ಮೋದಿಯ ‘ಸಬ್ ಕ ಸಾಥ್ ಸಬ್ ಕ ವಿಕಾಸ್’, ಸಿದ್ದರಾಮಯ್ಯನವರ ‘ಭಾಗ್ಯ’ಗಳಿಗೆ ಸವಾಲಾಗಿರುವ ಈ ಅಸ್ಪೃಶ್ಯತೆ ನೋಡಿ

ಡಿಜಿಟಲ್ ಕನ್ನಡ ಟೀಮ್:

ದೇಶದ 71ನೇ ಸ್ವಾತಂತ್ರ್ಯ ದಿನವನ್ನು ಇತ್ತೀಚೆಗಷ್ಟೇ ಆಚರಿಸಿದ್ದೇವೆ. ಆದರೂ ಅಸ್ಪೃಶ್ಯತೆ, ಜಾತಿ ಅಸಮಾನತೆಯನ್ನು ಬುಡ ಸಮೇತ ಕಿತ್ತೊಗೆಯಲು ನಮ್ಮಿಂದ ಸಾಧ್ಯವಾಗಿಲ್ಲ ಎಂಬುದು ಶೋಚನೀಯ ಸಂಗತಿ. ಇದಕ್ಕೆ ಸಾಕ್ಷಿ ಕಲಬುರಗಿಯ ಜೇವರ್ಗಿ ತಾಲೂಕಿನ ಚಣ್ಣೂರು ಹಳ್ಳಿಯಲ್ಲಿ ಮೇಲ್ಜಾತಿಯ ವ್ಯಕ್ತಿ, ದಲಿತರು ಬಳಸುತ್ತಿದ್ದ ಬಾವಿಗೆ ವಿಷ ಸುರಿದು ಕಲುಷಿತ ಮಾಡಿರುವ ಪ್ರಕರಣ.

ಈ ಹಳ್ಳಿಯಲ್ಲಿರುವ ದಲಿತ ಕುಟುಂಬಗಳಿಗೆ ಕುಡಿಯುವ ನೀರಿನ ಮೂಲವಾಗಿರೋದು 200 ಮೀಟರ್ ಆಳದ ಒಂದು ಬಾವಿ ಮಾತ್ರ. ಹಳ್ಳಿಯಲ್ಲಿರುವ ಇತರೆ ಏಳು ಬಾವಿ ಮೇಲ್ಜಾತಿಯವರ ಉಪಯೋಗಕ್ಕೆ ಮಾತ್ರ ಮೀಸಲಾಗಿದೆ. ಈಗ ಮೇಲ್ಜಾತಿಯ ವ್ಯಕ್ತಿಯೊಬ್ಬ ದಲಿತರ ಬಾವಿಗೆ ಎಂಡೋಸಲ್ಫನ್ ಸುರಿದಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಈ ಬಾವಿಯಿರುವ ಜಮೀನು ದಲಿತ ವ್ಯಕ್ತಿಗೆ ಸೇರಿದ್ದು. ನಾಲ್ಕು ವರ್ಷಗಳ ಹಿಂದೆ ಈ ಭೂಮಿಯನ್ನು ಬೋಗ್ಯಕ್ಕೆಂದು ಮೇಲ್ಜಾತಿಯ ವ್ಯಕ್ತಿಗೆ ನೀಡಲಾಗಿತ್ತು. ದಲಿತರು ಈ ಬಾವಿಯಿಂದ ನೀರನ್ನು ತೆಗೆದುಕೊಳ್ಳಲು ಈತ ಅಡ್ಡಿ ಪಡಿಸುತ್ತಲೇ ಇದ್ದ. ಹೀಗಾಗಿ ಬಾವಿಗೆ ಪಂಪ್ ಸೆಟ್ ಅಳವಡಿಸಿ ದಲಿತರ ಮನೆಗಳಿಗೆ ನೀರು ಪೂರೈಸುವ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ ಎರಡು ದಿನಗಳ ಕಾಲ ವಿದ್ಯತ್ ಇಲ್ಲವಾದ್ದರಿಂದ ಮಹಂತಪ್ಪ ಎಂಬ ದಲಿತ ವ್ಯಕ್ತಿ ಬಾವಿಯಿಂದ ನೀರು ತರಲು ಹೋದ, ಆಗ ಬಾವಿಯ ನೀರಿನಲ್ಲಿ ವಿಚಿತ್ರ ವಾಸನೆ ಕಂಡು ತಕ್ಷಣವೇ ತಮ್ಮ ಗ್ರಾಮಸ್ಥರಿಗೆ ತಿಳಿಸಿ, ನೀರನ್ನು ಕುಡಿಯದಂತೆ ಎಚ್ಚರಿಸಿದ.

ನಂತರ ನೀರನ್ನು ಪರೀಕ್ಷಿಸಿ ಅದರಲ್ಲಿ ಎಂಡೋಸಲ್ಫನ್ ಮಿಶ್ರಣವಾಗಿರುವುದು ಬೆಳಕಿಗೆ ಬಂದಿದೆ. ಈಗ ಆ ಹಳ್ಳಿಯ ಜನರಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲಾಗಿದೆ. ಈ ಬಾವಿಗೆ ಮೇಲ್ಜಾತಿಯ ವ್ಯಕ್ತಿಯೇ ಎಂಡೋಸಲ್ಫನ್ ಹಾಕಿದ್ದಾನೆ ಎಂಬುದು ದಲಿತ ಸಮುದಾಯದ ಮುಖಂಡರ ಆರೋಪ. ಮೇಲ್ಜಾತಿಯ ವ್ಯಕ್ತಿ ಬಾವಿ ನೀರಿಗೆ ವಿಷ ಹಾಕಿದ್ದಾನೋ ಇಲ್ಲವೋ ಎಂಬುದು ತನಿಖೆಯಿಂದ ಸಾಬೀತಾಗಬೇಕು. ಆದರೆ, ಈ ಗ್ರಾಮದಲ್ಲಿ ದಲಿತರಿಗೆ ಕುಡಿಯುವ ನೀರಿಗೆ ಪ್ರತ್ಯೇಕ ಬಾವಿ ಇರುವುದು ನಮ್ಮ ಸಮಾಜದಲ್ಲಿ ಜಾತಿ ಅಸಮಾನತೆ ಹಾಗೂ ಅಸ್ಪೃಶ್ಯತೆ ಇನ್ನು ಜೀವಂತವಾಗಿರುವುದಕ್ಕೆ ಸಾಕ್ಷಿಯಾಗಿದೆ.

ದೇಶಕ್ಕೆ ಸ್ವಾತಂತ್ರ್ಯ ಬಂದು ಏಳು ದಶಕಗಳು ಕಳೆದಿದ್ದರೂ ಹಿಂದೂಳಿದ ಹಾಗೂ ಶೋಷಿತರ ಅಭಿವೃದ್ಧಿ, ಸಾಮಾಜಿಕ ನ್ಯಾಯದ ಕೂಗು ಮುಂದುವರಿಯುತ್ತಲೇ ಇದೆ. ಇನ್ನು ನಮ್ಮ ಸರ್ಕಾರ ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಭಾಗ್ಯಗಳ ಮೇಲೆ ಭಾಗ್ಯಗಳನ್ನು ಕರುಣಿಸುತ್ತಲೇ ಇದೆ. ಆದರೆ ಅಸ್ಪೃಶ್ಯತೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಮಾತ್ರ ಈ ಭಾಗ್ಯಗಳಿಗೆ ಸಾಧ್ಯವಾಗಿಲ್ಲ.

ಸಾಮಾಜಿಕ ನ್ಯಾಯದ ಧ್ವನಿ ಎತ್ತುತ್ತಾ, ಅಸ್ಪೃಶ್ಯತೆ ನಿರ್ಮೂಲನೆ ಮಾಡುತ್ತೇವೆ, ದಲಿತರ ಅಭಿವೃದ್ಧಿಗೆ ಪಣ ತೊಟ್ಟಿದ್ದೇವೆ ಎಂದು ಬೊಬ್ಬೆ ಹೊಡೆಯುವವರ ಸಂಖ್ಯೆ ನಮ್ಮಲ್ಲಿ ಕಡಿಮೆ ಏನಿಲ್ಲ. ಆದರೂ ಇಂತಹ ಪ್ರಕರಣಗಳು ಮರುಕಳಿಸುತ್ತಲೇ ಇವೆ. ರಾಜ್ಯದಲ್ಲಿ ಅಧಿಕಾರಗಲ್ಲಿರುವ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳು ಶೋಷಿತರ ಪರ ನಿಲ್ಲುತ್ತೇವೆ ಎಂದು ಎಷ್ಟೇ ಕಿರುಚಿದರೂ ಇಂತಹ ಪ್ರಕರಣಗಳನ್ನು ತಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರ ಈವರೆಗೂ ದಲಿತರ ಅಭಿವೃದ್ಧಿ ಹೆಸರಿನಲ್ಲಿ ನೀಡಿರುವ ಭಾಗ್ಯಗಳು ಚುನಾವಣೆಯ ಪ್ರಚಾರಕ್ಕೆ ಅಸ್ತ್ರವಾಗುತ್ತದೆಯೇ ಹೊರತು, ಸಮಾಜದ ತಳಮಟ್ಟದಲ್ಲಿ ದಲಿತರು ಅಲ್ಪಸಂಖ್ಯಾತರಿಗೆ ಸಾಮಾಜಿಕ ನ್ಯಾಯ ಮಾತ್ರ ಸಿಗದಿರುವುದು ಢಾಳಾಗಿ ಕಾಣುತ್ತಿದೆ.

ಈ ವಿಚಾರದಲ್ಲಿ ಕಾಂಗ್ರೆಸ್ ಹಾಗೂ ರಾಜ್ಯ ಸರ್ಕಾರವೊಂದೇ ಜವಾಬ್ದಾರರಲ್ಲ. ವಿರೋಧ ಪಕ್ಷದಲ್ಲಿ ಕೂತಿರುವ ಬಿಜೆಪಿ ಸಹ ಇಂತಹ ವಿಚಾರದಲ್ಲಿ ತನ್ನ ನಿಲುವು ಸ್ಪಷ್ಟಪಡಿಸಬೇಕಿದೆ. ಅತ್ತ ಪ್ರಧಾನಿ ಸಬ್ ಕ ಸಾಥ್ ಸಬ್ ಕ ವಿಕಾಸ್ ಎಂಬ ಘೋಷವಾಕ್ಯಗಳನ್ನು ಹೇಳುತ್ತಲೇ ಇದ್ದಾರೆ. ಇತ್ತ ಚುನಾವಣೆ ಬರುತ್ತಿದ್ದಂತೆ ರಾಜ್ಯ ಬಿಜೆಪಿ ನಾಯಕರು ದಲಿತರ ಮನೆಗಳಿಗೆ ಭೇಟಿ ಕೊಟ್ಟು ಊಟ ಮಾಡಿ, ಮಾಧ್ಯಮಗಳ ಮುಂದೆ ತಾವು ಸಹ ದಲಿತರ ಕಲ್ಯಾಣ ಮಾಡುತ್ತೇವೆ ಎಂದು ಭಾಷಣ ಬಿಗಿಯುತ್ತಿದ್ದಾರೆ. ಆದರೆ ದಲಿತರ ಪರಿಸ್ಥಿತಿ ಸುಧಾರಿಸಿದೆಯೇ? ಅಸ್ಪೃಶ್ಯತೆ ನಿರ್ಮೂಲನೆಯಾಗಿದೆಯೇ? ಎಂಬ ಪ್ರಶ್ನೆಗೆ ಸಿಗುವ ಉತ್ತರ, ಇಲ್ಲ…

ಅಸ್ಪೃಶ್ಯತೆ ನಿರ್ಮೂಲನೆಗೆ ಇಂತಹ ಘೋಷವಾಕ್ಯಗಳಾಗಲಿ, ಭಾಗ್ಯಗಳ ಹೆಸರಿನಲ್ಲಿ ನೀಡುವ ಯೋಜನೆಗಳಾಗಲಿ ಸಹಾಯವಾಗುವುದಿಲ್ಲ. ಗ್ರಾಮಗಳಲ್ಲಿ ದಲಿತರಿಗೆ ಹಾಗೂ ಮೇಲ್ಜಾತಿಯವರಿಗೆ ಕುಡಿಯುವ ನೀರಿಗೆ ಪ್ರತ್ಯೇಕ ಬಾವಿ ಇರುವುದಕ್ಕೆ, ಈ ರೀತಿಯಾದ ಅಸಮಾನತೆಗಳಿಗೆ ಈ ಚಣ್ಣೂರು ಒಂದು ಉದಾಹರಣೆ ಮಾತ್ರ. ರಾಜ್ಯದಲ್ಲಿ ಹಾಗೂ ದೇಶದಲ್ಲಿ ಇಂತಹ ಅನೇಕ ಗ್ರಾಮಗಳಿವೆ. ಅಸ್ಪೃಶ್ಯತೆ ನಿರ್ಮೂಲನೆಯಾಗಬೇಕಾದರೆ, ದಲಿತರ ಹಾಗೂ ಶೋಷಿತರ ಪರಿಸ್ಥಿತಿ ಸುಧಾರಿಸಬೇಕಾದರೆ, ಎಲ್ಲರಿಗೂ ಸಾಮಾಜಿಕ ನ್ಯಾಯ ದೊರಕಬೇಕೆಂದರೆ, ಪ್ರಚಾರಕ್ಕೆ ಸೀಮಿತವಾಗುವ ಘೋಷವಾಕ್ಯ ಹಾಗೂ ಯೋಜನೆಗಳನ್ನು ನಿಲ್ಲಿಸಿ ಗ್ರಾಮಿಣ ಪ್ರದೇಶಗಳಲ್ಲಿ ಸಮಾನತೆಯ ಪರಿಸ್ಥಿತಿ ನಿರ್ಮಾಣವಾಗಬೇಕು. ಇಲ್ಲವಾದರೆ ಇನ್ನು ಏಳು ದಶಕ ಕಳೆದರೂ ಸಾಮಾಜಿಕ ನ್ಯಾಯ ಸಿಗಬೇಕು ಎಂಬ ಕೂಗು ಚಾಲ್ತಿಯಲ್ಲಿರುತ್ತದೆ.

Leave a Reply