ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ ಶಿಪ್: ಚೀನಾ ಎದುರಾಳಿ ಮಣಿಸಿ ಫೈನಲ್ ಪ್ರವೇಶಿಸಿದ ಸಿಂಧು

ಡಿಜಿಟಲ್ ಕನ್ನಡ ಟೀಮ್:

ವಿಶ್ವ ಬ್ಯಾಂಡ್ಮಿಂಟನ್ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿರುವ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ ಸಿಂಧು ಮತ್ತೊಂದು ಗರಿಯನ್ನು ತಮ್ಮ ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದಾರೆ.

ಶನಿವಾರ ರಾತ್ರಿ ನಡೆದ ಉಪಾಂತ್ಯದ ಪಂದ್ಯದಲ್ಲಿ ವಿಶ್ವದ 10ನೇ ಶ್ರೇಯಾಂಕಿತ ಚೀನಾದ ಚೆನ್ ಯುಫೈ ಅವರನ್ನು 21-13, 21-10 ನೇರ ಗೇಮ್ ಗಳಿಂದ ಮಣಿಸಿದ ಸಿಂಧು ಮತ್ತೊಂದು ಫೈನಲ್ ಪ್ರವೇಶಿಸಿದ್ದಾರೆ. ಭಾರತದ ಮತ್ತೊಬ್ಬ ಆಟಗಾರ್ತಿ ಸೈನಾ ನೆಹ್ವಾಲ್ ಜಪಾನಿನ ನೊಜೊಮಿ ಒಕುಹರಾ ವಿರುದ್ಧ ಆಘಾತಕಾರಿ ಸೋಲನುಭವಿಸಿದ್ದು ಭಾರತೀಯರಲ್ಲಿ ನಿರಾಸೆ ಮೂಡಿಸಿತ್ತು. ಈಗ ಸಿಂಧು ಪ್ರಶಸ್ತಿ ಸುತ್ತಿಗೆ ಪ್ರವೇಶಿಸಿರುವುದು ಅಭಿಮಾನಿಗಳಲ್ಲಿ ಮಂದಹಾಸ ಮೂಡಿಸಿದೆ.

ಈ ಹಿಂದೆ ಸಿಂಧು ಹಾಗೂ ಚೆನ್ ಎರಡು ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಇಬ್ಬರು ತಲಾ ಒಂದೊಂದು ಪಂದ್ಯದಲ್ಲಿ ಜಯ ಸಾಧಿಸಿದ್ದರು. ಈ ಪಂದ್ಯದಲ್ಲಿ ಸಂಪೂರ್ಣವಾಗಿ ಪ್ರಾಬಲ್ಯ ಮೆರೆದ ಸಿಂಧು, ಯಾವುದೇ ಹಂತದಲ್ಲೂ ಚೀನಾ ಆಟಗಾರ್ತಿಗೆ ಪಂದ್ಯದ ಮೇಲೆ ನಿಯಂತ್ರಣ ಸಾಧಿಸಲು ಅವಕಾಶ ನೀಡಲಿಲ್ಲ. ಪಂದ್ಯದ ಮೊದಲ ಗೇಮ್ ನಲ್ಲಿ 21-13 ಅಂಕಗಳ ಅಂತರದಲ್ಲಿ ಮುನ್ನಡೆ ಸಾಧಿಸಿದರು. ಇನ್ನು ಎರಡನೇ ಗೇಮ್ ನಲ್ಲೂ ಚೆನ್ ಮೇಲೆ ಒತ್ತಡ ಹಾಕಿದ ಸಿಂಧು 21-10 ಅಂಕಗಳೊಂದಿಗೆ ಪಂದ್ಯದಲ್ಲಿ ಸುಲಭ ಜಯ ದಾಖಲಿಸಿದರು.

ಸಿಂಧು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಜಪಾನಿನ ಒಕುಹರಾ ವಿರುದ್ಧ ಸೆಣೆಸಲಿದ್ದಾರೆ.

Leave a Reply