ಅಫ್ಘಾನಿನಲ್ಲಿ ರಾಜಕೀಯ ಅಸ್ತಿತ್ವ? ದಕ್ಷಿಣ ಏಷ್ಯಾದ ನೂತನ ನೀತಿಯಲ್ಲಿ ಟ್ರಂಪ್ ಭಾರತದ ಸಹಾಯ ನಿರೀಕ್ಷಿಸುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಹಾಗೂ ಕಾಬುಲ್ ಸರ್ಕಾರದ ನಡುವೆ ರಾಜಕೀಯ ರಾಜಿ ಮಾಡಿಸಲು ಅಮೆರಿಕ ಮುಂದಾಗಿದ್ದು, ರಾಜಕೀಯ ಸ್ಥಿರತೆ ಸ್ಥಾಪಿಸುವತ್ತ ಪ್ರಯತ್ನಿಸುತ್ತಿದೆ. ಹೀಗೆ ಅಫ್ಘಾನಿಸ್ತಾನದ ಕುರಿತಾಗಿ ತಮ್ಮ ನೂತನ ತಂತ್ರಗಾರಿಕೆಯನ್ನು ಬಹಿರಂಗ ಪಡಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುವುದರ ಜತೆಗೆ, ಅಪ್ಘಾನಿಸ್ಥಾನದ ವಿಚಾರದಲ್ಲಿ ತಮ್ಮ ಪ್ರಯತ್ನಕ್ಕೆ ಕೈಜೋಡಿಸಬೇಕು ಎಂದು ಭಾರತಕ್ಕೆ ಕರೆ ನೀಡಿರುವುದು ಕುತೂಹಲ ಮೂಡಿಸಿದೆ.

ಅಫ್ಘಾನಿಸ್ತಾನದಲ್ಲಿ ದಶಕಕ್ಕೂ ಹೆಚ್ಚು ಕಾಲದಿಂದ ರಾಜಕೀಯ ಸ್ಥಿರತೆ ಇಲ್ಲದೆ ಯುದ್ಧದ ವಾತಾವರಣ ನಿರ್ಮಿತವಾಗಿದ್ದು, ಅದಕ್ಕೆ ಮುಕ್ತಿ ನೀಡಿ ಸ್ಥಿರವಾದ ರಾಜಕೀಯ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಈಗ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರ ಮುಂದಾಗಿದೆ. ಇದರೊಂದಿಗೆ ಟ್ರಂಪ್ ಸರ್ಕಾರ ಒಬಾಮಾ ಸರ್ಕಾರಕ್ಕಿಂತ ಭಿನ್ನ ಮಾರ್ಗ ಹಿಡಿದಿದ್ದು, ಟ್ರಂಪ್ ತಮ್ಮ ಈ ಪ್ರಯತ್ನದಲ್ಲಿ ಭಾರತ ಸಹಕಾರವನ್ನು ನಿರೀಕ್ಷಿಸುತ್ತಿದ್ದಾರೆ.

ಅಫ್ಘಾನಿಸ್ತಾನದ ವಿಚಾರವಾಗಿ ತಮ್ಮ ನೂತನ ನೀತಿಯನ್ನು ಬಹಿರಂಗಗೊಳಿಸಿದ ಡೊನಾಲ್ಡ್ ಟ್ರಂಪ್, ಹೇಳಿದಿಷ್ಟು… ‘ಅಫ್ಘಾನಿಸ್ತಾನದ ಉಗ್ರರಿಗೆ ಆಶ್ರಯ ನೀಡಿ, ಭಯೋತ್ಪಾದನೆಗೆ ಕುಮ್ಮಕ್ಕು ನೀಡುವುದನ್ನು ಮುಂದುವರಿಸಿದರೆ, ಅಮೆರಿಕ ಜತೆಗಿನ ಮಿಲಿಟರಿ ಒಪ್ಪಂದವನ್ನು ಕಳೆದುಕೊಳ್ಳಬೇಕಾಗುತ್ತದ. ತಾಲಿಬಾನ್ ಉಗ್ರರು ಹಾಗೂ ಹಕ್ಕಾನಿ ಸಂಪರ್ಕದ ಉಗ್ರರಿಗೆ ಪಾಕಿಸ್ತಾನ ಆಶ್ರಯ ನೀಡುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ವ್ಯತಿರಿಕ್ತ ಪರಿಣಾಮ ಎದುರಿಸಬೇಕಾಗುತ್ತದೆ. ಅಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ಸುಧಾರಿಸಲು ಭಾರತ ಸಹ ನಮ್ಮ ಜತೆ ಕೈ ಜೋಡಿಸಬೇಕು’ ಎಂದು ಡೊನಾಲ್ಡ್ ಟ್ರಂಪ್ ತಮ್ಮ ನೂತನ ನೀತಿಯನ್ನು ಪ್ರಕಟಿಸಿದ ವೇಳೆ ಕರೆ ನೀಡಿದ್ದಾರೆ.

ಟ್ರಂಪ್ ಅವರ ಹೇಳಿಕೆಯ ಬೆನ್ನಲ್ಲೇ ವಿಶ್ವಸಂಸ್ಥೆಯಲ್ಲಿ ನಿಕ್ಕಿ ಹ್ಯಾಲೆ ಅವರು ಭಾರತದ ಪಾತ್ರವನ್ನು ಪ್ರಸ್ತಾಪಿಸಿರುವುದು ಕುತೂಹಲ ಮೂಡಿಸಿದೆ. ‘ಇದು ಕೇವಲ ಅಫ್ಘಾನಿಸ್ತಾನದ ವಿಷಯ ಮಾತ್ರವಲ್ಲ. ಬದಲಿಗೆ ಪ್ರಾದೇಶಿಕತೆಯ ವಿಚಾರವೂ ಆಗಿದೆ. ಹೀಗಾಗಿ ಅಫ್ಘಾನಿಸ್ತಾನದಲ್ಲಿ ಯುದ್ಧ ವಾತಾವರಣಕ್ಕೆ ಅಂತ್ಯವಾಡಿ ಪರಿಸ್ಥಿತಿ ಸುಧಾರಿಸಲು ನೆರೆ ರಾಷ್ಟ್ರಗಳ ಪಾತ್ರವೂ ಅಗತ್ಯವಿದೆ. ಇದನ್ನು ಕೇವಲ ಅಮೆರಿಕ ಮಾತ್ರ ಮಾಡುವುದಲ್ಲ. ಬದಲಿಗೆ ಒಟ್ಟಾಗಿ ಮಾಡಬೇಕಾದ ಕೆಲಸವಾಗಿದೆ. ಹೀಗಾಗಿ ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಎಚ್ಚರಿಕೆ ರವಾನಿಸುತ್ತಾ, ಭಾರತ ಅಮೆರಿಕದ ಜತೆ ಕೈಜೋಡಿಸುವಂತೆ ಒತ್ತಡ ಹೇರಬೇಕು’ ಎಂದು ನಿಕ್ಕಿ ವಾದ ಮಂಡಿಸಿದ್ದಾರೆ.

ಹೀಗೆ ಅಫ್ಘಾನಿಸ್ತಾನದ ವಿಚಾರವಾಗಿ ಅಮೆರಿಕದ ಜತೆ ಭಾರತ ಕೈ ಜೋಡಿಸುವುದೇ ಎಂಬುದನ್ನು ಕಾದು ನೋಡಬೇಕು. ಈ ವಿಷಯದಲ್ಲಿ ಭಾರತ ಅಮೆರಿಕದೊಂದಿಗೆ ಕೈ ಜೋಡಿಸುವ ಸಾಧ್ಯತೆಗಳು ಹೆಚ್ಚಾಗಿವೆ. ಇದಕ್ಕೆ ಪ್ರಮುಖ ಕಾರಣಗಳು ಹೀಗಿವೆ…

  • ಇತ್ತೀಚಿನ ದಿನಗಳಲ್ಲಿ ಭಾರತ ಹಾಗೂ ಅಮೆರಿಕ ಸ್ನೇಹ ಸಂಬಂಧ ಗಟ್ಟಿಯಾಗುತ್ತಿದ್ದು, ಮಿಲಿಟರಿ ಸೇರಿದಂತೆ ಇತರೆ ಕ್ಷೇತ್ರಗಳಲ್ಲಿ ಪರಸ್ಪರ ಒಪ್ಪಂದಗಳಿಗೂ ಮುಂದಾಗಿವೆ.
  • ಈಗಾಗಲೇ ಭಾರತ ಹಾಗೂ ಅಮೆರಿಕ ಜಂಟಿಯಾಗಿ ಭಯೋತ್ಪಾದನೆ ವಿರುದ್ಧ ಸಮರ ಸಾರಲು ಬದ್ಧವಾಗಿವೆ. ಹೀಗಾಗಿ ಅಫ್ಘಾನಿಸ್ತಾನದ ಭಯೋತ್ಪಾದನೆ ನಿರ್ಮೂಲನೆ ಮಾಡಿ ರಾಜಕೀಯ ವ್ಯವಸ್ಥೆ ಸ್ಥಾಪಿಸಲು ಭಾರತ ಕೈ ಜೋಡಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
  • ಇನ್ನು ಕಳೆದ ಕೆಲವು ವರ್ಷಗಳಿಂದ ಭಾರತವು ಅಫ್ಘಾನಿಸ್ತಾನದ ಜತೆಗಿನ ಸಂಬಂಧ ವೃದ್ಧಿಸಿಕೊಂಡಿದ್ದು, ಎರಡೂ ದೇಶಗಳು ಉಗ್ರರಿಗೆ ಆಶ್ರಯ ನೀಡುತ್ತಿರುವ ಪಾಕಿಸ್ತಾನಕ್ಕೆ ಒಟ್ಟಾಗಿಯೇ ಎಚ್ಚರಿಕೆ ನೀಡಿವೆ. ಇನ್ನು ಶಿಕ್ಷಣ, ಆರೋಗ್ಯ, ಕೃಷಿ, ಮೂಲ ಸೌಕರ್ಯ, ಕೌಶಲ್ಯ ಅಭಿವೃದ್ಧಿ, ಮಹಿಳಾ ಸಶಕ್ತೀಕರಣ, ಪ್ರಜಾಪ್ರಭುತ್ವ ಸಂಸ್ಥೆಗಳ ಬಲಪಡಿಸಲು ಅಫ್ಘಾನಿಸ್ತಾನಕ್ಕೆ 1 ಬಿಲಿಯನ್ ಡಾಲರ್ ಆರ್ಥಿಕ ಸಹಾಯ ಮಾಡಲು ಭಾರತ ನಿರ್ಧರಿಸಿದೆ. ಇನ್ನು ಚಹಬರ್ ಬಂದರಿನ ಅಭಿವೃದ್ಧಿ ಮೂಲಕ ಇರಾನ್ ಮಾರ್ಗವಾಗಿ ಅಪ್ಘಾನಿಸ್ತಾನಕ್ಕೆ ಸಂಪರ್ಕ ಪಡೆಯುವ ಬಗ್ಗೆ ಎರಡೂ ದೇಶಗಳು ಉತ್ಸುಕವಾಗಿವೆ. (ಭಾರತ ಹಾಗೂ ಅಫ್ಘಾನಿಸ್ತಾನದ ಸ್ನೇಹ ಹೆಚ್ಚುತ್ತಿರುವ ಬಗ್ಗೆ ಡಿಜಿಟಲ್ ಕನ್ನಡ ಈ ಹಿಂದೆ ವರದಿ ಪ್ರಕಟಿಸಿತ್ತು.)
  • ಇತ್ತೀಚೆಗೆ ಅಮೆರಿಕವು ಭಾರತದ ಪರವಾದ ಅನೇಕ ನಿರ್ಧಾರಗಳನ್ನು ಕೈಗೊಂಡಿದೆ. ಅಜರ್ ಮಸೂದ್ ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರರ ಪಟ್ಟಿಗೆ ಸೇರಿಸುವ ವಿಚಾರದಲ್ಲಿ ಅಮೆರಿಕ ಸಾಕಷ್ಟು ಪ್ರಯತ್ನ ಪಟ್ಟಿದೆ. ಇನ್ನು ಭಾರತದ ಮೇಲೆ ಉಗ್ರ ದಾಳಿ ನಡೆಸುತ್ತಿರುವ ಪಾಕಿಸ್ತಾನದ ವಿರುದ್ಧ ಕಠಿಣ ನಿಲುವು ತಾಳಿದೆ. ಕಳೆದ ವಾರವಷ್ಟೇ ಜಮ್ಮು ಕಾಶ್ಮೀರದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ ಅನ್ನು ಜಾಗತಿಕ ಉಗ್ರ ಸಂಘಟನೆ ಎಂದು ಹಾಗೂ ಅದರ ಮುಖ್ಯಸ್ಥ ಸೈಯದ್ ಸಲಾಹುದ್ದೀನನ್ನು ಜಾಗತಿಕ ಉಗ್ರ ಎಂದು ಘೋಷಿಸುವ ಮೂಲಕ ಅಮೆರಿಕ ಭಾರತಕ್ಕೆ ನೆರವಾಗಿದೆ.

Leave a Reply