ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಗೆ ಬಿಜೆಪಿಯಿಂದ ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಅಸ್ತ್ರ ಪ್ರಯೋಗ!

ಡಿಜಿಟಲ್ ಕನ್ನಡ ಟೀಮ್:

ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಗೆ ಸಕಲ ಸಿದ್ಧತೆ ನಡೆದಿದೆ. ಈ ಬಾರಿಯ ಸಚಿವ ಸಂಪುಟ ವಿಸ್ತರಣೆ ಕೇವಲ ವಿವಿಧ ಇಲಾಖೆಗಳ ಅಧಿಕಾರ ಹಂಚಿಕೆಗೆ ಮಾತ್ರ ಸೀಮಿತವಾಗಿರದೇ ಮುಂಬರುವ ವಿವಿಧ ರಾಜ್ಯಗಳ ಚುನಾವಣಾ ರಣತಂತ್ರಕ್ಕೆ ವೇದಿಕೆಯಾಗಿ ಮಾರ್ಪಟ್ಟಿದೆ.

ಈ ವರ್ಷಾಂತ್ಯದಲ್ಲಿ ಗುಜರಾತ್ ವಿಧಾನಸಭೆ ಚುನಾವಣೆ, ಮುಂದಿನ ವರ್ಷ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿವೆ. 2019ರ ಲೋಕಸಭೆ ಚುನಾವಣೆಗೆ ಒಂದು ವರ್ಷ ಮಾತ್ರ ಬಾಕಿ ಇರುವ ಹೊತ್ತಿನಲ್ಲಿ ಈ ರಾಜ್ಯಗಳ ಚುನಾವಣೆ ನಡೆಯುತ್ತಿರುವುದರಿಂದ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಈ ರಾಜ್ಯ ವಿಧಾನಸಭೆಗಳ ಚುನಾವಣೆ ಪ್ರತಿಷ್ಠೆಯ ಕಣವಾಗಲಿದೆ. ಹೀಗಾಗಿ 2019ರ ಸಾರ್ವತ್ರಿಕ ಚುನಾವಣೆಗೆ ಈಗಾಗಲೇ ಸಿದ್ಧತೆ ಆರಂಭಿಸಿರುವ ಬಿಜೆಪಿ ಈ ಎಲ್ಲ ಅಂಶವನ್ನು ಗಮನದಲ್ಲಿಟ್ಟುಕೊಂಡು ತನ್ನ ಸಚಿವ ಸಂಪುಟ ವಿಸ್ತರಣೆಗೆ ಕೈ ಹಾಕುತ್ತಿದೆ.

ಸದ್ಯ ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ, ಇತ್ತೀಚೆಗೆ ಎನ್ಡಿಎ ತೆಕ್ಕೆಗೆ ಮರಳಿರುವ ಜೆಡಿಯು ನ ಇಬ್ಬರು ನಾಯಕರಿಗೆ ಸಚಿವ ಪಟ್ಟ ಖಚಿತವಾಗಿದೆ. ರಾಮ್ ಚರಣ ಪ್ರಸಾದ್ ಸಿಂಗ್ ಮತ್ತು ಸಂತೋಷ ಖುಷ್ವಾಹ್ ಈ ಹುದ್ದೆ ಅಲಂಕರಿಸುವ ನಿರೀಕ್ಷೆ ಇದೆ. ಇತ್ತೀಚೆಗೆ ಕೆಲವು ಸಚಿವರುಗಳು ತಮ್ಮ ಸ್ಥಾನಕ್ಕೆ ರಾಜಿನೇಮೆ ನೀಡಿದ್ದು, ಆ ಜಾಗಗಳಿಗೆ ಮುದಿನ ದಿನಗಳಲ್ಲಿ ಚುನಾವಣೆ ನಡೆಯಲಿರುವ ರಾಜ್ಯಗಳ ಪ್ರತಿನಿಧಿಗಳನ್ನು ನೇಮಿಸಲು ಬಿಜೆಪಿ ನಿರ್ಧರಿಸಿದೆ.

ಗುಜರಾತ್ ವಿಧಾನಸಭೆ ಚುನಾವಣೆ ಕೇಂದ್ರ ಸರ್ಕಾರಕ್ಕೆ ಪ್ರತಿಷ್ಠೆಯ ಕಣವಾಗಿದೆ. 182 ವಿಧಾನಸಭಾ ಸ್ಥಾನಗಳ ಪೈಕಿ 150 ಸ್ಥಾನಗಳನ್ನು ಗೆಲ್ಲಲೇಬೇಕೆಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಗುಜರಾತ್ ವಿಧಾನಸಭೆಯಿಂದ ರಾಜ್ಯ ಸಭೆಗೆ ಆಯ್ಕೆಯಾದ ಅಮಿತ್ ಶಾ ಪಣ ತೊಟ್ಟಿದ್ದಾರೆ. ಹೀಗಾಗಿ ಗುಜರಾತಿನ ಉಸ್ತುವಾರಿ ಹೊತ್ತಿರುವ ಬಿಜೆಪಿ ನಾಯಕ ಭೂಪೇಂದ್ರ ಯಾದವ್ ಮೋದಿಯ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಮಾತುಗಳು ದಟ್ಟವಾಗಿ ಕೇಳಿಬರುತ್ತಿವೆ. ಭೂಪೇಂದ್ರ ಯಾದವ್ ಅವರನ್ನು ಸಚಿವರನ್ನಾಗಿ ಮಾಡುವುದರ ಹಿಂದೆ ಮತ್ತೊಂದು ಲೆಕ್ಕಾಚಾರ ಇದೆ. ಅದೇನೆಂದರೆ, ರಾಜಸ್ಥಾನದ ನಾಯಕರಾಗಿರುವ ಭೂಪೇಂದ್ರ ಯಾದವ್ ಗೆ ಸಚಿವ ಸ್ಥಾನ ನೀಡಿ ಆ ಮೂಲಕ ಮುಂದಿನ ವರ್ಷ ನಡೆಯಲಿರುವ ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲೂ ಲಾಭ ಪಡೆಯುವುದಾಗಿದೆ. ಆಮೂಲಕ ಒಂದೇ ಕಲ್ಲಲ್ಲಿ ಎರಡು ಹಕ್ಕಿಗೆ ಗುರಿ ಇಡುವ ಪ್ರಯತ್ನ ಬಿಜೆಪಿಯದ್ದಾಗಿದೆ.

ಉಳಿದಂತೆ ಮುಂದಿನ ವರ್ಷ ಮಧ್ಯಪ್ರದೇಶದಲ್ಲೂ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮಧ್ಯಪ್ರದೇಶದ ಪ್ರಹ್ಲಾದ್ ಸಿಂಗ್ ಪಟೇಲರಿಗೂ ಸಚಿವ ಸ್ಥಾನ ಒಲಿದರೆ ಅಚ್ಚರಿ ಇಲ್ಲ.

ಇನ್ನು ಕರ್ನಾಟಕ ವಿಧಾನಸಭೆ ಚುನಾವಣೆಯ ದೃಷ್ಟಿಯಲ್ಲಿ ನೋಡುವುದಾದರೆ, ಈಗಾಗಲೇ ಮಿಷನ್ 150 ಎಂದು ಬಿಜೆಪಿ ರಾಜ್ಯ ನಾಯಕರು ಘೋಷಣೆ ಕೂಗುತ್ತಿದ್ದಾರೆ. ಆದರೆ ವಾಸ್ತವದ ಪರಿಸ್ಥಿತಿಯಲ್ಲಿ ಬಿಜೆಪಿ 150 ಸ್ಥಾನಗಳನ್ನು ಗೆಲ್ಲುವುದು ದೊಡ್ಡ ಸವಾಲಿನದ್ದಾಗಿದೆ. ಇತ್ತೀಚೆಗೆ ಬೆಂಗಳೂರಿಗೆ ಆಗಮಿಸಿದ್ದ ಅಮಿತ್ ಶಾ ಅವರು ರಾಜ್ಯ ನಾಯಕರಿಗೆ ಕ್ಲಾಸ್ ತೆಗೆದುಕೊಂಡು ಪಕ್ಷದಲ್ಲಿನ ಆಂತರಿಕ ಕಚ್ಚಾಟಕ್ಕೆ ತೆರೆ ಎಳೆದಿದ್ದಾರೆ. ಅಲ್ಲದೆ ಟಾಸ್ಕ್ ಮಾಸ್ಟರ್ ನಂತೆ ರಾಜ್ಯ ನಾಯಕರಿಗೆ ಬಿಸಿ ಮುಟ್ಟಿಸಿ ಚುರುಕಾಗುವಂತೆ ಮಾಡಿದ್ದಾರೆ. ಈ ಎಲ್ಲದರ ಮಧ್ಯೆ ರಾಜ್ಯದ ಇಬ್ಬರು ನಾಯಕರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಸ್ಥಾನ ನೀಡುವುದು ಬಹುತೇಕ ಖಚಿತ. ಶೋಭಾ ಕರಂದ್ಲಾಜೆ ಅವರ ಹೆಸರು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುತ್ತಿದ್ದರೂ ಸುರೇಶ್ ಅಂಗಡಿ ಹಾಗೂ ಹಿರಿಯ ನಾಯಕ ಪ್ರಹ್ಲಾದ್ ಜೋಷಿ ಅವರಿಗೆ ಈ ಸ್ಥಾನ ಒಲಿಯುವ ಸಾಧ್ಯತೆ ಹೆಚ್ಚಿದೆ.

ಹೀಗೆ ವಿವಿಧ ರಾಜ್ಯಗಳ ವಿಧಾನಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸಚಿವ ಸಂಪುಟ ವಿಸ್ತರಿಸಲಾಗುತ್ತಿದ್ದು, ಇದರಿಂದ ಬಿಜೆಪಿ ಯಾವ ರೀತಿ ರಾಜಕೀಯ ಬೆಳೆ ತೆಗೆಯಲಿದೆ ಎಂಬುದು ಸದ್ಯದ ಕುತೂಹಲ.

Leave a Reply