ನಾಳೆ 300ನೇ ಪಂದ್ಯವನ್ನಾಡಲಿರುವ ಧೋನಿ, ಮಹಿ ಮುಡಿಗೆ ಸೇರಬಹುದಾದ ಎರಡು ದಾಖಲೆ ಗರಿಗಳೇನು ಗೊತ್ತಾ?

ಡಿಜಿಟಲ್ ಕನ್ನಡ ಟೀಮ್:

ಸದ್ಯ ಶ್ರೀಲಂಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾ ಟೆಸ್ಟ್ ಸರಣಿಯನ್ನು ಕ್ಲೀನ್ ಸ್ವೀಪ್ ಜಯ ಸಾಧಿಸಿದ ನಂತರ ಏಕದಿನ ಸರಣಿಯಲ್ಲಿ ಆರಂಭಿಕ ಮೂರು ಪಂದ್ಯಗಳನ್ನು ಗೆದ್ದು, ಸರಣಿ ವಶಪಡಿಸಿಕೊಂಡಿದೆ. ಹೀಗಾಗಿ ನಾಳೆ ನಡೆಯಲಿರುವ ನಾಲ್ಕನೇ ಪಂದ್ಯದ ಫಲಿತಾಂಶ ಸರಣಿ ಮೇಲೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಆದರೆ ಈ ಪಂದ್ಯ ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಗೆ ಮಹತ್ವದ್ದಾಗಿದೆ. ಕಾರಣ, ಇದು ಅವರ 300ನೇ ಅಂತಾರಾಷ್ಟ್ರೀಯ ಏಕದಿನ ಪಂದ್ಯ.

ಹೌದು, 2019ರ ವಿಶ್ವಕಪ್ ನಲ್ಲಿ ಧೋನಿ ಆಡಬೇಕೆ ಅಥವಾ ಬೇಡವೇ ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಮಧ್ಯೆ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್, ಟೀಂ ಇಂಡಿಯಾದಲ್ಲಿ ಧೋನಿ ಸ್ಥಾನವನ್ನು ತುಂಬಬಲ್ಲ ಸೂಕ್ತ ಆಟಗಾರ ಸಿಕ್ಕಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂತಹ ಹೊತ್ತಲ್ಲೇ ಧೋನಿ ತಮ್ಮ ಏಕದಿನ ವೃತ್ತಿ ಜೀವನದಲ್ಲಿ 300ನೇ ಪಂದ್ಯವನ್ನಾಡಲು ಸಿದ್ಧರಾಗಿದ್ದಾರೆ. ಹೀಗಾಗಿ ನಾಳಿನ ಪಂದ್ಯ ಧೋನಿ ಪಾಲಿಗೆ ಮಹತ್ವದ್ದಾಗಿದೆ.

ಈ ವರೆಗೂ ಏಕದಿನ ಕ್ರಿಕೆಟ್ ನಲ್ಲಿ 299 ಪಂದ್ಯಗಳನ್ನಾಡಿರುವ ಧೋನಿ, 257 ಇನಿಂಗ್ಸ್ ಗಳಲ್ಲಿ 51.93ರ ಸರಾಸರಿಯಲ್ಲಿ 9608 ರನ್ ಗಳಿಸಿದ್ದು, ಅಜೇಯ 183 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ. 10 ಶತಕ, 65 ಅರ್ಧಶತಕ, 209 ಸಿಕ್ಸರ್, 736 ಬೌಂಡರಿ, 278 ಕ್ಯಾಚ್ ಗಳು, 99 ಸ್ಟಂಪ್ ಮಾಡಿದ್ದಾರೆ. ಹೀಗೆ ತಮ್ಮ ಏಕದಿನ ವೃತ್ತಿ ಜೀವನದಲ್ಲಿ ದೊಡ್ಡ ಸಾಧನೆ ಮಾಡಿರುವ ಧೋನಿ ನಾಳಿನ ಪಂದ್ಯದಲ್ಲಿ ಆಡುವಾಗ ಎರಡು ವಿಶ್ವ ದಾಖಲೆಗಳನ್ನು ಬರೆಯುವ ಅವಕಾಶ ಹೊಂದಿದ್ದಾರೆ. ಅವುಗಳೆಂದರೆ…

ಸ್ಟಂಪ್ ಶತಕ: ಸದ್ಯ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್ ನಲ್ಲಿ 99 ಸ್ಟಂಪ್ ಮಾಡಿ ಶ್ರೀಲಂಕಾದ ಕುಮಾರ ಸಂಗಕ್ಕಾರ ಅವರ ದಾಖಲೆಯನ್ನು ಸಮಗೊಳಿಸಿದ್ದಾರೆ. ಈ ಸರಣಿಯ ಎರಡನೇ ಪಂದ್ಯಕ್ಕೂ ಮುನ್ನ ಧೋನಿ 98 ಸ್ಟಂಪ್ ಗಳನ್ನು ಮಾಡಿದ್ದರು. ಎರಡನೇ ಪಂದ್ಯದಲ್ಲಿ ಯುಜ್ವೇಂದ್ರ ಚಹಲ್ ಎಸೆತದಲ್ಲಿ ದನುಷ್ಕಾ ಗುಣತಿಲಕ ಅವರನ್ನು ಸ್ಟಂಪ್ ಮಾಡುವ ಮೂಲಕ ಸಂಗಕ್ಕಾರ ಅವರ ಸಾಧನೆಯನ್ನು ಸಮಗೊಳಿಸಿದ್ದರು. ನಾಳಿನ ಪಂದ್ಯದಲ್ಲಿ ಅಥವಾ ಸರಣಿಯ ಅಂತಿಮ ಎರಡು ಪಂದ್ಯಗಳಲ್ಲಿ ಧೋನಿ ಒಂದು ಸ್ಟಂಪ್ ಔಟ್ ಮಾಡಿದರು ಏಕದಿನ ಕ್ರಿಕೆಟ್ ನಲ್ಲಿ 100 ಸ್ಟಂಪ್ ಔಟ್ ಮಾಡಿದ ಮೊದಲ ಕ್ರಿಕೆಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.

ಅತಿ ಹೆಚ್ಚು ಅಜೇಯದ ಇನಿಂಗ್ಸ್: ಏಕದಿನ ಕ್ರಿಕೆಟ್ ನಲ್ಲಿ ಮಹೇಂದ್ರ ಸಿಂಗ್ ಧೋನಿ ಈವರೆಗೂ 72 ಇನಿಂಗ್ಸ್ ಗಳಲ್ಲಿ ಔಟಾಗದೇ ಅಜೇಯರಾಗಿ ಉಳಿದಿದ್ದಾರೆ. ಆ ಮೂಲಕ ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಶಾನ್ ಪೊಲಾಕ್ ಹಾಗೂ ಶ್ರೀಲಂಕಾದ ವೇಗಿ ಚಮಿಂಡಾ ವಾಸ್ ಅವರ ದಾಖಲೆ ಸಮಗೊಳಿಸಿದ್ದಾರೆ. ನಾಳಿನ ಪಂದ್ಯದಲ್ಲಿ ಧೋನಿ ಔಟಾಗದೇ ಕ್ರೀಸ್ ನಲ್ಲಿ ಅಜೇಯರಾಗಿ ಉಳಿದರೆ ಏಕದಿನ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಅಜೇಯ ಇನಿಂಗ್ಸ್ ಆಡಿದ ಖ್ಯಾತಿಗೆ ಪಾತ್ರರಾಗಲಿದ್ದಾರೆ.

Leave a Reply