ಗಣಪತಿ ಆತ್ಮಹತ್ಯೆ ಸಿಬಿಐ ತನಿಖೆಗೆ ಕೊಡದ ಸಿದ್ದು ಸರಕಾರ ಗೌರಿ ಹತ್ಯೆ ವಹಿಸಲು ಸಿದ್ಧವಾಗಿರುವುದು ಏಕೆ?

ಡಿಜಿಟಲ್ ಕನ್ನಡ ವಿಶೇಷ:

ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ನಿರಾಕರಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನೂ ಸಿಬಿಐ ತನಿಖೆಗೆ ವಹಿಸಲು ಉತ್ಸುಕರಾಗಿರುವುದರ ಹಿಂದಿನ ಮರ್ಮವಾದರೂ ಏನು?

ಈ ಪ್ರಶ್ನೆಗೆ ಉತ್ತರ ಬಹಳ ಸುಲಭ. ಇಲ್ಲಿರುವುದು ಬರೀ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರ ಅಷ್ಟೇ.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದರಿಂದ ಅವರಿಗೆ ರಾಜಕೀಯವಾಗಿ ಯಾವುದೇ ನಷ್ಟ ಇಲ್ಲ. ಮೇಲಾಗಿ ಅನಗತ್ಯ ವಿವಾದ ಮೈಮೇಲೆ ಎಳೆದುಕೊಳ್ಳುವುದು ತಪ್ಪುತ್ತದೆ. ಇದೊಂದು ರೀತಿ ಜಾಣನಡೆ.

ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವುದರಿಂದ ಸಿದ್ದರಾಮಯ್ಯ ಅವರು ರಾಜಕೀಯವಾಗಿ ಕಳೆದುಕೊಳ್ಳುವುದು ಏನೂ ಇಲ್ಲ. ಒಂದೊಮ್ಮೆ ಈ ಹತ್ಯೆಯಲ್ಲಿ ನಕ್ಸಲರ ಕೈವಾಡವಿದ್ದರೂ ಅದರಿಂದ ಕಾಂಗ್ರೆಸ್ಸಿಗಾಗಲಿ ಅಥವಾ ತಮ್ಮ ಸರಕಾರಕ್ಕಾಗಲಿ ಯಾವುದೇ ನಷ್ಟ ಇಲ್ಲ. ಅದೇ ರೀತಿ ಒಂದೊಮ್ಮೆ ಕೋಮುವಾದಿಗಳೇನಾದರೂ ಹತ್ಯೆ ಸಂಚು ರೂಪಿಸಿದ್ದರೆ, ಚುನಾವಣೆ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಅದರಿಂದ ರಾಜಕೀಯವಾಗಿ ಲಾಭವೇ ಹೊರತು ಹಾನಿಯೇನೂ ಇಲ್ಲ. ಇದನ್ನು ಚುನಾವಣೆ ಪ್ರಚಾರದ ವಸ್ತುವನ್ನಾಗಿಯೂ ಮಾಡಿಕೊಳ್ಳಬಹುದು. ಬಿಜೆಪಿಯನ್ನು ಬೇಕೆಂದ ಹಾಗೆ ತಿವಿಯಬಹುದು. ಹೀಗಾಗಿ ಹಿಂದೆ-ಮುಂದೆ ನೋಡದೆ  ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಮುಕ್ತ ಮನಸ್ಸು ಹೊಂದಿರುವುದಾಗಿ ಹೇಳಿದ್ದಾರೆ. ಗೌರಿ ಕುಟುಂಬ ಸದಸ್ಯರು ಸಿಬಿಐ ತನಿಖೆ ಪ್ರಸ್ತಾಪ ಮಾಡುತ್ತಿದ್ದಂತೆ ಸಿದ್ದರಾಮಯ್ಯನವರೂ ಅದಕ್ಕೆ ಸಿದ್ಧವಿರುವುದಾಗಿ ಹೇಳಿ ಕೈತೊಳೆದುಕೊಂಡಿದ್ದಾರೆ. ಬೇರೆಯವರೂ ಉಸಿರೆತ್ತದಂತೆ ಮಾಡಿದ್ದಾರೆ.

ಆದರೆ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿದ್ದರಾಮಯ್ಯನವರಿಗೆ ಈ ಧಾರಾಳತೆ ಇರಲಿಲ್ಲ. ಏಕೆಂದರೆ ಅವರಿಗೆ ಚೆನ್ನಾಗಿ ಗೊತ್ತಿತ್ತು. ಅದು ಸರಕಾರಕ್ಕೆ ಮುಜುಗರ ತರುತ್ತದೆ ಎಂದು. ಏಕೆಂದರೆ ಗಣಪತಿ ಪ್ರಕರಣದಲ್ಲಿ ಬೇರೆ ಸಾಕ್ಷ್ಯಗಳ ಅಗತ್ಯವೇ ಇರಲಿಲ್ಲ. ಅವರೇ ವಿಡಿಯೋದಲ್ಲಿ ಸಾಕಷ್ಟು ಪುರಾವೆ ಒದಗಿಸಿದ್ದರು. ಹಿಂದಿನ ಗೃಹ ಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಮೊಹಾಂತಿ ಮತ್ತು ಎ.ಎಂ. ಪ್ರಸಾದ್ ಅವರ ಹೆಸರನ್ನು ಆ ವಿಡಿಯೋದಲ್ಲಿ ಉಚ್ಚರಿಸಿದ್ದರು. ಕೇಂದ್ರದಲ್ಲಿರುವುದು ಬಿಜೆಪಿ ನೇತೃತ್ವದ  ಸರಕಾರ. ಒಂದೊಮ್ಮೆ  ಸಿಬಿಐ ತನಿಖೆಗೆ ಒಪ್ಪಿಸಿದರೆ ಅದು ನೇರವಾಗಿ ಸಚಿವ ಜಾರ್ಜ್ ಬುಡಕ್ಕೆ ಬರುತ್ತದೆ. ಆ ಮೂಲಕ ರಾಜ್ಯ ಕಾಂಗ್ರೆಸ್ ಸರಕಾರವನ್ನೂ ಇಕ್ಕಟ್ಟಿಗೆ ಸಿಕ್ಕಿಸುತ್ತದೆ ಎಂದು.

ಹೀಗಾಗಿಯೇ ಗಣಪತಿ ಪ್ರಕರಣವನ್ನು ರಾಜ್ಯ ಸರಕಾರದ ಸುಪರ್ದಿಯಲ್ಲಿರುವ ಸಿಐಡಿ ತನಿಖೆಗೆ ವಹಿಸಲಾಯಿತು. ತನಿಖೆ ಮುಗಿದು ಜಾರ್ಜ್ ಸೇರಿದಂತೆ ಆರೋಪಿತರೆಲ್ಲರಿಗೂ ಕ್ಲೀನ್ ಚಿಟ್ ಸಿಕ್ಕಿಯೂ ಆಯಿತು. ಆದರೆ ಅವರ ಅದೃಷ್ಟ ಸರಿಯಿದ್ದಂತೆ ಕಾಣುತ್ತಿಲ್ಲ. ಗಣಪತಿ ಕುಟುಂಬ ಸದಸ್ಯರು ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿರುವ ಸುಪ್ರೀಂ ಕೋರ್ಟ್ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಆದೇಶ ಹೊರಡಿಸಿದೆ. ಈ ಆದೇಶ ಜಾರ್ಜ್ ಎದೆಯಲ್ಲಿ ಅವಲಕ್ಕಿ ಕುಟ್ಟಿದೆ. ರಾಜ್ಯ ಸರಕಾರಕ್ಕೂ ಒಂದು ರೀತಿ ಆತಂಕ ತಂದಿದೆ.

Leave a Reply