ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಭಾರಿ ಮಳೆ, ಹವಾಮಾನ ಇಲಾಖೆಯಿಂದ ಸರ್ಕಾರಕ್ಕೆ ಮಾಹಿತಿ

ಡಿಜಿಟಲ್ ಕನ್ನಡ ಟೀಮ್:

ಈಶಾನ್ಯ ಹಾಗೂ ಉತ್ತರ ಭಾರತದ ಕೆಲವು ರಾಜ್ಯಗಳು ಸೇರಿದಂತೆ ಮುಂಬೈನಲ್ಲಿ ನಿನ್ನೆ ಸುರಿದ ಭಾರಿ ಮಳೆ ಪ್ರವಾಹದ ಪರಿಸ್ಥಿತಿ ತಂದಿದೆ. ಈ ಹೊತ್ತಿನಲ್ಲಿ ಹವಾಮಾನ ಇಲಾಖೆ ನೀಡಿರುವ ಪ್ರಕಾರ ಮುಂದಿನ ಕೆಲವು ದಿನಗಳಲ್ಲಿ ಕರ್ನಾಟಕದ ಜತೆ ಈಗಾಗಲೇ ಪ್ರವಾಹಕ್ಕೆ ತತ್ತರಿಸಿರುವ ಬಿಹಾರ ಹಾಗೂ ಅಸ್ಸಾಂ ಸೇರಿದಂತೆ 12 ರಾಜ್ಯಗಳಲ್ಲಿ ಭಾರಿ ಮಳೆಯಾಗಲಿದೆ.

ಈ ಬಾರಿಯೂ ರಾಜ್ಯದಲ್ಲಿ ಮುಂಗಾರು ನಿರೀಕ್ಷಿತ ಮಟ್ಟದಲ್ಲಿ ಬಾರದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ  ಬಿತ್ತನೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಈಗ ಹೆಚ್ಚಿನ ಮಳೆ ಬೀಳುವ ಮಾಹಿತಿ ಬಂದಿರುವುದು ಜನರಲ್ಲಿ ಮಂದಹಾಸ ಮೂಡಿಸಿದೆ. ಇತ್ತೀಚೆಗೆ ರಾಜ್ಯದ ವಿವಿಧೆಡೆಗಳಲ್ಲಿ ಮಳೆ ಬೀಳುತ್ತಿದ್ದು, ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆಯ ಆರ್ಭಟ ಹೆಚ್ಚಾಗಲಿದೆ.

ಕರ್ನಾಟಕ, ಬಿಹಾರ, ಅಸ್ಸಾಂ, ಮಹಾರಾಷ್ಟ್ರ, ಮಧ್ಯ ಪ್ರದೇಶ, ಗುಜರಾತ್, ಗೋವಾ, ರಾಜಸ್ಥಾನ, ಛತ್ತೀಸಗಢ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳದಲ್ಲಿ ಮುಂದಿನ 24 ಗಂಟೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ನಿನ್ನೆ ಬಿದ್ದ ಭಾರಿ ಮಳೆಗೆ ವಾಣಿಜ್ಯ ನಗರಿ ಮುಂಬೈ ಸಂಪೂರ್ಣವಾಗಿ ತತ್ತರಿಸಿದ್ದು, 298 ಮಿಲಿ ಮೀಟರ್ ನಷ್ಟು ಮಳೆಯಾಗಿದೆ. ಬೆಳಗ್ಗೆ 8.30ರಿಂದ ಸಂಜೆ 5.30ರವರೆಗೆ 30 ಸೆಂ.ಮೀ ನಷ್ಟು ಮಳೆಯಾಗಿದೆ.

ಈಶಾನ್ಯ ಹಾಗೂ ಉತ್ತರ ರಾಜ್ಯಗಳು ಈಗಾಗಲೇ ಪ್ರವಾಹಕ್ಕೆ ತತ್ತರಿಸಿದ್ದು, ಈಗ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಪ್ರವಾಹದ ಭಿತಿ ಎದುರಿಸುತ್ತಿವೆ. ಮಹರಾಷ್ಟ್ರದ ನರ್ಮಾದ ಹಾಗೂ ತಾಪಿ ನದಿ ಪಾತ್ರದ 9 ಜಿಲ್ಲೆಗಳು ಪ್ರವಾಹಕ್ಕೆ ಸಿಲುಕುವ ಭೀತಿ ಇದ್ದರೆ, ಗೋದಾವರಿ ಹಾಗೂ ಇಂದ್ರಾವತಿ ನದಿ ಹಾಗೂ ಉಪನದಿಗಳು ಅಪಾಯದ ಮಟ್ಟ ತಲುಪಿದ್ದು, ಛತ್ತೀಸಗಢ, ತೆಲಂಗಾಣ, ಆಂಧ್ರ ಪ್ರದೇಶದ 10 ಜಿಲ್ಲೆಗಳು ಅಪಾಯದಲ್ಲಿವೆ.

ಇನ್ನು ಕೃಷ್ಣ ಹಾಗೂ ತುಂಗಭದ್ರಾ ನದಿಗಳು ತುಂಬಿದ್ದು ಮಹಾರಾಷ್ಟ್ರದ ಸತಾರ, ಕೊಲ್ಹಾಪುರ, ಪುಣೆ, ಶೊಲಾಪುರ ಜಿಲ್ಲೆಗಳ ಜತೆಗೆ ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಎಚ್ಚರಿಕೆ ನೀಡಲಾಗಿದೆ. ಇನ್ನು ಭವಾನಿ ಹಾಗೂ ಮೊಯರ್ ನದಿಗಳ ನೀರಿನ ಪ್ರಮಾಣ ಹೆಚ್ಚಾಗುವ ನಿರೀಕ್ಷೆ ಇದ್ದು, ತಮಿಳುನಾಡಿನ ಕೆಲವು ಜಿಲ್ಲೆಗಳ ಮೇಲೆ ಪ್ರಭಾವ ಬೀರಬಹುದು. ಆದರೆ ತಕ್ಷಣವೇ ಈ ಪ್ರದೇಶಗಳಲ್ಲಿ ಪ್ರವಾಹದ ಭೀತಿ ಇಲ್ಲ ಎಂದು ಹವಾಮಾನ ಇಲಾಖೆ ಹೇಳಿದೆ.

Leave a Reply