1993 ಮುಂಬೈ ಸ್ಫೋಟ: ಇಬ್ಬರಿಗೆ ಗಲ್ಲು, ಅಬು ಸಲೀಂ- ಖರಿಮುಲ್ಲಾ ಖಾನ್ ಗೆ ಜೀವಾವಧಿ ಶಿಕ್ಷೆ

ಡಿಜಿಟಲ್ ಕನ್ನಡ ಟೀಮ್:

1993 ರಲ್ಲಿ ಮುಂಬೈ ನಗರದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 24 ವರ್ಷಗಳ ನಂತರ ಅಪರಾಧಿಗಳಿಗೆ ಶಿಕ್ಷೆ ಪ್ರಕಟವಾಗಿದೆ. ಪ್ರಕರಣದ ಐವರು ಅಪರಾಧಿಗಳ ಪೈಕಿ ತಹೆರ್ ಮರ್ಚೆಂಟ್ ಮತ್ತು ಫಿರೋಜ್ ಖಾನ್ ಗೆ ಗಲ್ಲು ಶಿಕ್ಷೆ ಹಾಗೂ ಅಬು ಸಲೀಂ ಮತ್ತು ಖರಿಮುಲ್ಲಾ ಖಾನ್ ಗೆ ಟಾಡಾ ನ್ಯಾಯಾಲಯ ಜೀವಾವಧಿ ಶಿಕ್ಷೆ ನೀಡಿದೆ.

1993ರ ಮಾರ್ಚ್ 12 ರಂದು ಮುಂಬೈನಲ್ಲಿ 12 ಕಾರ್ ಬಾಂಬ್ ಗಳನ್ನು ಸ್ಫೋಟಿಸಲಾಗಿತ್ತು. ಈ ದಾಳಿಯಿಂದ 257 ಜನ ಮೃತಪಟ್ಟರೆ 713 ಮಂದಿ ಗಾಯಗೊಂಡಿದ್ದರು. ಕಳೆದ ಜೂನ್ 16ರಂದು ಈ ನಾಲ್ವರ ವಿರುದ್ಧ ಕೊಲೆ, ಭಯೋತ್ಪಾದನೆಯಲ್ಲಿ ಭಾಗಿಯಾಗಿದ್ದು, ಇವರನ್ನು ಅಪರಾಧಿ ಎಂದು ನ್ಯಾಯಾಲಯ ಆದೇಶ ನೀಡಿತ್ತು. ಇನ್ನು ಮತ್ತೊಬ್ಬ ಆರೋಪಿ ಸಿದಿಕ್ಕಿ ಭಯೋತ್ಪಾದನೆಗೆ ಸಹಕಾರ ನೀಡಿದ ಆರೋಪದ ಮೇಲೆ ಅಪರಾಧಿ ಎಂದು ಘೋಷಿಸಲಾಗಿತ್ತು. ಹೀಗಾಗಿ ಸಿದ್ದಿಕ್ಕಿಗೆ 10 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.

ಪ್ರಕರಣದ ವಿಚಾರಣೆವೇಳೆ ಸಿಬಿಐ ಪರ ವಕೀಲರಾದ ದೀಪಕ್ ಸಾಳ್ವಿ ಅವರು, ಮರ್ಚೆಂಟ್, ಫಿರೋಜ್ ಹಾಗೂ ಕರಿಮುಲ್ಲಾ ಅವರಿಗೆ ಗಲ್ಲು, ಸಲೀಮ್ ಮತ್ತು ಸಿದಿಕ್ಕಿಗೆ ಜೀವಾವಧಿ ಶಿಕ್ಷೆ ನೀಡುವಂತೆ ಮನವಿ ಮಾಡಿದ್ದರು. ಅಬು ಸಲೀಂ ಅವರಿಗೂ ಗಲ್ಲು ಶಿಕ್ಷೆ ನೀಡುವ ಅವಕಾಶ ಇತ್ತಾದರೂ 2005ರಲ್ಲಿ ಅಬು ಸಲೇಮ್ ನನ್ನು ಪೊರ್ಚುಗಲ್ ನಿಂದ ಹಸ್ತಾಂತರದ ಮೂಲಕ ವಶಕ್ಕೆ ಪಡೆಯಲಾಗಿತ್ತು. ಈ ವೇಳೆ ಅಬು ಸಲೇಮ್ ಗೆ ಗಲ್ಲು ಶಿಕ್ಷೆ ನೀಡದಂತೆ ಲಿಸ್ಬನ್ ಕೋರ್ಟ್ ಷರತ್ತು ಹಾಕಿತ್ತು. ಹೀಗಾಗಿ ಅಬು ಸಲೇಮ್ ಗೆ ಜೀವಾವಧಿ ಶಿಕ್ಷೆ ನೀಡಲಾಗಿದೆ.

ಇನ್ನು ಈ ಪ್ರಕರಣದ ಪಿತೂರಿಯ ಪ್ರಮುಖ ರೂವಾರಿ ಮುಸ್ತಾಫ ದೊಸ್ಸಾಗೂ ಗಲ್ಲಿ ಶಿಕ್ಷೆಯಾಗಬೇಕು ಎಂದು ಸಾಳ್ವಿ ವಾದ ಮಂಡಿಸಿದರು. ಆದರೆ ನ್ಯಾಯಾಲಯ ಈತನ ಶಿಕ್ಷೆಯ ಪ್ರಮಾಣ ಪ್ರಕಟವಾಗಿಲ್ಲ. 11 ವರ್ಷಗಳ ಕಾಲ ಆರೋಪಿಯಾಗಿ ಜೈಲಿನಲ್ಲಿದ್ದ ಕ್ವಾಯುಮ್ ಶೇಖ್ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನಿರ್ದೋಷಿ ಎಂದು ತೀರ್ಪು ಪ್ರಕಟವಾಗಿತ್ತು.

Leave a Reply