ಬೆನೆಜಿರ್ ಭುಟ್ಟೊ ಹತ್ಯೆ ಪ್ರಕರಣ: ಇಬ್ಬರು ಪೊಲೀಸ್ ಅಧಿಕಾರಿಗಳಿಗೆ 17 ವರ್ಷ ಜೈಲು, ಮುಶರಫ್ ತಲೆಮರೆಸಿಕೊಂಡವ ಎಂದ ಕೋರ್ಟ್

ಡಿಜಿಟಲ್ ಕನ್ನಡ ಟೀಮ್:

ಪಾಕಿಸ್ತಾನದ ಮಾಜಿ ಪ್ರಧಾನಿ ಬೆನೆಜಿರ್ ಭುಟ್ಟೊ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ನ್ಯಾಯಾಲಯ ಗುರುವಾರ ತೀರ್ಪು ಪ್ರಕಟಿಸಿದೆ. ಈ ಪ್ರಕರಣದಲ್ಲಿ ಇಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ 17 ವರ್ಷ ಜೈಲು ಶಿಕ್ಷೆ ವಿಧಿಸಿದ್ದು, 5 ಮಂದಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ. ಇನ್ನು ಪಾಕಿಸ್ತಾನ ಮಾಜಿ ಅಧ್ಯಕ್ಷ ಪರ್ವೇಜ್ ಮುಶರಫ್ ಅವರನ್ನು ತಪ್ಪಿಸಿಕೊಂಡವ ಎಂದು ನ್ಯಾಯಾಲಯ ಘೋಷಿಸಿದೆ.

ಪಾಕಿಸ್ತಾನದಲ್ಲಿ ಎರಡು ಬಾರಿ ಪ್ರಧಾನಿಯಾಗಿದ್ದ ಬೆನೆಜಿರ್ ಭುಟ್ಟೊ ಅವರನ್ನು 2007ರ ಡಿಸೆಂಬರ್ 27 ರಂದು ರಾವಲ್ಪಿಂಡಿಯಲ್ಲಿ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಗುಂಡಿನ ಹಾಗೂ ಬಾಂಬ್ ದಾಳಿ ಮೂಲಕ ಹತ್ಯೆ ಮಾಡಲಾಗಿತ್ತು.

ಸುದೀರ್ಘ ಹತ್ತು ವರ್ಷಗಳ ವಿಚಾರಣೆಯ ನಂತರ ಇಂದು ಶಿಕ್ಷೆ ಪ್ರಕಟಿಸಲಾಗಿದೆ. ಭುಟ್ಟೊ ಹತ್ಯೆಯಾದ ಬೆನ್ನಲ್ಲೇ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಹ್ರೀಕ್ ಇ ತಾಲಿಬಾನ್ ಉಗ್ರ ಸಂಘಟನೆಯ ಐವರು ಉಗ್ರರನ್ನು ಬಂಧಿಸಲಾಗಿತ್ತು. ರಫಾಖತ್ ಹುಸೇನ್, ಹುಸ್ನೈನ್ ಗುಲ್, ಶೇರ್ ಜಮಾನ್, ಐತಜಾಜ್ ಶಾಹ್ ಮತ್ತು ಅಬ್ದುಲ್ ರಶೀದ್ ನನ್ನು ಬಂಧಿಸಿ ಜೈಲಿನಲ್ಲಿಡಲಾಗಿತ್ತು. ಈಗ ಈ ಐವರನ್ನು ನಿರಪರಾಧಿಗಳೆಂದು ನಿರ್ಧರಿಸಿ ನ್ಯಾಯಾಲಯ ಬಿಡುಗಡೆ ಮಾಡಿದೆ. ಇನ್ನು ಇಬ್ಬರು ಪೊಲೀಸ್ ಅಧಿಕಾರಿಗಳಾದ ಸೌದ್ ಅಜೀಜ್ ಹಾಗೂ ಖುರ್ರಾಮ್ ಶೆಹಜಾದ್ ಅವರನ್ನು ದೋಷಿ ಎಂದು ನಿರ್ಧರಿಸಲಾಗಿದೆ. ಈ ಇಬ್ಬರನ್ನು 2011ರಲ್ಲಿ ಬಂಧಿಸಲಾಗಿತ್ತಾದರೂ ನಂತರ ಬಿಡುಗಡೆ ಮಾಡಲಾಗಿತ್ತು. ಈಗ ಇವರಿಗೆ 17 ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲಾಗಿದೆ.

ಈ ಪ್ರಕರಣದಲ್ಲಿ ಭುಟ್ಟೊ ಹತ್ಯೆಯ ಹಿಂದೆ ಮುಶರಫ್ ಪಿತೂರಿ ನಡೆಸಿದ್ದಾರೆ ಎಂಬ ಆರೋಪ ಎದುರಾಗಿತ್ತು. ಆದರೆ ನ್ಯಾಯಾಲಯ ಮುಶರಫ್ ಅವರನ್ನು ತಲೆಮರೆಸಿಕೊಂಡ ವ್ಯಕ್ತಿ ಎಂದು ಘೋಷಿಸಲಾಗಿದೆ.

Leave a Reply