ಸದ್ಯದಲ್ಲೇ ಕೇಂದ್ರದಿಂದ ನದಿ ಜೋಡಣೆ ಯೋಜನೆಗೆ ಚಾಲನೆ! ನೆರೆ ಹಾಗೂ ಬರಕ್ಕೆ ಸಿಗಲಿದೆಯೇ ಪರಿಹಾರ?

ಡಿಜಿಟಲ್ ಕನ್ನಡ ಟೀಮ್:

ಕಳೆದ ಎರಡು ವರ್ಷಗಳಿಂದ ದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮುಂಗಾರು ಆಗಮಿಸಿರಲಿಲ್ಲ. ಆದರೆ ಈ ಬಾರಿ ದೇಶದ ಅನೇಕ ರಾಜ್ಯಗಳು ಸೇರಿದಂತೆ ನೆರೆಯ ಬಾಂಗ್ಲಾದೇಶ ಹಾಗೂ ನೇಪಾಳವೂ ಪ್ರವಾಹದಲ್ಲಿ ನಲುಗುವಂತಾಗಿದೆ. ಮುಂಗಾರಿನ ಈ ಕಣ್ಣಾಮುಚ್ಚಾಲೆ ಆಟದಿಂದ ದೇಶದಲ್ಲಿ ಪ್ರತಿ ವರ್ಷ ನೆರೆ ಅಥವಾ ಬರದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ. ಈ ಸಮಸ್ಯೆಯನ್ನು ನಿಭಾಯಿಸಲೆಂದೇ ಕೇಂದ್ರ ಸರ್ಕಾರ ಶೀಘ್ರದಲ್ಲೇ ನದಿ ಜೋಡಣೆಗೆ ಕೈ ಹಾಕಲಿದೆ ಎಂದು ಮೂಲಗಳು ತಿಳಿಸಿವೆ.

ಈ ಯೋಜನೆಯಲ್ಲಿ ಗಂಗಾ ನದಿ ಸೇರಿದಂತೆ ದೇಶದ ಪ್ರಮುಖ 60 ನದಿಗಳನ್ನು ಜೋಡಣೆ ಮಾಡುವ ಉದ್ದೇಶವಿದ್ದು, ಈ ಯೋಜನೆಯ ಒಟ್ಟು ಮೊತ್ತ ₹ 5,55,593 ಕೋಟಿ ಎಂದು ಅಂದಾಜಿಸಲಾಗಿದೆ. ಇದರಿಂದ ದೇಶದ ವಿವಿಧ ಭಾಗಗಳಲ್ಲಿ ಅತಿಯಾದ ಮಳೆಯಾದರೆ ಎದುರಾಗುವ ನೆರೆ ಹಾಗೂ ಮಳೆ ಕೊರತೆಯಿಂದ ಉಂಟಾಗುವ ಬರದ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂಬುದು ಕೇಂದ್ರದ ಭರವಸೆ.

ಸದ್ಯ ದೇಶದಲ್ಲಿ ಎದುರಾಗಿರುವ ಅತಿವೃಷ್ಟಿ ಹಾಗೂ ಅನಾವೃಷ್ಟಿಯ ಪರಿಸ್ಥಿತಿ ನಿಭಾಯಿಸಲು ಗಂಗಾ, ಗೋದಾವರಿ, ಮಹಾನದಿಗಳ ನೀರು ಹರಿಯುವ ಮಾರ್ಗ ಬದಲಿಸಿ, ಅಣೆಕಟ್ಟು ಕಟ್ಟಿ ನಾಲೆ ಹಾಗೂ ಕಾಲುವೆಗಳ ಮೂಲಕ ಸಂಪರ್ಕ ಕಲ್ಪಿಸಿದರೆ ಮಾತ್ರ ಬರ ಹಾಗೂ ನೆರೆ ಪರಿಸ್ಥಿತಿಯನ್ನು ಸರಿಯಾದ ರೀತಿಯಲ್ಲಿ ನಿಭಾಯಿಸಬಹುದು.

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಪರಿಸರವಾದಿಗಳು, ಹುಲಿ ಪ್ರೇಮಿಗಳು ಹಾಗೂ ಇತರ ಸಂಘಸಂಸ್ಥೆಗಳ ವಿರೋಧದ ನಡುವೆಯೂ ಪ್ರಧಾನಿ ನರೇಂದ್ರ ಮೋದಿ, ನದಿ ಜೋಡಣೆಯ ಮೊದಲ ಹಂತದ ಕಾಮಗಾರಿಗೆ ಹಸಿರು ನಿಶಾನೆ ತೋರಿದ್ದಾರೆ. ಇದರಿಂದ ಸಾವಿರಾರು ಮೇಘಾ ವ್ಯಾಟ್ ವಿದ್ಯುತ್ ಉತ್ಪಾದನೆಯ ಜತೆಗೆ, ಲಕ್ಷಾಂತರ ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗಲಿದೆ.

ಮೊದಲ ಹಂತದ ಭಾಗವಾಗಿ ಕರ್ಣಾವತಿ ನದಿಗೆ ಅಮೆಕಟ್ಟು ಕಟ್ಟಿ ಅಲ್ಲಿಂದ 22 ಕಿ.ಮೀ ನಾಲೆಯ ಮೂಲಕ ಬೆಟ್ವಾ ನದಿಗೆ ಜೋಡಣೆ ಮಾಡಲು ನಿರ್ಧರಿಸಲಾಗಿದೆ. ಈ ಎರಡೂ ನದಿಗಳು ಬಿಜೆಪಿ ಅಧಿಕಾರದಲ್ಲಿರುವ ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಹರಿಯಲಿದ್ದು, ಈ ಕೆನ್-ಬೆಟ್ವಾ ಯೋಜನೆ ನದಿ ಜೋಡಣೆ ಯೋಜನೆಗೆ ಅಡಿಪಾಯವಾಗಲಿದೆ ಎಂಬ ನಿರೀಕ್ಷೆ ಇದೆ. ಈ ಯೋಜಜನೆಯ ಮೊದಲ ಹಂತವನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲು ಆರಂಭಿಸಿ ನಂತರ ಬೇರೆಡೆಗೆ ವಿಸ್ತರಿಸಲು ಕೇಂದ್ರ ನಿರ್ಧರಿಸಿದೆ.

 

ಕೆನ್-ಬೆಟ್ವಾ ಯೋಜನೆಗಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕೆನ್ ನದಿಯು 425 ಕಿ.ಮೀಟರ್ ಹರಿಯಲಿದ್ದು, ಶೇ.6.5 ನಷ್ಟು ಅರಣ್ಯ ಪ್ರದೇಶದಲ್ಲಿ ಅಣೆಕಟ್ಟು ಕಟ್ಟಲು ಹಾಗೂ ಇದಕ್ಕಾಗಿ 10 ಗ್ರಾಮಗಳಿಂದ 2 ಸಾವಿರ ಕುಟುಂಬಗಳನ್ನು ಸ್ಥಳಾಂತರ ಮಾಡಲು ನಿರ್ಧರಿಸಲಾಗಿದೆ.

ಈ ಯೋಜನೆಗೆ ಅಗತ್ಯವಿರುವ ಪರಿಸರ ಮತ್ತು ಅರಣ್ಯ ರಕ್ಷಣಾ ಇಲಾಖೆಯ ಅನುಮತಿ ಸೇರಿದಂತೆ ವಿವಿಧ ಇಲಾಖೆಗಳ ಅನುಮತಿ ಸಿಕ್ಕಿದೆ. ಆ ಮೂಲಕ ಯೋಜನೆಗೆ ಬೇಕಿರುವ ಎಲ್ಲಾ ಪ್ರಕ್ರಿಯೆಗಳು ಮುಕ್ತಾಯವಾಗಿದ್ದು, ಮೋದಿ ಸರ್ಕಾರ ಮುಂದಿನ ಕಲವು ವಾರಗಳಲ್ಲಿ ಈ ಯೋಜನೆಗೆ ಕೈ ಹಾಕಲಿದೆ. ಇನ್ನು ಪಶ್ಚಿಮ ಭಾಗದಲ್ಲಿ ಬರುವ ಪರ್-ತಾಪಿ ನದಿ ಜೋಡಣೆ ಯೋಜನೆ (ನರ್ಮದಾ ಮತ್ತು ದಮನ್ ಗಂಗಾ) ಯೋಜನೆಗೆ ಅಗತ್ಯವಿರುವ ಎಲ್ಲಾ ಕಾಗದ ವ್ಯವಹಾರ ಹಾಗೂ ಪ್ರಕ್ರಿಯೆಗಳು ಪೂರ್ಣಗೊಂಡಿವೆ. ಈ ಯೋಜನೆಯೂ ಗುಜರಾತ್ ಹಾಗೂ ಮಹಾರಾಷ್ಟ್ರದಲ್ಲಿ ಆಗಲಿದ್ದು, ಈ ಎರಡೂ ರಾಜ್ಯಗಳಲ್ಲೂ ಬಿಜೆಪಿಯೇ ಅಧಿಕಾರದಲ್ಲಿದೆ.

ಈ ನದಿ ಜೋಡಣೆಯ ಪ್ರಸ್ತಾಪವನ್ನು 2002ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ರೂಪಿಸಿತ್ತಾದರೂ, ವಿವಿಧ ರಾಜ್ಯಗಳು ನದಿ ನೀರು ಹಂಚಿಕೆ ವಿಚಾರದಲ್ಲಿ ತಕರಾರು ಎತ್ತಿದ ಕಾರಣ ಈ ಯೋಜನೆ ಮೂಲೆ ಗುಂಪಾಗಿತ್ತು. ಹೀಗಾಗಿ ಕೇಂದ್ರ ಸರ್ಕಾರ ಈಗ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಮೊದಲು ಈ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ.

Leave a Reply