ತ್ರಿವಳಿ ತಲಾಕ್ ವಿರುದ್ಧ ಕಾನೂನು ಸಮರ ಸಾರಿದ ಈ ಮುಸ್ಲಿಂ ಮಹಿಳೆಯರಿಗಾದ ಅನ್ಯಾಯವೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ತ್ರಿವಳಿ ತಲಾಕ್ ಪದ್ಧತಿ ಆಚರಣೆಯನ್ನು ರದ್ದುಗೊಳಿಸಿ ಇಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ಕೊಟ್ಟಿದೆ. ಈ ತೀರ್ಪಿನಿಂದ ಸಾವಿರಾರು ಮುಸ್ಲಿಂ ಮಹಿಳೆಯರು ‘ತಮಗೆ ಇಂದು ಸ್ವಾತಂತ್ರ್ಯ ಸಿಕ್ಕಿದೆ’ ಎಂದು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಈ ಸಂದರ್ಭದಲ್ಲಿ ತ್ರಿವಳಿ ತಲಾಕ್ ವಿರುದ್ಧ ಸಿಡಿದು ನಿಂತು ನ್ಯಾಯಾಲಯದಲ್ಲಿ ಕಾನೂನು ಹೋರಾಟ ಮಾಡಿದ ಪ್ರಮುಖ ಮುಸಲ್ಮಾನ ಮಹಿಳೆಯರು ಯಾರು ಹಾಗೂ ಅವರಿಗೆ ತ್ರಿವಳಿ ತಲಾಕ್ ನಿಂದ ಆದ ಅನ್ಯಾಯ ಏನು ಎಂಬುದು ಹೀಗಿದೆ…

  • ಶಯಾರಾ ಬಾನು

ತ್ರಿವಳಿ ತಲಾಕ್, ಬಹುಪತ್ನಿತ್ವ ಹಾಗೂ ನಿಕಾ ಹಲಾಲ್ ನಂತಹ ಆಚರಣೆಗಳನ್ನು ರದ್ದುಗೊಳಿಸಬೇಕು ಎಂಬ ಮನವಿಯೊಂದಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದವರು ಈ ಶಯಾರ ಬಾನು. 15 ವರ್ಷಗಳ ಕಾಲ ಈಕೆಯೊಂದಿಗೆ ಸಂಸಾರ ನಡೆಸಿದ ಪತಿ, ನಂತರ ಪತ್ರದಲ್ಲಿ ಮೂರು ಬಾರಿ ತಲಾಕ್ ಎಂದು ಬರೆದು ಕಳುಹಿಸಿ ಈಕೆಗೆ ವಿಚ್ಛೇಧನ ನೀಡಿದ್ದ. ಅಲಹಬಾದ್ ನಲ್ಲಿ ರಿಯಲ್ ಎಸ್ಟೇಟ್ ನಡೆಸುತ್ತಿದ್ದ ಈಕೆಯ ಪತಿ ರಿಜ್ವಾನ್ ಅಹ್ಮದ್, ತನ್ನ ಎರಡು ಮಕ್ಕಳನ್ನೂ ಈಕೆಯಿಂದ ದೂರ ಮಾಡಿದ್ದ.

ನಂತರ 2016ರಲ್ಲಿ ಶಯಾರಾ ಬಾನು ಈ ಪದ್ಧತಿ ಹಾಗೂ ಅದರಿಂದ ಮುಸಲ್ಮಾನ ಮಹಿಳೆಯರ ಮೇಲಾಗುತ್ತಿರುವ ದಬ್ಬಾಳಿಕೆಯನ್ನು ಪ್ರಶ್ನಿಸಿ ಈಕೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈಕೆಯ ಅರ್ಜಿಯನ್ನು ರಿಜ್ವಾನ್ ಖಂಡಿಸಿದ್ದರು. ಅಷ್ಟೇ ಅಲ್ಲದೆ, ತನ್ನ ಮೇಲೆ ದೈಹಿಕ ಹಾಗೂ ಮಾನಸಿಕ ಹಿಂಸೆ ನಡೆದಿದ್ದು, ತನಗೆ ಆರು ಬಾರಿ ಗರ್ಭಪಾತ ಮಾಡಿಸಲಾಗಿದೆ ಎಂಬ ಗಂಭೀರ ಆರೋಪ ಮಾಡಿದ್ದರು.

ಈಕೆಯ ಅರ್ಜಿಯ ಆಧಾರದ ಮೇಲೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ನಲ್ಲಿ ತ್ರಿವಳಿ ತಲಾಕ್ ಪದ್ಧತಿಯ ವಿರುದ್ಧ ಅರ್ಜಿ ಸಲ್ಲಿಸಿತು. ಆಮೂಲಕ ಮುಸ್ಲಿಂ ಮಹಿಳೆಯರ ಕಾನೂನು ಹೋರಾಟಕ್ಕೆ ಹೆಚ್ಚಿನ ಬಲ ಬಂದಿತು.

  • ಇಶ್ರತ್ ಜಹಾನ್

ಪಶ್ಚಿಮ ಬಂಗಾಳದ ಹೌಹ್ರಾ ಮೂಲದ ಇಶ್ರತ್ ಜಹಾನ್ ತ್ರಿವಳಿ ತಲಾಕ್ ವಿರುದ್ಧ ಹೋರಾಟಕ್ಕೆ ನಿಂತ ಮತ್ತೋರ್ವ ಮಹಿಳೆ. ಮದುವೆಯಾಗಿ 15 ವರ್ಷಗಳ ನಂತರ ಈಕೆಯ ಗಂಡ ಮುರ್ತಜಾ 2015ರ ಏಪ್ರಿಲ್ ನಲ್ಲಿ ದುಬೈನಿಂದ ದೂರವಾಣಿ ಕರೆ ಮಾಡಿ ಮೂರು ಬಾರಿ ತಲಾಕ್ ಹೇಳುವ ಮೂಲಕ ವಿಚ್ಛೇದನ ನೀಡಿದ್ದ.

ಮುರ್ತಜಾ ದುಬೈನಲ್ಲಿ ಬೇರೊಂದು ಮದುವೆಯಾಗಿ ತನ್ನ ನಾಲ್ವರು ಮಕ್ಕಳನ್ನು ಕಸಿದುಕೊಂಡಿದ್ದಾನೆ ಎಂದು ಈಕೆ ಆರೋಪಿಸಿದ್ದು, ಮತ್ತೆ ನನ್ನ ಮಕ್ಕಳು ಸಿಗಬೇಕು ಹಾಗೂ ಮುರ್ತಜಾ ನನಗೆ ಡೀವನಾಂಶ ನೀಡಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾಳೆ.

ಈ ಬಗ್ಗೆ ಆಕೆ ಹೇಳಿದಿಷ್ಟು… ‘ದೂರವಾಣಿ ಕರೆ ಮೂಲಕ ತಲಾಕ್ ನೀಡಿರುವುದನ್ನು ನಾನು ಒಪ್ಪುವುದಿಲ್ಲ. ನನಗೆ ನ್ಯಾಯ ಬೇಕು. ನನ್ನ ಮೂವರು ಹೆಣ್ಣು ಮಕ್ಕಳು ಹಾಗೂ ಒಬ್ಬ ಗಂಡು ಮಗನನ್ನು ನಾನು ಪಡೆಯಬೇಕು. ಅವರನ್ನು ಬೆಳೆಸಲು ನನ್ನ ಪತಿಯೇ ಜೀವನಾಂಶ ನೀಡಬೇಕು. ಹೀಗಾಗಿ ನಾನು ನ್ಯಾಯಾಲಯದ ಮೊರೆ ಹೋಗಿದ್ದು, ನ್ಯಾಯ ಸಿಗುವವರೆಗೂ ಹೋರಾಟ ನಡೆಸುತ್ತೇನೆ.’

  • ಗುಲ್ಶನ್ ಪರ್ವೀನ್

ತ್ರಿವಳಿ ತಲಾಕ್ ನಿಂದ ಅನ್ಯಾಯವಾಗಿದೆ ಎಂದು ಕೋರ್ಟ್ ಮೆಟ್ಟಿಲೇರಿದ ಮತ್ತೊಬ್ಬ ಮಹಿಳೆ ಉತ್ತರ ಪ್ರದೇಶದ ರಾಂಪುರದ ಗುಲ್ಶನ್ ಪರ್ವೀನ್. ಈಕೆ ತನ್ನ ತವರು ಮನೆಗೆ ಹೋಗಿದ್ದ ಸಂದರ್ಭದಲ್ಲಿ ಈಕೆಯ ಗಂಡ ₹ 10 ಮೌಲ್ಯದ ಸ್ಟಾಂಪ್ ಪೇಪರ್ ನಲ್ಲಿ ತಲಾಕ್ ಸಂದೇಶವನ್ನು ರವಾನಿಸಿದ್ದ. ಇದರಿಂದ ಗುಲ್ಶನ್ ಹಾಗೂ ಆಕೆಯ 2 ವರ್ಷದ ಮಗು ಬೀದಿಗೆ ಬಂದು ನಿಂತರು.

ಈ ತಲಾಕ್ ಆಧಾರದ ಮೇಲೆ ವಿಚ್ಛೇದನ ಪಡೆಯಲು ಆಕೆಯ ಪತಿ ಕೌಟುಂಬಿಕ ನ್ಯಾಯಾಲಯದ ಮೊರೆ ಹೋದರು, ಆದರೆ ಗುಲ್ಶನ್ ತಲಾಕ್ ಅನ್ನು ಒಪ್ಪಿಕೊಳ್ಳಲಿಲ್ಲ.

  • ಅಫ್ರೀನ್ ರೆಹಮಾನ್

2014ರಲ್ಲಿ ಮ್ಯಾಟ್ರಿಮೋನಿ ಜಾಲತಾಣದ ಮೂಲಕ ಮದುವೆಯಾದ ಯುವತಿ ಅಫ್ರೀನ್ ರೆಹಮಾನ್. ಮದುವೆಯಾಗಿ 2-3 ತಿಂಗಳಲ್ಲೇ ತನ್ನ ಗಂಡನ ಮನೆಯವರಿಂದ ಮಾನಸಿಕ ಹಾಗೂ ದೈಹಿಕ ಕಿರುಕುಳ ಎದುರಿಸಿದ ಅಫ್ರೀನ್ ತನ್ನ ತವರು ಮನೆಗೆ ಹೋಗಿದ್ದಳು. ಈ ಸಂದರ್ಭದಲ್ಲಿ ಆಕೆಗೆ ಪತಿಯಿಂದ ಅಂಚೆಯ ಮೂಲಕ ತಲಾಕ್ ಪತ್ರ ರವಾನೆಯಾಯಿತು. ಇದರಿಂದ ಬೇಸತ್ತ ಅಫ್ರೀನ್ ತನಗಾದ ಅನ್ಯಾಯದ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದರು. ಈ ಬಗ್ಗೆ ಆಕೆ ಹೇಳುವುದು ಹೀಗೆ…

‘ಮದುವೆಯಾಗಿ ಮೂರ್ನಾಲ್ಕು ತಿಂಗಳ ನಂತರ ಪತಿಯ ಮನೆಯವರು ನನಗೆ ಮಾನಸಿಕವಾಗಿ ಹಿಂಸೆ ನೀಡಲು ಆರಂಭಿಸಿದರು. ಅಲ್ಲದೆ ವರದಕ್ಷಿಣೆಗಾಗಿ ಪೀಡಿಸಿದರು. ನಂತರ ದೈಹಿಕವಾಗಿ ಹಲ್ಲೆ ಮಾಡಲು ಆರಂಭಿಸಿದರು. ನಂತರ 2015ರ ಸೆಪ್ಟೆಂಬರ್ ನಲ್ಲಿ ನನನ್ನು ಮನೆಯಿಂದ ಆಚೆ ಹಾಕಿದರು. ನಾನು ತಂದೆ ತಾಯಿ ಮನೆಗೆ ಹೋಗಿದ್ದಾಗ ಸ್ಪೀಡ್ ಪೋಸ್ಟ್ ಮೂಲಕ ವಿಚ್ಛೇದನ ನೀಡಿದರು. ಇದು ನನಗಾದ ಅನ್ಯಾಯ. ಇದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಇದರ ವಿರುದ್ಧ ಹೋರಾಟಲು ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿ ಈ ವಿಚ್ಛೇದನದಲ್ಲಿ ಮಧ್ಯಪ್ರವೇಶಿಸುವಂತೆ ಕೋರಿದೆ.’

  • ಅತಿಯಾ ಸಬ್ರಿ

2012ರಲ್ಲಿ ಮದುವೆಯಾಗಿದ್ದ ಈಕೆಗೆ ತನ್ನ ಗಂಡ ಒಂದು ಕಾಗದದ ಚೂರಿನ ಮೇಲೆ ತಲಾಕ್ ಎಂದು ಬರೆದು ಕೊಟ್ಟಿದ್ದ. ಇದನ್ನು ವಿರೋಧಿಸಿ ಜನವರಿಯಲ್ಲಿ ಅತಿಯಾ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಎರಡು ಮಕ್ಕಳ ತಾಯಿಯಾಗಿರುವ ಅತಿಯಾ ಸಬ್ರಿ, ‘ತನಗೆ ತಲಾಕ್ ನೀಡಲು ಸರಿಯಾದ ಸಮರ್ಥನೆಗಳಿಲ್ಲ. ನನ್ನ ಮಕ್ಕಳನ್ನು ನಾನು ಬೆಳೆಸಬೇಕಿದ್ದು, ನನಗೆ ನ್ಯಾಯ ಬೇಕಿದೆ’ ಎಂದು ಆಗ್ರಹಿಸಿದ್ದರು.

  • ಭಾರತೀಯ ಮುಸ್ಲಿಂ ಮಹಿಳಾ ಆಂಧೋಲನ

ಭಾರತೀಯ ಮುಸ್ಲಿಂ ಮಹಿಳಾ ಆಂಧೋಲನ ಎಂಬ ಸಂಘಟನೆಯು ‘ಮುಸ್ಲಿಂ ಮಹಿಳೆಯರ ನ್ಯಾಯಕ್ಕಾಗಿ ಹೋರಾಟ’ ಎಂಬ ಶೀರ್ಷಿಕೆಯಲ್ಲಿ ನ್ಯಾಯಾಲಯಕ್ಕೆ ಒಂದು ಅರ್ಜಿ ಸಲ್ಲಿಸಿತು. ಅದರಲ್ಲಿ ‘ಅಲ್ಲಾನ ಪ್ರಕಾರ ಪುರುಷ ಮತ್ತು ಮಹಿಳೆಯರು ಸಮಾನರು. ಆದರೆ ನಮಗೆ ತಲಾಕ್ ಮೂಲಕ ತಾರತಮ್ಯ ಮಾಡಲಾಗುತ್ತಿದೆ’ ಎಂದು ವಾದಿಸಿದ್ದರು.

ಈ ಸಂಸ್ಥೆಯ ಸದಸ್ಯೆಯಾಗಿರುವ ಜಾಕಿಯಾ ಸೋಮನ್ ಅವರು ತಮ್ಮ ವಾದವನ್ನು ವಿವರಿಸಿದ್ದು ಹೀಗೆ… ‘ಕುರಾನಿನಲ್ಲಿ ತಲಾಕ್ ಕುರಿತಾಗಿ ನೀಡಲಾಗಿರುವ ಹೇಳಿಕೆಯನ್ನು ನಾವು ನ್ಯಾಯಾಲಯಕ್ಕೆ ಸಲ್ಲಿಸಿದ್ದೇವೆ. ವಿಚ್ಛೇದನ ಸಮಯದಲ್ಲಿ 90 ದಿನಗಳ ಕಾಲ ಇಬ್ಬರು ಒಟ್ಟಾಗಿ ಜೀವನ ನಡೆಸುವುದು ಹಾಗೂ ಆಗ ಪಾಲಿಸಬೇಕಾದ ನಿಯಮಗಳನ್ನು ಈಗ ಪಾಲಿಸಲಾಗುತ್ತಿಲ್ಲ. ಇನ್ನು ಈ ಪದ್ಧತಿಯಲ್ಲಿ ಲಿಂಗ ತಾರತಮ್ಯ ಹೆಚ್ಚಾಗಿದ್ದು, ಭಾರತದ ಸಂವಿಧಾನ ಹೇಳುವ ಎಲ್ಲ ಪ್ರಜೆಗಳು ಸಮಾನ ಎಂಬುದಕ್ಕೆ ವಿರುದ್ಧವಾಗಿದೆ.’

ಹೀಗೆ ದೇಶದ ವಿವಿಧ ಕಡೆಗಳಲ್ಲಿ ಮುಸಲ್ಮಾನ ಮಹಿಳೆಯರು ತ್ರಿವಳಿ ತಲಾಕ್ ನಿಂದ ತಮಗಾದ ಅನ್ಯಾಯದ ವಿರುದ್ಧ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಗಳನ್ನು ಒಟ್ಟಿಗೆ ಪರಿಗಣಿಸಿದ ಸುಪ್ರೀಂ ಕೋರ್ಟ್, ನಂತರ ತ್ರಿವಳಿ ತಲಾಕ್ ಆಚರಣೆ ಕುರಿತಂತೆ ವಿಚಾರಣೆ ನಡೆಸಿತು. ಕಳೆದ ಆರು ತಿಂಗಳಲ್ಲಿ ಸುಪ್ರೀಂ ಕೋರ್ಟ್ ಸರಣ ವಿಚಾರಣೆ ನಡೆಸಿದ ಬಳಿಕ ಇಂದು ಈ ಆಚರಣೆಯನ್ನು ರದ್ದುಗೊಳಿಸಿ ತೀರ್ಪು ಕೊಟ್ಟಿದೆ. ಅದರೊಂದಿಗೆ ಈ ತಲಾಕ್ ಪದ್ಧತಿಯಿಂದ ಅನ್ಯಾಯಕ್ಕೊಳಗಾಗಿದ್ದ ಮಹಿಳೆಯರಿಗೆ ನ್ಯಾಯ ಸಿಕ್ಕಂತಾಗಿದೆ.

1 COMMENT

Leave a Reply