ವ್ಯಾಪಾರ ಅಸಮತೋಲನ ನಿಯಂತ್ರಿಸಲು ಬದ್ಧ ಎಂದಿದೆ ಚೀನಾ, ಭಾರತಕ್ಕೆ ಇದು ಜಯ ಹೇಗೆ ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಭಾರತ ಚೀನಾ ನಡುವೆ ದೋಕಲಂ ಗಡಿ ವಿಚಾರವಾಗಿ ಬಿಕ್ಕಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಣ ಪ್ರತಿಯೊಂದು ಬೆಳವಣಿಗೆಯು ಮಹತ್ವ ಹಾಗೂ ಪ್ರತಿಷ್ಠೆಯದ್ದಾಗಿ ಬಿಂಬಿತವಾಗುತ್ತಿದೆ. ಈ ಸಮಯದಲ್ಲಿ ಭಾರತ ಜತೆಗಿನ ವ್ಯಾಪಾರ ಅಸಮತೋಲನತೆಯನ್ನು ನಿಯಂತ್ರಿಸಲು ಬದ್ಧವಾಗಿರುವುದಾಗಿ ಚೀನಾ ನೀಡಿರುವ ಹೇಳಿಕೆ ಭಾರತದ ಪಾಲಿಗೆ ಮಹತ್ವದ್ದಾಗಿದೆ.

ಭಾರತ ಹಾಗೂ ಚೀನಾ ನಡುವಣ ವ್ಯಾಪಾರ ಅಸಮತೋಲನತೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಚೀನಾ ತನ್ನ ವಾಣಿಜ್ಯ ಸಚಿವ ಝಾಂಗ್ ಶಾನ್ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಭಾರತಕ್ಕೆ ಕಳುಹಿಸಿ, ಪರಿಶೀಲಿಸಲು ಮುಂದಾಗಿದೆ. ಈ ಸಮಿತಿ ಇದೇ ವರ್ಷ ಡಿಸೆಂಬರ್ ಒಳಗಾಗಿ ಭಾರತಕ್ಕೆ ಭೇಟಿ ನೀಡಲಿದೆ.

ಗಡಿ ವಿಚಾರದ ಬಿಕ್ಕಟ್ಟು ಭಾರತ ಜತೆಗಿನ ತನ್ನ ವ್ಯಾಪಾರದ ಮೇಲೆ ಪರಿಣಾಮ ಬೀರುವುದನ್ನು ತಡೆಯಲು ಚೀನಾ ಇನ್ನಿಲ್ಲದ ಯತ್ನ ನಡೆಸುತ್ತಿದೆ. ವ್ಯಾಪಾರದ ವಿಚಾರದಲ್ಲಿ ಭಾರತದಿಂದ ಪಡೆಯುತ್ತಿರುವ ಅಷ್ಟೂ ಲಾಭವನ್ನು ಹಾಗೇ ಕಾಪಾಡಿಕೊಳ್ಳಲು ಚೀನಾ ಪ್ರಯತ್ನಿಸುತ್ತಿದೆ. ಹೀಗಾಗಿ ಚೀನಾ ಭಾರತ ಜತೆಗಿನ ವ್ಯಾಪಾರ ಅಸಮತೋಲನ ನಿವಾರಿಸುವ ನಿರ್ಧಾರಕ್ಕೆ ಬಂದಿದೆ.

ಏಷ್ಯಾದಲ್ಲಿ ಶಕ್ತಿಶಾಲಿ ರಾಷ್ಟ್ರವಾಗಿ ರೂಪಿತವಾಗಿರುವ ಚೀನಾವನ್ನು ಭಾರತ ನಿಯಂತ್ರಿಸಲು ಇರುವ ಏಕೈಕ ದಾರಿ ಎಂದರೆ ಅದು ವ್ಯಾಪಾರ ಕ್ಷೇತ್ರ. ದೋಕಲಂ ಗಡಿ ವಿಚಾರವಾಗಿ ಬಿಕ್ಕಟ್ಟು ಹೆಚ್ಚುತ್ತಿರುವ ಬೆನ್ನಲ್ಲೇ ಭಾರತ ಸರ್ಕಾರ ಚೀನಾ ಕಂಪನಿಗಳು ಹಾಗೂ ಅವುಗಳ ಉತ್ಪನ್ನಗಳ ಮೇಲೆ ಕಡಿವಾಣ ಹಾಕಲು ಕಠಿಣ ನಿಯಮ ರೂಪಿಸುತ್ತಿದೆ. ಭಾರತದ ನಡೆಯಿಂದ ಬೆಚ್ಚಿರುವ ಚೀನಾ ಈಗ ವ್ಯಾಪಾರ ಅಸಮತೋಲನ ನಿಯಂತ್ರಿಸುವ ನಿರ್ಧಾರಕ್ಕೆ ಬಂದಿದೆ.

ಇದೇ ವೇಳೆ ಕಳೆದ ಆರ್ಥಿಕ ವರ್ಷದಲ್ಲಿ ಭಾರತ ಹಾಗೂ ಚೀನಾ ನಡುವಣ ಟ್ರೇಡ್ ಡೆಫಿಸಿಟ್ ಪ್ರವಾಣ 52 ಬಿಲಿಯನ್ ಅಮೆರಿಕನ್ ಡಾಲರ್ ನಷ್ಟಿತ್ತು. ಇದು ಭಾರತಕ್ಕೆ ದೊಡ್ಡ ಸವಾಲಾಗಿಯೂ ಪರಿಣಮಿಸಿತ್ತು. ಈಗ ಚೀನಾ ವ್ಯಾಪಾರ ಅಸಮತೋಲನ ನಿಯಂತ್ರಿಸಲು ಮುಂದಾಗಿರುವುದರಿಂದ ಭಾರತದ ಟ್ರೇಡ್ ಡೆಫಿಸಿಟ್ ಪ್ರಮಾಣ ತಗ್ಗುವ ನಿರೀಕ್ಷೆಗಳು ಮೂಡಿವೆ. ಈ ಎಲ್ಲ ಅಂಶಗಳಿಂದಾಗಿ ಚೀನಾದ ಈ ನಿರ್ಧಾರ ಸಹಜವಾಗಿಯೇ ಭಾರತಕ್ಕೆ ಮೇಲುಗೈಯಾಗುವಂತೆ ಮಾಡಿದೆ.

Leave a Reply