ಮೊದಲ ಬಾರಿಗೆ ಭಾರತೀಯ ಸೇನೆಗೆ ಹೊಸ ವಿನ್ಯಾಸ ನೀಡಲು ಕೇಂದ್ರದ ಒಪ್ಪಿಗೆ, ಸೇನೆಯಲ್ಲಿ ಆಗಲಿರುವ ಬದಲಾವಣೆಗಳೇನು?

ಡಿಜಿಟಲ್ ಕನ್ನಡ ಟೀಮ್:

ಸ್ವಾತಂತ್ರ್ಯದ ನಂತರ ಇದೇ ಮೊದಲ ಬಾರಿಗೆ ಭಾರತೀಯ ಸೇನೆಗೆ ಹೊಸ ವಿನ್ಯಾಸ ನೀಡಲಾಗುತ್ತಿದೆ. ಬುಧವಾರ ಕೇಂದ್ರ ಸಚಿವ ಸಂಪುಟ ಈ ಕುರಿತ ಪ್ರಸ್ತಾವಕ್ಕೆ ಒಪ್ಪಿಗೆ ನೀಡಿದ್ದು, ಸೇನೆಯ ಅಭಿವೃದ್ಧಿಗೆ ನೇಮಿಸಲಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜೆನರಲ್ ಡಿ.ಬಿ ಶೇಖಟ್ಕರ್ ಅವರ ಹಲವು ಶಿಫಾರಸ್ಸುಗಳನ್ನು ಜಾರಿಗೊಳಿಸಲು ಅನುಮತಿ ನೀಡಿದೆ.

ಭಾರತೀಯ ಸೇನೆಯ ಕದನ ಸಾಮರ್ಥ್ಯ ಹಾಗೂ ಸೇನೆಯ ವಿಸ್ತರಣೆ ಮತ್ತು ಸೇನೆಯ ವೆಚ್ಚದ ಸಮತೋಲನ, ಸೇನೆಯ teeth-to-tail combat ratio (ಸೇನೆಯಲ್ಲಿ ಸಾಮಾಗ್ರಿ ಪೂರೈಕೆ ಹಾಗೂ ಸಹಾಯಕ ಸಿಬ್ಬಂದಿ ಮತ್ತು ಕದನಕ್ಕೆ ಸಿದ್ಧವಿರುವ ಸೈನಿಕರ ಪ್ರಮಾಣ) ಸುಧಾರಣೆ, ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿ ಸೇನೆಯ ಕಟ್ಟುವ ಕುರಿತಾಗಿ ಅಧ್ಯಯನ ನಡೆಸಲು ಕೇಂದ್ರ ಸರ್ಕಾರ ಮಾಜಿ ಲೆಫ್ಟಿನೆಂಟ್ ಜೆನರಲ್ ಶೇಖಟ್ಕರ್ ನೇತೃತ್ವದಲ್ಲಿ ಮಿಲಿಟರಿ ತಜ್ಞರ ಸಮಿತಿಯನ್ನು ರಚಿಸಿತ್ತು. ಈ ಸಮಿತಿ ತನ್ನ ಅಧ್ಯಯನ ಮುಗಿಸಿ ಸರ್ಕಾರಕ್ಕೆ ವರದಿ ಸಲ್ಲಿಸಿದೆ.

ಈ ವರದಿಯಲ್ಲಿನ ಶಿಫಾರಸ್ಸುಗಳನ್ನು ಸರ್ಕಾರ ಹಂತ ಹಂತವಾಗಿ ಜಾರಿಗೊಳಿಸಲಿದ್ದು, ಇದರಿಂದ ಭಾರತೀಯ ಸೇನೆಯ ಸ್ವರೂಪದಲ್ಲಿ ಬದಲಾವಣೆಗಳಾಗಲಿದೆ. ಸದ್ಯ ಭಾರತೀಯ ಭೂ ಸೇನೆಯಲ್ಲಿ 40,525 ಸೇನಾ ಅಧಿಕಾರಿಗಳಿದ್ದು, 11.5 ಲಕ್ಷ ವಿವಿಧ ದರ್ಜೆಯ ಸೈನಿಕರಿದ್ದಾರೆ. ಸೇನೆಯಲ್ಲಿರುವ 57 ಸಾವಿರ ಯೋಧರನ್ನು ಕದನ ಪಡೆಗೆ ಮರು ನಿಯೋಜನೆ ಮಾಡಲಿದೆ. ಶಾಂತಿಯುತ ಪ್ರದೇಶಗಳಲ್ಲಿ ಅಂಚೆ ಇಲಾಖೆಗಳಲ್ಲಿ ಸೈನಿಕರ ನೇಮಕವನ್ನು ನಿಲ್ಲಿಸಲಾಗುವುದು ಹಾಗೂ ಈಗಾಗಲೇ ನಿಯೋಜನೆಯಾಗಿರುವ ಸೈನಿಕರನ್ನು ಬೇರೆಡೆಗೆ ನಿಯೋಜಿಸಲಾಗುವುದು. ಈ ಸಮಿತಿ ಕೇಂದ್ರ ಸರ್ಕಾರಕ್ಕೆ ನೀಡಿರುವ ಶಿಫಾರಸ್ಸುಗಳ ಪೈಕಿ ಪ್ರಮುಖವಾದವುಗಳು ಹೀಗಿವೆ…

  • ಮಿಲಿಟರಿ ಬಜೆಟ್ ನಲ್ಲಿ ಬಹುತೇಕ ಹಣವನ್ನು ಸೇನೆಯ ಆಧುನೀಕರಣಕ್ಕೆ ಮೀಸಲಿಡಬೇಕು. ಇದರಿಂದ ಪ್ರಸ್ತುತ ಪರಿಸ್ಥಿತಿಯಲ್ಲಿ ಪ್ರತಿ ಆರ್ಥಿಕ ವರ್ಷದ ಅಂತ್ಯದಲ್ಲಿ ಬಳಕೆಯಾಗದೇ ಹಣ ಉಳಿಯುವುದನ್ನು ತಪ್ಪಿಸಲಿದೆ.
  • ಕದನ ಹೊರತಾದ ಭದ್ರತಾ ಸಂಸ್ಥೆಗಳನ್ನು ರಕ್ಷಣಾ ಇಲಾಖೆಯಿಂದ ಹೊರಗಿಡುವುದು. ಇದರಲ್ಲಿ ಡೈರೆಕ್ಟರ್ ಜೆನರಲ್ ಆಫ್ ಕ್ವಾಲಿಟಿ ಅಶ್ಯುರೆನ್ಸ್, ಆರ್ಡ್ನಾನ್ಸ್ ಫ್ಯಾಕ್ಟರಿ ಬೋರ್ಡ್, ಡಿಫೆನ್ಸ್ ರಿಸರ್ಚ್ ಅಂಡ್ ಡೆವಲಪ್ಮೆಂಟ್ ಆರ್ಗನೈಸೇಷನ್ (ಡಿಆರ್ ಡಿಒ) ಮತ್ತು ನ್ಯಾಷನಲ್ ಕೆಡೆಟ್ ಕಾರ್ಪ್ಸ್ (ಎನ್ ಸಿಸಿ) ನಂತಹ ಸಂಸ್ಥೆಗಳು ಒಳಗೊಂಡಿರಬೇಕು.
  • ಸೇನೆಯಲ್ಲಿ ಮಾನವ ಶಕ್ತಿ ಕಡಿಮೆಗೊಳಿಸಿ ಸಿಬ್ಬಂದಿ ಸಂಖ್ಯೆ ಕಡಿಮೆ ಮಾಡುವುದು. ಇದರಿಂದ ಸರ್ಕಾರಕ್ಕೆ ದೊಡ್ಡ ಮಟ್ಟದ ಉಳಿತಾಯವಾಗಲಿದೆ.
  • ಜಂಟಿ ಕದನ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಮಧ್ಯಮ ವರ್ಗದ ಅಧಿಕಾರಿಗಳ ತರಬೇತಿಗೆ ಅನುಕೂಲ ವ್ಯವಸ್ಥೆ ಕಲ್ಪಿಸುವುದು.
  • ಸೇನೆಯ ಉಪಸ್ಥಿತಿ ಹೆಚ್ಚು ಅಗತ್ಯವಿಲ್ಲದ ಕಡೆಗಳಲ್ಲಿ ನಿಯೋಜನೆ ಪ್ರಮಾಣ ತಗ್ಗಿಸುವುದು. ಆ ಪ್ರದೇಶಗಳಲ್ಲಿ ನಿವೃತ್ತ ಅಧಿಕಾರಿಗಳು ಹಾಗೂ ಯೋಧರ ನೇತೃತ್ವದಲ್ಲಿ ಎನ್ ಸಿಸಿಯನ್ನು ನಡೆಸುವುದು.
  • ಎನ್ ಸಿಸಿ ನಿರ್ವಹಣೆಯಲ್ಲಿ ಮಹತ್ವದ ಬದಲಾವಣೆ ತರುವುದು. ಎನ್ ಸಿಸಿಯನ್ನು ರಕ್ಷಣಾ ಇಲಾಖೆಯ ಬದಲಿಗೆ ಮಾನವ ಸಂಪನ್ಮೂಲ ಇಲಾಖೆ ವ್ಯಾಪ್ತಿಗೆ ಸೇರಿಸಿ ಅವುಗಳನ್ನು ಮಾಜಿ ಸೈನಿಕರಿಂದ ಮುನ್ನಡೆಸುವುದು.

ಹೀಗೆ ಭಾರತೀಯ ಸೇನೆಯ ಬಲ ಹೆಚ್ಚಿಸುವುದರ ಜತೆಗೆ ಸರ್ಕಾರಕ್ಕೆ ತಗಲುವ ವೆಚ್ಚವನ್ನು ಕಡಿಮೆಗೊಳಿಸಲು ಸಮಿತಿಯು ಅನೇಕ ಶಿಫಾರಸ್ಸುಗಳನ್ನು ನೀಡಿದೆ.

ಶೇಖಟ್ಕರ್ ಅವರ ಸಮಿತಿಯ ವರದಿಯಲ್ಲಿರುವ 188 ಶಿಫಾರಸ್ಸುಗಳ ಪೈಕಿ 99 ಶಿಫಾರಸ್ಸುಗಳನ್ನು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಆ ಪೈಕಿ ಮೊದಲ ಹಂತದಲ್ಲಿ 65 ಶಿಫಾರಸ್ಸುಗಳನ್ನು ಜಾರಿಗೊಳಿಸಲು ಕೇಂದ್ರ ಸಚಿವ ಸಂಪುಟ ಒಮ್ಮತದ ನಿರ್ಧಾರಕ್ಕೆ ಬಂದಿದೆ. ಉಳಿದ ಶಿಫಾರಸ್ಸುಗಳು ವಾಯುಪಡೆ ಹಾಗೂ ನೈಕಾ ಪಡೆಗೆ ಸಂಬಂಧಿಸಿವೆ. ಈ ಮೊದಲ ಹಂತದ ಶಿಫಾರಸ್ಸುಗಳನ್ನು 2019ರ ಡಿಸೆಂಬರ್ ವೇಳೆಗೆ ಜಾರಿಗೊಳಿಸುವ ನಿರೀಕ್ಷೆ ಇದ್ದು, ಇದರಿಂದ ಪ್ರಸ್ತುತ ಸರ್ಕಾರದ ಮಿಲಿಟರಿ ವೆಚ್ಚದಲ್ಲಿ ಸುಮಾರು ₹ 25 ಸಾವಿರ ಕೋಟಿ ಉಳಿತಾಯವಾಗುವ ನಿರೀಕ್ಷೆ ಇದೆ.

Leave a Reply