ಐಪಿಎಲ್ ಮಾಧ್ಯಮ ಹಕ್ಕು ಹರಾಜು: ಕೋಟಿ ಕೋಟಿ ಸುರಿದಿರೋ ಸ್ಟಾರ್ ಇಂಡಿಯಾಗೆ ಸಿಗೋ ಲಾಭವೇನು?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಚಿನ್ನದ ಮೊಟ್ಟೆ ಇಡುವ ಕೋಳಿಯಂತಿರುವ ಇಂಡಿಯನ್ ಪ್ರಿಮಿಯರ್ ಲೀಗ್ (ಐಪಿಎಲ್), ಮತ್ತೆ ಬಿಸಿಸಿಐ ಖಜಾನೆಗೆ ಸಾವಿರಾರು ಕೋಟಿ ಹಣವನ್ನು ತುಂಬಿಸಿದೆ. ಮುಂದಿನ ಐದು ಆವೃತ್ತಿಗಳ ಐಪಿಎಲ್ ಟೂರ್ನಿಗೆ ನಿನ್ನೆ ನಡೆದ ಮಾಧ್ಯಮ ಹಕ್ಕು ಹರಾಜು ಪ್ರಕ್ರಿಯೆಯಲ್ಲಿ ಸ್ಟಾರ್ ಸಂಪರ್ಕ ಸಮೂಹ 16 ಸಾವಿರ ಕೋಟಿಯನ್ನು ಬಿಡ್ ಮಾಡಿ ಈ ಹಕ್ಕನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಆ ಮೂಲಕ ಬಿಸಿಸಿಐ ಬೊಕ್ಕಸಕ್ಕೆ ಹಣದ ಹೊಳೆ ಹರಿದಿದೆ.

2008ರಲ್ಲಿ ಐಪಿಎಲ್ ಟೂರ್ನಿ ಆರಂಭವಾದಾಗ 10 ಆವೃತ್ತಿಗಳಿಗೆ ಮಾಧ್ಯಮ ಹಕ್ಕನ್ನು ಸೋನಿ ಸಂಪರ್ಕ ಸಮೂಹ ₹ 8200 ಕೋಟಿಗೆ ಬಾಚಿಕೊಂಡಿತ್ತು. ಈಗ ಸ್ಟಾರ್ ಕೇವಲ 5 ಆವೃತ್ತಿಗೆ ₹ 16,348 ಕೋಟಿ ನೀಡಿದೆ. ಆ ಮೂಲಕ ಐಪಿಎಲ್ ಟೂರ್ನಿಯ ಮಾಧ್ಯಮ ಹಕ್ಕಿನ ಮೌಲ್ಯ ನಾಲ್ಕು ಪಟ್ಟು ಹೆಚ್ಚಾಗಿದೆ. ನಿನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ  ಸ್ಟಾರ್ ಇಂಡಿಯಾದ ಜತೆಗೆ ಅಮೇಜಾನ್ ಸೆಲ್ಲರ್ ಸರ್ವೀಸ್, ಫಾಲೋಆನ್ ಇಂಟರಾಕ್ಟಿವ್ ಮಿಡಿಯಾ, ತಾಜ್ ಟಿವಿ ಇಂಡಿಯಾ, ಸೋನಿ ಪಿಕ್ಚರ್ಸ್ ನೆಟ್ವರ್ಕ್, ಟೈಮ್ಸ್ ಇಂಟರ್ ನೆಟ್, ಟ್ವಿಟರ್, ಫೇಸ್ ಬುಕ್, ರಿಲಾಯನ್ಸ್ ಜಿಯೋ, ಸ್ಕೈ, ಇಎಸ್ಪಿಎನ್ ಹೀಗೆ ಒಟ್ಟು 24 ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.

ಈ ಮಾಧ್ಯಮ ಹಕ್ಕಿನಲ್ಲಿ ಪ್ರಸಾರ, ಡಿಜಿಟಲ್ ಹಕ್ಕು ಎಂಬ ಪ್ರತ್ಯೇಕ ವಿಭಾಗಗಳಿದ್ದವು. ಪ್ರಸಾರ ಹಕ್ಕಿನ ವಿಭಾಗದಲ್ಲಿ ಸೋನಿ ಪಿಕ್ಚರ್ಸ್ ಕಂಪನಿ ₹ 11,050 ಕೋಟಿ ಬಿಡ್ ಮಾಡಿ ಮುಂಚೂಣಿಯಲ್ಲಿತ್ತು. ಇನ್ನು ಡಿಜಿಟಲ್ ಹಕ್ಕಿಗೆ ಫೇಸ್ ಬುಕ್ ₹3900 ಕೋಟಿ ಬಿಡ್ ಮಾಡಿತ್ತಾದರೂ, ಏರ್ ಟೆಲ್ (₹ 3280 ಕೋಟಿ), ರಿಲಾಯನ್ಸ್ ಜಿಯೋ (₹ 3,075 ಕೋಟಿ) ನಿಂದ ಪ್ರತಿಸ್ಪರ್ಧೆ ಎದುರಿಸಿತ್ತು. ಹೀಗೆ ಪ್ರತ್ಯೇಕ ವಿಭಾಗಗಳಲ್ಲಿ ಸ್ಟಾರ್ ತಲಾ ₹ 6196 ಕೋಟಿಯಷ್ಟೇ ಬಿಡ್ ಮಾಡಿತ್ತು. ಹೀಗೆ ಪ್ರತ್ಯೇಕ ವಿಭಾಗಗಳ ಬಿಡ್ ನಲ್ಲಿ ಹಿಂದೆ ಉಳಿದಿದ್ದ ಸ್ಟಾರ್ ಇಂಡಿಯಾ, ಒಟ್ಟಾರೆ ಬಿಡ್ಡಿಂಗ್ ನಲ್ಲಿ ₹16,348 ಕೋಟಿಯನ್ನು ಬಿಡ್ ಮಾಡಿ ಅತಿ ಹೆಚ್ಚು ಬಿಡ್ ಮಾಡಿದ ಕಂಪನಿಯಾಯಿತು. ಆ ಮೂಲಕ ತನ್ನ ತಂತ್ರಗಾರಿಕೆಯಿಂದ ಸೋನಿ ಪಿಕ್ಚರ್ಸ್ ಅನ್ನು ಹಿಂದಿಕ್ಕಿ ಐಪಿಎಲ್ ಮಾಧ್ಯಮ ಹಕ್ಕನ್ನು ತನ್ನದಾಗಿಸಿಕೊಂಡಿತು.

ಸ್ಟಾರ್ ಇಂಡಿಯಾ ಇಷ್ಟೊಂದು ಹಣ ಸುರಿಯುತ್ತಿರುವುದೇಕೆ?

ಸ್ಟಾರ್ ಇಂಡಿಯಾದ ಈ ಬಿಡ್ಡಿಂಗ್ ನಿಂದ ಪ್ರತಿ ಪಂದ್ಯದ ಪ್ರಸಾರಕ್ಕೆ ₹55.5 ಕೋಟಿ ಹಣ ವೆಚ್ಚ ಮಾಡಿದಂತಾಗಿದೆ. ಈ ಬಿಡ್ ನಿಂದ ಈಗ ಸ್ಟಾರ್ ಇಂಡಿಯಾಗೆ ಸಿಕ್ಕಿರುವ ಹಕ್ಕುಗಳೇನು ಎಂದರೆ,

ಐಪಿಎಲ್ ಟೂರ್ನಿಯನ್ನು ಭಾರತ ಹಾಗೂ ಉಪಖಂಡಗಳಲ್ಲಿ ಪ್ರಸಾರ ಮಾಡುವ ಹಕ್ಕನ್ನು ಹೊಂದಿದೆ.

ಪ್ರಸಾರದ ಜತೆಗೆ ಭಾರತ ಹಾಗೂ ಉಪಖಂಡಗಳಲ್ಲಿ ಐಪಿಎಲ್ ನ ಡಿಜಿಟಲ್ ಮಾಧ್ಯಮದ ಹಕ್ಕನ್ನು ಪಡೆದುಕೊಂಡಿದೆ. ಇನ್ನು ವಿಶ್ವದ ಇತರೆ ಮಾಧ್ಯಮ ಹಾಗೂ ಡಿಜಿಟಲ್ ಹಕ್ಕನ್ನು ಪಡೆದಿದ್ದು, ಭಾರತದ ಜತೆಗೆ ಮಧ್ಯಪ್ರಾಚ್ಯ, ಆಫ್ರಿಕಾ, ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ಗಳಲ್ಲಿನ ಹಕ್ಕನ್ನು ಹೊಂದಿದೆ.

ಈಗಾಗಲೇ ಟೀಂ ಇಂಡಿಯಾದ ಅಂತಾರಾಷ್ಟ್ರೀಯ ಪ್ರತಿ ಪಂದ್ಯಕ್ಕೆ ₹ 43 ಕೋಟಿಯಷ್ಟು ಹಣ ನೀಡಿ ಹಕ್ಕು ಪಡೆದಿರುವ ಸ್ಟಾರ್ ಇಂಡಿಯಾ ಈಗ ಐಪಿಎಲ್ ಹಕ್ಕನ್ನು ಪಡೆದುಕೊಂಡು ವರ್ಷದಲ್ಲಿ 300 ದಿನಗಳ ಕಾಲ ಈ ಭಾರತದಲ್ಲಿನ ಕ್ರಿಕೆಟ್ ಟೂರ್ನಿಯ ಪ್ರಸಾರದ ಹಕ್ಕನ್ನು ಪಡೆದುಕೊಂಡಿದೆ. ಈಗಾಗಲೇ ಸ್ಟಾರ್ ಇಂಡಿಯಾ ವಿಶ್ವಕಪ್ ಸೇರಿದಂತೆ ಇತರೆ ಐಸಿಸಿ ಟೂರ್ನಿಗಳ ಪ್ರಸಾರದ ಹಕ್ಕನ್ನು ಹೊಂದಿದ್ದು, ಇದರಿಂದ ಪ್ರತಿ ವರ್ಷಕ್ಕೆ 60 ದಿನಗಳ ಕಾಲ ಕ್ರಿಕೆಟ್ ಪ್ರಸಾರ ಖಚಿತವಾಗಿದೆ. ಇನ್ನು 2019ರ ವಿಶ್ವಕಪ್ ನಡೆಯಲ್ಲಿದ್ದು ಇದರಿಂದ ಆ ವರ್ಷ 100 ದಿನಗಳ ಕಾಲ ಕ್ರಿಕೆಟ್ ದಿನಗಳು ಖಚಿತವಾಗಲಿವೆ. ಇನ್ನು ಬಿಸಿಸಿಐ ಟೂರ್ನಿಗಳಿಂದ ಟೀಂ ಇಂಡಿಯಾದ ಅಂತಾರಾಷ್ಟ್ರೀಯ ಪಂದ್ಯಗಳು, ಭಾರತದಲ್ಲಿ ನಡೆಯಲಿರುವ ರಣಜಿಯಂತಹ ದೇಶಿ ಕ್ರಿಕೆಟ್ ಪಂದ್ಯಗಳ ಪ್ರಸಾರ ಸೇರಿದಂತೆ ವರ್ಷ ಪೂರ್ತಿ ಕ್ರಿಕೆಟ್ ಪ್ರಸಾರ ಖಚಿತವಾಗಿದೆ.

ಜಾಹೀರಾತು ದರ ಏರಿಕೆ ಸಾಧ್ಯತೆ…

ಭಾರತದಲ್ಲಿ ಕ್ರಿಕೆಟ್ ಪ್ರಿಯರು ಹೆಚ್ಚಾಗಿರುವುದರಿಂದ ಕ್ರಿಕೆಟ್ ಟೂರ್ನಿಗಳಿಗೆ ಜಾಹೀರಾತು ನೀಡಲು ಅನೇಕ ಕಂಪನಿಗಳು ಮುಗಿ ಬೀಳುತ್ತವೆ. ಅದಕ್ಕೆ ಉದಾಹರಣೆ, ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವದ ಹಕ್ಕನ್ನು ಒಪ್ಪೊ ಮೊಬೈಲ್ ಕಂಪನಿ ₹2,199 ಕೋಟಿಗೆ ಪಡೆದುಕೊಂಡಿರುವುದು. ಹೀಗೆ ಕ್ರಿಕೆಟ್ ಟೂರ್ನಿಗೆ ಜಾಹೀರಾತು ನೀಡಲು ಕಂಪನಿಗಳು ಮುಂದಾಗಿರುವುದರಿಂದ ಸ್ಟಾರ್ ಇಂಡಿಯಾ ಕ್ರಿಕೆಟ್ ಪಂದ್ಯಗಳ ವೇಳೆ ಜಾಹೀರಾತು ಪ್ರಸಾರದಲ್ಲಿ ತನ್ನ ಲಾಭ ಪಡೆಯಲಿದೆ.

ಮೂಲಗಳಿಂದ ಬಂದಿರುವ ಮಾಹಿತಿ ಪ್ರಕಾರ ಸೋನಿ ಪಿಕ್ಚರ್ಸ್ ಐಪಿಎಲ್ 10ನೆ ಆವೃತ್ತಿಯಲ್ಲಿ 10 ಸೆಕೆಂಡ್ ಗಳ ಜಾಹೀರಾತು ಪ್ರಸಾರಕ್ಕೆ ₹ 5.5 ಲಕ್ಷದಿಂದ ₹ 5.7 ಲಕ್ಷ ನಿಗದಿ ಪಡಿಸಿತ್ತು. ಈಗ ನಾಲ್ಕು ಪಟ್ಟು ಹೆಚ್ಚು ಬಿಡ್ ಮಾಡಿ ಮಾಧ್ಯಮ ಹಕ್ಕನ್ನು ಪಡೆದಿರುವ ಸ್ಟಾರ್ ಇಂಡಿಯಾ ಐಪಿಎಲ್ ಪಂದ್ಯಗಳ ವೇಳೆ ಪ್ರತಿ 10 ಸೆಕೆಂಡ್ ಗಳ ಜಾಹೀರಾತು ಪ್ರಸಾರಕ್ಕೆ ಸುಮಾರು ₹ 15 ಲಕ್ಷ ನಿಗದಿ ಮಾಡುವ ನಿರೀಕ್ಷೆ ಇದೆ. ಇದು ಕೇವಲ ಟಿವಿ ಪ್ರಸಾರದ ಜಾಹೀರಾತಿನ ಮೊತ್ತವಾಗಿದ್ದು, ಡಿಜಿಟಲ್ ಪ್ರಸಾರದ ವೇಳೆಯೂ ಜಾಹೀರಾತಿನ ಪ್ರಸಾರದ ಮೊತ್ತದ ಪ್ರಮಾಣ ಶೇ.3ರಿಂದ- 400ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ.

ಇನ್ನು ಯೂರೋಪ್, ಅಮೆರಿಕ, ಆಸ್ಟ್ರೇಲಿಯಾ, ನ್ಯೂಜಿಲೆಂಡ್, ಆಫ್ರಿಕಾದಂತಹ ಕ್ರಿಕೆಟ್ ಪ್ರಿಯ ರಾಷ್ಟ್ರಗಳಲ್ಲಿ ಐಪಿಎಲ್ ಪ್ರಸಾರದ ಹಕ್ಕು ಹೊಂದಿರುವ ಸ್ಟಾರ್, ಅಲ್ಲಿನ ಜಾಹೀರಾತು ಮಾರುಕಟ್ಟೆಯಲ್ಲೂ ಪ್ರಾಬಲ್ಯ ಮೆರೆಯುವ ನಿರೀಕ್ಷೆ ಹೊಂದಿದೆ. ಪ್ರತಿ ಪಂದ್ಯದಲ್ಲೂ ಒಂದೊಂದು ಓವರ್ ನಂತರವೂ ಕನಿಷ್ಠ 10 ಸೆ.ಗಳ ಎರಡು ಜಾಹೀರಾತು, ಪಂದ್ಯ ಆರಂಭವಾಗುವ ಮುನ್ನ, ಇನಿಂಗ್ಸ್ ವಿರಾಮದ ವೇಳೆ ಹಾಗೂ ಪಂದ್ಯ ಮುಗಿದ ನಂತರ ನಡೆಯಲಿರುವ ವಿಶ್ಲೇಷಣೆಯ ವೇಳೆ ಅನೇಕ ಬಾರಿ ಜಾಹೀರಾತು ಪ್ರಸಾರ ಮಾಡಲಿದೆ. ವರ್ಷದಲ್ಲಿ ಎರಡು ತಿಂಗಳ ಕಾಲ ಒಟ್ಟು 60 ಪಂದ್ಯಗಳು ನಡೆಯಲಿವೆ. ಹೀಗಾಗಿ ಐಪಿಎಲ್ ಟೂರ್ನಿಯಿಂದ ಮುಂದಿನ ಐದು ವರ್ಷಗಳಲ್ಲಿ ಸ್ಟಾರ್ ಇಂಡಿಯಾ ಹಾಕಿರುವ ಬಂಡವಾಳಕ್ಕಿಂತ ಅನೇಕ ಪಟ್ಟು ಲಾಭ ತೆಗೆಯುವ ನಿರೀಕ್ಷೆ ಹೊಂದಿದೆ.

Leave a Reply