ಬ್ರಿಕ್ಸ್ ಸಭೆಯಲ್ಲೂ ಸಿಕ್ತು ಗೆಲವು, ಚೀನಾ ನಿಯಂತ್ರಿಸುವುದು ಹೇಗೆ ಎಂದು ತೋರಿಸಿಕೊಟ್ಟ ಭಾರತ

ಡಿಜಿಟಲ್ ಕನ್ನಡ ಟೀಮ್:

ಚೀನಾದ ಕ್ಸಿಯಾಮೆನ್ ನಲ್ಲಿ ನಡೆದ ಬ್ರಿಕ್ಸ್ ರಾಷ್ಟ್ರಗಳ ಸಭೆಯನ್ನು ‘ಭಯೋತ್ಪಾದನೆ ವಿರುದ್ಧ ಸಾಂಘಿಕ ಹೋರಾಟ’ದ ನಿರ್ಣಯದೊಂದಿಗೆ ಮುಕ್ತಾಯಗೊಳಿಸಲಾಗಿದೆ. ಇದರೊಂದಿಗೆ ಪಂಚ ರಾಷ್ಟ್ರಗಳ ಸಭೆಯಲ್ಲಿ ಭಾರತ ತನ್ನ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಿದೆ.

ಬ್ರಿಕ್ಸ್ ಸಭೆ ಆರಂಭಕ್ಕೂ ಮುನ್ನ ಈ ಬಾರಿ ಭಾರತ ಭಯೋತ್ಪಾದನೆ ಹಾಗೂ ಉಗ್ರವಾದದ ವಿರುದ್ಧವಾಗಿ ತನ್ನ ಕಾರ್ಯಸೂಚಿಯನ್ನು ಸಭೆಯಲ್ಲಿ ಯಶಸ್ವಿಗೊಳಿಸಲು ಸಾಧ್ಯವಾಗುತ್ತಾ ಎಂಬ ಅನುಮಾನ ಮೂಡಿತ್ತು. ಈ ಬಗ್ಗೆ ಡಿಜಿಟಲ್ ಕನ್ನಡ ಸಹ ಲೇಖನ ಪ್ರಕಟಿಸಿತ್ತು. ಈಗಷ್ಟೇ ದೋಕಲಂ ವಿಚಾರವಾಗಿ ಭಾರತ ಹಾಗೂ ಚೀನಾ ನಡುವೆ ರಾಜತಾಂತ್ರಿಕ ಸಂಧಾನವಾಗಿರುವ ಹಿನ್ನೆಲೆಯಲ್ಲಿ ಈ ಎರಡು ದೇಶಗಳ ನಡುವಣ ಸಂಬಂಧವೃದ್ಧಿಗೆ ಹೆಚ್ಚು ಒತ್ತು ನೀಡಲಾಗುವುದು. ಈ ಹಂತದಲ್ಲಿ ಭಾರತ ಪಾಕಿಸ್ತಾನ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಚೀನಾ ವಿರುದ್ಧ ಒತ್ತಡ ಹೇರಲು ಸಾಧ್ಯವೆ ಎಂಬ ಪ್ರಶ್ನೆ ಮೂಡಿತ್ತು. ಈಗ ಭಾರತ ತನ್ನ ಕಾರ್ಯಸೂಚಿಯನ್ನು ಯಶಸ್ವಿಗೊಳಿಸಿ ಚೀನಾ ವಿರುದ್ಧ ಮತ್ತೊಂದು ರಾಜತಾಂತ್ರಿಕ ಗೆಲವು ಸಾಧಿಸಿದೆ.

ಭಯೋತ್ಪಾದನೆ ವಿರುದ್ಧ ಸಮರ ಸಾರಲು ವಿಶ್ವದ ಇತರೆ ರಾಷ್ಟ್ರಗಳನ್ನು ಒಗ್ಗೂಡಿಸುವತ್ತ ಭಾರತ ಸಾಕಷ್ಟು ಪ್ರಯತ್ನಿಸುತ್ತಿದೆ. ಅಲ್ಲದೆ ಉಗ್ರರಿಗೆ ಆಶ್ರಯ ತಾಣವಾಗಿರೋ ಪಾಕಿಸ್ತಾನ ವಿರುದ್ಧವೂ ಬಹಿರಂಗವಾಗಿ ರಾಜತಾಂತ್ರಿಕತೆಯ ಮೂಲಕ ಇತರೆ ಪ್ರಬಲ ರಾಷ್ಟ್ರಗಳಿಂದಲೂ ಒತ್ತಡ ಹೇರುವ ಪ್ರಯತ್ನ ನಡೆಸುತ್ತಿದೆ. ಆದರೆ, ಚೀನಾ ಮಾತ್ರ ಪಾಕಿಸ್ತಾನಕ್ಕೆ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿತ್ತು. ಅಷ್ಟೇ ಅಲ್ಲದೆ ಬ್ರಿಕ್ಸ್ ಸಭೆಯಲ್ಲಿ ಪಾಕಿಸ್ತಾನದ ವಿಷಯವನ್ನು ಪ್ರಸ್ತಾಪ ಮಾಡದಂತೆಯೂ ಚೀನಾ ಭಾರತಕ್ಕೆ ಹೇಳಿತ್ತು. ಹೀಗಾಗಿ ಭಾರತ ಈ ಬಾರಿಯ ಬ್ರಿಕ್ಸ್ ಸಭೆಯಲ್ಲಿ ಪಾಕ್ ಹಾಗೂ ಭಯೋತ್ಪಾದನೆ ವಿಚಾರದಲ್ಲಿ ಚೀನಾವನ್ನು ಹಿಂದಿಕ್ಕಿ ಹೇಗೆ ತನ್ನ ವಾದವನ್ನು ಮಂಡಿಸಲಿದೆ ಹಾಗೂ ಇತರೆ ರಾಷ್ಟ್ರಗಳ ಬೆಂಬಲ ಪಡೆಯಲಿದೆ ಎಂಬ ಪ್ರಶ್ನೆ ಮೂಡಿತ್ತು.

ಬ್ರಿಕ್ಸ್ ಗುಂಪಿನ ರಾಷ್ಟ್ರಗಳಾದ ರಷ್ಯಾ, ಆಫ್ರಿಕಾ ಹಾಗೂ ಬ್ರೆಜಿಲ್ ದೇಶಗಳು ಭಯೋತ್ಪಾದನೆಯ ಕೃತ್ಯಕ್ಕೆ ಬಲಿಯಾಗಿರುವ ರಾಷ್ಟ್ರಗಳು. ಹೀಗಾಗಿ ಭಾರತ ತನ್ನ ಚಾಣಾಕ್ಷ್ಯತನದಿಂದ ಭಯೋತ್ಪಾದನೆಯ ವಿಷಯ ಪ್ರಸ್ತಾಪಿಸುತ್ತಲೇ, ಪರೋಕ್ಷವಾಗಿ ಉಗ್ರರಿಗೆ ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನದ ವಿಷಯವನ್ನು ಸಭೆಯಲ್ಲಿ ಮಂಡಿಸಿತು. ಭಾರತದ ವಾದಕ್ಕೆ ಪ್ರಬಲ ರಾಷ್ಟ್ರ ರಷ್ಯಾ ಸೇರಿದಂತೆ ಇತರೆ ರಾಷ್ಟ್ರಗಳು ಬೆಂಬಲ ಸೂಚಿಸಿದವು. ಆಗ ಚೀನಾಗೆ ಭಾರತದ ವಾದಕ್ಕೆ ಬೆಂಬಲ ಸೂಚಿಸದೇ ಬೇರೆ ದಾರಿ ಕಾಣದಂತಾಯಿತು.

ಆ ಮೂಲಕ ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳಾದ ಜೈಶ್ ಇ ಮೊಹಮದ್, ಲಷ್ಕರ್ ಇ ತೊಯ್ಬಾ ಸೇರಿದಂತೆ ಹಲವು ಉಗ್ರ ಸಂಘಟನೆಗಳ ವಿರುದ್ಧ ಈ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಭಾರತದ ಒತ್ತಡಕ್ಕೆ ಮಣಿದ ಚೀನಾ ಭಯೋತ್ಪಾದನೆಯ ವಿರುದ್ಧದ ಸಾಮೂಹಿಕ ಹೋರಾಟದಲ್ಲಿ ಕೈ ಜೋಡಿಸುವುದಾಗಿ ತಿಳಿಸಿತು.

ಮೊದಲು ದೋಕಲಂ ವಿಚಾರವಾಗಿ ರಾಜತಾಂತ್ರಿಕತೆಯ ಮೂಲಕ ಚೀನಾವನ್ನು ಮಣಿಸಿದ್ದ ಭಾರತ, ಈಗ ಬ್ರಿಕ್ಸ್ ಸಭೆಯಲ್ಲೂ ಚೀನಾ ವಿರುದ್ಧ ಪರೋಕ್ಷವಾಗಿ ಮೇಲುಗೈ ಸಾಧಿಸಿದೆ. ಭಾರತ ಇತ್ತೀಚಿನ ದಿನಗಳಲ್ಲಿ ಚೀನಾವನ್ನು ನಿಯಂತ್ರಿಸುತ್ತಿರುವುದು ಅನೇಕ ರಾಷ್ಟ್ರಗಳಿಗೆ ಮಾದರಿಯಾಗಿ ನಿಂತಿದೆ.

ಚೀನಾ ಜತೆ ಭೂ ಹಾಗೂ ಸಮುದ್ರ ಗಡಿ ಹಂಚಿಕೊಂಡಿರುವ ಬಹುತೇಕ ಎಲ್ಲಾ ರಾಷ್ಟ್ರಗಳು ಅದರಿಂದ ಸಮಸ್ಯೆ ಎದುರಿಸುತ್ತಲೇ ಇವೆ. ಆದರೆ ಏಷ್ಯಾದ ಶಕ್ತಿಶಾಲಿ ರಾಷ್ಟ್ರ ಎಂದು ಬೀಗುತ್ತಿರುವ ಚೀನಾವನ್ನು ಹೇಗೆ ನಿಯಂತ್ರಿಸಬೇಕು ಎಂಬುದು ಈ ರಾಷ್ಟ್ರಗಳಿಗೆ ದೊಡ್ಡ ಪ್ರಶ್ನೆಯಾಗಿ ಕಾಡುತ್ತಿತ್ತು. ಈಗ ಭಾರತದ ಕಾರ್ಯತಂತ್ರ ಇತರೆ ರಾಷ್ಟ್ರಗಳಿಗೂ ಚೀನಾವನ್ನು ನಿಯಂತ್ರಿಸುವುದು ಹೇಗೆ ಎಂಬುದನ್ನು ತೋರಿಸಿಕೊಟ್ಟಿದೆ.

Leave a Reply