ಖಾಸಗಿ ಹಕ್ಕು ಕುರಿತು ಸುಪ್ರೀಂ ಐತಿಹಾಸಿಕ ತೀರ್ಪು, ಆಧಾರ್- ಸಲಿಂಗ ಲೈಂಗಿಕತೆಯಂತ ವಿಷಯದಲ್ಲಿ ಆಗುವುದೇ ಬದಲಾವಣೆ?

ಡಿಜಿಟಲ್ ಕನ್ನಡ ಟೀಮ್:

ಖಾಸಗಿ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕೆ ಅಥವಾ ಬೇಡವೇ ಎಂಬ ಕುರಿತು ಸುದೀರ್ಘ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟಿನ ಒಂಬತ್ತು ನ್ಯಾಯಾಧೀಶರ ಪೀಠ, ಇಂದು ಐತಿಹಾಸಿಕ ತೀರ್ಪು ನೀಡಿದೆ. ‘ಸಂವಿಧಾನದ 21ನೇ ನಿಯಮದ ಪ್ರಕಾರ ಖಾಸಗಿ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕು’ ಎಂದು ಈ ಪೀಠ ಅವಿರೋಧವಾಗಿ ತೀರ್ಪು ಕೊಟ್ಟಿದೆ.

ಸುಪ್ರೀಂ ಕೋರ್ಟಿನ ಈ ತೀರ್ಪು ಕೇಂದ್ರ ಸರ್ಕಾರಕ್ಕೆ ತೀವ್ರ ಹಿನ್ನಡೆ ಎಂದೇ ಪರಿಗಣಿಸಲಾಗಿದೆ. ಆಧಾರ್ ಕಾರ್ಡ್ ಅನ್ನು ಕಡ್ಡಾಯ ಮಾಡುತ್ತಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು. ಆಗ ಖಾಸಗಿ ಹಕ್ಕು ಮೂಲಭೂತ ಹಕ್ಕು ಎಂದು ಪರಿಗಣಿಸಬೇಕೇ ಅಥವಾ ಬೇಡವೇ ಎಂಬ ವಿಚಾರ ಉದ್ಭವಿಸಿತು. ಹೀಗಾಗಿ ಸುಪ್ರೀಂ ಕೋರ್ಟ್ ಈ ವಿಚಾರವಾಗಿ ವಿಚಾರಣೆ ನಡೆಸಿತ್ತು.

ಈ ಹಿಂದೆ ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ಎರಡು ಬಾರಿ ಖಾಸಗಿ ಹಕ್ಕು ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿತ್ತು. ಎಂಪಿ ಶರ್ಮಾ ಅವರ ಪ್ರಕರಣ (1954) ದಲ್ಲಿ ಎಂಟು ಸದಸ್ಯರ ಸುಪ್ರೀಂ ಕೋರ್ಟ್ ಪೀಠ ಹಾಗೂ ಖರಾಕ್ ಸಿಂಗ್ ಪ್ರಕರಣ (1962) ದಲ್ಲಿ ಆರು ಸದಸ್ಯರ ಸುಪ್ರೀಂ ಕೋರ್ಟ್ ಪೀಠ ಖಾಸಗಿ ಹಕ್ಕು ಮೂಲಭೂತ ಹಕ್ಕಲ್ಲ ಎಂದು ತೀರ್ಪು ನೀಡಿತ್ತು. ಈಗ ಸುಪ್ರೀಂ ಕೋರ್ಟ್ ತನ್ನ ಈ ಹಿಂದಿನ ತೀರ್ಪನ್ನು ಬದಲಿಸಿ ಹೊಸ ತೀರ್ಪು ಕೊಟ್ಟಿದೆ. ನ್ಯಾಯಾಲಯದ ಈ ತೀರ್ಪು ದೇಶದ 134 ಕೋಟಿ ಪ್ರಜೆಗಳಿಗೂ ಅನ್ವಯವಾಗಲಿದ್ದು, ಮಹತ್ವದ್ದಾಗಿದೆ.

ಈ ತೀರ್ಪಿನ ಮಹತ್ವ ಏನು?

ಸುಪ್ರೀಂ ಕೋರ್ಟ್ ಖಾಸಗಿಯನ್ನು ಮೂಲಭೂತ ಹಕ್ಕು ಎಂದು ಘೋಷಣೆ ಮಾಡಿದೆ. ಆದರೆ ಈ ಖಾಸಗಿ ಹಕ್ಕಿನ ವ್ಯಾಖ್ಯಾನ ಏನು ಎಂಬುದು ಸದ್ಯ ಎಲ್ಲರ ಮುಂದಿರುವ ವಿಚಾರ. ಸುಪ್ರೀಂ ಕೋರ್ಟಿನ ಈ ತೀರ್ಪು ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸಲಿರುವುದರಿಂದ ಅನೇಕ ವಿಷಯಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಸದ್ಯ ಖಾಸಗಿ ಹಕ್ಕಿನ ಬಗ್ಗೆ ಸ್ಪಷ್ಟ ವ್ಯಾಖ್ಯಾನ ಇಲ್ಲವಾದ್ದರಿಂದ ಆಧಾರ್ ಕಾರ್ಡ್ ಕಡ್ಡಾಯದ ಜತೆಗೆ, ಸಲಿಂಗ ಲೈಂಗಿಕತೆ ನಿಷೇಧದ ವಿಚಾರ, ದೂರವಾಣಿ ಕದ್ದಾಲಿಕೆಯಂತಹ ವಿಚಾರಗಳಲ್ಲಿ ಮಹತ್ವದ ಬದಲಾವಣೆಯಾಗಲಿದೆ. ಇನ್ನು ದಿನನಿತ್ಯ ನಾವು ಕ್ಯಾಬ್ ಬಳಸುವಾಗ ಹಾಗೂ ಸಾಮಾಜಿಕ ಜಾಲ ತಾಣಗಳ ಬಳಕೆ ವೇಳೆ ಮಾಹಿತಿ ನೀಡುತ್ತಿರುವುದರ ಮೇಲೂ ಈ ತೀರ್ಪು ಅನ್ವಯವಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಹೇಗೆ ಪರಿಣಾಮ ಬೀರಲಿದೆ ಎಂಬುದನ್ನು ಕಾದು ನೋಡಬೇಕು. ಅಂದಹಾಗೆ ಆಧಾರ್ ಕಾರ್ಡ್ ಹಾಗೂ ಸಲಿಂಗ ಲೈಂಗಿಕತೆ ವಿಚಾರದಲ್ಲಿ ಈ ತೀರ್ಪು ಹೇಗೆ ಮಹತ್ವ ಎಂಬುದು ಹೀಗಿದೆ…

  • ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಕಡ್ಡಾಯಗೊಳಿಸಿದ್ದ ಹಿನ್ನೆಲೆಯಲ್ಲಿ ದೇಶದ ಪ್ರತಿಯೊಬ್ಬರು ಬ್ಯಾಂಕಿನಲ್ಲಿ ಖಾತೆ ತೆರೆಯಲು, ಮೊಬೈಲ್ ಸಿಮ್ ಪಡೆಯಲು ತಮ್ಮ ಖಾಸಗಿ ಮಾಹಿತಿಯನ್ನು ಹಂಚಿಕೊಳ್ಳಬೇಕಿತ್ತು. ಆಧಾರ್ ಕಾರ್ಡ್ ಮೂಲಕ ನೀಡಲಿರುವ ಪ್ರತಿಯೊಬ್ಬರ ವೈಯಕ್ತಿಕ ಮಾಹಿತಿ ಸುರಕ್ಷಿತವಾಗಿರುವ ಬಗ್ಗೆ ಯಾವುದೇ ಖಚಿತತೆ ಅಥವಾ ಕಾನೂನಿನ ರಕ್ಷಣೆ ಇಲ್ಲವಾಗಿತ್ತು. ಹೀಗಾಗಿ ಈ ತೀರ್ಪಿನಿಂದ ಕೇಂದ್ರ ಸರ್ಕಾರಕ್ಕೆ ಆಧಾರ್ ಕಾರ್ಡ್ ಕಡ್ಡಾಯ ವಿಚಾರದಲ್ಲಿ ಹಿನ್ನಡೆಯಾಗಿದೆ. ಈಗ ಈ ತೀರ್ಪಿನಿಂದ ಒಬ್ಬ ವ್ಯಕ್ತಿಯ ಖಾಸಗಿ ಮಾಹಿತಿಯನ್ನು ಬಲವಂತವಾಗಿ ಪಡೆಯಲು ಸಾಧ್ಯವಿಲ್ಲ. ಹೀಗಾಗಿ ಆಧಾರ್ ಕಾರ್ಡ್ ಕಡ್ಡಾಯ ಮಾಡುವುದು ಕಷ್ಟಕರವಾಗಲಿದೆ. ಆದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ಆಧಾರ್ ಕಾರ್ಡ್ ಮಾಹಿತಿ ಸೋರಿಕೆಯಾಗದಂತೆ ಸೂಕ್ತ ಕಾನೂನು ಕ್ರಮ ತೆಗೆದುಕೊಂಡ ನಂತರವಷ್ಟೇ ಆಧಾರ್ ಕಡ್ಡಾಯ ನಿರ್ಧಾರವನ್ನು ಮುಂದುವರಿಸುವ ಸಾಧ್ಯತೆ ಇದೆ. ಹೀಗಾಗಿ ಈ ವಿಚಾರ ಮುಂದಿನ ದಿನಗಳಲ್ಲಿ ಹೇಗೆ ಸಾಗಲಿದೆ ಎಂಬುದರ ಬಗ್ಗೆ ಕುತೂಹಲ ಮೂಡಿದೆ.
  • ಈ ತೀರ್ಪಿನಿಂದ ಆಗಲಿರುವ ಮತ್ತೊಂದು ಬದಲಾವಣೆ ಎಂದರೆ ಅದು ಸಲಿಂಗ ಲೈಂಗಿಕತೆಯ ನಿಷೇಧದ ವಿಚಾರ. ಸದ್ಯ ದೇಶದಲ್ಲಿ ನಿಷೇಧಿಸಲಾಗಿರುವ ಸಲಿಂಗ ಲೈಂಗಿಕತೆಯ ವಿಚಾರದಲ್ಲಿ ಈ ತೀರ್ಪು ಮಹತ್ವದ ಪಾತ್ರ ವಹಿಸಲಿದೆ. ಖಾಸಗಿ ಹಕ್ಕನ್ನು ಮೂಲಭೂತ ಹಕ್ಕನ್ನಾಗಿ ಘೋಷಿಸಿರುವ ಹಿನ್ನೆಲೆಯಲ್ಲಿ ಇದು ತೃತೀಯ ಲಿಂಗಿ ಹಾಗೂ ಲಿಂಗ ಪರಿವರ್ತಿತರು ಸೇರಿದಂತೆ ದೇಶದ ಪ್ರತಿಯೊಬ್ಬ ಪ್ರಜೆಗೂ ಅನ್ವಯಿಸಲಿದ್ದು, ಎಲ್ಲರಿಗೂ ಸ್ವತಂತ್ರ ಖಾಸಗಿ ಜೀವನ ನಡೆಸಲು ಅವಕಾಶ ಮಾಡಿಕೊಡಲಿದೆ. ಇದರಿಂದ ಒಬ್ಬ ವ್ಯಕ್ತಿ ತನ್ನ ವೈಯಕ್ತಿಕ ಜೀವನದಲ್ಲಿ ಲೈಂಗಿಕತೆಗೆ ಸಂಬಂಧಿಸಿದಂತೆ ಆತನ ಖಾಸಗಿ ವಿಚಾರವನ್ನು ಯಾರೂ ಪ್ರಶ್ನೆ ಮಾಡಲು ಅವಕಾಶ ಇರುವುದಿಲ್ಲ. ಹೀಗಾಗಿ ಸಲಿಂಗತೆಯನ್ನು ಕಾನೂನು ಬದ್ಧವಾಗಿಸುವ ಧ್ವನಿ ಮತ್ತೆ ಹೆಚ್ಚಾಗುವ ಸಾಧ್ಯತೆ ಇದೆ.

ಈ ಎಲ್ಲ ಅಂಶಗಳಿಂದ ಖಾಸಗಿ ಹಕ್ಕಿನ ಕುರಿತಾಗಿ ಸ್ಪಷ್ಟ ಕಾನೂನಿನ ವ್ಯಾಖ್ಯಾನ ರೂಪಿಸಿದ ನಂತರವಷ್ಟೇ ಈ ವಿಚಾರಗಳಲ್ಲಿ ಈ ತೀರ್ಪು ಹೇಗೆ ಅನ್ವಯವಾಗಲಿದೆ ಎಂಬುದು ನಿರ್ಧಾರವಾಗಲಿದೆ. ಇವೆಲ್ಲದರ ಜತೆಗೆ ಸರ್ಕಾರದ ಪ್ರತಿ ಯೋಜನೆಗಳಲ್ಲೂ ವ್ಯಕ್ತಿಯ ಖಾಸಗಿ ಹಕ್ಕಿಗೆ ತೊಂದರೆಯಾಗದಂತೆ ಬದಲಾವಣೆ ತರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Leave a Reply