ಉತ್ತರ ಕೊರಿಯಾ ದರ್ಪಕ್ಕೆ ಬ್ರೇಕ್ ಹಾಕಲು ದ.ಕೊರಿಯಾ ಜತೆ ಅಮೆರಿಕ ಜಂಟಿ ಸಮರಭ್ಯಾಸ

ಡಿಜಿಟಲ್ ಕನ್ನಡ ಟೀಮ್:

ಜಾಗತಿಕ ಮಟ್ಟದ ವಿರೋಧದ ನಡುವೆಯೂ ಒಂದರ ಮೇಲೊಂದರಂತೆ ಅಣ್ವಸ್ತ್ರ ಕ್ಷಿಪಣಿ ಪ್ರಯೋಗ ಮಾಡುತ್ತಲೇ ಇರುವ ಉತ್ತರ ಕೊರಿಯಾ ವಿಶ್ವದ ಎಲ್ಲಾ ಪ್ರಬಲ ರಾಷ್ಟ್ರಗಳಿಗೆ ಸವಾಲೆಸೆಯುತ್ತಿದೆ. ಉತ್ತರ ಕೊರಿಯಾದ ಈ ದರ್ಪವನ್ನು ಅಡಗಿಸಲು ಅಮೆರಿಕ ದಕ್ಷಿಣ ಕೊರಿಯಾ ಜತೆ ಕೈ ಜೋಡಿಸಿದೆ. ಅದರ ಭಾಗವಾಗಿ ಇಂದು ಅಮೆರಿಕ ಹಾಗೂ ದಕ್ಷಿಣ ಕೊರಿಯಾ ಮಿಲಿಟರಿ ಪಡೆಗಳು ಜಂಟಿ ಸಮರಭ್ಯಾಸ ನಡೆಸುತ್ತಿವೆ.

ಈ ಸಮರಭ್ಯಾಸದಲ್ಲಿ ದಕ್ಷಿಣ ಕೊರಿಯಾ ಸೇನೆ ಹಾಗೂ ವಾಯು ಪಡೆಗಳು ಅಮೆರಿಕ ಸೇನಾ ಪಡೆಗಳ ಜತೆ ತಾಲೀಮು ನಡೆಸುತ್ತಿದ್ದು, ಖಂಡಾಂತರ ಕ್ಷಿಪಣಿಗಳ ಉಡಾವಣೆಯ ಅಭ್ಯಾಸ ನಡೆದಿವೆ. ಮೊನ್ನೆಯಷ್ಟೇ ಉತ್ತರ ಕೊರಿಯಾ ತನ್ನ 6ನೇ ಹಾಗೂ ಅತ್ಯಂತ ಶಕ್ತಿಶಾಲಿ ಕ್ಷಿಪಣಿಯ ಪರೀಕ್ಷೆ ನಡೆಸಿದೆ. ಈ ಸಂದರ್ಭದಲ್ಲಿ ಅಮೆರಿಕ ಹಾಗೂ ದಕ್ಷಿಣ ಕೊರಿಯಾ ನಡುವಣ ಈ ಮಿಲಿಟರಿ ಸಮರಾಭ್ಯಾಸ ಸಾಕಷ್ಟು ಮಹತ್ವ ಪಡೆದುಕೊಂಡಿವೆ.

ಉತ್ತರ ಕೊರಿಯಾದ 6ನೇ ಕ್ಷಿಪಣಿ ಪರೀಕ್ಷೆಗೂ ವಿರೋಧ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ಸೋಮವಾರ ಮತ್ತೊಮ್ಮೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆ ನಡೆಯಲಿದ್ದು, ಉತ್ತರ ಕೊರಿಯಾ ಮೇಲೆ ನೂತನ ನಿಷೇಧ ನೀತಿ ರೂಪಿಸುವ ಕುರಿತಾಗಿ ಚರ್ಚೆ ನಡೆಯಲಿದೆ. ಇದೇ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ತಮ್ಮ ಮಿಲಿಟರಿ ಮುಖ್ಯಸ್ಥರಿಂದ ಉತ್ತರ ಕೊರಿಯಾ ನಿಯಂತ್ರಿಸುವ ಕುರಿತಾಗಿ ತಮ್ಮ ಮುಂದಿರುವ ಮಿಲಿಟರಿ ಅವಕಾಶಗಳ ಬಗ್ಗೆ ವಿವರಣೆ ಪಡೆದುಕೊಂಡಿದ್ದಾರೆ.

ಈವರೆಗೂ ವಿಶ್ವಸಂಸ್ಥೆ ಸೇರಿದಂತೆ ವಿವಿಧ ರಾಷ್ಟ್ರಗಳು ಉತ್ತರ ಕೊರಿಯಾಗೆ ಕ್ಷಿಪಣಿ ಪ್ರಯೋಗದ ವಿಚಾರವಾಗಿ ಸಾಕಷ್ಟು ಎಚ್ಚರಿಕೆಗಳನ್ನು ನೀಡಿವೆ. ಆದರೂ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜೊಂಗ್, ಕ್ಷಿಪಣಿ ಪ್ರಯೋಗ ಮುಂದುವರಿಸಿದ್ದಾರೆ. ಹೀಗಾಗಿ ಇಂದು ನಡೆಯಲಿರುವ ವಿಶ್ವಸಂಸ್ಥೆ ಭದ್ರತಾ ಸಮಿತಿ ಸಭೆಯಲ್ಲಿ ಉತ್ತರ ಕೊರಿಯಾ ವಿರುದ್ಧ ಕಠಿಣ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಗಳು ಹೆಚ್ಚಿವೆ. ಆ ಪೈಕಿ ಉತ್ತರ ಕೊರಿಯಾದ ಪ್ರಮುಖ ರಫ್ತು ಉತ್ಪಾದನೆಯಾದ ಜವಳಿ ಉತ್ಪನ್ನ, ಉತ್ತರ ಕೊರಿಯಾದ ವಿಮಾನಯಾನ ಹಾಗೂ ಉನ್ನತ ಅಧಿಕಾರಿಗಳಿಗೆ ವಿದೇಶಿ ಪ್ರಯಾಣ ನಿಷೇದ ಹಾಗೂ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆ ಇದೆ.

ಈಗಾಗಲೇ ಉತ್ತರ ಕೊರಿಯಾ ಹಾಗೂ ದಕ್ಷಿಣ ಕೊರಿಯಾ ರಾಷ್ಟ್ರಗಳು ಎಣ್ಣೆ ಸೀಗೆಕಾಯಿಯಂತಿವೆ. ಹೀಗಾಗಿ ಉತ್ತರ ಕೊರಿಯಾ ನಿಯಂತ್ರಣಕ್ಕೆ ದಕ್ಷಿಣ ಕೊರಿಯಾವನ್ನು ಬಳಸಿಕೊಳ್ಳಲು ಅನೇಕ ರಾಷ್ಟ್ರಗಳು ಮುಂದಾಗಿವೆ. ದಕ್ಷಿಣ ಕೊರಿಯಾ ಜತೆ ಅಮೆರಿಕ ಮಿಲಿಟರಿ ಸಮರಾಭ್ಯಾಸ ಒಂದೆಡೆಯಾದರೆ, ವಿಶ್ವಸಂಸ್ಥೆಯಲ್ಲಿ ಉತ್ತರ ಕೊರಿಯಾ ವಿರುದ್ಧ ಕಠಿಣ ನಿಲುವು ತೆಗೆದುಕೊಳ್ಳಲು ಜಪಾನ್ ಹಾಗೂ ದಕ್ಷಿಣ ಕೊರಿಯಾ ಕೈ ಜೋಡಿಸಿವೆ.

Leave a Reply