ಧರ್ಮ, ರಾಜಕಾರಣ, ಅಪರಾಧದ ಅಪವಿತ್ರ ಮೈತ್ರಿ ಪ್ರತೀಕ ಅತ್ಯಾಚಾರಿ ಬಾಬಾ ರಾಮ್ ರಹೀಮ್ ಸಿಂಗ್!

ಈ ಡೋಂಗಿ ಬಾಬಾಗಳು, ನಕಲಿ ಸ್ವಾಮೀಜಿಗಳು, ಸ್ವಯಂ ಘೋಷಿತ ದೇವಮಾನವರು ಈ ಸಮಾಜಕ್ಕೆ, ದೇಶಕ್ಕೆ ಮಾಡಿರುವ, ಮಾಡುತ್ತಿರುವ ಅನಾಹುತಗಳು ಒಂದೆರಡಲ್ಲ. ಅವು ಕಾಲದಿಂದ ಕಾಲಕ್ಕೆ ಸಾಬೀತಾಗುತ್ತಲೇ ಬಂದಿವೆ. ಕಾಲಘಟ್ಟಕ್ಕೆ ಅನುಗುಣವಾಗಿ ಶೈಲಿ ಮತ್ತು ಸ್ವರೂಪಗಳು ಮಾತ್ರ ಬೇರೆ-ಬೇರೆ ಇರಬಹುದು. ಆದರೆ ಉದ್ದೇಶ ಮಾತ್ರ ಒಂದೇ. ಜನರ ನಂಬಿಕೆ, ಮೌಢ್ಯ ಮತ್ತು ದೌರ್ಬಲ್ಯವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಗಿಸಿಕೊಂಡು ಅಧಿಕಾರ ರಾಜಕಾರಣದಲ್ಲಿ ಪಾರಮ್ಯ ಮೆರೆಯುವುದು, ಅದನ್ನು ವೈಭವಯುತ ಜೀವನಕ್ಕೆ ಸೋಪಾನ ಮಾಡಿಕೊಳ್ಳುವುದು. ಇದರ ಫಲಶ್ರುತಿಯಾದ ಅಹಮಿಕೆಯಲ್ಲಿ ಕೊನೆಗೊಮ್ಮೆ ಮಾಡಬಾರದ್ದು ಮಾಡಿ ಜೈಲು ಸೇರುವುದು. ಇಂಥ ಕ್ರಿಮಿನಲ್‌ಗಳ ಹಿಂಬಾಲಕರು ಸೃಷ್ಟಿಸುವ ಹಿಂಸಾಚಾರಕ್ಕೆ ಅಮಾಯಕ ಜೀವಗಳು ಬಲಿ ಆಗುವುದು.

ನಿಜ, ಅದು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಪರಮಾಪ್ತ ಮಾಂತ್ರಿಕರಾಗಿದ್ದ, ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇರೆಗೆ ಜೈಲು ಸೇರಿದ ಸ್ವಾಮಿ ಸದಾಚಾರಿ ಇರಬಹುದು, ಮತ್ತೊಬ್ಬ ಮಾಜಿ ಪ್ರಧಾನಿ ಪಿ.ವಿ. ನರಸಿಂಹರಾವ್ ಅವರಿಗೆ ಧರ್ಮಬೋಧಕರಾಗಿದ್ದು, ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆ ಪ್ರಕರಣದಲ್ಲಿ ಜೈಲು ಸೇರಿದ ಚಂದ್ರಾಸ್ವಾಮಿ ಇರಬಹುದು, ತಾನು ಸಂತ ಕಬೀರನ ತುಂಡು ಎಂದು ಸಾರಿಕೊಂಡು ಕೊಲೆ ಪ್ರಕರಣದಲ್ಲಿ ಜೈಲುಪಾಲಾದ ಸಂತ ರಾಮಪಾಲ್ ಇರಬಹುದು, ಭಕ್ತಿ-ಜ್ಞಾನ-ಕರ್ಮ ಯೋಗ–ದಾರಿಯ ರುವಾರಿ ಎಂದು ಬಿಂಬಿಸಿಕೊಂಡು ಅಪ್ರಾಪ್ತರ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಕಂಬಿ ಎಣಿಸಿದ ಆಸಾರಾಂ ಬಾಪು ಇರಬಹುದು, ಸಾಕ್ಷಾತ್ ಶಿವನ ಪ್ರತಿರೂಪ ಎಂದು ಹೇಳಿಕೊಂಡು ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇರೆಗೆ ಜೈಲು ಕಂಡು ಬಂದ ಧ್ಯಾನಪೀಠದ ನಿತ್ಯಾನಂದ ಇರಬಹುದು, ಇದೀಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಂದ ಹಿಡಿದು ಪಕ್ಷದ ನಾನಾ ಮುಖಂಡರ ಒಡನಾಟ ಹೊಂದಿದ್ದು, ಆಶ್ರಮದ ಪರಿಚಾರಿಕೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೈಲು ಪಾಲಾಗಿರುವ ಹರಿಯಾಣದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ, ಸ್ವಯಂ ಘೋಷಿತ ದೇವಮಾನವ ಗುರ್ಮಿತ್ ರಾಮ್ ರಹೀಮ್ ಸಿಂಗ್ ಇರಬಹುದು- ಇವರೆಲ್ಲರ ಗುರಿಯೂ ಒಂದೇ. ಜನರ ನಂಬಿಕೆಯನ್ನು ತಮ್ಮ ವಂಚನೆಯ ಅಸ್ತ್ರವನ್ನಾಗಿ ಮಾಡಿಕೊಂಡು ಮೆರೆಯುವುದು.

ಇದೀಗ ರಾಮ್ ರಹೀಮ್ ಸಿಂಗ್ ಬೆಂಬಲಿಗರು ಹರಿಯಾಣದ ಪಂಚಕುಲಾದಲ್ಲಿ ನಡೆಸಿದ ಹಿಂಸಾಚಾರದಲ್ಲಿ 38 ಅಮಾಯಕ ಜೀವಗಳು ಬಲಿ ಆಗಿವೆ. ರಾಮ್ ರಹೀಮ್ ಸಿಂಗ್ ಅತ್ಯಾಚಾರ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಜೈಲು ಸೇರಿದ್ದಾನೆ. ಅವನೇನೂ ತಪ್ಪು ಮಾಡಿದ್ದ. ಮಾಡಿದ್ದ ತಪ್ಪಿಗೆ ಜೈಲು ಸೇರಿದ. ಅದೆಲ್ಲ ಸರಿ, ಆದರೆ ಏನೊಂದೂ ತಪ್ಪು ಮಾಡದಿದ್ದರೂ, ಈ ಪ್ರಕರಣಕ್ಕೂ ತಮಗೂ ಯಾವುದೇ ರೀತಿಯಲ್ಲೂ ಸಂಬಂಧ ಇಲ್ಲದಿದ್ದರೂ ಪಂಚಕುಲಾದ 38 ಮಂದಿ ಅಮಾಯಕರು ಬಲಿ ಆಗಿದ್ದಾರಲ್ಲಾ? ಈ ಘೋರ ಅನ್ಯಾಯಕ್ಕೆ ಯಾರು ಹೊಣೆ? ಈ ಕರ್ಮಕಾಂಡಕ್ಕೆ ಕಾರಣೀಭೂತರಾದ ಬಾಬಾ ಅನುಯಾಯಿಗಳಿಗೆ ನಾಳೆ ಶಿಕ್ಷೆ ಆಗಬಹುದು ಅಥವಾ ಆಗದಿರಬಹುದು. ಅದು ಬೇರೆ ಪ್ರಶ್ನೆ. ಬೆಲೆ ಕಟ್ಟಲಾಗದ ಈ ಮುಗ್ಧ ಜೀವಗಳನ್ನು ವಾಪಸ್ಸು ತರುವುದು ಎಲ್ಲಿಂದ? ಬೆಲೆ ಕಟ್ಟಿದರೂ ವಾಪಸ್ಸು ತರಲಾದೀತೇ? ತಮ್ಮವರನ್ನು ಕಳೆದುಕೊಂಡ ಕುಟುಂಬಗಳಿಗೆ ಆಗಿರುವ ಅನ್ಯಾಯ ಸರಿಪಡಿಸುವುದಾದರೂ ಹೇಗೆ? ಅವರ ಕಣ್ಣೀರು ಒರೆಸುವುದಾದರೂ ಹೇಗೆ?

ರಾಮ್ ರಹೀಮ್ ಸಿಂಗ್‌ನಂಥ ದುರುಳ, ದುಷ್ಟ ಬಾಬಾಗಳು ಈ ನಾಡಿಗೆ, ಈ ಸಮಾಜಕ್ಕೆ ಮೇಲಿಂದ ಮೇಲೆ ವಕ್ಕರಿಸಿಕೊಳ್ಳುತ್ತಿದ್ದರೂ, ಇಂಥವರನ್ನು ನಂಬಿದರೆ ಅನ್ಯಾಯ ಆಗಿಯೇ ತೀರುತ್ತದೆ ಎಂದು ಗೊತ್ತಿದ್ದರೂ, ಹೀಗೆ ನಡೆದು ಹೋದ ಅನೇಕ ನಿದರ್ಶನಗಳು ಕಣ್ಣ ಮುಂದೆ ಇದ್ದರೂ ಜನ ಹೋಗಿ, ಹೋಗಿ ಇರುಳ ಕಂಡ ಬಾವಿಗೆ ಹಗಲು ಬೀಳುವವರಂತೆ ಮೋಸ, ದಗಾ, ವಂಚನೆಗೆ ಒಳಗಾಗುತ್ತಿದ್ದಾರಲ್ಲ ಇದಕ್ಕೆ ಏನೆನ್ನಬೇಕು? ಇದಕ್ಕೆ ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು? ಸುಡುತ್ತದೆ ಎಂದು ಗೊತ್ತಿದ್ದರೂ ಬೆಂಕಿಗೆ ಕೈ ಒಡ್ಡುವ ಜನರ ಮೌಢ್ಯವನ್ನು ಜರಿಯಬೇಕೋ, ಗೊತ್ತಿದ್ದೂ ಗೊತ್ತಿದ್ದೂ ಈ ನಕಲಿ ಬಾಬಾಗಳ ವಂಚನೆ ಖೆಡ್ಡಾಕ್ಕೆ ಬೀಳುವ ಅವರ ದಡ್ಡತನವನ್ನು ಕೊಂಡಾಡಬೇಕೋ ಒಂದೂ ಗೊತ್ತಾಗುವುದಿಲ್ಲ. ಹಣ ದುಪ್ಪಟ್ಟು ಮಾಡಿಕೊಡುವ ಆಮಿಷವೊಡ್ಡಿ ಜನರನ್ನು ವಂಚಿಸುವ ಬ್ಲೇಡ್ ಕಂಪನಿಗಳ ಸಂಖ್ಯೆ ಒಂದೆರಡಲ್ಲ. ಅವು ಹುಟ್ಟುತ್ತಲೇ ಇರುತ್ತವೆ, ಜನರ ಹಣ ಲಪಟಾಯಿಸಿ ಮರೆಯಾಗುತ್ತಲೇ ಇರುತ್ತವೆ. ಆದರೂ ಹೊಸದಾಗಿ ಇಂಥದೊಂದು ಬ್ಲೇಡ್ ಕಂಪನಿ ಕಾಣಿಸಿಕೊಂಡರೆ ಜನ ಮುಂಡಾಯಿಸಿಕೊಳ್ಳಲು ಕ್ಯೂಹಚ್ಚಿ ನಿಲ್ಲುತ್ತಾರೆ. ಈ ಡೋಂಗಿ ಬಾಬಾಗಳ ವಿಚಾರದಲ್ಲೂ ಜನರ ಕತೆ ಹೀಗೆ ಆಗಿದೆ. ಅವರು ಮೋಸ ಮಾಡುತ್ತಲೇ ಇದ್ದಾರೆ. ಜನ ತಮ್ಮ ನಂಬಿಕೆಯನ್ನು ಅಡವಿಟ್ಟು ವಂಚನೆಗೆ ರುಜು ಹಾಕುತ್ತಲೇ ಇದ್ದಾರೆ.

ಇದಕ್ಕೆಲ್ಲ ಏನು ಕಾರಣ ಎಂದು ಹುಡುಕಿದರೆ ಸಿಗುವ ಉತ್ತರ ಜನರಲ್ಲಿ ಮಡುಗಟ್ಟಿರುವ ಪಾಪಭೀತಿ. ದೇವರು ಇದ್ದಾನೋ, ಇಲ್ಲವೋ ಎನ್ನುವುದು ನಂಬಿಕೆಯ ಪ್ರಶ್ನೆ. ಆದರೆ ಜನರಲ್ಲಿ ದೈವಪ್ರೀತಿ ಮತ್ತು ದೈವಭೀತಿಗಿಂತ ಪಾಪಭೀತಿ, ಮೌಢ್ಯಪ್ರೀತಿ ಹೆಚ್ಚಾಗುತ್ತಿರುವುದರಿಂದಲೇ ರಾಮ್ ರಹೀಮ್ ಸಿಂಗ್‌ನಂಥ ಸ್ವಯಂಘೋಷಿತ ದೇವಮಾನವರು ನಾಯಿಕೊಡೆಗಳಂತೆ ಸೃಷ್ಟಿಯಾಗುತ್ತಿದ್ದಾರೆ. ದೇವರು ಮತ್ತು ಮನುಷ್ಯರ ನಡುವಣ ಮಧ್ಯವರ್ತಿಗಳು, ದೇವರ ಪ್ರತಿಸ್ವರೂಪವೇ ತಾವು ಎಂದು ಸುಳ್ಳೇ ಸುಳ್ಳು ಹೇಳಿಕೊಳ್ಳುವವರ ಮೇಲೆ ಜನರಿಗೆ ಭಯಂಕರ ವಿಶ್ವಾಸ ಮೂಡಲು ಕಾರಣ ಮತ್ತದೇ ಪಾಪಭೀತಿಯೇ ಕಾರಣ. ಮೇಲ್ನೋಟಕ್ಕೆ ಗೊತ್ತಿರುತ್ತದೆ, ಅವರು ಹೇಳಿಕೊಳ್ಳುತ್ತಿರುವುದರಲ್ಲಿ ಸತ್ಯ ಇಲ್ಲ ಎಂಬುದು. ಆದರೂ ಅದನ್ನು ನಂಬಲು ಒಂದು ರೀತಿಯ ಅಗೋಚರ ಭಯ. ಒಂದೊಮ್ಮೆ ಅವರು ಹೇಳುತ್ತಿರುವುದು ನಿಜವೇ ಆಗಿಹೋಗಿದ್ದರೆ ತಮಗೆ ಕೆಡುಕಾಗಬಹುದು ಎಂಬ ಪಾಪಭೀತಿ ಅವರನ್ನು ತಮಗೇ ಅರಿವಿಲ್ಲದಂತೆ ಹಳ್ಳಕ್ಕೆ ಕೆಡವುತ್ತಿದೆ. ಹೀಗೆ ಹಳ್ಳಕ್ಕೆ ಬೀಳುವವರ ಸಂಖ್ಯೆ ದಿನೇ ದಿನೇ ಇಮ್ಮಡಿ, ಮುಮ್ಮಡಿ ಆಗುತ್ತಿರುವುದರಿಂದಲೇ ರಾಮ್ ರಹೀಮ್‌ನಂಥ ಸ್ವಯಂ ಘೋಷಿತ ದೇವಮಾನವರ ಸೃಷ್ಟಿಯೂ ನೂರ್ಮಡಿ ಆಗುತ್ತಿರುವುದು. ಈ ಸಮಾಜದ ದೌರ್ಬಲ್ಯವನ್ನು ತಮ್ಮ ಅರಸೊತ್ತಿಗೆಯನ್ನಾಗಿ ಪರಿವರ್ತಿಸಿಕೊಳ್ಳುತ್ತಿರುವುದು.

ಜನ ಸರಿಯಾಗಿದ್ದರೆ, ಅವರ ಚಿಂತನೆ ಸರಿಯಾಗಿದ್ದರೆ, ಅವರ ಮೇಲೆ ಅವರಿಗೆ ವಿಶ್ವಾಸ ಇದ್ದರೆ, ರಾಮ್ ರಹೀಮ್ ಸಿಂಗ್‌ನಂಥ ಅತ್ಯಾಚಾರಿ ದೇವಮಾನವರು ಸೃಷ್ಟಿಯಾಗುವುದಿಲ್ಲ. ಅದು ಯಾವುದೇ ಧರ್ಮ ಇರಲಿ, ಜನ ಧರ್ಮ ಏನು ಹೇಳುತ್ತದೆ ಎಂಬುದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವುದಿಲ್ಲ. ಅದನ್ನು ಅರಿಯುವ ಗೋಜಿಗೂ ಹೋಗುವುದಿಲ್ಲ. ಬದಲಿಗೆ ಇಂಥ ಮಧ್ಯವರ್ತಿಗಳ ಮೊರೆ ಹೋಗುತ್ತಾರೆ. ಇಲ್ಲಿ ಅವರು ಹೇಳಿದ್ದೇ ಸತ್ಯ ಎಂದು ನಂಬುತ್ತಾರೆ. ಯಾಕೆಂದರೆ ಜನರ ವಿವೇಕ, ವಿವೇಚನೆಯನ್ನು ಮೌಢ್ಯ ಮತ್ತು ಪಾಪಭೀತಿ ನುಂಗಿ ಹಾಕಿರುತ್ತದೆ. ಕಾಲ ಬದಲಾದರೂ ಜನರ ನಂಬಿಕೆಗಳು ಬದಲಾಗುತ್ತಿಲ್ಲ. ಯಾವಾಗ ಜನರ ನಂಬಿಕೆಗಳು ಬದಲಾಗುವುದಿಲ್ಲವೋ ಆಗ ಈ ಡೋಂಗಿ ಬಾಬಾಗಳು ಜನರ ನಂಬಿಕೆಗಳಲ್ಲೇ ಪಾಪದ ಭೀತಿ ಭಿತ್ತುತ್ತಾರೆ. ಇದರ ನಿವಾರಣೆಯ ಆಮಿಷವೊಡ್ಡಿ ತಮ್ಮ ಹಿಂಬಾಲಕರನ್ನಾಗಿ ಮಾಡಿಕೊಳ್ಳುತ್ತಾರೆ. ಇಂಥ ಹಿಂಬಾಲಕರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ದೇವರು ಮತ್ತ ಜನರ ನಡುವಣ ಮಧ್ಯವರ್ತಿ ಕಾಲಾನುಕ್ರಮದಲ್ಲಿ ಧಾರ್ಮಿಕ ಮುಖಂಡನ್ನಾಗಿ ಪರಿವರ್ತಿತನಾಗುತ್ತಾನೆ. ಆಗ ಆತನ ಎದಿರು ಜನರ ಭಾವನೆಗಳು ಹಣವಾಗಿ ಹರಿಯುತ್ತದೆ, ಸಂಘಟನೆಯಾಗಿ ಬೆಳೆಯುತ್ತದೆ, ನಂಬಿಕೆ ಮತ್ತಷ್ಟು ದೃಢವಾಗುತ್ತದೆ. ಚರಿತ್ರೆಯಲ್ಲಿ ಅದೆಷ್ಟೇ ಮೋಸ, ವಂಚನೆಗಳು ಘಟಿಸಿದ್ದರೂ ಜನರ ನಂಬಿಕೆ ಮುಂದೆ ಟೊಳ್ಳಾಗಿ ಸವೆಯುತ್ತದೆ.

ಜತೆಗೆ ಧರ್ಮದ ಜತೆಗೆ ರಾಜಕೀಯ ಬೆರೆಸಿ ಹೋದಾಗ ಈ ಡೋಂಗಿ ಬಾಬಾಗಳನ್ನು ಹಿಡಿಯುವವರೇ ಇಲ್ಲದಂತಾಗುತ್ತದೆ. ಒಬ್ಬೊಬ್ಬ ಸ್ವಾಮೀಜಿಗೆ, ಒಬ್ಬೊಬ್ಬ ಬಾಬಾನಿಗೆ ಒಂದೊಂದು ಪಕ್ಷದ ರಕ್ಷೆ. ಅವರ ಹಿಂಬಾಲಕ ಸಮೂಹ ದೊಡ್ಡದಾಗುತ್ತಿದ್ದಂತೆ ಮತ ಲಾಭಕ್ಕಾಗಿ ರಾಜಕೀಯ ನಾಯಕರು ಅವರನ್ನು ಹುಡುಕಿಕೊಂಡು ಬರುವುದು, ರಾಜಕೀಯ ನಾಯಕರು ಸಂಕಷ್ಟದಲ್ಲಿ ಸಿಕ್ಕಿದಾಗ ಈ ಸ್ವಾಮೀಜಿಗಳು ಅವರ ಬೆನ್ನಿಗೆ ನಿಲ್ಲುವುದು ಮೊದಲಿಂದಲೂ ನಡೆದು ಬಂದಿರುವ ಪದ್ಧತಿ. ಯಾರಿಂದ ಯಾರು ಬೆಳೆದರು ಎನ್ನುವುದಕ್ಕಿಂತ ಯಾರಿಂದ ಯಾರಿಗೆ ಎಷ್ಟು ಅನುಕೂಲ ಆಗುತ್ತದೆ ಎಂಬುದಷ್ಟೇ ಇಲ್ಲಿ ಮುಖ್ಯವಾಗುತ್ತದೆ. ಇವತ್ತು ರಾಮ್ ರಹೀಮ್ ಸಿಂಗ್ ಮತ್ತು ಬಿಜೆಪಿ ನಾಯಕರ ನಡುವೆ ಪರಸ್ಪರ ‘ಕೊಡು ಕೊಳ್ಳುವಿಕೆ’ ಒಡನಾಟ ಬೆಳೆದಿರುವುದರ ಹಿಂದಿರುವುದು ಲಾಭದ ಲೆಕ್ಕಾಚಾರವೇ. ಹಾಗೆ ನೋಡಿದರೆ ರಾಮ್ ರಹೀಮ್ ಸಿಂಗ್ ಪ್ರಭಾವ, ಬೆಂಬಲಿಗರು ಹೆಚ್ಚಾಗುತ್ತಿದ್ದಂತೆ, ಬಿಜೆಪಿ ಅವರ ಆಶ್ರಮವನ್ನು ಹುಡುಕಿಕೊಂಡು ಹೋಗಿದೆ. ಹರಿಯಾಣದ ಹಿಂದಿನ ಚುನಾವಣೆಯಲ್ಲಿ ರಾಮ್ ರಹೀಮ್ ಬಹಿರಂಗವಾಗಿಯೇ ಬಿಜೆಪಿಗೆ ಬೆಂಬಲ ಕೊಟ್ಟದ್ದಾನೆ. ಅದಕ್ಕೆ ಪ್ರತಿಯಾಗಿ ಹರಿಯಾಣ ಸರಕಾರ ಕೂಡ ಆತನಿಗೆ ಬೇಕಾದಷ್ಟು ಸೌಲಭ್ಯಗಳನ್ನು ಕಲ್ಪಿಸಿಕೊಟ್ಟಿದೆ. ಈ ಪರಸ್ಪರ ಬೆಂಬಲ ವಿನಿಮಯವಾಗಿರುವುದು ರಾಮ್ ರಹೀಮ್ ಸಿಂಗ್ ಮೇಲೆ ಅತ್ಯಾಚಾರ ಹಾಗೂ ಕೊಲೆ ಪ್ರಕರಣಗಳ ವಿಚಾರಣೆಗಳು ನಡೆಯುತ್ತಿರುವಾಗಲೇ. ಅಂದರೆ ಆತನಿಂದ ಮತರಾಜಕೀಯಕ್ಕೆ ಎಷ್ಟು ಅನುಕೂಲವಾಗುತ್ತದೆ ಎನ್ನುವುದು ಇಲ್ಲಿ ಮುಖ್ಯವಾಯಿತೇ ಹೊರತು ಆತನ ಹಿನ್ನೆಲೆಯಾಗಲಿ, ಪೂರ್ವಾಪರವಾಗಲಿ ಅಲ್ಲವೇ ಅಲ್ಲ. ಧರ್ಮ ಮತ್ತು ರಾಜಕೀಯದ ಅಪವಿತ್ರ ಮೈತ್ರಿ ಎಂದರೆ ಇದೇ. ಈ ಅಪವಿತ್ರ ಮೈತ್ರಿ ಎರಡೂ ಪಾಳೆಯದಲ್ಲೂ ನೀಚಶಕ್ತಿಯನ್ನು ಸೃಷ್ಟಿಸಿ, ಪೊರೆಯುತ್ತದೆ. ಈ ಬಾಬಾನಿಗೆ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರರೂಢ ಪಕ್ಷಗಳ ಬೆಂಬಲವಿದೆ ಎಂಬ ಕಾರಣಕ್ಕೆ ಆತ ಏನೇ ಅನಾಚಾರ ಮಾಡಿದರೂ ಜನ ಸಹಿಸಿಕೊಳ್ಳುತ್ತಾರೆ, ಆತನಿಗೆ ಹೆದರುತ್ತಾರೆ. ಅದೇ ರೀತಿ ಈ ಬಾಬಾನ ಕೃಪಾಕಟಾಕ್ಷವಿದೆ ಎನ್ನುವ ಕಾರಣಕ್ಕೆ ಜನರು ಕೂಡ ಬೆಂಬಲಿತ ಪಕ್ಷದ ನೆರವಿಗೆ ನಿಲ್ಲುತ್ತಾರೆ. ಕೊನೆಗೆ ಈ ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿ ಅಪರಾಧಗಳಿಗೆ ಹೇಗೆ ಕಾರಣವಾಗುತ್ತದೆ ಎನ್ನುವುದಕ್ಕೆ ರಹೀಮ್ ಸಿಂಗ್‌ಗೆ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಯಾದ ನಂತರ ಹರಿಯಾಣದ ಪಂಚಕುಲಾದಲ್ಲಿ ಬಾಬಾನ ಬೆಂಬಲಿಗರಿಂದ ನಡೆದಿರುವ 38 ಮಂದಿಯ ಮಾರಣಹೋಮವೇ ಸ್ಪಷ್ಟ ನಿದರ್ಶನ.

ಬಾಬಾನಿಗೆ ಜೈಲುಶಿಕ್ಷೆ ಪ್ರಕಟವಾದ ಪರಿಸ್ಥಿತಿಯ ಲಾಭ ಪಡೆದು ಸಮಾಜಘಾತುಕ ಶಕ್ತಿಗಳು ಈ ದುಷ್ಕೃತ್ಯ ಎಸಗಿವೆ ಎಂದು ಬಿಂಬಿಸಲು ಕೆಲವರು ಯತ್ನಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುತ್ತಿರುವುದು ಕೂಡ ರಾಜಕೀಯ ಕಾರಣವೇ. ಪರಿಸ್ಥಿತಿಯನ್ನು ನಿಭಾಯಿಸಲು ವಿಫಲವಾದ ಹರಿಯಾಣದ ಬಿಜೆಪಿ ಸರಕಾರದ ತಲೆ ಕಾಯುವ ಉದ್ದೇಶದಿಂದ ಇಂಥದೊಂದು ಕೀಟವನ್ನು ಹಾರಿಬಿಡಲಾಗಿದೆ. ಆದರೆ ಸೆರೆ ಸಿಕ್ಕ ಬಾಬಾ ಬೆಂಬಲಿಗರ ಬಳಿ ಪತ್ತೆಯಾದ ಮಚ್ಚು, ತಲವಾರು ಮತ್ತಿತರ ಮಾರಕಾಸ್ತ್ರಗಳು, ಬಂದೂಕು, ಪಿಸ್ತೂಲ್, ನಾಡಬಾಂಬ್‌ಗಳು ಅವರೆಂಥ ಗೋಮುಖ ವ್ಯಾಘ್ರರೆಂಬುದನ್ನು ಸಾರಿದೆ. ಎಲ್ಲಕ್ಕಿಂತ ಮಿಗಿಲಾಗಿ ಹಿಂಸಾಚಾರ ತಡೆಯಲು ವಿಫಲವಾದ ಕೇಂದ್ರ ಹಾಗೂ ಹರಿಯಾಣ ಸರಕಾರಕ್ಕೆ ಹರಿಯಾಣ-ಪಂಜಾಬ್ ಹೈಕೋರ್ಟ್ ತರಾಟೆ ತೆಗೆದುಕೊಂಡಿರುವುದು, ರಾಜಕೀಯ ಲಾಭಕ್ಕಾಗಿ ಹರಿಯಾಣ ಸರಕಾರ ಬಾಬಾ ಅನುಯಾಯಿಗಳ ಮುಂದೆ ಮಂಡಿಯೂರಿದೆ ಎಂದು ಟೀಕಿಸಿರುವುದು ತಪ್ಪು ಎಲ್ಲಿ ಆಗಿದೆ ಎಂಬುದಕ್ಕೆ ಕನ್ನಡಿ ಹಿಡಿದಿದೆ.

ಡೇರಾ ಸಚ್ಚಾ ಸೌದಾ ಅನುಯಾಯಿಗಳು. ‘ರಾಮ್ ರಹೀಮ್‌ಗೆ ಲಕ್ಷಾಂತರ ಮಂದಿಯ ಬೆಂಬಲ ಇರುವುದು ಮುಖ್ಯವೇ ಹೊರತು ನ್ಯಾಯಮೂರ್ತಿಯೊಬ್ಬ ಕೊಟ್ಟ ತೀರ್ಪು ಮುಖ್ಯವಲ್ಲ, ಹೀಗಾಗಿ ಅವರನ್ನು ಜೈಲಿಗೆ ಕಳುಹಿಸುವುದು ಸರಿಯಲ್ಲ’ ಎಂದು ಹೇಳಿರುವುದು ಅವರೆಂಥ ಅವಿವೇಕಿಗಳು, ಈ ನೆಲದ ಕಾನೂನಿನ ಬಗ್ಗೆ ಅವರಿಗೆಂಥ ಅರಿವಿದೆ, ಇಂಥವರ ಪೋಷಣೆಗೆ ನಿಂತಿರುವ ಹರಿಯಾಣ ಬಿಜೆಪಿ ಸರಕಾರದ ಮರ್ಯಾದೆ ಎಲ್ಲಿ ಹರಾಜಾಗಿದೆ ಎಂಬುದನ್ನು ಶೃತಪಡಿಸುತ್ತದೆ. ಕೊಲೆಗಾರರು, ಅತ್ಯಾಚಾರಿಗಳು, ಡಕಾಯಿತರನ್ನು ಅವರಿಗಿರುವ ಜನಬೆಂಬಲದ ಆಧಾರದ ಮೇಲೆ ನಿರಪರಾಧಿಗಳು ಎಂದು ಪರಿಗಣಿಸಲು ಸಾಧ್ಯವೇ? ಅವರನ್ನು ಬಿಡುಗಡೆ ಮಾಡಲು ಸಾಧ್ಯವೇ? ಇವರೇನು ಬಾಬಾನ ಅನುಯಾಯಿಗಳೋ ಅಥವಾ ಅನು‘ನಾಯಿ’ಗಳೋ ಎಂಬ ಅನುಮಾನ ಇಲ್ಲಿ ಗಾಢವಾಗಿ ಕಾಡುತ್ತದೆ.

ನಿಜ, ಧರ್ಮ ಮತ್ತು ರಾಜಕೀಯದ ಅಪವಿತ್ರ ಮೈತ್ರಿ ಜನರ ಮುಂದೆ ಅದೆಷ್ಟರ ಮಟ್ಟಿಗೆ ಬೆತ್ತಲಾಗಿದೆ ಎಂಬುದನ್ನು ಭಾರತದ ಇತಿಹಾಸದಲ್ಲಿ ದಾಖಲಾಗಿರುವ ಅನೇಕ ನಿದರ್ಶನಗಳು ತೆರೆದಿಟ್ಟಿವೆ. ತಪ್ಪು ಮಾಡಿ ಜೈಲಿಗೆ ಹೋದ ರಾಜಕಾರಣಿಗಳನ್ನು ಜೈಲಿಗೇ ಹೋಗಿ ಭೇಟಿ ಮಾಡಿ ಸಾಂತ್ವನ ಹೇಳಿ ಬರುವ ಸ್ವಾಮೀಜಿಗಳು, ತಮ್ಮ ಸಮುದಾಯದ ನಾಯಕ ಮುಖ್ಯಮಂತ್ರಿ ಆಗೋದು ತಪ್ಪಬಾರದು ಎನ್ನುವ ಕಾರಣಕ್ಕೆ ಬೀದಿಗಳಿದು ಹೋರಾಟ ಮಾಡುವ ಮಠಾಧೀಶರು, ತಮ್ಮ ಸಮುದಾಯದ ನಾಯಕರನ್ನು ಮಂತ್ರಿ ಮಾಡಿ ಎಂದು ಮುಖ್ಯಮಂತ್ರಿ ಮನೆಬಾಗಿಲಿಗೆ ಹೋಗಿ ಅಂಗಲಾಚುವ ಸನ್ಯಾಸಿಗಳು ಇರುವ ತನಕ ಇಂಥ ಧರ್ಮ ಮತ್ತು ರಾಜಕಾರಣದ ಅಪವಿತ್ರ ಮೈತ್ರಿ ಅನವರತ ಮುಂದುವರೆಯುತ್ತಲೇ ಇರುತ್ತದೆ. ರಾಮ್ ರಹೀಮ್‌ನಂಥ ಅತ್ಯಾಚಾರಿ ಬಾಬಾಗಳು ಜೈಲಿಗೆ ಹೋದ ಕಾರಣಕ್ಕೆ ಅಮಾಯಕರು ಜೀವ ಕಳೆದುಕೊಳ್ಳಬೇಕಾದ ಅಪರಾಧ ಪ್ರಕರಣಗಳಿಗೂ ಅದು ತಿದಿ ಒತ್ತುತ್ತಿರುತ್ತದೆ. ಸುಮ್ಮನೆ ನೋಡುತ್ತಿರಬೇಕಷ್ಟೇ!

ಲಗೋರಿ: ಜನ ಮೂರ್ಖರಾಗಿರುವವರೆಗೆ ವ್ಯವಸ್ಥೆ ಸುಧಾರಣೆ ಆಗುವುದಿಲ್ಲ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply