ಕೊನೆಗೂ ತೆಲೆ ಬಾಗಿದ ಚೀನಾ! ಸೇನೆ ಹಿಂಪಡೆದು ದೋಕಲಂ ಬಿಕ್ಕಟ್ಟಿಗೆ ಅಂತ್ಯವಾಡಲು ಉಭಯ ದೇಶಗಳು ಸಿದ್ಧ

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ತಿಂಗಳಿಗೂ ಹೆಚ್ಚು ಅವಧಿಯಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದ್ದ ಭಾರತ ಹಾಗೂ ಚೀನಾ ನಡುವಣ ದೋಕಲಂ ಗಡಿ ವಿವಾದ ಈಗ ಅಂತ್ಯ ಕಾಣುವ ಲಕ್ಷಣಗಳು ಗೋಚರಿಸಿವೆ.

ಭಾರತದ ಹಾಗೂ ಚೀನಾ ಅಧಿಕಾರಿಗಳ ನಿರಂತರ ಮಾತುಕತೆ ಹಾಗೂ ಸಂಧಾನದ ಫಲವಾಗಿ ಎರಡೂ ದೇಶಗಳು ಈಗ ತಮ್ಮ ಸೇನೆಯನ್ನು ದೋಕಲಂ ಪ್ರದೇಶದಿಂದ ಹಿಂಪಡೆದು, ರಾಜಿಗೆ ಮುಂದಾಗಿವೆ ಎಂಬ ವರದಿಗಳು ಬರುತ್ತಿವೆ. ಇದರ ಜತೆಗೆ ದೋಕಲಂ ಗಡಿ ಪ್ರದೇಶದಲ್ಲಿ ರಸ್ತೆ ನಿರ್ಮಾಣ ಮಾಡದಿರಲು ಚೀನಾ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಇದರಿಂದ ಭಾರತದ ವಿರುದ್ಧ ಪದೇ ಪದೇ ಬುಸುಗುಡುತ್ತಿದ್ದ ಚೀನಾ ಈಗ ಬಾಲ ಮುದುರಿಕೊಂಡು ತಲೆ ಬಾಗಿದಂತಾಗಿದೆ.

ಈ ಕುರಿತಾಗಿ ಹೇಳಿಕೆ ನೀಡಿರುವ ವಿದೇಶಾಂಗ ಸಚಿವಾಲಯ, ‘ಅನೇಕ ದಿನಗಳಿಂದ ದೋಕಲಂ ವಿಚಾರವಾಗಿ ಉದ್ಭವಿಸಿರುವ ಸಮಸ್ಯೆ ಬಗೆಹರಿಸಲು ಭಾರತ ಹಾಗೂ ಚೀನಾ ನಡುವೆ ಉನ್ನತ ಮಟ್ಟದ ಮಾತುಕತೆ ನಡೆಯುತ್ತಿದೆ. ಈಗ ಆ ಪ್ರಯತ್ನಗಳು ಯಶಸ್ವಿಯಾಗಿದ್ದು, ಉಭಯ ದೇಶಗಳು ಸೇನೆಯನ್ನು ಹಿಂಪಡೆಯಲು ನಿರ್ಧರಿಸಿವೆ’ ಎಂದು ತಿಳಿಸಿದೆ. ಭಾರತದ ವಿದೇಶಾಂಗ ಸಚಿವಾಲಯ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದ ಕೆಲವೇ ಹೊತ್ತಿನಲ್ಲಿ ಚೀನಾ ಸಹ ಈ ಕುರಿತು ಅಧಿಕೃತ ಹೇಳಿಕೆ ನೀಡಿದೆ.

ಈ ಬೆಳವಣಿಗೆ ಭಾರತೀಯ ರಾಯಭಾರಿ ಅಧಿಕಾರಿಗಳ ಪ್ರಯತ್ನಕ್ಕೆ ಸಿಕ್ಕ ದೊಡ್ಡ ಗೆಲವು ಎಂದು ವಿಶ್ಲೇಷಿಸಲಾಗುತ್ತಿದೆ. ಮಹತ್ವದ ಬ್ರಿಕ್ಸ್ ರಾಷ್ಟ್ರಗಳ ಸಭೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಈ ಒಂದು ಬೆಳವಣಿಗೆ ಮಹತ್ವ ಪಡೆದುಕೊಂಡಿದೆ. ಚೀನಾದಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾಗವಹಿಸಲು ಭಾರತದ ಪ್ರಧಾನಿ ನರೇಂದ್ರ ಮೋದಿ ಬೀಜಿಂಗ್ ಪ್ರವಾಸ ಕೈಗೊಳ್ಳಲಿದ್ದು, ಚೀನಾ ಅಧ್ಯಕ್ಷ ಜಿನ್ ಪಿಂಗ್ ಅವರನ್ನು ಭೇಟಿ ಮಾಡಲಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಚೀನಾ ಜತೆಗಿನ ಮುನಿಸು ಕರಗಿ ಸ್ನೇಹ ಚಿಗುರೊಡೆಯುವುದೇ ಎಂಬ ಕುತೂಹಲವು ಹೆಚ್ಚಿದೆ.

ಈ ದೋಕಲಂ ವಿಚಾರವಾಗಿ ಚೀನಾಗೆ ಭಾರತ ಸರಿಯಾದ ರೀತಿಯಲ್ಲೇ ತೊಡೆ ತಟ್ಟಿ ನಿಂತಿತ್ತು. ಚೀನಾ ತನ್ನ ಸೇನೆಯ ಬಲಾಬಲವನ್ನು ಹೊಗಳುತ್ತಾ ಎಷ್ಟೇ ಎಚ್ಚರಿಕೆ ನೀಡಿದರೂ ಭಾರತ ಸೇನೆ ಮಾತ್ರ ತಲೆ ಕೆಡಿಸಿಕೊಳ್ಳದೇ ಗಡಿಯಲ್ಲಿ ತೊಡೆ ತಟ್ಟಿ ನಿಂತಿತ್ತು.

ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಭಾರತ ಹಾಗೂ ಚೀನಾ ಸ್ನೇಹ ಸಂಬಂಧ ವೃದ್ಧಿಗೆ ನಾಂದಿ ಹಾಡಿದ್ದೇ ಆದರೆ, ಭಾರತಕ್ಕೆ ಹೆಚ್ಚಿನ ಲಾಭವಿದೆ. ಪಾಕಿಸ್ತಾನಕ್ಕೆ ಬೆಂಬಲ ನೀಡುತ್ತಿರುವ ಚೀನಾ ಯೂಟರ್ನ್ ಹೊಡೆಯಬೇಕಾಗುತ್ತದೆ. ಅಲ್ಲದೆ ಉಗ್ರರು ಹಾಗೂ ಭಯೋತ್ಪಾದನೆ ವಿಚಾರವಾಗಿ ಭಾರತ ನಡೆಸುತ್ತಿರುವ ಹೋರಾಟದಲ್ಲಿ ಚೀನಾ ಕೈ ಜೋಡಿಸಲಿದೆ.

ಒಟ್ಟಾರೆಯಾಗಿ ದೋಕಲಂ ವಿಚಾರದಲ್ಲಿ ಆಕ್ರಮಣಕಾರಿ ಧೋರಣೆ ತೋರುವ ಚೀನಾವನ್ನು ಯುದ್ಧ ಮಾಡದೇ ಹೇಗೆ ಕಟ್ಟಿಹಾಕಬೇಕು ಎಂಬುದನ್ನು ಇಡೀ ಪ್ರಪಂಚಕ್ಕೆ ತೋರಿಸಿಕೊಟ್ಟಿದೆ. ಇದರ ಜತೆಗೆ ಭಾರತ ಚೀನಾದ ಯಾವುದೇ ಬೆದರಿಕೆಗೆ ಜಗ್ಗುವುದಿಲ್ಲ ಹಾಗೂ ಭೂತಾನ್, ನೇಪಾಳದಂತಹ ಏಷ್ಯಾದ ಸಣ್ಣ ರಾಷ್ಟ್ರಗಳ ಪರವಾಗಿ ಭಾರತ ಹೇಗೆ ನಿಲ್ಲಲಿದೆ ಎಂಬುದು ಜಗತ್ತಿಗೇ ಸಾಬೀತುಪಡಿಸಿದೆ. ಭಾರತದ ಈ ವಿಚಾರದಲ್ಲಿ ತೆಗೆದುಕೊಂಡ ನಿಲುವಿಗೆ ವಿಶ್ವದ ಅನೇಕ ರಾಷ್ಟ್ರಗಳು ಮೆಚ್ಚುಗೆ ವ್ಯಕ್ತಪಡಿಸಿವೆ.

Leave a Reply