ಉತ್ತರ ಕೊರಿಯಾ ವಿರುದ್ಧ ಮುಂದುವರಿದ ಅಮೆರಿಕ ಸೇಡು, ರಷ್ಯಾ- ಚೀನಾ ಕಂಪನಿಗಳಿಗೆ ನಿರ್ಬಂಧದ ಶಿಕ್ಷೆ ಏಕೆ?

ಡಿಜಿಟಲ್ ಕನ್ನಡ ಟೀಮ್:

ಅಣ್ವಸ್ತ್ರ ಕ್ಷಿಪಣಿ ದಾಳಿ ಮಾಡುವುದಾಗಿ ತೊಡೆ ತಟ್ಟಿ ನಿಂತಿದ್ದ ಉತ್ತರ ಕೊರಿಯಾ ತನ್ನ ನಿರ್ಧಾರ ಬದಲಿಸಿಕೊಂಡರೂ ಅಮೆರಿಕ ಕೋಪ ಮಾತ್ರ ಕಡಿಮೆಯಾಗಿಲ್ಲ. ಉತ್ತರ ಕೊರಿಯಾ ವಿರುದ್ಧ ತನ್ನ ಸೇಡು ಮುಂದುವರಿಸಿರುವ ಅಮೆರಿಕ ಮಂಗಳವಾರ ಉತ್ತರ ಕೊರಿಯಾಗೆ ಸಂಬಂಧಿಸಿದ ನಿರ್ಬಂಧ ನೀತಿ ರೂಪಿಸಿದ್ದು, ಇದರಲ್ಲಿ ಮುಖ್ಯವಾಗಿ ಉತ್ತರ ಕೊರಿಯಾಗೆ ಆಸರೆಯಾಗಿ ನಿಂತಿರುವ ರಷ್ಯಾ ಹಾಗೂ ಚೀನಾ ಕಂಪನಿಗಳನ್ನು ಗುರಿಯಾಗಿಸಲಾಗಿದೆ.

ಉತ್ತರ ಕೊರಿಯಾ ಮೇಲಿನ ಕೋಪದಿಂದ ರಷ್ಯಾ ಹಾಗೂ ಚೀನಾ ಕಂಪನಿಗಳನ್ನೇಕೆ ಗುರಿಯಾಗಿಸಲಾಗಿದೆ ಎಂಬುದನ್ನು ನೋಡುವುದಾದರೆ, ಈ ಕಂಪನಿಗಳು ಉತ್ತರ ಕೊರಿಯಾದ ಜತೆ ದೊಡ್ಡ ಮಟ್ಟದ ವ್ಯಾಪಾರ ವಹಿವಾಟು ನಡೆಸುತ್ತಿರುವುದರ ಜತೆಗೆ ತೆರೆಮರೆಯಲ್ಲಿ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಅಭಿವೃದ್ಧಿಗೆ ಪ್ರೋತ್ಸಾಹ ನೀಡುತ್ತಿವೆ. ಅಷ್ಟೇಅಲ್ಲ, ಕೇವಲ ಕಂಪನಿಗಳು ಮಾತ್ರವಲ್ಲದೆ ಉತ್ತರ ಕೊರಿಯಾಗೆ ಬೆಂಬಲವಾಗಿ ನಿಂತಿರುವ ರಷ್ಯಾ ಹಾಗೂ ಚೀನಾದ ಪ್ರಮುಖ ವ್ಯಕ್ತಿಗಳನ್ನು ಈ ನೀತಿಯಲ್ಲಿ ಗುರಿಯಾಗಿಸಲಾಗಿದೆ.

ಅಮೆರಿಕ ರೂಪಿಸಿರುವ ನೂತನ ನೀತಿಯಲ್ಲಿ ಚೀನಾ ಮೂಲದ 6 ಕಂಪನಿಗಳು, ರಷ್ಯಾದ ಒಂದು ಕಂಪನಿ, ಸಿಂಗಾಪುರದಲ್ಲಿರುವ ಉತ್ತರ ಕೊರಿಯಾ ಮೂಲದ 2 ಕಂಪನಿಗಳು, ನಮಿಬಿಯಾದಲ್ಲಿರುವ ಚೀನಾ ಹಾಗೂ ಉತ್ತರ ಕೊರಿಯಾ ಮೂಲದ ಕಂಪನಿಗಳ ಮೇಲೆ ನಿರ್ಬಂಧ ಹೇರಲಾಗಿದೆ. ಜಾಗತಿಕ ಮಟ್ಟದಲ್ಲಿ ತೀವ್ರ ವಿರೋಧದ ನಡುವೆಯೂ ಜುಲೈ ತಿಂಗಳಲ್ಲಿ ಖಂಡಾಂತರ ಕ್ಷಿಪಣಿ ಪ್ರಯೋಗ ಮಾಡಿದ ಉತ್ತರ ಕೊರಿಯಾ ಮೇಲೆ ವಿಶ್ವಸಂಸ್ಥೆಯಲ್ಲಿ ಕಠಿಣ ನಿಲುವು ತೆಗೆದುಕೊಳ್ಳಲಾಗಿತ್ತು. ಅದರ ಬೆನ್ನಲ್ಲೇ ಈಗ ಅಮೆರಿಕ ತನ್ನ ನೂತನ ನೀತಿಯಿಂದ ಉತ್ತರ ಕೊರಿಯಾಗೆ ಗಾಯದ ಮೇಲೆ ಬರೆ ಎಳೆಯಲು ಮುಂದಾಗಿದೆ.

ಈ ನಿರ್ಬಂಧ ನೀತಿಯ ಕುರಿತಾಗಿ ಮಾಹಿತಿ ನೀಡಿರುವ ಅಮೆರಿಕ ಹಣಕಾಸು ಸಚಿವಾಲಯ, ‘ಉತ್ತರ ಕೊರಿಯಾದ ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿ ಪರೀಕ್ಷೆಗೆ ನೆರವು ನೀಡಿದ ಹಾಗೂ ಉತ್ತರ ಕೊರಿಯಾ ಜತೆ ಇಂಧನ ವ್ಯಾಪಾರಕ್ಕೆ ಮುಂದಾಗಿರುವ ಕಂಪನಿಗಳು ಹಾಗೂ ವ್ಯಕ್ತಿಗಳನ್ನು ಗುರಿಯಾಗಿಸಿ ಈ ನೀತಿ ರೂಪಿಸಲಾಗಿದೆ. ಅಷ್ಟೇ ಅಲ್ಲದೆ ಉತ್ತರ ಕೊರಿಯಾದ ನೌಕರರನ್ನು ವಿದೇಶಗಳಿಗೆ ಕಳುಹಿಸಿ ಆ ಮೂಲಕ ಅಮೆರಿಕ ಹಾಗೂ ಅಂತಾರಾಷ್ಟ್ರೀಯ ಹಣಕಾಸು ವ್ಯವಸ್ಥೆಯನ್ನು ಬಳಸಿಕೊಳ್ಳುವ ಪ್ರಯತ್ನಕ್ಕೆ ಸಾಥ್ ನೀಡಿದ್ದವರನ್ನು ಗುರಿಯಾಗಿಸಲಾಗಿದೆ. ಅಣ್ವಸ್ತ್ರ ಹಾಗೂ ಖಂಡಾಂತರ ಕ್ಷಿಪಣಿಗಳ ಅಭಿವೃದ್ಧಿಗೆ ಸಹಕರಿಸಿದವರನ್ನು ಗುರಿಯಾಗಿಸುವ ಮೂಲಕ ಅಮೆರಿಕ ಉತ್ತರ ಕೊರಿಯಾ ಮೇಲೆ ಮತ್ತಷ್ಟು ಒತ್ತಡ ಹಾಕುತ್ತಿದೆ’ ಎಂದು ತಿಳಿಸಿದೆ.

ಉತ್ತರ ಕೊರಿಯಾ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿ ತಮ್ಮ ದೇಶದ ಕಂಪನಿಗಳನ್ನು ಗುರಿಯಾಗಿಸಿರುವುದಕ್ಕೆ ಚೀನಾ ಆಕ್ಷೇಪ ವ್ಯಕ್ತಪಡಿಸಿದೆ. ‘ಅಮೆರಿಕ ಈ ನೀತಿಯಿಂದ ತಪ್ಪು ಹೆಜ್ಜೆ ಇಡುತ್ತಿದೆ. ಆದಷ್ಟು ಬೇಗ ಇದನ್ನು ಸರಿಪಡಿಸಿಕೊಳ್ಳಬೇಕು. ಅನಗತ್ಯವಾಗಿ ಚೀನಾ ಕಂಪನಿ ಹಾಗೂ ವ್ಯಕ್ತಿಗಳ ಮೇಲೆ ರೂಪಿಸಲಾಗಿರುವ ನಿರ್ಬಂಧ ನೀತಿಯನ್ನು ಹಿಂಪಡೆಯಬೇಕು. ಇಲ್ಲವಾದರೆ ಉಭಯರಾಷ್ಟ್ರಗಳ ನಡುವಣ ಸಂಬಂಧದ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ’ ಎಂದು ಚೀನಾ ಕಿಡಿ ಕಾರಿದೆ. ಆದರೆ, ಅಮೆರಿಕದ ಈ ನಿರ್ಧಾರಕ್ಕೆ ತಲೆ ಕೆಡಿಸಿಕೊಳ್ಳದ ರಷ್ಯಾ, ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Leave a Reply