ಸ್ಫೂರ್ತಿಯ ಮಾತುಗಳಿಂದಲೇ ಹುತಾತ್ಮ ಯೋಧರರ ಕುಟುಂಬಕ್ಕಾಗಿ ಅಕ್ಷಯ್ ದೇಣಿಗೆ ಸಂಗ್ರಹಿಸಿದ್ದು ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಬಾಲಿವುಡ್ ನ ಕಿಲಾಡಿ ಎಂದೇ ಕರೆಸಿಕೊಳ್ಳುವ ನಟ ಅಕ್ಷಯ್ ಕುಮಾರ್ ಸೈನಿಕರ ಕುರಿತಾಗಿ ಹೊಂದಿರುವ ಕಾಳಜಿ ಎಂತಹದು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕಳೆದ ಏಪ್ರಿಲ್ ನಲ್ಲಿ ಹುತಾತ್ಮ ಯೋಧರ ಕುಟುಂಬಕ್ಕೆ ಆಧಾರವಾಗುವ ಉದ್ದೇಶದಿಂದ ದೇಣಿಗೆ ಸಂಗ್ರಹಿಸಲು ಕೇಂದ್ರ ಗೃಹ ಇಲಾಖೆ ಸಹಯೋಗದಲ್ಲಿ ‘ಭಾರತ್ ಕೆ ವೀರ್’ ಎಂಬ ವೆಬ್ ಸೈಟನ್ನು ಉದ್ಘಾಟಿಸಲಾಗಿತ್ತು. ಇತ್ತೀಚೆಗೆ ಅಕ್ಷಯ್ ಕುಮಾರ್ ಈ ವೆಬ್ ಸೈಟ್ ಮುಖಾಂತರ ಹುತಾತ್ಮರ ಕುಟುಂಬಕ್ಕಾಗಿ ₹ 6.5 ಕೋಟಿ ದೇಣಿಗೆ ಸಂಗ್ರಹಿಸಿ ಗಮನ ಸೆಳೆದಿದ್ದಾರೆ.

ದೇಶಭಕ್ತಿ, ಹಾಸ್ಯ, ಸಾಹಸಮಯ ಚಿತ್ರಗಳ ಮೂಲಕ ಕೋಟ್ಯಂತರ ಅಭಿಮಾನಿಗಳನ್ನು ರಂಜಿಸುತ್ತಿರುವ ಬಾಲಿವುಡ್ ನಟ ಅಕ್ಷಯ್ ಕುಮಾರ್, ನಿಜ ಜೀವನದಲ್ಲೂ ಅನೇಕರ ಪಾಲಿನ ಹಿರೋ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾಜಿ ಸೈನಿಕನ ಮಗನಾಗಿ ದೇಶ ಹಾಗೂ ದೇಶವನ್ನು ಕಾಯುತ್ತಿರುವ ಸೈನಿಕರ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ಅಕ್ಷಯ್, ಈ ಹಿಂದೆ ಅನೇಕ ಹುತಾತ್ಮ ಯೋಧರ ಕುಟುಂಬಕ್ಕೆ ಲಕ್ಷಾಂತರ ಹಣವನ್ನು ನೀಡಿ ಆಧಾರವಾಗಿ ನಿಂತಿದ್ದಾರೆ. ಈಗ ಈ ವೆಬ್ ಸೈಟ್ ಮೂಲಕ ದೇಣಿಗೆ ಸಂಗ್ರಹಿಸಿ ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾಗುವ ಪ್ರಯತ್ನ ಮಾಡಿದ್ದಾರೆ.

ಇತ್ತೀಚೆಗೆ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಭಾಗವಹಿಸಿದ್ದ ಅಕ್ಷಯ್ ಕುಮಾರ್, ಆ ಸಮಾವೇಶಕ್ಕೆ ಬಂದ ಪ್ರಮುಖ ಕಂಪನಿಗಳ ಸಿಇಒಗಳಿಗೆ ತಮ್ಮ ಭಾಷಣದ ಮೂಲಕ ಈ ವೆಬ್ ಸೈಟ್ ಹಾಗೂ ಅದರಿಂದ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಯೋಧರಿಗೆ ನೆರವಾಗುವ ಉದ್ದೇಶದ ಕುರಿತು ವಿವರಣೆ ನೀಡಿದರು. ಅಕ್ಷಯ್ ಅವರ ಮಾತುಗಳಿಂದ ಸ್ಫೂರ್ತಿಗೊಂಡ ಅನೇಕ ಸಿಇಒಗಳು ಕೆಲವೇ ನಿಮಿಷದಲ್ಲಿ ನೆರವು ನೀಡಲು ಮುಂದಾದರು.

ದೇಶ ಕಾಯುವ ವೇಳೆ ಪ್ರಾಣ ಬಿಟ್ಟ ಯೋಧನ ಕುಟುಂಬಕ್ಕೆ ₹ 15 ಲಕ್ಷ ಪರಿಹಾರ ತಲುಪುವಂತೆ ಮಾಡುವುದು ಈ ವೆಬ್ ಸೈಟಿನ ಉದ್ದೇಶ. ಈ ವೆಬ್ ಸೈಟಿನಲ್ಲಿ ಹುತಾತ್ಮ ಯೋಧರ ಪಟ್ಟಿ ಹಾಗೂ ಅವರ ವಿವರ ನೀಡಲಾಗಿದ್ದು, ಆ ಯೋಧರಿಗೆ ಪೂರ್ಣ ಪ್ರಮಾಣದ ನೆರವು ಸಿಗುವವರೆಗೂ ಯೋಧರ ಹೆಸರು ಈ ವೆಬ್ ಸೈಟಿನಲ್ಲಿ ಪ್ರಕಟವಾಗಿರುತ್ತದೆ. ಆರ್ಥಿಕ ನೆರವು ತಲುಪಿದ ನಂತರ ಆ ಯೋಧನ ಹೆಸರನ್ನು ಈ ವೆಬ್ ಸೈಟಿನಿಂದ ತೆಗೆದುಹಾಕಲಾಗುವುದು. ಸದ್ಯಕ್ಕೆ ಈ ವೆಬ್ ಸೈಟಿನಲ್ಲಿ ದೇಶಕ್ಕಾಗಿ ಪ್ರಾಣ ಬಿಟ್ಟಿರುವ 112 ಹುತಾತ್ಮ ಯೋಧರ ಹೆಸರಿದೆ.

ಈ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್ ಆಡಿದ ಮಾತುಗಳು ಹೀಗಿವೆ… ‘ಈ ವೆಬ್ ಸೈಟಿನಲ್ಲಿರುವ ಹುತಾತ್ಮ ಯೋಧರು ಭಾರತದ ವಿವಿಧ ರಾಜ್ಯಗಳಿಗೆ ಸೇರಿದ್ದಾರೆ. ಈ ಸಭೆಯಲ್ಲಿ ಭಾಗವಹಿಸಿರುವ ಒಬ್ಬೊಬ್ಬ ಸಿಇಒ ಅಥವಾ ಉದ್ದಿಮೆದಾರರು ಒಂದೊಂದು ರಾಜ್ಯದ ಯೋಧರ ಕುಟುಂಬಕ್ಕೆ ನೆರವಾದರೂ ಈ ವೆಬ್ ಸೈಟಿನಲ್ಲಿರುವ ಹುತಾತ್ಮ ಯೋಧರ ಹೆಸರು ಸಂಪೂರ್ಣವಾಗಿ ಮರೆಯಾಗಲಿದೆ.

ಭಾರತ್ ಕೆ ವೀರ್ ಕಾರ್ಯಕ್ರಮದ ಬಗ್ಗೆ ಮಾತನಾಡಲು ಈ ವೇದಿಕೆಯನ್ನು ಆಯ್ಕೆ ಮಾಡಿಕೊಳ್ಳಲು ಕಾರಣವಿದೆ. ಇಲ್ಲಿರುವ ಪ್ರತಿಯೊಬ್ಬರು ಸಮಾಜದಲ್ಲಿ ಉನ್ನತ ಸ್ಥಾನದಲ್ಲಿರುವವರಾಗಿದ್ದಾರೆ. ಅಲ್ಲದೆ ಅವರಿಗೆ ಸಂಪನ್ಮೂಲವು ಹೆಚ್ಚಾಗಿದೆ. ಇವರು ನಮ್ಮ ಸೈನಿಕರ ನೆರವಿಗೆ ಬಾರದಿದ್ದರೆ ಮತ್ಯಾರು ಬರುತ್ತಾರೆ?’

ಅಕ್ಷಯ್ ಕುಮಾರ್ ಅವರ ಈ ಮಾತುಗಳಿಂದ ಪ್ರೇರೇಪಿತರಾದ ಸಿಇಒಗಳು ಸ್ಥಳದಲ್ಲೇ ತಮ್ಮ ಕೈಲಾದಷ್ಟು ಆರ್ಥಿಕ ನೆರವು ನೀಡಲು ಮುಂದಾದರು. ಇದರಿಂದ ಒಟ್ಟು ₹ 6.5 ಕೋಟಿ ಹಣ ಸಂಗ್ರಹವಾಯಿತು.

ಪ್ರತಿ ಯೋಧರಿಗೆ ₹ 15 ಲಕ್ಷ ಆರ್ಥಿಕ ನೆರವು ಎಂದರೆ, ಸುಮಾರು 43 ಹುತಾತ್ಮ ಯೋಧರ ಕುಟುಂಬಕ್ಕೆ ದೇಣಿಗೆ ಸಂಗ್ರಹಿಸಿದಂತಾಯಿತು. ಅಕ್ಷಯ್ ಕುಮಾರ್ ಹುತಾತ್ಮ ಸೈನಿಕರ ಕುರಿತು ಹೊಂದಿರುವ ಈ ಕಾಳಜಿಯನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ.

Leave a Reply