ಉದ್ಧಟತನ ಮುಂದುವರಿಸಿ ಕ್ಷಿಪಣಿ ಹಾರಿಸಿದ ಉತ್ತರ ಕೊರಿಯಾ, ಜಪಾನ್ ಗುರಿಯಾಗಿದ್ದು ಯಾಕೆ?

ಡಿಜಿಟಲ್ ಕನ್ನಡ ಟೀಮ್:

ಕ್ಷಿಪಣಿ ಪರೀಕ್ಷೆ ಹಾಗೂ ಅವುಗಳ ಪ್ರಯೋಗ ಮಾಡದಂತೆ ಅಮೆರಿಕ ಹಾಗೂ ವಿಶ್ವಸಂಸ್ಥೆ ಖಡಕ್ ಎಚ್ಚರಿಕೆ ನೀಡಿದರೂ ಉತ್ತರ ಕೊರಿಯಾ ಮಾತ್ರ ಅದನ್ನು ಲೆಕ್ಕಿಸದೇ ತನ್ನ ಉದ್ಧಟತನ ಮುಂದುವರಿಸುತ್ತಲೇ ಸಾಗಿದೆ. ಈ ವಾರ ಉತ್ತರ ಕೊರಿಯಾ ಜಪಾನಿನ ಮೇಲೆ ಕ್ಷಿಪಣಿ ಹಾರಿಸಿದೆ. ಕಿಮ್ ಜೊಂಗ್ ಅವರ ಈ ನಡೆಗೆ ವಿಶ್ವದಾದ್ಯಂತ ಟೀಕೆಗಳು ವ್ಯಕ್ತವಾಗುತ್ತಿದ್ದು, ಇದರ ಜತೆಗೆ ಉತ್ತರ ಕೊರಿಯಾ ಜಪಾನ್ ಅನ್ನು ಗುರಿಯಾಗಿಸಿದ್ದು ಏಕೆ ಎಂಬ ಪ್ರಶ್ನೆಯೂ ಉದ್ಭವಿಸಿದೆ.

ಅಮೆರಿಕದ ಗುವಾಮ್ ಪ್ರದೇಶದ ಮೇಲೆ ಕ್ಷಿಪಣಿ ಹಾರಿಸುವುದಾಗಿ ಎಚ್ಚರಿಕೆ ನೀಡಿದ್ದ ಉತ್ತರ ಕೊರಿಯಾ ನಂತರ ಅಮೆರಿಕದ ಹಾಗೂ ವಿಶ್ವಸಂಸ್ಥೆಯ ತೀವ್ರ ಒತ್ತಡಕ್ಕೆ ಮಣಿದುತನ್ನ ನಿರ್ಧಾರ ಬದಲಿಸಿಕೊಂಡಿತ್ತು. ಆದರೆ ಈಗ ಮತ್ತೆ ಜಪಾನಿನ ಮೇಲೆ ಕ್ಷಿಪಣಿ ಹಾರಿಸಿ ಎಲ್ಲರಿಗೂ ಶಾಕ್ ಕೊಟ್ಟಿದೆ. ಮಂಗಳವಾರ ಉತ್ತರ ಕೊರಿಯಾದ ಪ್ಯೊಂಗ್ಯಾಂಗ್ ನಿಂದ ಹಾರಿದ ಕ್ಷಿಪಣಿ 2,700 ಕಿ.ಮೀ ದೂರ ಸಾಗಿ ಜಪಾನಿನ ಕಡಲ ಪ್ರದೇಶ ಹೊಕ್ಕೈಡೊ ದ್ವೀಪದ ಬಳಿ ಅಪ್ಪಳಿಸಿದೆ.

ಉತ್ತರ ಕೊರಿಯಾ ಅಮೆರಿಕ ಮೇಲೆ ಕ್ಷಿಪಣಿ ಹಾರಿಸುವ ನಿರ್ಧಾರವನ್ನು ಕೈ ಬಿಟ್ಟ ನಂತರ, ಉತ್ತರ ಕೊರಿಯಾ ಅಮೆರಿಕದ ಬೆದರಿಕೆಗೆ ಹೆದರಿದೆ. ಹೀಗಾಗಿ ಬಾಲ ಮುದುರಿಕೊಂಡು ಸುಮ್ಮನಾಗಿದೆ ಎಂಬ ವಿಶ್ಲೇಷಣೆ ಮಾಡಲಾಗಿತ್ತು. ಆದರೆ ಉತ್ತರ ಕೊರಿಯಾ ಮಾತ್ರ, ಅಮೆರಿಕ ಕಿಂಚಿತ್ತು ತಪ್ಪು ಹೆಜ್ಜೆ ಇಟ್ಟರು ತಕ್ಷಣವೇ ಕ್ಷಿಪಣಿ ದಾಳಿ ನಡೆಸಲಿದೆ. ಅಲ್ಲಿಯವರೆಗೂ ನಾವು ಕಾಯುತ್ತೇವೆ ಎಂದಿತ್ತು.

ಜಪಾನ್ ಮೇಲೆ ಕ್ಷಿಪಣಿ ಹಾರಿಸಿದ ನಂತರ ಪ್ರತಿಕ್ರಿಯೆ ನೀಡಿರುವ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜೊಂಗ್, ಮುಂದಿನ ದಿನಗಳಲ್ಲಿ ಜಪಾನ್ ಮೇಲೆ ಇನ್ನಷ್ಟು ಕ್ಷಿಪಣಿ ದಾಳಿ ಮಾಡುವುದಾಗಿ ಹೇಳಿದ್ದು, ಆ ಮೂಲಕ ವಿಶ್ವದ ನಾಯಕರಿಗೆ ಸವಾಲು ಎಸೆದಿದ್ದಾರೆ. ಉತ್ತರ ಕೊರಿಯಾ ಹೀಗೆ ಜಪಾನ್ ಅನ್ನು ಗುರಿಯಾಗಿಸಿದ್ದರ ಹಿಂದೆ ಇರುವ ಕಾರಣ ಏನು ಎಂದು ನೋಡಿದರೆ ನಮಗೆ ಸಿಗುವ ಪ್ರಮುಖ ಅಂಶಗಳು ಹೀಗಿವೆ…

  • ಗುವಾಮ್ ಮೇಲೆ ಕ್ಷಿಪಣಿ ಹಾರಿಸುವ ನಿರ್ಧಾರದಿಂದ ಹಿಂದೆ ಸರಿದ ಉತ್ತರ ಕೊರಿಯಾ, ಅಮೆರಿಕಕ್ಕೆ ತನ್ನ ಸಾಮರ್ಥ್ಯ ಏನು ಎಂಬುದರ ಬಗ್ಗೆ ಎಚ್ಚರಿಕೆ ರವಾನಿಸಬೇಕಿತ್ತು. ಹೀಗಾಗಿ 3,500 ಕಿ.ಮೀ ದೂರವಿರುವ ಗುವಾಮ್ ಬದಲಿಗೆ 2,700 ಕಿ.ಮೀ ದೂರದಲ್ಲಿರುವ ಜಪಾನಿನ ಕಡಲ ಪ್ರದೇಶಕ್ಕೆ ಕ್ಷಿಪಣಿ ಹಾರಿಸಿದೆ. ಆ ಮೂಲಕ ತನ್ನ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಅಮೆರಿಕಕ್ಕೆ ಪರೋಕ್ಷವಾಗಿ ಎಚ್ಚರಿಕೆ ರವಾನಿಸಿದೆ. ಒಂದು ವೇಳೆ ಅಮೆರಿಕದಂತಹ ದೈತ್ಯ ರಾಷ್ಟ್ರಗಳ ಮೇಲೆ ಕ್ಷಿಪಣಿ ಹಾರಿಸಿದರೆ ಮಿಲಿಟರಿಯ ದಾಳಿ ಹಾಗೂ ಇತರೆ ತೊಂದರೆಗಳು ಹೆಚ್ಚು. ಆದರೆ ಜಪಾನ್ ಮೇಲೆ ಹಾರಿಸಿದರೆ ಮಿಲಿಟರಿಯ ದಾಳಿ ನಡೆಯುವ ಸಾಧ್ಯತೆ ಕಡಿಮೆ. ಹೀಗಾಗಿ ಉತ್ತರ ಕೊರಿಯಾ ಕಡಿಮೆ ರಿಸ್ಕ್ ನಲ್ಲಿ ಅಮೆರಿಕಕ್ಕೆ ಖಡಕ್ ಸಂದೇಶ ರವಾನಿಸುವ ಪ್ರಯತ್ನ ನಡೆಸಿದೆ.
  • ಉತ್ತರ ಕೊರಿಯಾದ ಈ ನಿರ್ಧಾರದ ಹಿಂದೆ ಮತ್ತೊಂದು ಕಾರಣ ಇದೆ. ಅದೇನೆಂದರೆ, ಜಪಾನ್ ವಿರುದ್ಧ ಇರುವ ಹಳೇಯ ದ್ವೇಷ. ಏನಿದು ಉತ್ತರ ಕೊರಿಯಾ ಹಾಗೂ ಜಪಾನ್ ನಡುವಣ ದ್ವೇಷ ಎಂಬುದನ್ನು ತಿಳಿಯಲು 1910ರ ಜಪಾನ್ ಮತ್ತು ಕೊರಿಯಾ ನಡುವಣ ಒಪ್ಪಂದಕ್ಕೆ ಹೋಗಬೇಕು.  ಆಗಸ್ಟ್ 29 1910ರಂದು ಈ ಜಪಾನ್ ಹಾಗೂ ಕೊರಿಯಾ ನಡುವಣ ಒಪ್ಪಂದ ನಡೆದಿತ್ತು. ಈ ಒಪ್ಪಂದದ ಪ್ರಕಾರ ಆಗಸ್ಟ್ 29 1910ರಿಂದ ಕೊರಿಯಾದಲ್ಲಿ ಜಪಾನಿನ ಆಳ್ವಿಕೆ ಆರಂಭವಾಗಿತ್ತು. ಈ ವೇಳೆ ಅನೇಕ ಕೊರಿಯನ್ನರ ಮೇಲೆ ಜಪಾನಿಯರು ದೌರ್ಜನ್ಯ ನಡೆಸಿದ್ದರು. ಆ ಕರಾಳ ದಿನಕ್ಕೆ ಮಂಗಳವಾರ 107 ವರ್ಷ ತುಂಬಿದ್ದು, ಆ ದ್ವೇಷದ ಹಿನ್ನೆಲೆಯಲ್ಲಿ ಜಪಾನಿನ ಮೇಲೆ ಉತ್ತರ ಕೊರಿಯ ಕ್ಷಿಪಣಿ ದಾಳಿ ನಡೆಸಿದೆ.

ಉತ್ತರ ಕೊರಿಯಾ ತನ್ನ ಮೇಲೆ ಕ್ಷಿಪಣಿ ಹಾರಿಸಿದರೂ ಜಪಾನ್ ಮಾತ್ರ ಅದನ್ನು ಆಗಸದಲ್ಲೇ ಉಡಾಯಿಸಲು ಮುಂದಾಗಲಿಲ್ಲ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಪಾನ್ ಪ್ರಧಾನಿ ಶಿಂಜೊ ಅಬೆ, ‘ಉತ್ತರ ಕೊರಿಯಾದ ಕ್ಷಿಪಣಿ ತನ್ನ ವಾಯು ಪ್ರದೇಶದ ಮೇಲೆ ಮಾತ್ರ ಹಾರುತ್ತಿತ್ತು. ಹೀಗಾಗಿ ನಾವು ಅದನ್ನು ಹೊಡೆದುರುಳಿಸಲಿಲ್ಲ. ಒಂದು ವೇಳೆ ನಮ್ಮ ಭೂ ಪ್ರದೇಶದ ಮೇಲೆ ಗುರಿ ಮಾಡಿದ್ದೇ ಆದರೆ ಪರಿಣಾಮ ಸರಿ ಇರುವುದಿಲ್ಲ’ ಎಂದಿದ್ದಾರೆ. ಅಷ್ಟೇ ಅಲ್ಲದೆ, ಉತ್ತರ ಕೊರಿಯಾದ ಈ ಬಂಡತನಕ್ಕೆ ವಿಶ್ವಸಂಸ್ಥೆ ತಕ್ಕ ಶಿಕ್ಷೆ ನೀಡಬೇಕು ಹಾಗೂ ಉತ್ತರ ಕೊರಿಯಾ ಮೇಲೆ ಮತ್ತಷ್ಟು ನಿಷೇಧ ಹೇರಬೇಕು ಎಂದು ಜಪಾನ್ ಒತ್ತಾಯಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಅಮೆರಿಕ ಹಾಗೂ ವಿಶ್ವಸಂಸ್ಥೆಯ ನಡೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

Leave a Reply