ಮಂಗಳೂರು ಚಲೋಗೆ ರಾಜ್ಯದ ಹಲವೆಡೆ ಪೊಲೀಸರಿಂದ ತಡೆ, ಈ ಬಗ್ಗೆ ಸಿದ್ದರಾಮಯ್ಯ ಹೇಳೋದೇನು?

ಡಿಜಿಟಲ್ ಕನ್ನಡ ಟೀಮ್:

ಬಿಜೆಪಿ ರಾಜ್ಯ ಯುವ ಘಟಕ ಹಮ್ಮಿಕೊಂಡಿರುವ ‘ಮಂಗಳೂರು ಚಲೋ’ ರ‍್ಯಾಲಿಗೆ ರಾಜ್ಯದ ಹಲವೆಡೆಗಳಲ್ಲಿ ಪೊಲೀಸರಿಂದ ತಡೆ ನೀಡಲಾಗಿದೆ. ಬೆಂಗಳೂರಿನ ಫ್ರೀಂಡಂ ಪಾರ್ಕಿಗೆ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಹಿಂದೂ ಸಂಘಟನೆಯ ಕಾರ್ಯಕರ್ತರ ಹತ್ಯೆ ವಿರೋಧಿಸಿ ಪಿಎಫ್ಐ, ಎಸ್ ಡಿಪಿಐ ಸಂಘಟನೆಗಳನ್ನು ನಿಷೇಧಿಸಬೇಕು ಎಂದು ಪಟ್ಟು ಹಿಡಿದು ಬಿಜೆಪಿ ರಾಜ್ಯ ಯುವ ಮೋರ್ಚಾ ಈ ಬೈಕ್ ಮೆರವಣಿಗೆಯನ್ನು ಹಮ್ಮಿಕೊಂಡಿತ್ತು. ಬಿಜೆಪಿ ಮಾಸೂರು ಸಂಸದ ಹಾಗೂ ಯುವ ಮೋರ್ಚಾದ ಅಧ್ಯಕ್ಷ ಪ್ರತಾಪ್ ಸಿಂಹ, ಸಂಸದೆ ಶೋಭಾ ಕರಂದ್ಲಾಜೆ, ಅರವಿಂದ ಲಿಂಬಾವಳಿ ಸೇರಿದಂತೆ ಬಿಜೆಪಿ ಹಿರಿಯ ನಾಯಕರು ಫ್ರೀಡಂ ಪಾರ್ಕಿಗೆ ಆಗಮಿಸಿದ್ದರು. ಈ ವೇಳೆ ಈ ನಾಯಕರು ಹಾಗೂ ಕೆಲವು ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಪೊಲೀಸರ ಈ ಕ್ರಮವನ್ನು ಖಂಡಿಸಿ ಬಿಜೆಪಿ ನಾಯಕರು ರಸ್ತೆಯಲ್ಲಿ ಕುಳಿತು ಪ್ರತಿಭಟನೆಗೆ ಮುಂದಾಗಿದ್ದಾರೆ.

ಈ ಬೈಕ್ ಮೆರವಣಿಗೆ ಫ್ರೀಡಂ ಪಾರ್ಕ್ ನಿಂದ ಆರಂಭವಾಗಿ ನೆಲಮಂಗಲಕ್ಕೆ ತಲುಪಿ ಅಲ್ಲಿ ಸಮಾವೇಶ ನಡೆಸಿ ನಂತರ ಸಂಜೆ ವೇಳೆಗೆ ಸಕಲೇಶಪುರಕ್ಕೆ ಸೇರಿ ನಂತರ ನಾಳೆ ಅಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗವಹಿಸಿ, ನಂತರ ಅಲ್ಲಿಂದ ಮಂಗಳೂರಿನತ್ತ ಸಾಗುವ ಕಾರ್ಯಕ್ರಮ ಹಾಕಿಕೊಳ್ಳಲಾಗಿತ್ತು. ಬೆಂಗಳೂರು ಮಾತ್ರವಲ್ಲದೆ ಕೋಲಾರ, ಮುಳಬಾಗಿಲಿನಲ್ಲೂ ಈ ಬೋಕ್ ಜಾಥಾವನ್ನು ಪೊಲೀಸರು ತಡೆದಿದ್ದಾರೆ.

ಪೊಲೀಸರ ಮೂಲಕ ಬಿಜೆಪಿಯ ಪ್ರತಿಭಟನೆಯನ್ನು ಸರ್ಕಾರ ಹತ್ತಿಕ್ಕುತ್ತಿದೆ ಎಂದು ಪ್ರತಾಪ್ ಸಿಂಹ ಆರೋಪ ಮಾಡಿದ್ದು, ‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಕ್ಷಣೆ ನೀಡಬೇಕಾಗಿದ್ದ ಸರ್ಕಾರ ಈಗ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ನಡೆಸುತ್ತಿದೆ. ಆದರೆ ಈ ಜಾಥ ಮಾಡಿಯೇ ಸಿದ್ಧ’ ಎಂದಿದ್ದಾರೆ.

ಸಿದ್ದರಾಮಯ್ಯ ಹೇಳೋದೇನು?

ಬಿಜೆಪಿಯ ಈ ಮಂಗಳೂರು ಚಲೋ ಪ್ರತಿಭಟನೆಯನ್ನು ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೇಳಿರುವುದಿಷ್ಟು…

‘ಬಿಜೆಪಿಯವರು ರೈತರ ಸಾಲ ಮನ್ನಾ ಮಾಡಲು ಆಗ್ರಹಿಸಿ ದೆಹಲಿ ಚಲೋ ಮಾಡಲಿ, ಅವರೊಂದಿಗೆ ನಾವು ಬರುತ್ತೇವೆ. ಸಮಾವೇಶ, ಜಾಥಾ ಮಾಡಲು ನಮ್ಮಿಂದ ಯಾವುದೇ ವಿರೋಧವಿಲ್ಲ. ನಾವೂ ಬಳ್ಳಾರಿಗೆ ಪಾದಯಾತ್ರೆ ಮಾಡಿದ್ದೆವು. ಆದರೆ ಬಿಜೆಪಿಯವರು ಬೈಕ್ ಜಾಥ ಮಾಡುತ್ತಿದ್ದು ಇದರಿಂದ ಟ್ರಾಫಿಕ್ ಸಮಸ್ಯೆ ಎದುರಾಗುತ್ತದೆ. ಸಾವಿರಾರು ಬೈಕ್ ಗಳು ರಸ್ತೆಗಿಳಿದರೆ ಜನರಿಗೆ ತೊಂದರೆಯಾಗುತ್ತದೆ. ಹೀಗಾಗಿ ಈ ಜಾಥಾಗೆ ಅನುಮತಿ ನೀಡಲಾಗಿಲ್ಲ.’

Leave a Reply