ಭಾರತದ ಮುಂದೆ ಚೀನಾ ತಲೆಬಾಗಲು ಕಾರಣವಾಯ್ತ ಬ್ರಿಕ್ಸ್ ಸಭೆ? ಚೀನಾದ ನಿರ್ಧಾರದ ಹಿಂದಿದೆ ಭಾರಿ ಲೆಕ್ಕಾಚಾರ

ಡಿಜಿಟಲ್ ಕನ್ನಡ ಟೀಮ್:

ದೋಕಲಂ ವಿಚಾರವಾಗಿ ಚೀನಾ ತನ್ನ ನಿಲುವನ್ನು ಹಿಂಪಡೆದು ಭಾರತದ ಮುಂದೆ ತಲೆ ಬಾಗಿ ನಿಂತಿದೆ. ತನ್ನ ನಿರ್ಧಾರದಿಂದ ಚೀನಾ ಯೂಟರ್ನ್ ಹೊಡೆಯಲು ಭಾರತದ ಜತೆಗಿನ ವ್ಯಾಪಾರ, ಗಡಿ ಒಪ್ಪಂದ ಸೇರಿದಂತೆ ಹಲವಾರು ಕಾರಣಗಳಿವೆ. ಅವುಗಳ ಜತೆ ಮತ್ತೊಂದು ಪ್ರಮುಖ ಕಾರಣ ಎಂದರೆ ಅದು ಸದ್ಯದಲ್ಲೇ ಬೀಜಿಂಗ್ ನಲ್ಲಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಸಭೆ.

ಹೌದು, ಸೆಪ್ಟೆಂಬರ್ 3-4ರಂದು ಬೀಜಿಂಗ್ ನಲ್ಲಿ ಬ್ರಿಕ್ಸ್ ರಾಷ್ಟ್ರಗಳ ಸಭೆ ನಡೆಯಲಿದ್ದು, ಈ ಸಭೆಯಲ್ಲಿ ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ದೇಶಗಳು ತಮ್ಮ ಗುರಿ ಸಾಧನೆ ಬಗ್ಗೆ ಚರ್ಚೆ ನಡೆಸಲಿವೆ. ಈ ಮಹತ್ವದ ಸಭೆ ಸಮೀಪಿಸುತ್ತಿರುವ ಹೊತ್ತಲ್ಲಿ ಭಾರತ ತನ್ನ ವಿರುದ್ಧ ನಿಂತರೆ ಅದು ಬ್ರಿಕ್ಸ್ ಸಭೆಯ ಮೇಲೆ ಋಣಾತ್ಮಕ ಪರಿಣಾಮ ಬೀರಿದರೆ ಹೆಚ್ಚಿನ ತೊಂದರೆ ತನಗೇ ಆಗಲಿದೆ ಎಂಬ ಆತಂಕ ಚೀನಾವನ್ನು ಕಾಡಿದೆ. ಹೀಗಾಗಿ ಚೀನಾ ಈ ವಿಚಾರದಲ್ಲಿ ಭಾರತದ ಜತೆ ರಾಜಿಗೆ ಮುಂದಾಗಿ ತನ್ನ ನಿರ್ಧಾರ ಬದಲಿಸಿಕೊಂಡಿತು.

ಈ ಬಾರಿ ನಡೆಯಲಿರುವ ಬ್ರಿಕ್ಸ್ ರಾಷ್ಟ್ರಗಳ ಸಭೆ ಚೀನಾ ಪಾಲಿಗೆ ಮಹತ್ವದ್ದಾಗಿದೆ. ಇಂತಹ ಸಮಯದಲ್ಲಿ ಭಾರತದ ಮನವೊಲಿಸುವ ಅನಿವಾರ್ಯತೆಯ ಪರಿಸ್ಥಿತಿ ಚೀನಾಗೆ ಎದುರಾಗಿತ್ತು. ಚೀನಾಗೆ ಈ ಬ್ರಿಕ್ಸ್ ಸಭೆ ಇಷ್ಟು ಮಹತ್ವದ್ದಾಗಿ ಪರಿಣಮಿಸಲು ಕಾರಣ ಏನು ಎಂದು ತಿಳಿದುಕೊಂಡರೆ, ಚೀನಾ ಭಾರತದ ವಿರುದ್ಧ ರಾಜಿಗೆ ಮುಂದಾಗಿದ್ದು ಏಕೆ ಎಂಬುದು ಸಂಪೂರ್ಣವಾಗಿ ಅರ್ಥವಾಗುತ್ತದೆ.

ಇತ್ತೀಚೆಗೆ ಬ್ರಿಕ್ಸ್ ಸಮಿತಿಯನ್ನು ವಿಸ್ತರಿಸುವ ಕುರಿತು ಚೀನಾ ಪ್ರಸ್ತಾಪವನ್ನು ಮುಂದಿಡುತ್ತಿದೆ. ಕಳೆದ ಕೆಲವು ವರ್ಷಗಳಿಂದ ಬ್ರಿಕ್ಸ್ ಸಭೆಯ ವೇಳೆ ಬ್ರಿಕ್ಸ್ ಪ್ಲಸ್ ಎಂಬ ಕಾರ್ಯಕ್ರಮದ ಮೂಲಕ ಐದು ರಾಷ್ಟ್ರಗಳ ಹೊರತಾಗಿ ಇತರೆ ದೇಶಗಳನ್ನು ಅತಿಥಿಗಳನ್ನಾಗಿ ಆಹ್ವಾನಿಸಿ ಸಭೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಸಭೆ ಆತಿಥ್ಯ ವಹಿಸುವ ರಾಷ್ಟ್ರ ಇತರೆ ದೇಶಗಳನ್ನು ಆಹ್ವಾನಿಸುವುದು ಸದ್ಯದ ವಾಡಿಕೆ. ಇದೇ ಮಾದರಿಯಲ್ಲಿ ಕಳೆದ ವರ್ಷ ಗೋವಾದಲ್ಲಿ ನಡೆದ ಬ್ರಿಕ್ಸ್ ಸಭೆಗೆ ಭಾರತ ತನ್ನ ನೆರೆಯ ರಾಷ್ಟ್ರಗಳಾದ ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್, ನೇಪಾಳ, ಶ್ರೀಲಂಕಾ ಜತೆಗೆ ಥಾಯ್ಲೆಂಡ್ ಗೆ ಆಹ್ವಾನ ನೀಡಿತ್ತು.

ಈ ಬಾರಿ ಚೀನಾ ಬ್ರಿಕ್ಸ್ ಸಭೆಗೆ ಥಾಯ್ಲೆಂಡ್, ಈಜಿಪ್ಟ್, ತಜಕಿಸ್ತಾನ್, ಮೆಕ್ಸಿಕೊ ಹಾಗೂ ಗುನಿಯಾ ಸೇರಿದಂತೆ ಒಟ್ಟು 16 ದೇಶಗಳನ್ನು ಆಹ್ವಾನಿಸಿದೆ. ಚೀನಾ ಈ ದೇಶಗಳನ್ನು ಆಹ್ವಾನಿಸಿರುವ ಹಿಂದೆ ದೊಡ್ಡ ಲೆಕ್ಕಾಚಾರವೇ ಇದೆ. ಅದು ಒನ್ ಬೆಲ್ಟ್ ಒನ್ ರೋಡ್ (ಒಬಿಒಆರ್) ಯೋಜನೆ. ಸದ್ಯ ಚೀನಾದ ಅತ್ಯಂತ ಪ್ರಮುಖ ಹಾಗೂ ಮಹತ್ವಾಕಾಂಕ್ಷಿ ಯೋಜನೆ ಎಂದರೆ ಅದು ಒಬಿಒಆರ್. ಏಷ್ಯಾದ 12 ರಾಷ್ಟ್ರಗಳ ನಡುವೆ ರಸ್ತೆ ಸಂಪರ್ಕವನ್ನು ಕಲ್ಪಿಸಿ, ಅದರಿಂದ ತನ್ನ ವ್ಯಾಪಾರ ಕ್ಷೇತ್ರವನ್ನು ವೃದ್ಧಿಸಿಕೊಳ್ಳುವುದು ಚೀನಾ ಮುಂದಿರುವ ಗುರಿ. ಹೀಗಾಗಿ ಈ ಒಬಿಒಆರ್ ಯೋಜನೆಯಲ್ಲಿ ಬರುವ ರಾಷ್ಟ್ರಗಳನ್ನು ಚೀನಾ ಬ್ರಿಕ್ಸ್ ರಾಷ್ಟ್ರಗಳ ಸಭೆಗೆ ಆಹ್ವಾನಿಸಿ ಮನವೊಲೈಸುವ ಪ್ರಯತ್ನ ನಡೆಸುತ್ತಿದೆ.

ಹೀಗೆ ಒಬಿಒಆರ್ ಯೋಜನೆ ಗಟ್ಟಿಪಡಿಸಿಕೊಳ್ಳಲು ಈ ರಾಷ್ಟ್ರಗಳ ವಿಶ್ವಾಸ ಸಂಪಾದಿಸಲು ಚೀನಾ ಬ್ರಿಕ್ಸ್ ಸಭೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುತ್ತಿದೆ. ಈ ಹಂತದಲ್ಲಿ ಭಾರತ ತನ್ನ ಮೇಲಿನ ಕೋಪದಿಂದ ಬ್ರಿಕ್ಸ್ ಸಭೆಯಿಂದ ದೂರ ಉಳಿದರೆ ಹಾಗೂ ಇತರೆ ರಾಷ್ಟ್ರಗಳನ್ನು ತಡೆದರೆ ಅದರಿಂದ ತನ್ನ ಮಹತ್ವಾಕಾಂಕ್ಷಿ ಯೋಜನೆಗೆ ಹಿನ್ನಡೆಯಾಗಲಿದೆ ಎಂಬ ಆತಂಕ ಚೀನಾವನ್ನು ಕಾಡಲಾರಂಭಿಸಿತು. ಹೀಗಾಗಿ ದೋಕಲಂ ವಿಚಾರದಲ್ಲಿ ಸೋತರೂ ಸರಿಯೇ ಒಬಿಒಆರ್ ಯೋಜನೆಗೆ ಯಾವುದೇ ತೊಂದರೆಯಾಗಬಾರದು ಎಂಬುದು ಚೀನಾದ ಲೆಕ್ಕಾಚಾರ.

ಈಗಾಗಲೇ ಚೀನಾದ ಒಬಿಒಆರ್ ಯೋಜನೆಗೆ ಭಾರತ ವಿರೋಧ ವ್ಯಕ್ತಪಡಿಸಿದೆ. ಅಲ್ಲದೆ, ಈ ಯೋಜನೆಯಲ್ಲಿ ತಾನು ಭಾಗಿಯಾಗುವುದಿಲ್ಲ ಎಂಬ ನಿಲುವನ್ನು ತಳೆದಿದೆ. ತನ್ನ ಯೋಜನೆ ವಿರುದ್ಧ ಭಾರತ ಧ್ವನಿ ಎತ್ತುತ್ತಿದೆ ಎಂಬುದರಿಂದಲೇ ಚೀನಾ, ದೋಕಲಂ ವಿಚಾರವಾಗಿ ಭಾರತದ ವಿರುದ್ಧ ಬುಸುಗುಡಲು ಆರಂಭಿಸಿತ್ತು.

ಇದರೊಂದಿಗೆ ದೊಡ್ಡ ಲಾಭವನ್ನು ಪಡೆಯುವ ಉದ್ದೇಶಕ್ಕಾಗಿ ಚಿಕ್ಕ ಲಾಭವನ್ನು ಕಳೆದುಕೊಳ್ಳಲು ಮುಂದಾಗಿರುವ ಚೀನಾ, ದೋಕಲಂ ವಿಚಾರದಲ್ಲಿ ಭಾರತದ ರಾಜತಾಂತ್ರಿಕತೆಗೆ ತಲೆಬಾಗಿದೆ.

Leave a Reply