ಎಲ್.ಎನ್.ಶಾಸ್ತ್ರಿ: ಅಕಾಲದಲ್ಲಿ ಮುಗಿದ ಭಾವಗೀತೆ

ಎನ್.ಎಸ್ ಶ್ರೀಧರ ಮೂರ್ತಿ

ಚಿತ್ರ ರಸಿಕರು, ಸಂಗೀತ ಪ್ರೇಮಿಗಳು ಯಾವುದು ಆಗಬಾರದು ಎಂದು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಪ್ರಾರ್ಥಿಸುತ್ತಿದ್ದರೋ ಆ ದುರಂತ ನಡೆದೇ ಹೋಗಿದೆ. ಕನ್ನಡದ ಪ್ರತಿಭಾವಂತ ಗಾಯಕ, ಸಂಗೀತ ನಿರ್ದೇಶಕ ಎಲ್.ಎನ್.ಶಾಸ್ತ್ರಿ ಕರುಳಿನ ಕ್ಯಾನ್ಸರ್ ಜೊತೆಗಿನ ಹೋರಾಟದಲ್ಲಿ ಸೋತು ನಮ್ಮನ್ನು ಅಗಲಿದ್ದಾರೆ. ನಿನ್ನೆ ತಾನೆ ಅವರ 46ನೇ ಜನ್ಮ ದಿನೋತ್ಸವ ಬಂದು ಹೋಗಿತ್ತು.

ಎಲ್.ಎನ್.ಶಾಸ್ತ್ರಿಯವರದು ಒಂದು ರೀತಿಯಲ್ಲಿ ಟಿಂಬರ್ ಎಂದು ಕರೆಯ ಬಹುದಾದ ಧ್ವನಿ ಮಂದ್ರದಲ್ಲಿ ಪಲ್ಲಟಗಳನ್ನು ಮಾಡ ಬಲ್ಲ ವಿಶೇಷ ಶಕ್ತಿ ಅವರಿಗಿತ್ತು. ಚಿತ್ರರಂಗದಲ್ಲಿ ಪ್ಲೆವರಿ ಎನ್ನಿಸ ಬಲ್ಲ ಧ್ವನಿಗಳಿಗೇ ಮಹತ್ವವಿರುವುದರಿಂದ ಅವರಿಗೆ ಆರಂಭದಲ್ಲಿ ಅವಕಾಶಗಳು ಸಿಗಲಿಲ್ಲ. ಅವರು ಕ್ಯಾರಿಯರ್ ಆರಂಭಿಸಿದ್ದು ಟ್ರ್ಯಾಕ್ ಸಿಂಗರ್ ಆಗಿಯೇ ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರ ಅನೇಕ ಗೀತೆಗಳ ಟ್ರ್ಯಾಕ್ ಅವರು ಹಾಡಿದ್ದಾರೆ, ಅಜಗಜಾಂತರ(1991) ಚಿತ್ರದಲ್ಲಿ ಅವರಿಗೆ ಗಾಯಕರಾಗುವ ಅವಕಾಶ ಸಿಕ್ಕಿತು. ‘ಲವ್ ಲವ್ ಲವೋಯ್’ ಅವರು ಹಾಡಿದ ಮೊದಲ ಗೀತೆ. ನಂತರ ವಿ.ಮನೋಹರ್ ಅವರ ಜೊತೆ ಸಕ್ರಿಯರಾದ ಶಾಸ್ತ್ರಿಗಳಿಗೆ ಜಗ್ಗೇಶ್ ಅವರ ಚಿತ್ರಗಳಲ್ಲಿ ಉತ್ತಮ ಅವಕಾಶಗಳು ದೊರಕಿದವು. ಭಂಡ ನನ್ನ ಗಂಡ(1992) ಚಿತ್ರದ ‘ಅತಿಂಥ ಗಂಡು ನಾನಲ್ಲ’ ಜನಪ್ರಿಯವಾಯಿತು. ಸೂಪರ್ ನನ್ನ ಮಗ, ತರ್ಲೆ ನನ್ನ ಮಗ ಚಿತ್ರಗಳಲ್ಲೂ ವಿಭಿನ್ನ ಎನ್ನಿಸುವ ಗೀತೆಗಳು ಅವರಿಗೆ ದೊರಕಿದ್ದವು. ‘ಶ್’ಚಿತ್ರ ‘ಅವನಲ್ಲಿ ಇವಳಲ್ಲಿ’ ಗೀತೆ ನನ್ನ ಡೀಪ್ ಲೆಂಥ್ ಮೆಲೂಡಿಯಿಂದ ಗಮನ ಸೆಳೆಯಿತು.

ಆದರೆ ಎಲ್.ಎನ್,ಶಾಸ್ತ್ರಿಯವರ ಹೆಸರು ಎಲ್ಲರಿಗೂ ಕೇಳಿ ಬಂದಿದ್ದು ‘ಜನುಮದ ಜೋಡಿ’ಚಿತ್ರದ ‘ಕೋಲುಮಂಡೆ ಜಂಗಮದೇವ’ ಎನ್ನುವ ಕಂಸಾಳೆ ಪದದ ಆಧುನಿಕ ರೂಪಕ್ಕೆ. ಇದರಲ್ಲಿ ಅವರು ತೋರಿಸಿದ ಧ್ವನಿ ವೈವಿಧ್ಯ ಎಲ್ಲರ ಗಮನ ಸೆಳೆಯಿತು. ಗೀತೆ ಜನಪ್ರಿಯವಾಗುವುದರ ಜೊತೆಗೆ ರಾಜ್ಯ ಪ್ರಶಸ್ತಿಯನ್ನೂ ಅವರಿಗೆ ತಂದು ಕೊ‍ಟ್ಟಿತು. ಮುಂದಿನ ಎರಡು ದಶಕಗಳಲ್ಲಿ ಅವರು ಮೂರು ಸಾವಿರಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ಕನ್ನಡದ ಜನಪ್ರಿಯ ಗಾಯಕರ ಪಟ್ಟಿಗೆ ಸೇರಿಕೊಂಡದರು. ಆದರೆ ಶಾಸ್ತ್ರಿಯವರ ನಿಜವಾದ ತುಡಿತ ಇದ್ದಿದ್ದು ಸಂಗೀತ ನಿರ್ದೇಶನದ ಕಡೆಗೆ ಹಂಸಲೇಖ, ಮನೋಹರ್ ಮೊದಲಾದ ಸಂಗೀತ ನಿರ್ದೇಶಕರ ಕೆಳಗೆ ಪಳಗಿದ್ದ ಅವರು 1998ರಲ್ಲಿ ‘ಕನಸಲೂ ನೀನೆ ಮನಸಲೂ ನೀನೆ’ ಚಿತ್ರದ ಮೂಲಕ ಸ್ವತಂತ್ರ್ಯ ಸಂಗೀತ ನಿರ್ದೇಶಕರಾದರು. ಗಾಯನಕ್ಕಿಂತ ಭಿನ್ನತೆ ಇರಲಿ ಎಂದು ಸ್ನೇಹಿತರ ಸಲಹೆ ಮೇರೆಗೆ ಚೈತನ್ಯ ಎಂದು ಸಂಗೀತ ನಿರ್ದೇಶನಕ್ಕೆ ಹೆಸರನ್ನೂ ಬದಲಾಯಿಸಿ ಕೊಂಡರು. ವಿ.ರವಿಚಂದ್ರನ್ ಅಭಿನಯದ ‘ರವಿಮಾಮ’ಚಿತ್ರಕ್ಕೆ ಅವರು ನೀಡಿದ ಸಂಗೀತ ನಿಜಕ್ಕೂ ಭಿನ್ನ ಎನ್ನಿಸುವಂತಿತ್ತು. ಆದರೆ 25 ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದರೂ ಯಾವುದೂ ಅವರಿಗೆ ಖ್ಯಾತಿಯನ್ನು ತಂದು ಕೊಡಲಿಲ್ಲ. ವಿಷ್ಣುವರ್ಧನ್ ಅವರ ಒತ್ತಾಯದ ಮೇರೆಗೆ ‘ಬಳ್ಳಾರಿ ನಾಗ’ಚಿತ್ರಕ್ಕೆ ತಮ್ಮ ಸ್ವಂತ ಹೆಸರಿನಲ್ಲೇ ಸಂಗೀತ ನಿರ್ದೇಶನ ಮಾಡಿದರು. ಮುಂದೆ ಫ್ಲಾಪ್(2015) ಮೆಲೋಡಿ(2015) ಚಿತ್ರಗಳೂ ಅವರ ಸಂಗೀತ ನಿರ್ದೇಶನದಲ್ಲಿ ಮೂಡಿಬಂದವು.

ಇನ್ನೂ ಹಲವು ಕೊಡುಗೆಗಳನ್ನು ನೀಡ ಬೇಕಾಗಿದ್ದ ಎಲ್.ಎನ್.ಶಾಸ್ತ್ರಿ ಅಕಾಲದಲ್ಲಿಯೇ ನಮ್ಮನ್ನು ಅಗಲಿದ್ದಾರೆ. ಈ ಹೊತ್ತು ಕನ್ನಡ ಸಂಗೀತ ನಿರ್ದೇಶಕರು, ಗೀತ ರಚನೆಕಾರರೂ ಕೂಡಿ ಯೋಚಿಸ ಬೇಕಾದ ಮುಖ್ಯ ಸಂಗತಿಯೆಂದರೆ 2012ಎ ಕಾಪಿ ರೈಟ್ ಕಾಯಿದೆ ಅವರಿಗೆ ಹಕ್ಕುಗಳನ್ನು ನೀಡಿದೆ ಕಷ್ಟಕಾಲದಲ್ಲಿ ನೆರವಾಗಲು ಅಪತ್ದನದ ಯೋಜನೆಯನ್ನೂ ರೂಪಿಸಿದೆ. ಬೇರೆ ಭಾಷೆಗಳಲ್ಲಿ ಇದರ ಉಪಯೋಗವನ್ನು ಸಂಬಂಧ ಪಟ್ಟವರು ಪಡೆಯುತ್ತಿದ್ದರೂ ಕನ್ನಡದಲ್ಲಿ ಅದರ ಮೊದಲ ಹಂತವೂ ಆರಂಭವಾಗಿಲ್ಲ.. ಕಷ್ಟಕಾಲದಲ್ಲಿ ಇನ್ನೊಬ್ಬರ ಮುಂದೆ ಕೈಚಾಚೆ ಸ್ವಾಭಿಮಾನದಿಂದ ಬದಕುವಂತೆ ಮಾಡಬಲ್ಲ ಇದರ ಕುರಿತು ಯೋಚಿಸಲು ಇನ್ನಾದರೂ ಮನಸ್ಸು ಮಾಡಬೇಕು.

Leave a Reply