ಯುದ್ಧದ ಆಯ್ಕೆ ಬಿಟ್ಟು ಭಾರತದ ಮುಂದೆ ಚೀನಾ ತಲೆಬಾಗಿದ್ದು ಏಕೆ? ಮದ್ದು ಗುಂಡು ಇಲ್ಲದ ಯುದ್ಧದಲ್ಲಿ ನಾವು ಗೆದ್ದಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ದೋಕಲಂ ವಿಚಾರದಲ್ಲಿ ಭಾರತ ಹಾಗೂ ಚೀನಾ ನಡುವಣ ಬಿಕ್ಕಟ್ಟು ಈಗ ಅಂತ್ಯಗೊಂಡಿದೆ. ಬೆದರಿಕೆಗೆ ಜಗ್ಗದೇ ತೊಡೆತಟ್ಟಿ ನಿಂತ ಭಾರತದ ಜತೆ ಚೀನಾ ರಾಜಿ ಮಾಡಿಕೊಳ್ಳದೇ ಬೇರೆ ದಾರಿಯೇ ಇರಲಿಲ್ಲ. ಹೀಗಾಗಿ ಸುದೀರ್ಘ ಎರಡು ತಿಂಗಳಿಗೂ ಅಧಿಕ ಕಾಲ ಭಾರತಕ್ಕೆ ಯುದ್ಧದ ಬೆದರಿಕೆಯೊಡ್ಡಿದ್ದ ಚೀನಾ ದೋಕಲಂ ಪ್ರದೇಶದಲ್ಲಿ ರಸ್ತೆ ನಿರ್ಮಾಣ ನಿರ್ಧಾರವನ್ನು ಕೈ ಬಿಡಲು ನಿರ್ಧರಿಸಿ, ತಲೆಬಾಗಿ ನಿಂತಿದೆ.

ಜೂನ್ 16ರಂದು ಚೀನಾದ ನಿರ್ಧಾರವನ್ನು ಪ್ರಶ್ನಿಸಿ ಭಾರತೀಯ ಸೇನೆ ದೋಕಲಂ ಪರ್ವತ ಪ್ರದೇಶಕ್ಕೆ ಕಾಲಿಟ್ಟು ಚೀನಾಗೆ ಎಚ್ಚರಿಕೆ ನೀಡಿತ್ತು. ಅಂದಿನಿಂದ ಚೀನಾ ಭಾರತದ ಮೇಲೆ ಮಿಲಿಟರಿ ದಾಳಿ ಮಾಡುವ ಬೆದರಿಕೆ ಹಾಕಿತ್ತು. ಚೀನಾದ ಮಾಧ್ಯಮಗಳು ತಮ್ಮ ಸೇನೆಯ ಬಲಾಬಲವನ್ನು ವರ್ಣಿಸುತ್ತ ಭಾರತಕ್ಕೆ ಸಂದೇಶ ರವಾನಿಸುತ್ತಿದ್ದರೆ, ಅತ್ತ ಚೀನಾ ಮಿಲಿಟರಿ ಸಮರಭ್ಯಾಸ ಮಾಡುವ ಪ್ರಹಸನ ಮಾಡಿ ಭಾರತಕ್ಕೆ ಭಯ ಹುಟ್ಟಿಸುವ ಪ್ರಯತ್ನ ನಡೆಸಿತ್ತು.

ಒಂದು ವೇಳೆ ಚೀನಾಗೆ ಯುದ್ಧ ಮಾಡುವ ಧೈರ್ಯ ಇದ್ದಿದ್ದರೆ ಆದರೆ ಮಕ್ಕಳಿಗೆ ಗುಮ್ಮದ ಕಥೆ ಹೇಳಿ ಹೆದರಿಸುವಂತೆ ಎರಡು ತಿಂಗಳ ಕಾಲ ತನ್ನ ಮಿಲಿಟರಿಯನ್ನು ತೋರಿಸಿ ಭಾರತಕ್ಕೆ ಭಯ ಹುಟ್ಟಿಸುವ ಪ್ರಯತ್ನ ಮಾಡುತ್ತಿರಲಿಲ್ಲ. ಜತೆಗೆ ಗಡಿಯಲ್ಲಿ ತಮ್ಮ ಸೈನಿಕರಿಗೆ ಭಾರತೀಯ ಸೇನೆ ಮೇಲೆ ಕಲ್ಲು ತೂರಾಟ ಮಾಡುವಂತೆ ಹೇಳದೆ, ನೇರವಾಗಿ ಯುದ್ಧ ಸಂದೇಶ ರವಾನಿಸಿ ದಾಳಿ ನಡೆಸಬಹುದಿತ್ತು. ಚೀನಾಗೆ ಯುದ್ಧವೇ ಸರಿಯಾದ ಆಯ್ಕೆಯಾಗಿದ್ದರೆ ಇಷ್ಟೆಲ್ಲಾ ಎಚ್ಚರಿಕೆ ರವಾನಿಸಿದ ಮೇಲೆ ಏಕಾಏಕಿ ಸಂಧಾನಕ್ಕೆ ಮಣಿದು ದೋಕಲಂನಲ್ಲಿ ರಸ್ತೆ ನಿರ್ಮಾಣ ಯೋಜನೆಗೆ ಎಳ್ಳು ನೀರು ಬಿಡುತ್ತಿರಲಿಲ್ಲ.

ಹೀಗೆ ಪದೇ ಪದೇ ಎಗರಾಡಿದ್ದ ಚೀನಾ ಇದ್ದಕ್ಕಿದ್ದಂತೆ ಶಾಂತಿ ಮಂತ್ರ ಪಠಿಸುತ್ತಾ ರಾಜಿಯಾಗಿದ್ದು ನೋಡಿದರೆ, ಚೀನಾ ಮುಂದೆ ಸಂಧಾನ ಬಿಟ್ಟು ಬೇರೆ ಆಯ್ಕೆ ಇರಲಿಲ್ಲ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಒಂದು ವೇಳೆ ಭಾರತದ ಮೇಲೆ ಯುದ್ಧ ಮಾಡಿದ್ದೇ ಆಗಿದ್ದರೆ, ಅದರಿಂದ ಭಾರತಕ್ಕೆ ಎಷ್ಟು ನಷ್ಟ ಆಗುತ್ತಿತ್ತೋ ಅದಕ್ಕಿಂತ ಒಂದು ಪಟ್ಟು ಜಾಸ್ತಿ ನಷ್ಟ ಆಗುತ್ತಿದ್ದದ್ದು ಚೀನಾಗೆ. ಈ ಬಗ್ಗೆ ಚೀನಾಗೂ ಅರಿವಿತ್ತು. ಹೀಗಾಗಿ ಚೀನಾ ನೇರವಾಗಿ ದಾಳಿ ಮಾಡದೇ ಭಾರತಕ್ಕೆ ಯುದ್ಧದ ಭೀತಿ ತೋರಿಸುವ ಪ್ರಯತ್ನ ಮಾಡಿತ್ತು. ಆದರೆ ಯಾವುದಕ್ಕೂ ಭಾರತ ಕ್ಯಾರೆ ಎನ್ನದಿದ್ದಾಗ ಚೀನಾ ಮಾತುಕತೆಯ ಮೂಲಕ ಸಮಸ್ಯೆಗೆ ಬಗೆಹರಿಸಿಕೊಳ್ಳಲು ಮುಂದಾಯಿತು.

ಭಾರತದ ಮೇಲೆ ಚೀನಾ ಮಿಲಿಟರಿ ನಡೆಸಿದ್ದರೆ ಯಾವುದೇ ಲಾಭ ಆಗುತ್ತಿರಲಿಲ್ಲ. ಅದಕ್ಕೆ ಕಾರಣಗಳು ಹೀಗಿವೆ…

  • ಚೀನಾ ಭಾರತದ ಮೇಲೆ ಯುದ್ಧ ಮಾಡಿ ಸಂಪೂರ್ಣವಾಗಿ ಜಯ ಸಾಧಿಸದೇ ಕಿಂಚಿತ್ತು ಮುಖಭಂಗ ಅನುಭವಿಸಿದರೂ ಅದರಿಂದ ಏಷ್ಯಾದ ಸೂಪರ್ ಪವರ್ ರಾಷ್ಟ್ರ ಎಂಬ ಪಟ್ಟ ಮಣ್ಣು ಪಾಲಾಗುತ್ತಿತ್ತು. ಜತೆಗೆ ಅಮೆರಿಕಕ್ಕೆ ಸೆಡ್ಡು ಹೊಡೆಯುವ ಪ್ರಯತ್ನಕ್ಕೂ ದೊಡ್ಡ ಮಟ್ಟದ ಹಿನ್ನಡೆಯಾಗುತ್ತಿತ್ತು. ಇದು ಚೀನಾ ಪ್ರತಿಷ್ಠೆಗೆ ದೊಡ್ಡ ಹೊಡೆತ ಬೀಳುತ್ತಿತ್ತು.
  • ಐದು ವರ್ಷಗಳಿಗೊಮ್ಮೆ ನಡೆಯುವ ಚೈನೀಸ್ ಕಮ್ಯುನಿಷ್ಟ್ ಪಾರ್ಟಿಯ ಸಭೆ ಇದೇ ಸೆಪ್ಟೆಂಬರ್ ನಲ್ಲಿ ನಡೆಯಲಿದ್ದು, ಇದರಲ್ಲಿ ಪಕ್ಷದ ಸದಸ್ಯತ್ವದಿಂದ ನಾಯಕತ್ವದವರೆಗೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತದೆ. ಈ ಸಮಯದಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಹೆಚ್ಚು ಎಂಬ ಆತಂಕ ಚೀನಾ ನಾಯಕರಲ್ಲಿ ಮೂಡಿತ್ತು.
  • ಯುದ್ಧ ಮಾಡಿದ್ದರೆ ಅದು ಕೇವಲ ದೋಕಲಂ ಗಡಿಗೆ ಮಾತ್ರ ಸೀಮಿತವಾಗಿರದೇ, ಲಡಾಕಿನಿಂದ ಹೀಡಿದು ಅರುಣಾಚಲ ಪ್ರದೇಶದವರೆಗೂ 3,488 ಕಿ.ಮೀ ಉದ್ದದ ಭಾರತ ಚೀನಾ ಗಡಿಯವರೆಗೆ ವಿಸ್ತರಿಸುತ್ತಿತ್ತು. ಕಾರಣ ಈ ಗಡಿಯಲ್ಲಿ ಅನೇಕ ಪ್ರದೇಶಗಳು ವಿವಾದಿತ ಪ್ರದೇಶಗಳಾಗಿವೆ. ಹೀಗಾಗಿ ಈ ಪ್ರದೇಶಗಳಲ್ಲಿ ಯುದ್ಧ ಹರಡುವುದು ಎರಡೂ ದೇಶಗಳಿಗೂ ಅಪಾಯವಾಗಿತ್ತು.
  • ಭಾರತೀಯ ಸೇನೆ ದೋಕಲಂ ಬಿಡಾರ ಹೂಡಿದ್ದರಿಂದ ಚೀನಾ ಸೇನೆ ಗುವಾಹತಿ ಹಾಗೂ ಸಿಲಿಗುರಿ ತಲುಪಲು ಇದ್ದ ಬಗ್ದೊಗ್ರಾ ರಸ್ತೆ ಸಂಪರ್ಕ ಕಡಿತವಾಗಿತ್ತು. ಇದು ಚೀನಾ ಸೇನೆಗೆ ದೊಡ್ಡ ಸವಾಲಾಗಿತ್ತು.
  • ಇದೆಲ್ಲಕ್ಕಿಂತ ಮುಖ್ಯವಾಗಿ ಚೀನಾಗೆ ದೊಡ್ಡ ಸವಾಲಾಗಿ ನಿಂತಿದ್ದು, ಭಾರತ ಜತೆಗಿನ ವ್ಯಾಪಾರ. ಪ್ರತಿ ವರ್ಷ 70 ಬಿಲಿಯನ್ ಡಾಲರ್ ನಷ್ಟು ಭಾರತದ ಜತೆಗೆ ವ್ಯಾಪಾರ ಮಾಡುತ್ತಿರುವ ಚೀನಾ ಸಾಕಷ್ಟು ಆದಾಯ ಗಳಿಸಿಕೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ ಮೇಲೆ ಯುದ್ಧ ಮಾಡುವುದು ಉತ್ತಮ ನಿರ್ಧಾರವಲ್ಲ. ಒಂದು ವೇಳೆ ಯುದ್ಧ ಮಾಡಿ ಗೆದ್ದರೂ ನಂತರ ಗಾಯಗೊಂಡ ಭಾರತ ವ್ಯಾಪಾರ ಯುದ್ಧ ಸಾರಿದರೆ ಹೆಚ್ಚಿನ ನಷ್ಟ ಅನುಭವಿಸಬೇಕಾಗುತ್ತದೆ.

ಹೀಗಾಗಿ ಚೀನಾ ಭಾರತದ ಮೇಲೆ ಯುದ್ಧ ಸಾರಿ ತನ್ನ ಕಾಲ ಮೇಲೆ ತಾನೇ ಕಲ್ಲು ಹಾಕಿಕೊಳ್ಳುವಂತಹ ಕೆಲಸಕ್ಕೆ ಮುಂದಾಗಲಿಲ್ಲ. ಈ ಎಲ್ಲ ಅಂಶಗಳಿಂದಲೇ ಮದ್ದು ಗುಂಡುಗಳು ಸಿಡಿಯದೇ ಇದ್ದ ರಾಜತಾಂತ್ರಿಕ ಯುದ್ಧದಲ್ಲಿ ಭಾರತ ಚೀನಾ ವಿರುದ್ಧ ಗೆಲುವಿನ ನಗೆ ಬೀರಿದೆ.

Leave a Reply