ಭಾರತದ ಮುಖ್ಯನ್ಯಾಯಮೂರ್ತಿಯಾದ್ರು ದೀಪಕ್ ಮಿಶ್ರಾ, ಇವರ ಮುಂದಿರುವ ಸವಾಲುಗಳೇನು?

ಡಿಜಿಟಲ್ ಕನ್ನಡ ಟೀಮ್:

ಭಾರತದ 45ನೇ ಮುಖ್ಯನ್ಯಾಯಮೂರ್ತಿಯಾಗಿ ದೀಪಕ್ ಮಿಶ್ರಾ ಸೋಮವಾರ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ದೀಪಕ್ ಮಿಶ್ರಾ ಅವರಿಗೆ ಪ್ರತಿಜ್ಞಾ ವಿಧಿ ಬೋಧಸಿದರು. ಆಗಸ್ಟ್ 28ರಂದು ಜೆ.ಎಸ್ ಖೆಹರ್ ಅವರು ಮುಖ್ಯನ್ಯಾಯಮೂರ್ತಿ ಸ್ಥಾನದ ಅವಧಿ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ದೀಪಕ್ ಮಿಶ್ರಾ ಈ ಅಧಿಕಾರವನ್ನು ವಹಿಸಿಕೊಂಡರು. ಒಡಿಶಾ ಮೂಲದ ದೀಪಕ್ ಅವರು 2018ರ ಅಕ್ಟೋಬರ್ 18ರವೆರೆಗೆ ಈ ಸ್ಥಾನ ಅಲಂಕರಿಸಲಿದ್ದಾರೆ.

1977ರಲ್ಲಿ ವಕೀಲರಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ದೀಪಕ್ ಮಿಶ್ರಾ ಅವರು 1996ರಲ್ಲಿ ಒಡಿಶಾ ಹೈಕೋರ್ಟಿನ ನ್ಯಾಯಮೂರ್ತಿಯಾಗಿ ನೇಮಕಗೊಂಡರು. ನಂತರ ಮಧ್ಯಪ್ರದೇಶಕ್ಕೆ ವರ್ಗಾವಣೆಯಾದರು. 2009ರಲ್ಲಿ ಪಾಟ್ನಾ ಹೈ ಕೋರ್ಟಿನ ಮುಖ್ಯ ನ್ಯಾಯಮೂರ್ತಿಯಾಗಿ ಆಯ್ಕೆಯಾದ ದೀಪಕ್ ನಂತರ 2010ರಲ್ಲಿ ದೆಹಲಿ ಹೈಕೋರ್ಟ್ ಮುಖ್ಯನ್ಯಾಯಮೂರ್ತಿಯಾದರು. 2011ರ ಅಕ್ಟೋಬರ್ ನಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಆಯ್ಕೆಗೊಂಡಿದ್ದ ದೀಪಕ್ ಮಿಶ್ರಾ ಇಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿದ್ದಾರೆ.

ಚಿತ್ರಮಂದಿರಗಳಲ್ಲಿ ರಾಷ್ಟ್ರಗೀತೆ ಕಡ್ಡಾಯದ ತೀರ್ಪು, ಯಾಕೂಬ್ ಮೆನನ್ ಗಲ್ಲು ಶಿಕ್ಷೆಯಾಗುವ ಹಿಂದಿನ ರಾತ್ರಿ ಅಂತಿಮ ವಿಚಾರಣೆ ಹಾಗೂ ಡಿ.16 ರ ಅತ್ಯಾಚಾರ ಪ್ರಕರಣದಲ್ಲಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಪ್ರಕಟಿಸಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು.

ಸುದೀರ್ಘ 14 ತಿಂಗಳ ಕಾಲ ಭಾರತದ ಮುಖ್ಯನ್ಯಾಯಮೂರ್ತಿಯಾಗಲಿರುವ ದೀಪಕ್ ಮಿಶ್ರಾ ಅವರ ಮುಂದೆ ದೊಡ್ಡ ಸವಾಲುಗಳು ಎದುರಾಗಿ ನಿಂತಿವೆ. ಅವುಗಳೆಂದರೆ, ಹೈ ಕೋರ್ಟ್ ನ್ಯಾಯಮೂರ್ತಿಗಳ ನೇಮಕದ ಸವಾಲಿನ ಜತೆಗೆ ದೀಪಕ್ ಮಿಶ್ರಾ ಅವರು ಬಾಬ್ರಿ ಮಸೀದಿ ವಿವಾದ, ಕಾವೇರಿ ನೀರಿನ ಇತ್ಯರ್ಥ, ಶಬರಿಮಲೆ ದೇವಸ್ಥಾನದಲ್ಲಿ ಮಹಿಳೆಯರ ಪ್ರವೇಶ, ಕಾಶ್ಮೀರಕ್ಕೆ 35ಎ ನಿಯಮದ ಪ್ರಕಾರ ವಿಶೇಷ ಸ್ಥಾನಮಾನ ನೀಡಿರುವುದರ ವಿರುದ್ಧದ ಸಲ್ಲಿಸಲಾಗಿರುವ ಕಾನೂನು ಅರ್ಜಿಯ ವಿಚಾರಣೆಯನ್ನು ನಡೆಸಬೇಕಿದೆ.

Leave a Reply