ಪ್ಯಾನ್ ಕಾರ್ಡ್ ಆಧಾರ್ ಜೋಡಣೆಗೆ ಇಂದು ಕೊನೇ ದಿನ, ಗಡವು ವಿಸ್ತರಿಸುತ್ತಾ ಸರ್ಕಾರ?

ಡಿಜಿಟಲ್ ಕನ್ನಡ ಟೀಮ್:

ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಬಳಸಲಾಗುವ ಪರ್ಮನೆಂಟ್ ಅಕೌಂಟ್ ನಂಬರ್ (ಪ್ಯಾನ್) ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಿಸಲು ಕೇಂದ್ರ ಸರ್ಕಾರ ನೀಡಿದ್ದ ಗಡವು ಇಂದಿಗೆ ಮುಕ್ತಾಯವಾಗಲಿದೆ. ಇದೇ ವೇಳೆ ಹಣಕಾಸು ಇಲಾಖೆಯ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಸರ್ಕಾರ ಈ ಗಡವನ್ನು ವಿಸ್ತರಿಸಲಿದೆ.

ಇತ್ತೀಚೆಗೆ ಖಾಸಗಿ ಹಕ್ಕನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿತ್ತು. ಇದರ ಬೆನ್ನಲ್ಲೇ ಆಧಾರ್ ಕಡ್ಡಾಯದ ಬಗ್ಗೆ ಪ್ರಶ್ನೆಗಳು ಮೂಡಿದ್ದವು. ಇದಕ್ಕೆ ಉತ್ತರಿಸಿದ್ದ ಯುಐಡಿಎಐ ಸಿಇಒ ಅಜಯ್ ಭೂಷಣ್ ಪಾಂಡೆ, ‘ಸುಪ್ರೀಂ ಕೋರ್ಟಿನ ಈ ತೀರ್ಪಿನಲ್ಲಿ ಪ್ಯಾನ್ ಕಾರ್ಡಿಗೆ ಆಧಾರ್ ಜೋಡಣೆಯನ್ನು ತಡೆ ಹಿಡಿದಿಲ್ಲ. ಹೀಗಾಗಿ ದೇಶದ ಎಲ್ಲ ತೆರಿಗೆದಾರರು ಸರ್ಕಾರ ನೀಡಿರುವ ಗಡವಿನ ಅವಧಿಯಲ್ಲಿ ಪ್ಯಾನ್ ಕಾರ್ಡಿಗೆ ಆಧಾರ್ ಸಂಖ್ಯೆ ಜೋಡಿಸಲೇಬೇಕು’ ಎಂದು ಹೇಳಿದ್ದರು.

ಸರ್ಕಾರ ಈ ಪ್ರಕ್ರಿಯೆ ಪೂರ್ಣಗೊಳಿಸಲು ಆಗಸ್ಟ್ 31ರಂದು ಅಂತಿಮ ದಿನಾಂಕ ಎಂದು ಘೋಷಿಸಿತ್ತು. ಹೀಗಾಗಿ ಇಂದು ಈ ಗಡವು ಅಂತ್ಯಗೊಳ್ಳಲಿದೆ. ಈ ಮಧ್ಯೆ ಪ್ರತಿಷ್ಠಿತ ಸುದ್ದಿಸಂಸ್ಥೆಯಾಗಿರುವ ಪಿಟಿಐ ಕೇಂದ್ರ ಸರ್ಕಾರ ಈ ಗಡವು ವಿಸ್ತರಿಸಲಿದೆ ಎಂದು ವರದಿಯನ್ನು ಪ್ರಕಟಿಸಿದೆ. ಹಣಕಾಸು ಸಚಿವಾಲಯದ ಮೂಲಗಳ ಮಾಹಿತಿ ಆಧಾರದ ಮೇಲೆ ಈ ವರದಿ ಪ್ರಕಟಿಸಿದ್ದು, ಸರ್ಕಾರ ಈ ಬಗ್ಗೆ ಇಂದು ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದೆ.

Leave a Reply