ಒಂದು ತಾಸು ದೂರವನ್ನು 6 ನಿಮಿಷದಲ್ಲಿ ಕ್ರಮಿಸುವ ಹೈಪರ್ ಲೂಪ್ ತಂತ್ರಜ್ಞಾನ ಭಾರತಕ್ಕೆ ಬರುತ್ತಿದೆ ಗೊತ್ತೆ?

ಡಿಜಿಟಲ್ ಕನ್ನಡ ಟೀಮ್:

ಸದ್ಯದಲ್ಲೇ ಹೈಪರ್ ಲೂಪ್ ಸಂಚಾರ ವ್ಯವಸ್ಥೆ ಭಾರತಕ್ಕೆ ಕಾಲಿಡುತ್ತಿದೆ. ಈ ಸಂಚಾರಿ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಆಂಧ್ರ ಪ್ರದೇಶ ಸರ್ಕಾರ ಹೈಪರ್ ಲೂಪ್ ಟ್ರಾನ್ಸ್ ಪೊರ್ಟ್ ಟೆಕ್ನಾಲಜಿಸ್ ಕಂಪನಿ ಜತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಅದರೊಂದಿಗೆ ಐದನೇ ಮಾದರಿಯ ಸಂಚಾರ ವ್ಯವಸ್ಥೆ ಈಗ ಭಾರತಕ್ಕೆ ಕಾಲಿಡುತ್ತಿದೆ.

ಆಂಧ್ರ ಪ್ರದೇಶದ ಭವಿಷ್ಯದ ರಾಜಧಾನಿ ಎಂದೇ ಕರೆಯಲ್ಪಡುತ್ತಿರುವ ಅಮರಾವತಿ ಹಾಗೂ ವಿಜಯವಾಡ ನಡುವೆ ಈ ಹೈಪರ್ ಲೂಪ್ ಸಂಚಾರಿ ವ್ಯವಸ್ಥೆ ಕಲ್ಪಿಸಲು ಸರ್ಕಾರ ನಿರ್ಧರಿಸಿದೆ. ಅತ್ಯಾಧುನಿಕ ಈ ಸಂಚಾರಿ ವ್ಯವಸ್ಥೆಯಿಂದ ಸಾಕಷ್ಟು ಅನುಕೂಲವಾಗಲಿದ್ದು, ಅಮರಾವತಿಯಿಂದ ವಿಜಯವಾಡಕ್ಕೆ ತಲುಪಲು ರಸ್ತೆ ಸಾರಿಗೆ ಮೂಲಕ ಒಂದು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ. ಆದರೆ ಈ ಹೈಪರ್ ಲೂಪ್ ಸಾರಿಗೆಯಿಂದ ಕೇವಲ 6 ನಿಮಿಷದಲ್ಲಿ ಅಮರಾವತಿಯಿಂದ ವಿಜಯವಾಡಕ್ಕೆ ತಲುಪಬಹುದಾಗಿದೆ.

ಸದ್ಯಕ್ಕೆ ಈ ಯೋಜನೆಯನ್ನು ಸಾರ್ವಜನಿಕ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರುವ ಹೈಪರ್ ಲೂಪ್ ಟ್ರಾನ್ಸ್ ಪೋರ್ಟ್ ಟೆಕ್ನಾಲಜೀಸ್ ಸಹ ಸಂಸ್ಥಾಪಕ ಬಿಬೊಪ್ ಗ್ರೇಷ್ಟಾ ಹೇಳೋದಿಷ್ಟು…

‘ಆಂಧ್ರ ಪ್ರದೇಶದ ಜತೆಗೆ ಈ ಒಪ್ಪಂದ ಮಾಡಿಕೊಳ್ಳುವ ಮೂಲಕ ಹೈಪರ್ ಲೂಪ್ ಸಾರಿಗೆ ತಂತ್ರಜ್ಞಾನವನ್ನು ಭಾರತಕ್ಕೆ ತರುತ್ತಿರುವುದಕ್ಕೆ ಬಹಳ ಸಂತೋಷವಾಗಿದೆ. ಈ ಯೋಜನೆ ಮೂಲಕ ಆಂಧ್ರ ಪ್ರದೇಶ ಜನರಿಗೆ ಅತ್ಯುನ್ನತ ಗುಣಮಟ್ಟದ ಸೇವೆ ನೀಡಲಿದ್ದೇವೆ.’

ಈ ಯೋಜನೆಯ ಮೊದಲ ಹಂತದ ಅಧ್ಯಯನಕ್ಕೆ ಆರು ತಿಂಗಲ ಕಾಲ ಅಗತ್ಯವಿದ್ದು, ಅಕ್ಟೋಬರ್ ನಲ್ಲಿ ಆರಂಭವಾಗಲಿದೆ. ಆಂಧ್ರ ಪ್ರದೇಶ ಸರ್ಕಾರ ಈ ಯೋಜನೆಯಿಂದಾಗಿ ಸುಮಾರು 2500 ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆಯಲ್ಲಿದೆ.

Leave a Reply