ಗೌರಿ ಹತ್ಯೆ ಪ್ರಕರಣ: ಎಸ್ಐಟಿಯಿಂದ ತನಿಖೆ, ಬಿಜೆಪಿ- ಆರೆಸ್ಸೆಸ್ ದೂಷಿಸಿದ ರಾಹುಲ್

ಡಿಜಿಟಲ್ ಕನ್ನಡ ಟೀಮ್:

ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ರಾಜ್ಯ ಸೇರಿದಂತೆ ದೇಶದ ವಿವಿಧ ಕಡೆಗಳಲ್ಲಿ ವ್ಯಾಪಕ ಪ್ರತಿಭಟನೆ ನಡೆಯುತ್ತಿದ್ದು, ಇದರ ಬೆನ್ನಲ್ಲೇ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ವಹಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ.

ಬುಧವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಇದೊಂದು ಸಂಘಟಿತ ಪೂರ್ವ ನಿಯೋಜಿತ ಹತ್ಯೆ’ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಗೌರಿ ಅವರ ಹತ್ಯೆಯ ನಂತರ ಅವರ ಸಹೋದರ ಇಂದ್ರಜಿತ್ ಲಂಕೇಶ್ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದರು. ಇನ್ನು ಗೌರಿ ಅವರ ಕೊಲೆಯನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಕೆಲವರು ಸಂಭ್ರಮಿಸಿ ತಮ್ಮ ಅಬಿಪ್ರಾಯ ಮಂಡಿಸಿದ್ದರು. ಈ ಎಲ್ಲಾ ಬೆಳವಣಿಗೆಗಳ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಜತೆ ಚರ್ಚೆ ನಡೆಸಿದ ಮುಖ್ಯಮಂತ್ರಿಗಳು, ಐಜಿ ನೇತೃತ್ವದ ವಿಶೇಷ ತನಿಖಾ ತಂಡದಿಂದ ಈ ಪ್ರಕರಣದ ವಿಚಾರಣೆ ನಡೆಸಲು ನಿರ್ಧರಿಸಿದೆ.

‘ಈ ಪ್ರಕರಣದ ಕುರಿತಂತೆ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹಾಗೂ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದೇನೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುವಂತೆ ಸೂಚನೆ ನೀಡಿದ್ದೇನೆ. ತನಿಖೆ ಇನ್ನು ಪ್ರಾಥಮಿಕ ಹಂತದಲ್ಲಿರುವುದರಿಂದ ಈ ಪ್ರಕರಣದ ಬಗ್ಗೆ ಈಗಲೇ ಏನು ಹೇಳಲು ಸಾಧ್ಯವಿಲ್ಲ. ಗೌರಿ ಅವರು ತಮಗೆ ಜೀವ ಬೆದರಿಕೆ ಇರುವ ಬಗ್ಗೆ ಯಾವುದೇ ದೂರು ನೀಡಿರಲಿಲ್ಲ. ಅವರ ಮನೆಯ ಬಳಿ ನಾಲ್ಕು ಸಿಸಿಟಿವಿಗಳಿದ್ದು, ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಸಿಬಿಐಗೆ ನೀಡಲು ನಮಗೆ ಯಾವುದೇ ತಕರಾರಿಲ್ಲ. ಆದರೆ ಸದ್ಯಕ್ಕೆ ಈ ತನಿಖೆಯನ್ನು ಎಸ್ಐಟಿ ನಡೆಸಲು ಎಂದು ತೀರ್ಮಾನಿಸಿದ್ದೇವೆ.

ಇನ್ನು ರಾಜ್ಯದಲ್ಲಿರುವ ಇತರೆ ಪ್ರಗತಿಪರ ಚಿಂತಕರಿಗೆ ಸೂಕ್ತ ಪೊಲೀಸ್ ರಕ್ಷಣೆ ನೀಡುವಂತೆಯೂ ಸೂಚನೆ ನೀಡಿದ್ದೇನೆ. ಫೇಸ್ ಬುಕ್ಕಿನಲ್ಲಿ ಗೌರಿ ಅವರ ಬಗ್ಗೆ ಅವಹೇಳನಕಾರಿಯಾಗಿ ಪೋಸ್ಟ್ ಹಾಕಿರುವವರನ್ನು ವಿಚಾರಣೆ ನಡೆಸಲಾಗುತ್ತಿದೆ. ತನಿಖೆಯನ್ನು ಚುರುಕುಗೊಳಿಸಲಾಗಿದ್ದು, ಆದಷ್ಟು ಬೇಗ ಕೊಲೆಗಾರರನ್ನು ಸೆರೆ ಹಿಡಿಯುತ್ತೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಇನ್ನು ಗೌರಿ ಲಂಕೇಶ್ ಅವರ ಹತ್ಯೆಯನ್ನು ಖಂಡಿಸಿ ಬೆಂಗಳೂರಿನ ಟೌನ್ ಹಾಲ್ ಸೇರಿದಂತೆ ವಿವಿಧೆಡೆಗಳಲ್ಲಿ ಹಲವು ಸಂಘಟನೆಗಳು ಪ್ರತಿಭಟನೆಗೆ ಮುಂದಾಗಿವೆ. ಇನ್ನು ದೆಹಲಿ ಹಾಗೂ ಚೆನ್ನೈನಲ್ಲೂ ಪ್ರತಿಭಟನೆಗಳು ನಡೆದಿವೆ.

ಗೌರಿ ಅವರ ಹತ್ಯೆಯನ್ನು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಖಂಡಿಸಿದ್ದು, ಈ ಪ್ರಕರಣದ ಕುರಿತು ಸಿಎಂ ಸಿದ್ದರಾಮಯ್ಯ ಜತೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಇನ್ನು ಈ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿದ ರಾಹುಲ್ ಗಾಂಧಿ, ‘ಈ ಪ್ರಕರಣದ ಕುರಿತಂತೆ ಮುಖ್ಯಮಂತ್ರಿಗಳ ಜತೆ ಮಾತನಾಡಿದ್ದು, ಕೊಲೆಗಾರರನ್ನು ಪತ್ತೆಹಚ್ಚಿ ಶಿಕ್ಷೆ ನೀಡುವಂತೆ ಸೂಚಿಸಿದ್ದೇವೆ. ದೇಶದಲ್ಲಿ ಬಿಜೆಪಿ- ಆರೆಸ್ಸೆಸ್ ಸಿದ್ಧಾಂತದ ವಿರುದ್ಧ ಯಾರು ಮಾತನಾಡುತ್ತಾರೋ ಅವರ ಮೇಲೆ ಒತ್ತಡಹಾಕಲಾಗುತ್ತಿದ್ದು, ಹತ್ಯೆಯನ್ನು ಮಾಡಲಾಗುತ್ತಿದೆ. ದೇಶದಲ್ಲಿ ಕೇವಲ ಒಂದು ಧ್ವನಿಯನ್ನು ಮಾತ್ರ ಎತ್ತಲು ಅವಕಾಶ ಮಾಡಿಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ’ ಎಂದು ಹೇಳುವ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಹಾಗೂ ಆರೆಸ್ಸೆಸ್ ಅನ್ನು ದೂಷಿಸಿದ್ದಾರೆ.

Leave a Reply