ಭಾರತ- ಚೀನಾ ಬಾಂಧವ್ಯ ವೃದ್ಧಿಯ ಮುಂದೆ ಬ್ರಿಕ್ಸ್ ಸಭೆಯಲ್ಲಿ ಈಡೇರುವುದೇ ಭಾರತದ ಕಾರ್ಯಸೂಚಿ?

ಡಿಜಿಟಲ್ ಕನ್ನಡ ಟೀಮ್:

ಚೀನಾದ ಕ್ಸಿಯಾಮೆನ್ ನಲ್ಲಿ ಇಂದಿನಿಂದ ಪ್ರತಿಷ್ಠಿತ ಬ್ರಿಕ್ಸ್ ರಾಷ್ಟ್ರಗಳ ಸಭೆ ಆರಂಭವಾಗಲಿದ್ದು, ಜಾಗತಿಕ, ಅಂತಾರಾಷ್ಟ್ರೀಯ ಹಾಗೂ ಪ್ರಾದೇಶಿಕ ವಿಷಯಗಳ ಬಗ್ಗೆ ಚರ್ಚೆಯಾಗುವ ಸಾಧ್ಯತೆಗಳು ಹೆಚ್ಚಾಗಿವೆ. ದೋಕಲಂ ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ನಡುವಣ ಬಿಕ್ಕಟ್ಟು ಇತ್ತೀಚೆಗಷ್ಟೇ ಶಮನಗೊಂಡು ಪರಿಸ್ಥಿತಿ ತಿಳಿಯಾಗಿದೆ. ಈ ಹಂತದಲ್ಲಿ ಭಾರತ ಹಾಗೂ ಚೀನಾ ನಡುವಣ ಸಂಬಂಧ ಸುಧಾರಣೆಯಾಗುವ ನಿರೀಕ್ಷೆ ಹೆಚ್ಚುತ್ತಿದ್ದು, ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿರುದ್ಧದ ಭಾರತದ ಅಜೆಂಡಾ ಮೂಲೆಗುಂಪಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬ್ರೆಜಿಲ್, ರಷ್ಯಾ, ಭಾರತ, ಚೀನಾ ಹಾಗೂ ದಕ್ಷಿಣ ಆಫ್ರಿಕಾ ಈ ಪಂಚ ರಾಷ್ಟ್ರಗಳ ಸಭೆಯಲ್ಲಿ ಅಂತಾರಾಷ್ಟ್ರೀಯ ಹಣಕಾಸು, ಭದ್ರತೆ, ವ್ಯಾಪಾರ ಒಪ್ಪಂದಗಳ ವೃದ್ಧಿಯಂತಹ ವಿಚಾರಗಳು ಚರ್ಚೆಯಾಗಲಿವೆ. ಇನ್ನು ಈ ಸಭೆಯಲ್ಲಿ ಆಯಾ ದೇಶಗಳು ಇತರ ಸದಸ್ಯ ರಾಷ್ಟ್ರಗಳ ಜತೆ ದ್ವಿಪಕ್ಷೀಯ ಮಾತುಕತೆ ಹಾಗೂ ಸಂಬಂಧ ವೃದ್ಧಿಯ ಪ್ರಯತ್ನಗಳು ನಡೆಯಲಿವೆ. ಬ್ರಿಕ್ಸ್ ಸಭೆಯ ಬೆನ್ನಲ್ಲೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಪ್ರತ್ಯೇಕವಾಗಿ ಸಭೆ ನಡೆಸುತ್ತಿರುವುದು ಎಲ್ಲರ ಗಮನ ಸೆಳೆದಿದೆ.

ದೋಕಲಂ ಗಡಿ ವಿವಾದ ಮುಕ್ತಾಯವಾದ ಕೆಲವೇ ದಿನಗಳಲ್ಲಿ ಎರಡೂ ರಾಷ್ಟ್ರಗಳ ಪ್ರಮುಖ ನಾಯಕರು ಮುಖಾಮುಖಿಯಾಗುತ್ತಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ಗಡಿ ವಿಚಾರವಾಗಿ ಭಾರತ ಹಾಗೂ ಚೀನಾ ಸೆನೆಗಳ ನಡುವಣ ತಿಕ್ಕಾಟದಿಂದ ಉಭಯ ರಾಷ್ಟ್ರಗಳ ಸಂಬಂಧ ಹದಗೆಟ್ಟಿದ್ದು, ಈ ಸಭೆಯಲ್ಲಿ ಅವುಗಳನ್ನು ಸರಿಪಡಿಸುವ ಪ್ರಯತ್ನಗಳ ಮೇಲೆ ಹೆಚ್ಚು ಗಮನ ಹರಿಸಲಾಗುತ್ತಿದೆ. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ಉಭಯ ದೇಶಗಳ ನಡುವೆ ದೋಕಲಂನಂತಹ ವಿವಾದಗಳು ಮತ್ತೆ ಉದ್ಭವಿಸುವುದಿಲ್ಲ ಎಂಬ ಸಂದೇಶ ರವಾನೆಯಾಗುವ ನಿರೀಕ್ಷೆಗಳು ಇವೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಚೀನಾ ನಡುವಣ ಸಂಬಂಧ ಮತ್ತೆ ಚೇತರಿಸಿಕೊಳ್ಳಲು ಇನ್ನಷ್ಟು ಕಾಲಾವಕಾಶದ ಅಗತ್ಯವಿದೆ. ಹೀಗಾಗಿ ಭಾರತ ಸದ್ಯದ ಮಟ್ಟಿಗೆ ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿಚಾರವಾಗಿ ಚೀನಾ ಮೇಲೆ ಒತ್ತಡ ಹೇರುವ ಪ್ರಯತ್ನಕ್ಕೆ ಮುಂದಾಗುವುದು ಅನುಮಾನ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಸಭೆಯಲ್ಲಿ ಭಯೋತ್ಪಾದನೆಯ ವಿಷಯ ಪ್ರಸ್ತಾಪದ ಜತೆಗೆ ಉಗ್ರರ ಆಶ್ರಯವಾಗಿರುವ ಪಾಕಿಸ್ತಾನ ವಿರುದ್ಧ ಎಲ್ಲ ದೇಶಗಳು ಕಠಿಣ ನಿಲುವು ತಾಳುವಂತೆ ಒತ್ತಾಯ ಹೇರಲು ಈ ವೇದಿಕೆ ಬಳಸಿಕೊಳ್ಳಲು ಭಾರತ ನಿರ್ಧರಿಸಿತ್ತು. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಭಾರತ ಹಾಗೂ ಚೀನಾ ನಡುವಣ ಸಂಬಂಧ ಸುಧಾರಿಸುವುದು ಪ್ರಮುಖವಾಗಿರುವ ಹಿನ್ನೆಲೆಯಲ್ಲಿ ಭಾರತದ ಈ ಅಜೆಂಡಾ  ಎಷ್ಟರ ಮಟ್ಟಿಗೆ ಬ್ರಿಕ್ಸ್ ಸಭೆಯಲ್ಲಿ ಹೆಚ್ಚು ಚರ್ಚೆಯಾಗದಿರುವ ಸಾಧ್ಯತೆಗಳು ಇವೆ.

Leave a Reply