ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಹತ್ಯೆ

ಡಿಜಿಟಲ್ ಕನ್ನಡ ಟೀಮ್:

ಪತ್ರಕರ್ತೆ ಹಾಗೂ ಪ್ರಗತಿಪರ ಚಿಂತಕಿಯಾಗಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ ಅವರ ಮೇಲೆ ದುಷ್ಕರ್ಮಿಗಳಿಂದ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿದೆ.

ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನದಲ್ಲಿ ತೊಡಗಿಕೊಂಡಿದ್ದ ಗೌರಿ ಲಂಕೇಶ್ ಅವರನ್ನು ರಾಜರಾಜೇಶ್ವರಿ ನಗರದ ಮನೆಯ ಬಳಿ ಹತ್ಯೆ ಮಾಡಲಾಗಿದೆ. ಎರಡು ವರ್ಷಗಳ ಹಿಂದೆ ಪ್ರಗತಿಪರ ಚಿಂತಕರಾಗಿದ್ದ ಕಲಬುರಗಿ ಅವರನ್ನು ಅವರ ಮನೆಯ ಬಾಗಿಲಿನ ಬಳಿ ಹತ್ಯೆ ಮಾಡಿದ ರೀತಿಯಲ್ಲೇ ಇಂದು ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಲಾಗಿದೆ.

ರಾತ್ರಿ 8 ಗಂಟೆ ಸುಮಾರಿಗೆ ಹೊಂಚು ಹಾಕಿ ಕಾಯುತ್ತಿದ್ದ ಮೂವರು ದುಷ್ಕರ್ಮಿಗಳು, ಗೌರಿ ಲಂಕೇಶ್ ಅವರು ಮನೆಯಿಂದ ಹೊರಬರುತ್ತಿದ್ದಂತೆ ಏಳು ಸುತ್ತು ಗುಂಡು ಹಾರಿಸಿದ್ದಾರೆ. ಈ ದಾಳಿಯ ವೇಳೆ ಗೌರಿ ಅವರ ಹಣೆ ಮತ್ತು ಎದೆ ಭಾಗಕ್ಕೆ ಮೂರು ಗುಂಡುಗಳು ಬಿದ್ದ ಹಿನ್ನೆಲೆಯಲ್ಲಿ ಗೌರಿ ಲಂಕೇಶ್ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಲಬುರಗಿ ಹತ್ಯೆ ಮಾಡಿದವರನ್ನು ಇನ್ನು ಪತ್ತೆ ಮಾಡಲು ಸಾಧ್ಯವಾಗಿಲ್ಲ. ಈ ಸಂದರ್ಭದಲ್ಲಿ ಗೌರಿ ಲಂಕೇಶ್ ಅವರ ಹತ್ಯೆ ನಡೆದಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.

ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಗೃಹ ಸಚಿವ ರಾಮಲಿಂಗಾ ರೆಡ್ಡಿ, ‘ಈ ಘಟನೆಯನ್ನು ನಾವು ಖಂಡಿಸುತ್ತೇವೆ. ಘಟನೆ ನಡೆದಿರುವ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಹಾಗೂ ಆಯುಕ್ತರು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದು, ಇನ್ನಷ್ಟೇ ಕಾರಣ ತಿಳಿದುಬರಬೇಕಿದೆ. ಈ ಕೊಲೆ ಸೈದ್ಧಾಂತಿಕ ವೈಷಮ್ಯದಿಂದ ನಡೆದಿದೆಯೋ ಅಥವಾ ವೈಯಕ್ತಿಕ ಕಾರಣಗಳಿಂದ ಆಗಿದೆಯೋ ಎಂಬುದು ಪರಿಶೀಲನೆ ನಡೆಸಿದ ನಂತರ ತಿಳಿದು ಬರಲಿದೆ’ ಎಂದಿದ್ದಾರೆ.

Leave a Reply