ಸಿದ್ದರಾಮಯ್ಯ ರಾಜಕೀಯ ದಾಳಕ್ಕೆ ಪರಮ್ ಪಂಕ್ಚರ್!

ಯಾರು ಏನೇ ಹೇಳಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಂಪೂರ್ಣ ಬದಲಾಗಿದ್ದಾರೆ. ನಾಲ್ಕುಕಾಲು ವರ್ಷಗಳಿಂದ ನೋಡುತ್ತಿದ್ದ ಸಿದ್ದರಾಮಯ್ಯನವರೇ ಬೇರೆ. ಇದೀಗ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಂಬಿತರಾಗುತ್ತಿರುವ ಸಿದ್ದರಾಮಯ್ಯನವರೇ ಬೇರೆ. ಇವರೇನಾ ಅವರು ಎನ್ನುವಷ್ಟು ಬದಲಾಗಿ ಹೋಗಿದ್ದಾರೆ. ಬರೀ ಭಾಗ್ಯಗಳಲ್ಲೇ ದಿಲ್ಲಿ, ಮುಂಬೈ, ಕೊಲ್ಕತ್ತಾ ತೋರಿಸುತ್ತಿದ್ದ ಸಿದ್ದರಾಮಯ್ಯನವರ ಹಾಗೂ ಅವರ ಸರಕಾರದ ಬಗ್ಗೆ ರಾಜ್ಯದ ಜನರಲ್ಲಿ ಜೀಕದ ಜೋಕಾಲಿ ಭಾವ ಪೊಡಮೂಡಿತ್ತು. ನಿರ್ಲಿಪ್ತ, ತಟಸ್ಥ, ಅನಾದಾರ, ನಿರ್ಮೋಹ ಸ್ಥಿತಿ ಮಿಶ್ರಣದ ರಸಾಯನವದು. ಸರಕಾರ ಇದೆ ಎಂದರೆ ಇದೆ, ಇಲ್ಲ ಅಂದರೆ ಇಲ್ಲ ಎಂಬಂಥ ಕದಲದ ನೀರಿನ ನೋಟ. ಆದರೆ ನಾಲ್ಕು ತಿಂಗಳಿಂದ ರಾಜಕೀಯ ಮತ್ತು ರಾಜಕೀಯೇತರವಾಗಿ ಅವರು ಉರುಳಿಸುತ್ತಿರುವ ಒಂದೊಂದೇ ದಾಳಗಳು, ತೆಗೆದುಕೊಳ್ಳುತ್ತಿರುವ ನಿರ್ಣಯಗಳು ಮುತ್ಸದ್ದಿ, ಚಾಣಾಕ್ಷ ಪದಗಳನ್ನು ಸವಕಲು ಮಾಡಿ ಮುನ್ನುಗ್ಗುತ್ತಿವೆ.

ಗುಂಡ್ಲುಪೇಟೆ, ನಂಜನಗೂಡು ಮರುಚುನಾವಣೆಯಲ್ಲಿ ಕಾಂಗ್ರೆಸ್ ಭರ್ಜರಿ ಗೆಲುವಿನ ನಂತರ ಮೈಮೇಲೆ ದೇವರು ಬಂದವರಂತೆ ರಾಜಕೀಯವಾಗಿ ಎದ್ದುನಿಂತಿರುವ, ಅಧಿಕಾರ ಅಭೀಪ್ಸೆಯನ್ನೇ ಬೇವಿನಸೊಪ್ಪು ಮಾಡಿಕೊಂಡು ಎದುರಾಳಿಗಳಿಗೆ ಮಂತ್ರ-ತಿರುಮಂತ್ರ ಹಾಕುತ್ತಿರುವ ಸಿದ್ದರಾಮಯ್ಯನವರು ಗರಡಿಮನೆಯ ಪಳಗಿದ ಪಟುವಂತೆ ಗೋಚರಿಸುತ್ತಿದ್ದಾರೆ. ಕೈಯಲ್ಲಿ ಚಳ್ಳೆಹಣ್ಣ ಹಿಡಿದು ಕಾಂಗ್ರೆಸ್ ಒಳ ಮತ್ತು ಹೊರಗಿನ ವಿರೋಧಿಗಳಿಗೆ ರಣವೀಳ್ಯ ನೀಡುತ್ತಿರುವ ಅವರು ಯಾರು-ಯಾರನ್ನು, ಎಲ್ಲೆಲ್ಲಿ, ಹೇಗೇಗೆ ರಾಜಕೀಯವಾಗಿ ಸದೆಬಡಿಯಬೇಕೆಂಬುದರಲ್ಲಿ ಪಿಎಚ್.ಡಿ ಪಡೆದವರಂತೆ ಲೀಲಾಜಾಲವಾಗಿ ಈಜುತ್ತಿದ್ದಾರೆ, ಈಸಿ ಜೈಸುತ್ತಿದ್ದಾರೆ. ಲಿಂಗಾಯತ ಪ್ರತ್ಯೇಕ ಧರ್ಮ ಪ್ರತಿಪಾದನೆ ಮೂಲಕ ‘ಅಹಿಂದ’ ಲೇಬಲ್ ಹೊರಗೂ ಮತರಾಜಕೀಯದ ನೈಪುಣ್ಯ ಮೆರೆದು, ಯೂನಿವರ್ಸಲ್ ಕಾರ್ಡ್ ಮೂಲಕ ಬಡವರ ಆರೋಗ್ಯದೊಳಗೂ ವೋಟು ಹುಡುಕಿದ ಅವರೀಗ ಕಾಂಗ್ರೆಸ್‌ನೊಳಗಣ ಅಧಿಕಾರ ಎದುರಾಳಿ ಡಾ. ಜಿ.ಪರಮೇಶ್ವರ ಅವರನ್ನು ಸಂಪುಟ ವಿಸ್ತರಣೆ ಸಂದರ್ಭದಲ್ಲಿ ರಾಜಕೀಯವಾಗಿ ಮತ್ತೊಮ್ಮೆ ಬಡಿದು ಬಿಸಾಡಿದ್ದಾರೆ. ಆ ಮೂಲಕ ತಾವೊಬ್ಬ ರಾಜಕೀಯ ಗಾರುಡಿಗನಾಗಿ ಹೊರಹೊಮ್ಮಿರುವುದನ್ನು ಮತ್ತೊಮ್ಮೆ ಶೃತಪಡಿಸಿದ್ದಾರೆ.

ತಮ್ಮ ಪರಮಾಪ್ತರಾದ ತುಮಕೂರು ಜಿಲ್ಲೆ ತಿಪಟೂರಿನ ಕೆ. ಷಡಕ್ಷರಿ ಅವರನ್ನು ಸಂಪುಟಕ್ಕೆ, ಜಿ.ಸಿ. ಚಂದ್ರಶೇಖರ್ ಅವರನ್ನು ವಿಧಾನ ಪರಿಷತ್ತಿಗೆ ತರಲು ಪರಮೇಶ್ವರ ಅವರು ಮಾಡಿದ ಪ್ರಯತ್ನಗಳನ್ನು ಸಿದ್ದರಾಮಯ್ಯನವರು ಸದ್ದಿಲ್ಲದೆ ತರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಮತ್ತೊಬ್ಬ ಆಪ್ತ, ಕಾಡು ಸಚಿವ ರಮಾನಾಥ ರೈ ಅವರಿಗೆ ಹಿಂದೆ ತಾವು ನಿರ್ವಹಿಸುತ್ತಿದ್ದ ಗೃಹ ಖಾತೆ ಕೊಡಿಸಲು ಪಟ್ಟ ಪ್ರಯತ್ನಗಳು ಸಿದ್ದರಾಮಯ್ಯನವರ ಒಳತಂತ್ರಗಾರಿಕೆ ಮುಂದೆ ಮಂಡಿ ಮುರಿದುಕೊಂಡು ಬಿದ್ದಿವೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಗೆ ಎದುರಾಳಿ ಆಗಿದ್ದ ಪರಮೇಶ್ವರ ಅವರು ಅಖಾಡಕ್ಕೆ ಇಳಿಯುವ ಮೊದಲೇ ಚುನಾವಣೆ ಸೋಲಿನಿಂದ ಚಿತ್ ಆಗಿದ್ದರು. ಒಂದೊಮ್ಮೆ ಗೆದ್ದಿದ್ದರೆ ರಾಜಕೀಯ ರಸಾನಯಶಾಸ್ತ್ರಗಳೆಲ್ಲ ಕಲಸುಮೇಲೊಗರವಾಗಿ ಸಿದ್ದರಾಮಯ್ಯನವರು ಅಷ್ಟು ಸುಲಭವಾಗಿ ಮುಖ್ಯಮಂತ್ರಿ ಆಗಲು ಸಾಧ್ಯವಾಗುತ್ತಿರಲಿಲ್ಲ. ಹಿಂದಿನ ಚುನಾವಣೆಯಲ್ಲಿ ಸಿದ್ದರಾಮಯ್ಯನವರೇ ಸಿಎಂ ರೇಸ್‌ನಲ್ಲಿ ಮುಂದಿದ್ದರೂ ಹಳೇ ಕಾಂಗ್ರೆಸ್ಸಿಗರು, ವಲಸೆ ಬಂದವರ ನಡುವೆ ಜಟಾಪಟಿ ಸೃಷ್ಟಿಯಾಗಿ ಒಂದಷ್ಟು ಗೊಂದಲಗಳಿಗೆ ಆಸ್ಪದವಿತ್ತು. ಆದರೆ ಪರಮೇಶ್ವರ ಸೋಲು ಈ ಲೆಕ್ಕಾಚಾರಗಳನ್ನು ನುಣ್ಣನೆ ನುಂಗಿತ್ತು. ಹೀಗಾಗಿ ಯಾವುದೇ ಅಡೆತಡೆಯಿಲ್ಲದೆ ಸಿದ್ದರಾಮಯ್ಯನವರು ಸಿಎಂ ಆದರು. ಇದೀಗ ರಾಜಕೀಯ ಪಕ್ಷಗಳ ಆಂತರಿಕ ಚುನಾವಣೆ ಸಮೀಕ್ಷೆಗಳು ಕರ್ನಾಟಕದಲ್ಲಿ ಕಾಂಗ್ರೆಸ್ ಬೇರೆಲ್ಲ ಪಕ್ಷಗಳಿಗಿಂತಲೂ ಮುಂದಿರುವುದನ್ನು ಸಾರುತ್ತಿವೆ. ಅದು ಸತ್ಯವೋ, ಸುಳ್ಳೋ ಎಂಬುದು ಬೇರೆ ಮಾತು. ಚುನಾವಣೆಯೇ ರಟ್ಟು ಮಾಡಬೇಕಾದ ಗುಟ್ಟದು. ಆದರೆ ಈ ಆಂತರಿಕ ಸಮೀಕ್ಷೆ ಆಧರಿತ ಭಾವಲಹರಿ ಬೆನ್ನೇರಿರುವ ಸಿದ್ದರಾಮಯ್ಯನವರಿಗೆ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮತ್ತೊಮ್ಮೆ ತಾವೇ ಮುಖ್ಯಮಂತ್ರಿ ಆಗಬೇಕೆಂಬ ಅಕಾಂಕ್ಷೆ ಎದೆಗಟ್ಟಿದೆ. ಹೀಗಾಗಿ ಆ ಹುದ್ದೆಗೆ ಸಂಭವನೀಯ ಎದುರಾಳಿಗಳನ್ನು ನಿಶ್ಯಬ್ದವಾಗಿ ನಿಶಸ್ತ್ರರನ್ನಾಗಿ ಮಾಡಲು ಹೂಡಿರುವ ಒಳತಂತ್ರಗಾರಿಕೆ ಭಾಗವೇ ಪರಮೇಶ್ವರ ಮೂಲೆಗುಂಪು ಯಾಗ!

ನಿಜ, ಸಿದ್ದರಾಮಯ್ಯನವರು ಸಂಪುಟ ವಿಸ್ತರಣೆ ವಿಚಾರದಲ್ಲಿ ಅದೆಷ್ಟು ಜಾಣ್ಮೆ ಮೆರೆದರೆಂದರೆ ಅದರೆದರು ನುಣಪು ರೇಷ್ಮೆಯೂ ತರಿತರಿಯೇ. ಗೀತಾ ಮಹದೇವಪ್ರಸಾದ್, ಎಚ್.ಎಂ. ರೇವಣ್ಣ ಮತ್ತು ಆರ್.ಬಿ. ತಿಮ್ಮಾಪುರ ಸೇರ್ಪಡೆಯಿಂದ ಮೂರು ದಿನಗಳ ಹಿಂದೆ ಭರ್ತಿಯಾದ ಸಚಿವ ಸಂಪುಟಕ್ಕೆ ಮೊದಲಿಂದಲೂ ಪ್ರಬಲ ಆಕಾಂಕ್ಷಿಯಾಗಿದ್ದವರು ಪರಮೇಶ್ವರ ಪರಮಾಪ್ತ ಷಡಕ್ಷರಿ. ಅವರನ್ನು ಸಂಪುಟಕ್ಕೆ ತಂದೇ ತರಬೇಕೆಂಬುದು ಪರಮೇಶ್ವರ ಹೆಬ್ಬಯಕೆ ಆಗಿತ್ತು. ಸಿದ್ದರಾಮಯ್ಯನವರು ಇದನ್ನು ವಿರೋಧ ಮಾಡಲು ಹೋಗಲಿಲ್ಲ. ಮೊದಲಿಂದಲೂ ಷಡಕ್ಷರಿ ಹೆಸರನ್ನೇ ತೇಲಿಬಿಟ್ಟರು. ಅವರನ್ನು ಬೇಡ ಎಂದರೆ ತಾನೇ ಪರ್ಯಾಯ ರಾಜಕೀಯ ಚಟುವಟಿಕೆಗಳು ಗರಿಗೆದರುವುದು. ಅದಕ್ಕೆ ಆಸ್ಪದವನ್ನೇ ಕೊಡಲಿಲ್ಲ. ಎಲ್ಲರಿಗಿಂತ ಮುಂಚೂಣಿಯಲ್ಲಿ ಷಡಕ್ಷರಿ ಅವರ ಹೆಸರನ್ನೇ ಇಟ್ಟರು. ಆದರೆ ಅವರ ಆಂತರ್ಯದಲ್ಲಿ ಇದ್ದುದು ಅಗಲಿದ ಸ್ನೇಹಿತ, ಮಾಜಿ ಸಚಿವ ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಅವರ ಹೆಸರು. ಆದರೆ ಅದನ್ನು ಎಲ್ಲೂ ಪ್ರಬಲವಾಗಿ ತೋರಗೊಡಲಿಲ್ಲ. ಹಳೇ ಮೈಸೂರು ಭಾಗಕ್ಕೆ ಸೇರಿದ, ಲಿಂಗಾಯತ ಸಮುದಾಯದ ಮಹದೇವ ಪ್ರಸಾದ್ ನಿಧನದಿಂದ ತೆರವಾದ ಸಚಿವ ಸ್ಥಾನಕ್ಕೆ ದಕ್ಷಿಣ ಕರ್ನಾಟಕದ, ಅದೇ ಸಮುದಾಯದ ಹಿರಿಯ ಶಾಸಕ ಷಡಕ್ಷರಿ ಅವರನ್ನೇ ತರುತ್ತಾರೆ ಎಂದು ಎಲ್ಲರೂ ಭಾವಿಸಿದ್ದರು. ಹೀಗಾಗಿ ಇದನ್ನು ಅನುಮಾನಿಸಲು ಪರಮೇಶ್ವರ ಮತ್ತು ಷಡಕ್ಷರಿ ಅವರಿಗೆ ಕಾರಣಗಳೇ ಇರಲಿಲ್ಲ.

ಆದರೆ ಸಿದ್ದರಾಮಯ್ಯನವರ ಒಳಮರ್ಮ, ಭವಿಷ್ಯದ ರಾಜಕೀಯ ಲೆಕ್ಕಾಚಾರವೇ ಬೇರೆ ಆಗಿತ್ತು. ಮಹದೇವ ಪ್ರಸಾದ್ ಆಪ್ತ ಸ್ನೇಹಿತ. ಅವರ ಪತ್ನಿ ಗೀತಾ ಅವರನ್ನು ಗೆಲ್ಲಿಸಿದರೆ ಮಂತ್ರಿ ಮಾಡುವುದಾಗಿ ಗುಂಡ್ಲುಪೇಟೆ ಮರುಚುನಾವಣೆ ಸಂದರ್ಭದಲ್ಲಿ ಅವರು ಹಾಗೂ ಕ್ಷೇತ್ರದ ಚುನಾವಣೆ ಉಸ್ತುವಾರಿ ಹೊತ್ತಿದ್ದ ಸಚಿವ ಡಿ.ಕೆ. ಶಿವಕುಮಾರ್ ಮತದಾರರಿಗೆ ಮಾತು ಕೊಟ್ಟಿದ್ದರು. ಎಲ್ಲಕ್ಕಿಂತ ಮಿಗಿಲಾಗಿ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯನವರ ಪುತ್ರ ಡಾ.ಯತೀಂದ್ರ ಹಾಗೂ ಅವರ ಆಪ್ತ ಸಚಿವ ಮಹದೇವಪ್ಪ ಪುತ್ರ ಸುನಿಲ್ ಬೋಸ್ ಮೈಸೂರು ಭಾಗದಲ್ಲೇ ಚುನಾವಣೆ ಕಣಕ್ಕೆ ಇಳಿಯಬಯಸಿದ್ದಾರೆ. ತಾವು ಪ್ರತಿನಿಧಿಸುತ್ತಿರುವ ವರುಣಾ ಹಾಗೂ ಟಿ. ನರಸೀಪುರ ಕ್ಷೇತ್ರಗಳನ್ನು ಪುತ್ರರಿಗೆ ಬಿಟ್ಟುಕೊಟ್ಟು ತಾವು ಅಲ್ಲೇ ಬೇರೆ ಕ್ಷೇತ್ರಗಳನ್ನು ನೋಡಿಕೊಳ್ಳುವ ಇರಾದೆ ಸಿದ್ದರಾಮಯ್ಯ ಹಾಗೂ ಮಹದೇವಪ್ಪ ಅವರದಂತೆ. ಆದರೆ ಕ್ಷೇತ್ರಗಳಿನ್ನೂ ಅಂತಿಮವಾಗಿಲ್ಲ. ಪಿತಸುತರು ಗೆಲ್ಲಬೇಕಾದರೆ ಮೈಸೂರು ಭಾಗದಲ್ಲಿ ಪ್ರಬಲರಾಗಿರುವ ಲಿಂಗಾಯತ ಸಮುದಾಯದ ಬೆಂಬಲ ಬೇಕು. ಅಲ್ಲದೇ ತಾವು ಮತ್ತೊಮ್ಮೆ ಸಿಎಂ ಆಗಬೇಕಾದರೆ ಮೈಸೂರು ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸೀಟುಗಳನ್ನು ಗೆಲ್ಲಬೇಕೆಂಬ ತರ್ಕವೂ ಸಿದ್ದರಾಮಯ್ಯನವರಲ್ಲಿದೆ. ಇದಕ್ಕೂ ಲಿಂಗಾಯತ ಸಮುದಾಯದ ಸಹಕಾರ ಅತ್ಯಗತ್ಯ. ಹೀಗಾಗಿ ಗೀತಾ ಮಹದೇವಪ್ರಸಾದ್ ಅವರನ್ನು ಮಂತ್ರಿ ಮಾಡಿದರೆ ಲಿಂಗಾಯತರನ್ನು ಒಲಿಸಿಕೊಳ್ಳಬಹುದು. ಜತೆಗೆ ಕೊಟ್ಟ ಮಾತು ಉಳಿಸಿಕೊಂಡಂತೆಯೂ ಆಗುತ್ತದೆ. ಆದರೆ ಗೀತಾ ಅವರನ್ನು ಮಂತ್ರಿ ಮಾಡಬೇಕಾದರೆ ಷಡಕ್ಷರಿ ಅವರನ್ನು ನಿವಾರಿಸಿಕೊಳ್ಳಬೇಕಲ್ಲ? ಅವರ ಬೆನ್ನಿಗೆ ಪರಮೇಶ್ವರ ಬೇರೆ ನಿಂತಿದ್ದಾರೆ. ಗೀತಾ ಹೆಸರು ಅಂತಿಮಗೊಳಿಸಿದರೆ ಪರಮೇಶ್ವರ ಮತ್ತು ಷಡಕ್ಷರಿ ಬೇರೆ ಆಟ ಕಟ್ಟುತ್ತಾರೆ. ವಿವಾದ ಸೃಷ್ಟಿಸುತ್ತಾರೆ. ಹೀಗಾಗಿ ಸಿದ್ದರಾಮಯ್ಯ ಇಲ್ಲಿ ಬೇರೆಯದೇ ಯೋಜನೆ ರೂಪಿಸಿದರು. ಮೊದಲಿಂದಲೂ ಷಡಕ್ಷರಿ  ಹೆಸರನ್ನೇ ತೇಲಿಬಿಟ್ಟರು. ಮೇಲ್ನೋಟಕ್ಕೆ ಅವರ ಹೆಸರೇ ಮುಂಚೂಣಿಯಲ್ಲಿರುವಂತೆ ನೋಡಿಕೊಂಡರು.

ಇದರ ಜತೆಗೆ ತುಮಕೂರಿನವರೇ ಆದ ಶಾಸಕ ಕೆ.ಎನ್. ರಾಜಣ್ಣ ಅವರಿಗೆ ಮೊದಲಿಂದಲೂ ಪರಮೇಶ್ವರ ಅವರನ್ನು ಕಂಡರಾಗದು. ಅವರ ಶಿಷ್ಯರೆಂಬ ಕಾರಣಕ್ಕೆ ಷಡಕ್ಷರಿ ಮೇಲೆ ಇನ್ನಿಲ್ಲದ ದ್ವೇಷ. ಸಿದ್ದರಾಮಯ್ಯನವರ ಜತೆ ಮೊದಲಿಂದಲೂ ಉತ್ತಮ ಸಂಬಂಧ ಹೊಂದಿರುವ ರಾಜಣ್ಣ ಅವರದು ಒಂದೇ ವರಾತ. ಯಾವುದೇ ಕಾರಣಕ್ಕೂ ತಮಗಿಂದಲೂ ಕಿರಿಯರಾದ ಷಡಕ್ಷರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಾರದು, ಬೇರೆ ಯಾರಿಗೆ ಬೇಕಾದರು ಕೊಡಿ ಎಂಬುದು. ಎಲ್ಲಕ್ಕಿಂತ ಮಿಗಿಲಾಗಿ ಹಿಂದೆ ಸಿಎಂ ಗಾದಿಗೆ ಸಿದ್ದರಾಮಯ್ಯ ಜತೆ ಪೈಪೋಟಿಯಲ್ಲಿದ್ದ ಪರಮೇಶ್ವರ ಸೋಲಿನಲ್ಲಿ ರಾಜಣ್ಣನವರ ಕೊಡುಗೆಯೂ ಇದೆ. ಇಂತ ರಾಜಣ್ಣನವರಿಗೆ ಸಿದ್ದರಾಮಯ್ಯನವರು ಬೇಸರ ಮಾಡಿಯಾರೆಯೇ? ಬಿಲ್‌ಕುಲ್ ಇಲ್ಲ.

ಹೀಗಾಗಿ ಒಳಗೆ ನಡೆದ ರಾಜಕೀಯವೇ ಬೇರೆ. ಷಡಕ್ಷರಿ ಬದಲಿಗೆ ಗೀತಾ ಮಹದೇವಪ್ರಸಾದ ಅವರನ್ನೇ ಏಕೆ ಸಂಪುಟಕ್ಕೆ ತೆಗೆದುಕೊಳ್ಳಬೇಕೆಂದು ಹೈಕಮಾಂಡಿಗೆ ಒಳಗೊಳಗೇ ತರ್ಕಬದ್ಧ ವಾದ ಮಂಡಿಸಿದರು. ಎಚ್. ವಿಶ್ವನಾಥ್ ಮತ್ತು ಶ್ರೀನಿವಾಸ ಪ್ರಸಾದ್ ಪಕ್ಷ ತೊರೆದಿರುವುದು ಹಾಗೂ ಮಹದೇವಪ್ರಸಾದ್ ನಿಧನದಿಂದ ಹಳೇ ಮೈಸೂರು ಭಾಗದಲ್ಲಿ ಪಕ್ಷಕ್ಕೆ ಆಗಬಹುದಾದ ಅನಾಹುತಕ್ಕೆ ಅದೇ ಭಾಗದ, ಲಿಂಗಾಯತ ಸಮುದಾಯದ ಗೀತಾ ಮಹದೇವಪ್ರಸಾದ್ ಸಂಪುಟ ಸೇರ್ಪಡೆಯೇ ಮದ್ದು. ಮರುಚುವಾನಣೆ ಸಂದರ್ಭ ಕೊಟ್ಟ ಮಾತು ತಪ್ಪಿದರೆ ಲಿಂಗಾಯತರು ಮುನಿಸಿಕೊಳ್ಳುತ್ತಾರೆ ಎಂದು ಮನವರಿಕೆ ಮಾಡಿಕೊಟ್ಟರು. ಜತೆಗೆ ಷಡಕ್ಷರಿ ಅವರ ವೈಯಕ್ತಿಕ ಬದುಕಿನ ವಿಚಾರ ಪಕ್ಷಕ್ಕೆ ಮುಜುಗರ ತರಬಹುದು. ಹಿಂದೆ ವೈಯಕ್ತಿಕ ವಿಚಾರಕ್ಕೆ ಬಿಜೆಪಿ ಮಂತ್ರಿಗಳ ರಾಜೀನಾಮೆಗೆ ನಾವೇ ಒತ್ತಾಯಿಸಿದ್ದೇವೆ. ಈಗೇನಾದರೂ ಷಡಕ್ಷರಿ ಅವರನ್ನು ಸಂಪುಟಕ್ಕೆ ತೆಗೆದುಕೊಂಡರೆ ಪ್ರತಿಪಕ್ಷಗಳ ಕೈಗೆ ನಾವೇ ಹೋರಾಟದ ಅಸ್ತ್ರ ಕೊಟ್ಟಂತಾಗುತ್ತದೆ. ನಾಳೆ ಅವರು ಷಡಕ್ಷರಿ ಅವರ ರಾಜೀನಾಮೆಗೆ ಒತ್ತಾಯಿಸಬಹುದು. ಹಾಗಂತ ಗುಪ್ತಚರ ದಳದ ಮಾಹಿತಿಯೇ ಇದೆ. ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಇದೆಲ್ಲ ಯಾಕೆ ಬೇಕು ಎಂದು ಹೈಕಮಾಂಡ್ ಕಿವಿ ಚುಚ್ಚಿದರು. ಇಲ್ಲಿ ಮಾತ್ರ ಷಡಕ್ಷರಿ ಅವರೇ ಮಂತ್ರಿ ಅಂತ ಹೆಬ್ಬೆಟ್ಟು ಎತ್ತಿ, ದಿಲ್ಲಿಯಲ್ಲಿ ಮಾತ್ರ ಬೇಡ-ಬೇಡ ಅಂತ ಅಡ್ಡಡ್ಡ ಕೈಯಾಡಿಸಿದರು. ಹೌದೌದು ಎಂದು ಹೈಕಮಾಂಡ್ ಕೂಡ ತಲೆಯಾಡಿಸಿತು. ಆದರೆ ಮಂತ್ರಿ ಆಗಿಯೇ ಬಿಡುತ್ತೇನೆ ಎಂಬ ಭ್ರಮೆಯಲ್ಲಿದ್ದ ಷಡಕ್ಷರಿ ಅವರಿಗಾಗಲಿ, ಅವರನ್ನು ಮಂತ್ರಿ ಮಾಡಿಯೇ ತೀರುತ್ತೇನೆಂದು ನಂಬಿದ್ದ ಪರಮೇಶ್ವರ ಅವರ ಅರಿವಿಗೆ ಈ ಒಳತಂತ್ರಗಳು ಗಮನಕ್ಕೆ ಬರಲೇ ಇಲ್ಲ. ಹೀಗಾಗಿ ಗೀತಾ ಮಂತ್ರಿಯಾದರು, ಷಡಕ್ಷರಿ ಮನೆ ಸೇರಿದರು. ಪರಮೇಶ್ವರ ಕುದಿಮೌನಕ್ಕೆ ಶರಣಾದರು!

ಪರಮೇಶ್ವರ ಮನದೊಳಗೇ ಬೆಂದು ಹೋಗುತ್ತಿರುವುದಕ್ಕೆ ಇದಿಷ್ಟೇ ಕಾರಣ ಅಲ್ಲ. ತಮ್ಮ ಮತ್ತೊಬ್ಬ ಪರಮಾಪ್ತ ಜಿ.ಸಿ. ಚಂದ್ರಶೇಖರ್ ಅವರನ್ನು ವಿಧಾನ ಪರಿಷತ್ತಿಗೆ ತರಲು ಸತತ ಎರಡು ಬಾರಿ ಮಾಡಿದ ಪ್ರಯತ್ನ ಸಿದ್ದರಾಮಯ್ಯನವರ ತಂತ್ರಗಾರಿಕೆ ಮುಂದೆ ಹೊಳೆಯಲ್ಲಿ ಹುಣಿಸೆಹಣ್ಣು ಕಿವುಚಿದಂತಾಯಿತು. ಮೊದಲ ಬಾರಿ ಯತ್ನಿಸಿದಾಗ ಇಂಧನ ಸಚಿವ ಡಿ.ಕೆ. ಶಿವಕುಮಾರ್ ತಮ್ಮ ಆಪ್ತ ಸಿಎಂ ಲಿಂಗಪ್ಪ ಅವರನ್ನು ಮೇಲ್ಮನೆ ಸೇರಿಸಿದರು. ಮುಖ ಸಿಂಡರಿಸಿಕೊಂಡ ಪರಮೇಶ್ವರ ಅವರಿಗೆ ಮುಖ್ಯಮಂತ್ರಿಗಳು ಡಿ.ಕೆ. ಶಿವಕುಮಾರ್ ಕಡೆ ಬೆರಳು ತೋರಿದ್ದಷ್ಟೇ ಸಮಜಾಯಿಷಿ. ವಿಮಲಾಗೌಡ ಅವರ ನಿಧನದಿಂದ ತೆರವಾದ ಸ್ಥಾನ ಸಂಖ್ಯಾಬಲದ ಆಧಾರದ ಮೇರೆಗೆ ಕಾಂಗ್ರೆಸ್ ಪಾಲಾದಾಗಲೂ ಜಿ.ಸಿ. ಚಂದ್ರಶೇಖರ್ ಪರ ಪರಮೇಶ್ವರ ಅವರು ಆಡಿದ ಬ್ಯಾಟಿಂಗ್ ಸಿದ್ದರಾಮಯ್ಯನವರ ಗೂಗ್ಲಿ ಬೌಲಿಂಗ್ ಎದಿರು ಫಲ ನೀಡಲಿಲ್ಲ. ‘ಗಳಸ್ಯ-ಕಂಠಸ್ಯ’ ಸಿ.ಎಂ. ಇಬ್ರಾಹಿಂ ಅವರನ್ನು ಮೇಲ್ಮನೆಗೆ ತಂದು ಪರಮೇಶ್ವರ ಗಂಟಲು ಕಟ್ಟುವಂತೆ ಮಾಡಿದರು. ಜಿ.ಸಿ. ಚಂದ್ರಶೇಖರ್ ಅವರಂತೂ ಕನಸು ಕಟ್ಟಿ-ಕಟ್ಟಿಯೇ ಸುಸ್ತಾದರು. ಪರಮೇಶ್ವರ ನೆರಳಲ್ಲಿ ಹೋಮ್ ಮಿನಿಸ್ಟರ್ ಖಾತೆ ಮೇಲೆ ಕಣ್ಣಿಟ್ಟಿದ್ದ ಸಚಿವ ರಮಾನಾಥ ರೈ ಕನಸು ಕಾಣುತ್ತಲೇ ಕಾಡು ಸೇರಿದರು!

ಸಿದ್ದರಾಮಯ್ಯನವರ ಇಷ್ಟೆಲ್ಲ ಆಟಕ್ಕೆ ಪರಮೇಶ್ವರ ಸಮುದಾಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಹಾಗೂ ಕೆ.ಎಚ್. ಮುನಿಯಪ್ಪ ಅವರ ಪರೋಕ್ಷ ಬೆಂಬಲವೂ ಇದೆ. ಖರ್ಗೆ ಮತ್ತು ಮುನಿಯಪ್ಪ ಅವರಿಗೂ ಹೆಂಗಾದರೂ ಮಾಡಿ ಸಿಎಂ ಆಗಬೇಕೆಂಬ ಬಯಕೆ ಇದೆ. ಇದಕ್ಕೆ ಪರಮೇಶ್ವರ ಅಡ್ಡಿ ಎಂದು ಅವರೂ ಭಾವಿಸಿದ್ದಾರೆ. ಹೀಗಾಗಿ ಪರಮೇಶ್ವರ ಮೂಲೆಗುಂಪು ಕಾರ್ಯಕ್ರಮಕ್ಕೆ ಅವರೆಂದಿಗೂ ತುಟಿಕ್-ಪಿಟಿಕ್ ಎನ್ನುವುದಿಲ್ಲ. ಮೇಲಾಗಿ ಹಿಂದೆ ಪುತ್ರ ಪ್ರಿಯಾಂಕ್ ಅವರನ್ನು ರಾಜ್ಯ ಖಾತೆ ಮಂತ್ರಿ ಮಾಡಿ ಖರ್ಗೆ ಅವರನ್ನು ಬುಟ್ಟಿಗೆ ಹಾಕಿಕೊಂಡಿದ್ದ ಸಿದ್ದರಾಮಯ್ಯ ಇದೀಗ ಪ್ರಿಯಾಂಕ್‌ಗೆ ಸಂಪುಟ ದರ್ಜೆ ಕೊಟ್ಟು  ಪರಮೇಶ್ವರ ಬೆಂಬಲಿಗರ ಸದೆಬಡಿವ ಯೋಜನೆಗೆ ಅಪಸ್ವರ ಬಾರದಂತೆ ನೋಡಿಕೊಂಡಿದ್ದಾರೆ. ಮುನಿಯಪ್ಪ ಅವರಂತೂ ಪರಮೇಶ್ವರ ಪಕ್ಕಕ್ಕೆ ಹೋದರೆ ತಾವು ಸಿಎಂ ಆದಂತೆಯೇ ಎಂದು ಇದ್ಯಾವುದಕ್ಕೂ ಉಸಿರೇ ಎತ್ತುತ್ತಿಲ್ಲ. ಸಿದ್ದರಾಮಯ್ಯನವರ ಒಳಸೂತ್ರ ಅಷ್ಟು ಸೊಗಸಾಗಿ ಇವರೆಲ್ಲರ ಉಸಿರಿಗೇ ನಿಶ್ಶಬ್ದಕವಚ ತೊಡಿಸಿದೆ!

ಹಾಗೆ ನೋಡಿದರೆ ಸಿಎಂ, ಡಿಸಿಎಂ ಎಂದೆಲ್ಲ ಕನಸು ಕಂಡಿದ್ದ ಪರಮೇಶ್ವರ ಮೇಲ್ಮನೆ ಸದಸ್ಯರಾಗಿ ಸಿದ್ದರಾಮಯ್ಯ ಸಂಪುಟ ಸೇರಲು ಎರಡೂವರೆ ವರ್ಷ ಬೇಕಾಯಿತು. ಒಂದೂವರೆ ವರ್ಷ ಹೋಮ್ ಮಿನಿಸ್ಟರ್ ಆಗಿದ್ದರೂ ಆ ಖಾತೆಗೆ ಸಿದ್ದರಾಮಯ್ಯ ಆಪ್ತ, ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯನವರ ಗ್ರಹಣ ಹಿಡಿದಿತ್ತು. ನಾಮ್‌ಕೇವಾಸ್ತೆ ಪದವಿ. ಅದಾದ ಮೇಲೆ ಮುಖ್ಯಮಂತ್ರಿ ಪದವಿಯ ರಹದಾರಿ ಎಂಬ ಭ್ರಮೆಯ ಕೆಪಿಸಿಸಿ ಅಧ್ಯಕ್ಷ ಗಾದಿ ಉಳಿಸಿಕೊಳ್ಳಲು ಮಂತ್ರಿ ಪದವಿ ಬಿಡಬೇಕಾಯಿತು. ಈಗ ಕೆಪಿಸಿಸಿ ಅಧ್ಯಕ್ಷರಾಗಿದ್ದರೂ ಒಬ್ಬರನ್ನ ಮಂತ್ರಿ ಮಾಡಕ್ಕಾಗಲ್ಲ, ಒಬ್ಬರನ್ನು ಎಂಎಲ್‌ಸಿ ಮಾಡಕ್ಕಾಗಲ್ಲ ಎಂಬಂಥ ಸ್ಥಿತಿ. ತಾವೇ ಅಧಿಕಾರ ಪಡೆಯಲು ಅಷ್ಟೆಲ್ಲ ಪರದಾಡಿದ ಪರಮೇಶ್ವರ ಇನ್ನು ಬೇರೆಯವರಿಗೆ ಅಧಿಕಾರ ಕೊಡಿಸಿಯಾರೆಯೇ ಎಂಬ ಭಾವನೆ ಪಸರಿಸುವಲ್ಲಿ ಸಿದ್ದರಾಮಯ್ಯನವರು ಯಶಸಿಯಾಗಿದ್ದಾರೆ. ಇದರಲ್ಲಿ ಅವರ ರಾಜಕೀಯ ಚಾಣಾಕ್ಷ್ಯತೆ ಮಿರಿಮಿರಿ ಮಿಂಚುತ್ತಿದೆ!

ಲಗೋರಿ: ರಣವೀಳ್ಯ ಹಿಡಿದವರಲ್ಲಿ ಕರುಣೆ ನಿರೀಕ್ಷೆ ಮೂರ್ಖತನ.

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply