ಗೌರಿ ಲಂಕೇಶ್ ಹತ್ಯೆಯಲ್ಲಿ ಯಾರ ಕೈವಾಡ? ನಕ್ಸಲರದೇ..? ಹಿಂದುತ್ವವಾದಿಗಳದೇ..?

ಡಿಜಿಟಲ್ ಕನ್ನಡ ವಿಶೇಷ:

ಹಿರಿಯ ಪತ್ರಕರ್ತೆ, ಪ್ರಗತಿಪರ ಚಿಂತಕಿ ಗೌರಿ ಲಂಕೇಶ್ ಅವರು ನಕ್ಸಲರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮಾಡಿದ್ದ ಪ್ರಯತ್ನಗಳು ಹಾದಿ ತಪ್ಪಿ ಪ್ರತಿಕಾರಕ್ಕಾಗಿ ಈ ಹತ್ಯೆ ನಡೆದಿದೆಯೇ ಅಥವಾ ಅವರು ತೀವ್ರವಾಗಿ ವಿರೋಧಿಸುತ್ತಿದ್ದ ಹಿಂದುತ್ವವಾದಿಗಳಿಂದ ಈ ಕಗ್ಗೊಲೆಯಾಗಿದೆಯೇ?

ಗೌರಿ ಲಂಕೇಶ್ ಹತ್ಯೆ ಬೆನ್ನಲ್ಲೇ ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ ಇದು. ತನಿಖೆಗಾಗಿ ರಚಿತವಾಗಿರುವ ವಿಶೇಷ ತನಿಖಾ ತಂಡ (ಎಸ್ಐಟಿ) ಕೂಡ ಇದೇ ಕೋನದಲ್ಲಿ ವಿಚಾರಣೆ ನಡೆಸುತ್ತಿದೆ.

ಹಾಗೆ ನೋಡಿದರೆ ಮೊದಲಿಂದಲೂ ಎಡಪಂಥೀಯ ಚಿಂತನೆಗಳಿಂದ ಪ್ರಗತಿಪರರ ವಲಯದಲ್ಲಿ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಅವರು ಇತ್ತೀಚೆಗೆ ಆ ಚಟುವಟಿಕೆಗಳಲ್ಲಿ ಅಷ್ಟೇನೂ ಸಕ್ರಿಯರಾಗಿರಲಿಲ್ಲ. ಪತ್ರಿಕೆ ನಿರ್ವಹಣೆ, ವೈಯಕ್ತಿಕ ಸಮಸ್ಯೆಗಳಿಂದ ಸಾಕಷ್ಟು ಹೈರಾಣಾಗಿದ್ದರು.

ಆದರೆ ಈ ಮೊದಲು ಕೋಮು ಸೌಹಾರ್ದ ವೇದಿಕೆ, ಪ್ರಗತಿಪರ ವೇದಿಕೆ ಮೂಲಕ ನಕ್ಸಲ್ ವಾದಿಗಳಾದ ಸಿರಿಮನೆ ನಾಗರಾಜ್, ನೂರ್ ಶ್ರೀಧರ್ ಮತ್ತಿತರರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಶ್ರಮಿಸಿದ್ದರು. ಇದು ನಕ್ಸಲರಲ್ಲಿ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿತ್ತು. ಬಿ.ಜಿ. ಕೃಷ್ಣಮೂರ್ತಿ ನೇತೃತ್ವದ ನಕ್ಸಲ್ ಗುಂಪು ಗೌರಿ ಲಂಕೇಶ್ ಪ್ರಯತ್ನದ ಬಗ್ಗೆ ಆಕ್ರೋಶಗೊಂಡಿತ್ತು. ಅವರು ನಕ್ಸಲ್ ಹೋರಾಟ ದುರ್ಬಲಗೊಳಿಸುತ್ತಿದ್ದಾರೆ ಎಂಬ ನಿಲುವಿಗೆ ಬಂದಿತ್ತು. ಅಲ್ಲದೆ ಗೌರಿ ಅವರ ಈ ಪ್ರಯತ್ನದ ಹಿಂದೆ ಲಾಭ ಮಾಡಿಕೊಳ್ಳುವ ದುರುದ್ದೇಶವನ್ನು ಸಂಶಯಿಸಿತ್ತು.

ಹಿಂದೆ ಗೌರಿ ಅವರು ನಕ್ಸಲ್ ನಾಯಕ ಸಾಕೇತ್ ರಾಜನ್ ಅವರನ್ನು ಸಂದರ್ಶನ ಮಾಡಿ ಫೋಟೋ ಸಮೇತ ತಮ್ಮ ಸಂಪಾದಕತ್ವದ ಲಂಕೇಶ್ ಪತ್ರಿಕೆಯಲ್ಲಿ ಪ್ರಕಟಿಸಿದ್ದರು. ಇದಾದ ನಂತರ ಸಾಕೇತ್ ರಾಜನ್ ಪೊಲೀಸರ ಗುಂಡಿಗೆ ಬಲಿಯಾಗಿದ್ದರು. ಗೌರಿ ಅವರು ಫೋಟೋ ಪ್ರಕಟಿಸಿದ್ದರಿಂದಲೇ ಪೊಲೀಸರಿಗೆ ಅವರ ಗುರುತು ಪತ್ತೆ ಹಚ್ಚಲು ಸಾಧ್ಯವಾಯಿತು. ಇದರಿಂದಾಗಿಯೇ ಅವರ ಹತ್ಯೆಯಾಯಿತು ಎಂದೂ ನಕ್ಸಲರ ಒಂದು ಗುಂಪು ಗೌರಿ ಲಂಕೇಶ್ ಅವರ ಮೇಲೆ ಕತ್ತಿ ಮಸೆಯುತ್ತಿತ್ತು.

ಕಳೆದೆರಡು ತಿಂಗಳಿಂದಲೂ ಗೌರಿ ಅವರಿಗೆ ಅನಾಮಧೇಯ ವ್ಯಕ್ತಿಗಳು ಕರೆ ಮಾಡಿ ಪ್ರಾಣ ಬೆದರಿಕೆ ಒಡ್ಡಿದ್ದರು. ಈ ಬಗ್ಗೆ ಗೌರಿ ಅವರೇ ಆಪ್ತರಲ್ಲಿ ಹೇಳಿಕೊಂಡಿದ್ದಾರೆ. ಅಲ್ಲದೇ ಟ್ವೀಟ್ ಕೂಡ ಮಾಡಿದ್ದಾರೆ. ಹೀಗಾಗಿ ಈ ಹತ್ಯೆಯಲ್ಲಿ ನಕ್ಸಲರ ಕೈವಾಡವೇನಾದರೂ ಇದೆಯೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆದರೆ ಇಲ್ಲೊಂದು ವಿಚಾರ. ನಕ್ಸಲರು ಯಾವುದೇ ಹತ್ಯೆ ಮಾಡಿದರೂ ಅಲ್ಲಿ ಕರಪತ್ರ ಬಿಡುವುದು, ಹತ್ಯೆಯ ಹೊಣೆಯನ್ನು ತಾವೇ ಹೊರುವುದು ಬಹುತೇಕ ಸಂದರ್ಭಗಳಲ್ಲಿ ನಡೆದುಕೊಂಡು ಬಂದಿದೆ. ಅವರು ಕದ್ದುಮುಚ್ಚಿ ಯಾವುದೇ ಅನಾಹುತ ಮಾಡುವುದಿಲ್ಲ. ಸರಕಾರ ಹಾಗೂ ಸಮಾಜಕ್ಕೆ ಎಚ್ಚರಿಕೆ ಸಂದೇಶ ನೀಡುವುದು ವಾಡಿಕೆ. ಆದರೆ ಗೌರಿ ಹತ್ಯೆಯಲ್ಲಿ ಇದಾವುದೂ ನಡೆದಿಲ್ಲ. ಯಾವುದೇ ಸುಳಿವನ್ನೂ ನೀಡಿಲ್ಲ. ಆದರೂ ಈ ಪ್ರಕರಣದಲ್ಲಿ ನಕ್ಸಲರ ಕೈವಾಡವಿರುವ ಸಾಧ್ಯತೆಗಳು ದಟ್ಟವಾಗಿರುವ ಕಾರಣ ತನಿಖೆ ನಡೆಸಲಾಗುತ್ತಿದೆ.

ಆದರೆ ಈ ಮೊದಲು ಇದೇ ಮಾದರಿಯಲ್ಲಿ ನಡೆದಿರುವ ಪ್ರಗತಿಪರ ಚಿಂತಕರಾದ ಮಹಾರಾಷ್ಟ್ರದ ಗೋವಿಂದ ಪಾನ್ಸರೆ, ನರೇಂದ್ರ ದಾಬೋಲ್ಕರ್, ಕರ್ನಾಟಕದ ಪ್ರೊ. ಎಂ.ಎಂ. ಕಲಬುರ್ಗಿ ಹತ್ಯೆಯಲ್ಲಿ ಕೈವಾಡ ಶಂಕಿಸಲಾಗಿರುವ ಹಿಂದು ಮೂಲಭೂತವಾದಿಗಳು ಯಾವುದೇ ಸುಳಿವು ಬಿಟ್ಟು ಕೊಟ್ಟಿಲ್ಲ. ಬಹಳ ನಾಜೂಕಾಗಿ ಲವಲೇಶ ಕುರುಹು ಇಲ್ಲದಂತೆ ಹತ್ಯೆ ಮಾಡಿದ್ದಾರೆ. ಅವರಿಗೆ ತಾವ್ಯಾರೆಂದು ಹೇಳಿಕೊಳ್ಳುವುದು ಬೇಕಿಲ್ಲ. ಆ ಮೂಲಕ ಆಳ್ವಿಕೆಯಲ್ಲಿರುವ ತಮ್ಮವರಿಗೆ ಮುಜುಗರ ತರುವುದು, ಇಕ್ಕಟ್ಟಿಗೆ ಸಿಕ್ಕಿಸುವುದು, ಪ್ರತಿಪಕ್ಷಗಳ ಕೈಗೆ ಅಸ್ತ್ರ ಕೊಡುವುದು ಇದ್ಯಾವುದೂ ಅವರಿಗೆ ಬೇಕಿಲ್ಲ. ಹಿಂದುತ್ವ ವಿರೋಧಿಗಳನ್ನು ನಿವಾರಿಸಬೇಕು ಎಂಬುದಷ್ಟೇ ಅವರ ಉದ್ಧೇಶ. ಕರಪತ್ರ ಹಂಚುವುದು, ಹೊಣೆ ಹೊರುವುದು, ಎಚ್ಚರಿಕೆ ಕೊಡುವುದು ಇದ್ಯಾವುದನ್ನೂ ಮಾಡುವುದಿಲ್ಲ. ಒಂದು ರೀತಿ ‘ಗುಪ್ತಗಾಮಿನಿ ಹಂತಕ ಪಡೆ’ಯಾಗಿಯೇ ಕಾರ್ಯ ನಿರ್ವಹಿಸುತ್ತಿದೆ. ಅದೂ ಇತ್ತೀಚೆಗೆ ಹೆಚ್ಚು ಕ್ರಿಯಾಶೀಲವಾಗಿದೆ. ಪಾನ್ಸರೆ, ದಾಬೋಲ್ಕರ್, ಕಲಬುರ್ಗಿ ಈ ಎಲ್ಲ ಹತ್ಯೆಗಳೂ ಒಂದೇ ಮಾದರಿಯಲ್ಲಿ ನಡೆದಿವೆ. ಹತ್ಯೆಯಾದವರೆಲ್ಲರೂ ಒಂದೇ ವಿಚಾರಧಾರೆಯವರು, ಸೈದ್ಧಾಂತಿಕ ನಿಲುವಿನವರು. ಈಗ ಹತ್ಯೆಯಾಗಿರುವ ಗೌರಿ ಲಂಕೇಶ್ ಕೂಡ ಅದೇ ಸಾಲಿಗೆ ಸೇರಿದ್ದಾರೆ. ಅವರ ಹತ್ಯೆ ಕೂಡ ಅದೇ ಮಾದರಿಯಲ್ಲಿ ನಡೆದಿದೆ. ಹೀಗಾಗಿ ಇದರಲ್ಲೂ ಹಿಂದು ಮೂಲಭೂತವಾದಿಗಳ ಕೈವಾಡ ಇದೆಯೇ ಎಂಬ ಬಗ್ಗೆ ತನಿಖಾ ತಂಡ ವಿಚಾರಣೆ ನಡೆಸುತ್ತಿದೆ.

Leave a Reply