ಮೋದಿ ಸಚಿವ ಸಂಪುಟ ಪುನಾರಚನೆ: ನೀವು ತಿಳಿಯಬೇಕಿರುವ ಪ್ರಮುಖ ಬೆಳವಣಿಗೆಗಳಿವು

ಡಿಜಿಟಲ್ ಕನ್ನಡ ಟೀಮ್:

ಪ್ರಧಾನಿ ನರೇಂದ್ರ ಮೋದಿ ಅವರು ಬ್ರಿಕ್ಸ್ ರಾಷ್ಟ್ರಗಳ ಸಭೆಗಾಗಿ ಬೀಜಿಂಗ್ ತೆರಳುವ ಮುನ್ನವೇ ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಸಕಲ ಸಿದ್ಧತೆ ನಡೆದಿದೆ. ಈಗಿರುವ ಅನೇಕ ಸಚಿವರನ್ನು ಸಂಪುಟದಿಂದ ಕೈಬಿಟ್ಟು ಸಚಿವಾಲಯದ ಜವಾಬ್ದಾರಿಯನ್ನು ಹೊಸಬರಿಗೆ ನೀಡುವ ನಿರೀಕ್ಷೆ ಹೆಚ್ಚಿದೆ.

ಇತ್ತೀಚೆಗೆ ಬಿಜೆಪಿ ಹಾಗೂ ಎನ್ಡಿಎ ಒಕ್ಕೂಟಕ್ಕೆ ಬೆಂಬಲ ಸೂಚಿಸಿರುವ ಜೆಡಿಯು ಸದಸ್ಯರು ಸಚಿವ ಸ್ಥಾನ ಅಲಂಕರಿಸುವ ಸಾಧ್ಯತೆ ಹೆಚ್ಚಾಗಿದೆ. ಈ ಸಚಿವ ಸಂಪುಟ ರುನಾರಚನೆಗೆ ಸಂಬಂಧಿಸಿದಂತೆ ಅನೇಕ ಪ್ರಮುಖ ಬೆಳವಣಿಗೆಗಳು ನಡೆಯುತ್ತಿದ್ದು, ಅವುಗಳು ಹೀಗಿವೆ…

  • ಈಗಾಗಲೇ ಮೂವರು ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಿದ್ದು, ಆ ಪೈಕಿ ಕೃಷಿ ಹಾಗೂ ಆಹಾರ ಉತ್ಪನ್ನ ಖಾತೆ ರಾಜ್ಯಸಚಿವ ಸಂಜೀವ್ ಬಲ್ಯಾಣ್ ಶುಕ್ರವಾರ ರಾಜಿನಾಮೆ ನೀಡಿದ್ದಾರೆ. ಇನ್ನು ಮೂಲಗಳ ಪ್ರಕಾರ ಬುಡಕಟ್ಟು ವ್ಯವಹಾರಗಳ ಸಚಿವ ಫಗ್ಗಾನ್ ಸಿಂಗ್ ಕುಲಸ್ತೆ ಮತ್ತು ಸಣ್ಣ ಹಾಗೂ ಮಧ್ಯಮ ಕೈಗಾರಿಕೆ ಸಚಿವ ಕಲ್ರಾಜ್ ಮಿಶ್ರಾ ಸಹ ರಾಜಿನಾಮೆ ನೀಡಿದ್ದಾರೆ.
  • ಕೌಶಲ್ಯ ಇಲಾಖೆ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಜೀವ್ ಪ್ರತಾಪ್ ರೂಬಿಯಂತಹ ನಾಯಕರಿಗೆ ಪಕ್ಷದ ವಿವಿಧ ಶಾಖೆಗಳಲ್ಲಿ ಪ್ರಮುಖ ಹುದ್ದೆ ನೀಡಿ, 2019ರ ಲೋಕಸಭೆ ಚುನಾವಣೆಗೆ ಸಿದ್ಧತೆಯ ಜವಾಬ್ದಾರಿ ನೀಡಲಿದ್ದಾರೆ.
  • ನಿನ್ನೆಯಷ್ಟೇ ಮಾನವ ಸಂಪನ್ಮೂಲ ಹಾಗೂ ಉನ್ನತ ಶಿಕ್ಷಣ ಸಚಿವಾಲಯದ ರಾಜ್ಯ ಸಚಿವ ಸ್ಥಾನಕ್ಕೆ ರಾಜಿನಾಮೆ ನೀಡಿದ ಮಹೇಂದ್ರನಾಥ್ ಪಾಂಡೆ ಉತ್ತರ ಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಅಲಂಕರಿಸಿದ್ದಾರೆ. ಇನ್ನು ವೆಂಕಯ್ಯ ನಾಯ್ಡು ಉಪರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದು, ಅನಿಲ್ ದಾವೆ ವಿಧಿವಶರಾಗಿರುವ ಹಿನ್ನೆಲೆಯಲ್ಲಿ ಆ ಸಚಿವ ಸ್ಥಾನಗಳು ತೆರವುಗೊಂಡಿವೆ.
  • ಇನ್ನು ಕೆಲವು ಸಚಿವರನ್ನು ಅವರ ಕಾರ್ಯವೈಖರಿ ಆಧಾರದ ಮೇಲೆ ಸಚಿವ ಸ್ಥಾನದಿಂದ ಕೆಳಗಿಳಿಸಲಾಗುತ್ತಿದೆ. ಮಧ್ಯ ಪ್ರದೇಶದಲ್ಲಿ ರೈತರ ಆತ್ಮಹತ್ಯೆ ಪ್ರಕರಣದಿಂದ ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಖಭಂಗ ಅನುಭವಿಸಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಸಚಿವ ರಾಧಾ ಮೋಹನ್ ಸಿಂಗ್ ಅವರನ್ನು ಕೈ ಬಿಡುವ ಸಾಧ್ಯತೆ ಹೆಚ್ಚಾಗಿದೆ. ಇನ್ನು ಇತ್ತೀಚಿನ ದಿನಗಳಲ್ಲಿ ರೈಲ್ವೇ ದುರಂತ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಚಿವ ಸುರೇಶ್ ಪ್ರಭು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಲು ಮುಂದಾಗಿದ್ದು, ಪ್ರಧಾನಿ ಸ್ವಲ್ಪ ಕಾಯಲು ಸೂಚನೆ ನೀಡಿದ್ದಾರೆ. ಹೀಗಾಗಿ ರೈಲ್ವೇ ಇಲಾಖೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದ್ದು, ಸುರೇಶ್ ಪ್ರಭು ಅವರನ್ನು ಬೇರೆ ಖಾತೆಗೆ ವರ್ಗಾಯಿಸುತ್ತಾರೋ ಅಥವಾ ರಾಜಿನಾಮೆ ಪಡೆದು ಸಂಪುಟದಿಂದ ಕೈ ಬಿಡುತ್ತಾರೋ ಎಂಬುದನ್ನು ಕಾದು ನೋಡಬೇಕು.
  • ಇನ್ನು ಈಗಾಗಲೇ ತೆರವಾಗಿರುವ ಸಚಿವ ಸ್ಥಾನಗಳಿಗೆ ಗುಜರಾತ್ ಉಸ್ತುವಾರಿ ಜವಾಬ್ದಾರಿ ಹೊತ್ತಿರುವ ಭೂಪೇಂದ್ರ ಯಾದವ್, ಪ್ರಹ್ಲಾದ್ ಸಿಂಗ್ ಪಟೇಲ್ ಹಾಗೂ ಕರ್ನಾಟಕದ ಪ್ರಹ್ಲಾದ್ ಜೋಷಿ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಗುಜರಾತ್ ನಲ್ಲಿ ಈ ವರ್ಷಾಂತ್ಯದಲ್ಲಿ ಹಾಗೂ ಕರ್ನಾಟಕದಲ್ಲಿ ಮುಂದಿನ ವರ್ಷ ಆರಂಭದಲ್ಲಿ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಪ್ರಯತ್ನ ನಡೆದಿದೆ.
  • ಹಣಕಾಸು ಸಚಿವ ಅರುಣ್ ಜೇಟ್ಲಿ ಅವರು ರಕ್ಷಣಾ ಸಚಿವಾಯಲದ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದು, ಇವೆರಡರಲ್ಲಿ ಒಂದು ಖಾತೆಯನ್ನು ಬೇರೆಯವರ ಹೆಗಲಿಗೆ ನೀಡುವ ಸಾಧ್ಯತೆ ಇದೆ. ಉಳಿದಂತೆ ಸ್ಮೃತಿ ಇರಾನಿ ಜವಳಿ ಹಾಗೂ ಮಾಹಿತಿ ಹಾಗೂ ಪ್ರಸರಣ ಇಲಾಖೆ ಜವಾಬ್ದಾರಿ ಹೊತ್ತಿರುವಂತೆ ನರೇಂದ್ರ ಸಿಂಗ್ ತೊಮರ್, ಹರ್ಷ್ ವರ್ಧನ್ ಸಹ ಎರಡೆರಡು ಖಾತೆ ನಿರ್ವಹಿಸುತ್ತಿದ್ದು, ಆ ಪೈಕಿ ಒಂದೊಂದು ಖಾತೆಯನ್ನು ಬೇರೆಯವರಿಗೆ ನೀಡುವ ಸಾಧ್ಯತೆ ಇದೆ.
  • ಸದ್ಯ ತಿರುಪತಿ ಪ್ರವಾಸದಲ್ಲಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನಾಳೆ ಮಧ್ಯಾಹ್ನ ಮರಳಲಿದ್ದು, ನಂತರ ಹೊಸ ಸಚಿವರ ಪ್ರಮಾಣ ವಚನ ನಡೆಯುವ ನಿರೀಕ್ಷೆ ಇದೆ. ನಂತರ ಪ್ರಧಾನಿ ಮೋದಿ ಬ್ರಿಕ್ಸ್ ರಾಷ್ಟ್ರಗಳ ಸಭೆಗೆ ಬೀಜಿಂಗ್ ಗೆ ಪ್ರಯಾಣ ಬೆಳಸಲಿದ್ದಾರೆ.

Leave a Reply