ಹಳಿತಪ್ಪಿದ ಮುಂಬೈ-ನಾಗ್ಪುರ ರೈಲು, ಭಾರತೀಯ ರೈಲ್ವೆಯನ್ನು ಕಾಡುತ್ತಿರುವ ಸಮಸ್ಯೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಕಳೆದ ಹತ್ತು ದಿನಗಳಲ್ಲಿ ರೈಲ್ವೇ ಅಪಘಾತ ಹಾಗೂ ಹಳಿ ತಪ್ಪಿದ ಪ್ರಕರಣಗಳು ನಡೆದಿದ್ದು, ಭಾರತೀಯ ರೈಲ್ವೇ ಭದ್ರತೆ ಕುರಿತಾಗಿ ದೊಡ್ಡ ಪ್ರಶ್ನೆ ಉದ್ಭವಿಸಿದೆ. ಉತ್ತರ ಪ್ರದೇಶದ ಉತ್ಕಲ್ ಎಕ್ಸ್ ಪ್ರೆಸ್ ರೈಲ್ವೇ ಅಪಘಾತ ಇನ್ನು ನಮ್ಮ ಕಣ್ಣಮುಂದೆ ಇರುವಾಗಲೇ ಇಂದು ಮುಂಬೈ ಹಾಗೂ ನಾಗ್ಪುರ ನಡುವಣ ಡುರೊಂಟೊ ಎಕ್ಸ್ ಪ್ರೆಸ್ ನ ಒಂಬತ್ತು ಬೋಗಿಗಳು ಹಳಿ ತಪ್ಪಿವೆ.

ಅತಿಯಾದ ಮಳೆಯಿಂದಾಗಿ ರೈಲ್ವೇ ಹಳಿಗಳು ಕೊಚ್ಚಿಹೋಗಿದ್ದು, ಈ ಅನಾಹುತಕ್ಕೆ ಕಾರಣ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಪ್ರಕರಣದಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂಬುದು ನೆಮ್ಮದಿಯ ವಿಷಯವಾದರೂ ಭಾರತೀಯ ರೈಲ್ವೆಯಲ್ಲಿ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇರುವುದು ಆತಂಕಕ್ಕೆ ಕಾರಣವಾಗಿದೆ.

ಇತ್ತೀಚಿನ ವರ್ಷಗಳಲ್ಲಿ ಆಗಿರುವ ರೈಲ್ವೇ ಅಪಘಾತಗಳ ಕುರಿತ ಪ್ರಮುಖ ಅಂಕಿ ಅಂಶಗಳು ಹೀಗಿವೆ…

  • ನೀತಿ ಆಯೋಗದ ಅಧ್ಯಯನ ವರದಿ ಪ್ರಕಾರ 2012 ಇತ್ತಿಚೆಗೆ ನಡೆದಿರುವ ರೈಲ್ವೇ ಅಪಘಾತಗಳ ಪೈಕಿ ಪ್ರತಿ 10ರಲ್ಲಿ 6 ಅಪಘಾತಗಳು ರೈಲ್ವೇ ಸಿಬ್ಬಂದಿ ನಿರ್ಲಕ್ಷ್ಯದಿಂದ ಆಗಿವೆ.
  • ರಾಜ್ಯ ಸಭೆಯಲ್ಲಿ ರೈಲ್ವೇ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ 2013ರಿಂದ 2017ರವರೆಗೆ ದೇಶದಲ್ಲಿ ಒಟ್ಟು 450 ರೈಲ್ವೇ ಅಪಘಾತಗಳು ಸಂಭವಿಸಿವೆ.
  • ಇನ್ನು ಕಳೆದ ನಾಲ್ಕು ವರ್ಷಗಳಲ್ಲಿ ರೈಲ್ವೆ ಅಪಘಾತದಲ್ಲಿ ಸತ್ತವರ ಸಂಖ್ಯೆ ನೋಡುವುದಾದರೆ, 2013-14ರಲ್ಲಿ 152, 2014-15 ರಲ್ಲಿ 292, 2015-16ರಲ್ಲಿ 122 ಹಾಗೂ 2016-17ನೇ ಸಾಲಿನಲ್ಲಿ 238, 2017-18 (ಆ.23ರವರೆಗೆ)ರಲ್ಲಿ 42 ಮಂದಿ ಮೃತಪಟ್ಟಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ಬಹುತೇಕ ಎರಡು ಪಟ್ಟು ಅಪಘಾತ ಹೆಚ್ಚಾಗಿವೆ.
  • ಕಳೆದ ನಾಲ್ಕು ವರ್ಷಗಳಲ್ಲಿ ಸಂಭವಿಸಿರುವ 459 ರೈಲ್ವೇ ಅಪಘಾತಗಳಲ್ಲಿ 255 ಅಪಘಾತಗಳು ರೈಲ್ವೇ ಹಳಿ ತಪ್ಪಿವೆ. ಈ ವರ್ಷವೊಂದರಲ್ಲೇ 78 ರೈಲ್ವೇ ಹಳಿ ತಪ್ಪಿದ ಪ್ರಕರಣಗಳು ಸಂಭವಿಸಿದ್ದು, 193 ಜನರು ಸತ್ತಿದ್ದಾರೆ.
  • ಇತ್ತೀಚಿನ 361 ರೈಲ್ವೆ ಅಪಘಾತಗಳ ಕುರಿತು 356 ಪ್ರಕರಣಗಳ ತನಿಖೆ ನಡೆದಿದ್ದು, 186 ಪ್ರಕರಣಗಳಲ್ಲಿ ರೈಲ್ವೇ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ಆಗಿವೆ. ಉಳಿದಂತೆ 123 ಪ್ರಕರಣಗಳಲ್ಲಿ ರೈಲ್ವೇ ಸಿಬ್ಬಂದಿ ಹೊರತಾದವರ ನಿರ್ಲಕ್ಷ್ಯದಿಂದ ಆಗಿವೆ. 10 ಪ್ರಕರಣಗಳಲ್ಲಿ ಉಪಕರಣಗಳ ವೈಫಲ್ಯದಿಂದ ಅಪಘಾತವಾಗಿದ್ದರೆ, 7 ಪ್ರಕರಣಗಳು ವಿಧ್ವಂಸಕ ಕೃತ್ಯದಿಂದಾಗಿವೆ.
  • ರೈಲ್ವೆ ಇಲಾಖೆಯಲ್ಲಿ ಅನುದಾನದ ಕೊರತೆ ಹೆಚ್ಚಾಗಿ ಕಾಣುತ್ತಿದ್ದು, ರೈಲ್ವೇ ಇಲಾಖೆ ಕಳೆದ ವರ್ಷ 33 ಸಾವಿರ ಕೋಟಿ ನಷ್ಟ ಅನುಭವಿಸಿದೆ. ರೈಲ್ವೆ ಇಲಾಖೆಯ ಪ್ರತಿ ₹1 ಆದಾಯದಲ್ಲಿ 95 ಪೈಸೆಯಷ್ಟು ಹಣ ಸಿಬ್ಬಂದಿ ಹಾಗೂ ಕಾರ್ಯ ನಿರ್ವಹಣೆಗೆ ವ್ಯಯವಾಗುತ್ತಿದೆ. ಹೀಗಾಗಿ ಹಳಿ ಹಾಗೂ ಇತರೆ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಲು ಹಣದ ಕೊರತೆ ಎದುರಾಗಿದೆ. ಇದರಿಂದ ರೈಲ್ವೇ ಹಳಿ ಬದಲಾವಣೆ ಹಾಗೂ ನವೀಕರಣ ನೀರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ.
  • ಭಾರತೀಯ ರೈಲ್ವೆಯ 64 ಸಾವಿರ ಕಿ.ಮೀ ಉದ್ದದ ಸಂಪರ್ಕದಲ್ಲಿ ಸುಮಾರು 7 ಸಾವಿರ ಕಿ.ಮೀ ಉದ್ದದ ರೈಲ್ವೇ ಹಳಿಗಳು 30 ವರ್ಷದಷ್ಟು ಹಳೇಯದ್ದಾಗಿವೆ. ಇವುಗಳನ್ನು ಶೀಘ್ರವೇ ನವೀಕರಿಸಬೇಕಾದ ಅಗತ್ಯವಿದೆ. ಪ್ರತಿ ವರ್ಷ ಸುಮಾರು 2 ಸಾವಿರ ಕಿ.ಮೀ ಸರಾಸರಿಯಲ್ಲಿ ರೈಲ್ವೇ ಹಳಿ ನವೀಕರಣ ನಡೆಯುತ್ತಿದೆ. ಇನ್ನು 80 ರೈಲ್ವೇ ಸೇತುವೆಗಳನ್ನು ಪುನರ್ ನಿರ್ಮಾಣ ಮಾಡಬೇಕಿದೆ.
  • ಭಾರತೀಯ ರೈಲ್ವೇ ಇಲಾಖೆಯಲ್ಲಿ ಒಟ್ಟಾರೆ 40 ಸಾವಿರ ಅಸುರಕ್ಷಿತ ಬೋಗಿಗಳಿದ್ದು, ಇವುಗಳ ಬದಲಾವಣೆ ಅಗತ್ಯವಾಗಿದೆ.
  • ಈ ಎಲ್ಲ ಸಮಸ್ಯೆಗಳ ನಿವಾರಿಸಲು ಕೇಂದ್ರ ಹಣಕಾಸು ಇಲಾಖೆ ₹ 1 ಲಕ್ಷ ಕೋಟಿ ಅನುದಾನಕ್ಕೆ ಒಪ್ಪಿಗೆ ನೀಡಿದ್ದು, ಪ್ರತಿ ವರ್ಷ ₹ 20 ಸಾವಿರ ಕೋಟಿ ಬಳಕೆಯಾಗುತ್ತಿದೆ. ಇನ್ನು ರೈಲ್ವೇ ಸುರಕ್ಷತೆಗಾಗಿ 2012ರಲ್ಲಿ ನೇಮಕವಾಗಿದ್ದ ಅನೀಲ್ ಕಕೋಡ್ಕರ್ ನೇತೃತ್ವದ ಸಮಿತಿ ಅಧ್ಯಯನ ಮಾಡಿ 106 ಶಿಫಾರಸ್ಸುಗಳನ್ನು ಮಾಡಿದ್ದು, ಆ ಪೈಕಿ 2015ರಿಂದ ಈಚೆಗೆ 52 ಶಿಫಾರಸ್ಸುಗಳನ್ನು ಜಾರಿಗೊಳಿಸಲಾಗಿದ್ದು, 19 ಶಿಫಾರಸ್ಸುಗಳನ್ನು ನಿರಾಕರಿಸಲಾಗಿದೆ.

Leave a Reply