ನೋಟು ಅಮಾನ್ಯದ ಬಗ್ಗೆ ಆರ್ಬಿಐ ಮಾಜಿ ಗವರ್ನರ್ ರಘುರಾಮ್ ರಾಜನ್ ಹೇಳಿರುವುದೇನು?

ಡಿಜಿಟಲ್ ಕನ್ನಡ ಟೀಮ್:

ಕಪ್ಪುಹಣ ಹಾಗೂ ಭ್ರಷ್ಟಾಚಾರದ ವಿರುದ್ಧ ಸಮರ ಸಾರುತ್ತಿದ್ದೇವೆ ಎನ್ನುತ್ತಲೇ ಕೇಂದ್ರದಲ್ಲಿರುವ ಮೋದಿ ಸರ್ಕಾರ ಕಳೆದ ವರ್ಷ ನೋಟು ಅಮಾನ್ಯದ ಮಹತ್ವದ ನಿರ್ಧಾರ ಪ್ರಕಟಿಸಿತ್ತು. ಸರ್ಕಾರದ ಈ ನಿರ್ಧಾರಕ್ಕೆ ಜನರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತಾದರೂ ವಿರೋಧ ಪಕ್ಷಗಳು ಇದನ್ನು ಟೀಕಿಸಿದ್ದವು. ಈಗ ಈ ಬಗ್ಗೆ ಆರ್ಬಿಐನ ಮಾಜಿ ಗವರ್ನರ್ ರಘುರಾಮ್ ರಾಜನ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದು, ‘ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತಮ್ಮಿಂದಾಗಲಿ ಅಥವಾ ಆರ್ಬಿಐನಿಂದಾಗಲಿ ಬೆಂಬಲ ವ್ಯಕ್ತವಾಗಿರಲಿಲ್ಲ’ ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

‘ಐ ಡು ವಾಟ್ ಐ ಡು’ ಎಂಬ ಪುಸ್ತಕ ಬರೆದಿರುವ ರಘುರಾಮ್ ರಾಜನ್, ಈ ಪುಸ್ತಕದಲ್ಲಿ ನೋಟು ಅಮಾನ್ಯ ನಿರ್ಧಾರ ಸೇರಿದಂತೆ ಆರ್ಬಿಐ ಗವರ್ನರ್ ಆಗಿದ್ದ ಸಂದರ್ಭಗಳಲ್ಲಿನ ಅನೇಕ ಘಟನೆಗಳು ಹಂಚಿಕೊಂಡಿದ್ದು, ತಮಗೂ ಪ್ರಸ್ತುತ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಮೋದಿ ಸರ್ಕಾರಕ್ಕೂ ಇದ್ದ ಅನೇಕ ಭಿನ್ನಾಭಿಪ್ರಾಯಗಳ ಪ್ರಸ್ತಾಪವನ್ನು ಮಾಡಿದ್ದಾರೆ. ತಮ್ಮ ಪುಸ್ತಕದಲ್ಲಿ ರಘುರಾಮ್ ರಾಜನ್ ನೋಟು ಅಮಾನ್ಯ ಕುರಿತು ಹೇಳಿರುವುದಿಷ್ಟು…

‘ಕೇಂದ್ರ ಸರ್ಕಾರದ ನೋಟು ಅಮಾನ್ಯ ನಿರ್ಧಾರಕ್ಕೆ ತಾವಾಗಲಿ ಅಥವಾ ಆರ್ಬಿಐ ಆಗಲಿ ಬೆಂಬಲ ನೀಡಿರಲಿಲ್ಲ. ನನ್ನ ಅಧಿಕಾರದ ಅವಧಿಯ ಯಾವುದೇ ಸಂದರ್ಭದಲ್ಲೂ ಆರ್ಬಿಐ ನೋಟು ಅಮಾನ್ಯ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸಲಹೆ ನೀಡಿಲ್ಲ. ಮೋದಿ ಅವರು ನವೆಂಬರ್ 8ರದು ಈ ನಿರ್ಧಾರ ಪ್ರಕಟಿಸುವ ಹಲವು ತಿಂಗಳಿಗೂ ಮುನ್ನವೇ ದೊಡ್ಡ ಮೊತ್ತದ ಹಳೆಯ ನೋಟು ರದ್ದು ಮಾಡಲು ಸಿದ್ಧತೆ ನಡೆಸಲಾಗಿತ್ತು.

2016ರ ಫೆಬ್ರವರಿ ತಿಂಗಳಲ್ಲಿ ನೋಟು ಅಮಾನ್ಯ ನಿರ್ಧಾರದ ಕುರಿತು ಕೇಂದ್ರ ಸರ್ಕಾರ ನನ್ನ ಅಭಿಪ್ರಾಯ ಕೇಳಿತ್ತು. ಅದಕ್ಕೆ ನಾನು ಮೌಖಿಕವಾಗಿಯೇ ನನ್ನ ಅಭಿಪ್ರಾಯ ಹೇಳಿದ್ದೆ. ಈ ನಿರ್ಧಾರದಿಂದ ದೀರ್ಘಾವಧಿಯಲ್ಲಿ ಲಾಭವಾಗುವುದಾದರೂ ತಕ್ಷಣಕ್ಕೆ ಆರ್ಥಿಕತೆಯ ಮೇಲೆ ಬೀಳುವ ಪರಿಣಾಮ ದೀರ್ಘಾವಧಿಯ ಲಾಭವನ್ನು ಮರೆ ಮಾಚುತ್ತಿತ್ತು ಎಂದು ಹೇಳಿದ್ದೆ. ಸರ್ಕಾರ ಈ ನಿರ್ಧಾರದ ಬದಲಿಗೆ ಬೇರೆ ದಾರಿಯಲ್ಲಿ ತನ್ನ ಗುರಿ ಮುಟ್ಟುವುದು ಉತ್ತಮ ಎಂಬುದು ನನ್ನ ಅಭಿಪ್ರಾಯವಾಗಿತ್ತು.’

Leave a Reply