕುರಿತಾಗಿ ಸುಪ್ರೀಂ ಕೋರ್ಟ್ ಇಂದು ಐತಿಹಾಸಿಕ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎಸ್ ಖೆಹರ್ ಅವರ ನೇತೃತ್ವದ ಐದು ಸದ್ಯರ ಪೀಠ, ‘ಈ ಆಚರಣೆ ಸಂವಿಧಾನ ಬಾಹೀರ ಎಂದು ಅಭಿಪ್ರಾಯಪಟ್ಟಿದ್ದು, ಇನ್ನು ಮುಂದೆ ಈ ತ್ರಿವಳಿ ತಲಾಕ್ ಮೂಲಕ ಪಡೆಯುವ ವಿಚ್ಛೇದನ ಅಸಿಂಧುವಾಗಲಿದೆ’ ಎಂದು ಆದೇಶ ನೀಡಿದೆ.

ಐದು ನ್ಯಾಯಮೂರ್ತಿಗಳ ಪೀಠದಲ್ಲಿ ಮೂವರು ನ್ಯಾಯಮೂರ್ತಿಗಳು ತ್ರಿವಳಿ ತಲಾಕ್ ಪದ್ಧತಿಯನ್ನು ನಿಲ್ಲಿಸಬೇಕು ಎಂಬ ಅಭಿಪ್ರಾಯಕ್ಕೆ ಬಂದ ಹಿನ್ನೆಲೆಯಲ್ಲಿ ಈ ಆದೇಶವನ್ನು ನೀಡಲಾಗಿದೆ. ನ್ಯಾಯಮೂರ್ತಿಗಳಾದ ನಾರಿಮನ್, ಲಲಿತ್ ಹಾಗೂ ಕುರಿಯನ್ ಅವರು ಈ ಆಚರಣೆ ಸಂವಿಧಾನಬಾಹೀರ ಎಂದು ಅಭಿಪ್ರಾಯಪಟ್ಟಿದ್ದಾರೆ. ಅದರೊಂದಿಗೆ ಆಗಸ್ಟ್ 22ರಿಂದ ತ್ರಿವಳಿ ತಲಾಕ್ ಪದ್ಧತಿಗೆ ಭಾರತದಲ್ಲಿ ಯಾವುದೇ ಮಾನ್ಯತೆ ಇರುವುದಿಲ್ಲ.

ಮುಂದಿನ ಆರು ತಿಂಗಳ ಒಳಗಾಗಿ ಕೇಂದ್ರ ಸರ್ಕಾರ ಇದಕ್ಕೆ ಸಂಬಂಧಿಸಿದಂತೆ ಒಂದು ಸೂಕ್ತ ಕಾನೂನನ್ನು ಜಾರಿಗೊಳಿಸಬೇಕು. ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ಈ ಕುರಿತ ಕಾನೂನು ಜಾರಿಗೆ ತರಲು ಎಲ್ಲ ಪಕ್ಷಗಳು ತಮ್ಮ ಭಿನ್ನಮತವನ್ನು ಮರೆದು ಸಹಕರಿಸಬೇಕು. ಒಂದು ವೇಳೆ ಆರು ತಿಂಗಳ ಒಳಗಾಗಿ ಕಾನೂನು ರಚಿತವಾಗದಿದ್ದರೆ, ನ್ಯಾಯಾಲಯದ ಆದೇಶ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಈ ಕುರಿತು ಕಾನೂನು ರಚಿಸುವಾಗ ಮುಸ್ಲಿಂ ಸಮುದಾಯದ ಹಿತಾಸಕ್ತಿ ಹಾಗೂ ಶಹರಿಯಾ ಕಾನೂನನ್ನು ಪರಿಗಣಿಸಬೇಕು. ಎಂದು ಸುಪ್ರೀಂ ಕೋರ್ಟ್ ಪೀಠ ತನ್ನ ಆದೇಶದಲ್ಲಿ ಸೂಚಿಸಿದೆ.

ಸುಪ್ರೀಂ ಕೋರ್ಟಿನ ತೀರ್ಪನ್ನು ಅನೇಕ ಮುಸ್ಲಿಂ ಮಹಿಳೆಯರು ಸ್ವಾಗತಿಸಿದರೆ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ನಿರಾಸೆ ವ್ಯಕ್ತಪಡಿಸಿದೆ. ಅಲ್ಲದೆ ತನ್ನ ಮಂಡಳಿಯ ಕಾನೂನು ತಜ್ಞರು ಸೆಪ್ಟೆಂಬರ್ 10ರಂದು ಸಭೆ ನಡೆಸಿ ಮುಂದಿನ ನಡೆ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದೆ.

ಮುಸ್ಲಲ್ಮಾನ ಮಹಿಳೆಯರಿಗೆ ನ್ಯಾಯ ಒದಗಿಸಬೇಕು ಹೀಗಾಗಿ ನಾವು ತ್ರಿವಳಿ ತಲಾಕ್ ವಿರುದ್ಧ ಹೋರಾಡುತ್ತಿದ್ದೇವೆ ಎಂದು ವಾದ ಮಂಡಿಸುತ್ತಲೇ ಬಂದಿದ್ದ ಕೇಂದ್ರ ಸರ್ಕಾರ ಈ ತೀರ್ಪಿನಿಂದ ಪರೋಕ್ಷವಾಗಿ ಮೇಲುಗೈ ಸಾಧಿಸಿದೆ. ಈಗ ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ವಿರೋಧ ಪಕ್ಷಗಳನ್ನು ನಿಭಾಯಿಸಿಕೊಂಡು ಯಾವ ರೀತಿ ನೂತನ ಕಾನೂನು ಜಾರಿಗೆ ತರಲಿದೆ ಎಂಬುದು ಎಲ್ಲರ ಕುತೂಹಲ.

Leave a Reply