ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿರುದ್ಧದ ಕ್ರಿಕೆಟ್ ಸರಣಿಯ ವೇಳಾಪಟ್ಟಿ ಪ್ರಕಟ, 2019ರ ವಿಶ್ವಕಪ್ ಮೇಲೆ ಕಣ್ಣಿಟ್ಟಿರುವ ಭಾರತಕ್ಕೆ ಈ ಸರಣಿ ಮಹತ್ವವೇನು?

ಡಿಜಿಟಲ್ ಕನ್ನಡ ಟೀಮ್:

ಟೀಂ ಇಂಡಿಯಾ ವಿರುದ್ಧ ಏಕದಿನ ಹಾಗೂ ಟ್ವಿ20 ಸರಣಿಯನ್ನಾಡಲು ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ತಂಡಗಳು ಭಾರತ ಪ್ರವಾಸ ಕೈಗೊಳ್ಳುತ್ತಿವೆ. 2019ರ ವಿಶ್ವಕಪ್ ಟೂರ್ನಿಗೆ ತಯಾರಿ ಆರಂಭಿಸಿರುವ ಟೀಂ ಇಂಡಿಯಾಗೆ ಈ ಎರಡು ಸರಣಿಗಳು ಮಹತ್ವದ್ದಾಗಿದ್ದು, ಈ ಎರಡು ತಂಡಗಳ ವಿರುದ್ಧದ ಸರಣಿಯ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆ ಮಾಡಿದೆ.

ಆಸ್ಟ್ರೇಲಿಯಾ ತಂಡದ ಭಾರತ ಪ್ರವಾಸ ಸೆ.ಪ್ಟೆಂಬರ್ 12ರಿಂದ ಆರಂಭವಾಗಲಿದ್ದು, ಅಕ್ಟೋಬರ್ 13ಕ್ಕೆ ಅಂತ್ಯವಾಗಲಿದೆ. ಈ ಪ್ರವಾಸದಲ್ಲಿ ಕಾಂಗರೂ ಪಡೆ ಐದು ಏಕದಿನ ಹಾಗೂ ಮೂರು ಟಿ20 ಪಂದ್ಯಗಳ ಸರಣಿಯನ್ನಾಡಲಿದೆ. ಇನ್ನು ನ್ಯೂಜಿಲೆಂಡ್ ತಂಡ ಅಕ್ಟೋಬರ್ 17ರಿಂದ ಭಾರತ ಪ್ರವಾಸ ಆರಂಭಿಸಲಿದ್ದು, ನವೆಂಬರ್ 7ಕ್ಕೆ ಅಂತ್ಯವಾಗಲಿದೆ. ಈ ಪ್ರವಾಸದಲ್ಲಿ ಕಿವೀಸ್ ಪಡೆ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿವೆ.

ಈಗಷ್ಟೇ ಲಂಕಾ ಪ್ರವಾಸದಲ್ಲಿ ಎಲ್ಲಾ ಮಾದರಿಯ ಸರಣಿಯಲ್ಲೂ ಕ್ಲೀನ್ ಸ್ವೀಪ್ ಜಯ ದಾಖಲಿಸಿರುವ ಭಾರತ ತಂಡದ ಆತ್ಮ ವಿಶ್ವಾಸ ಹೆಚ್ಚಿದೆ. ಅದು ಅಲ್ಲದೆ ಈ ಎರಡು ಸರಣಿಗಳು ತವರಿನಲ್ಲಿ ನಡೆಯುತ್ತಿರುವುದು ಟೀಂ ಇಂಡಿಯಾಗೆ ಪ್ಲಸ್ ಪಾಯಿಂಟ್ ಆಗಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿಗೆ ಬಲಿಷ್ಠ ತಂಡ ಕಟ್ಟುವಲ್ಲಿ ನಿರತವಾಗಿರುವ ಟೀಂ ಇಂಡಿಯಾಗೆ ಈ ಎರಡು ಸರಣಿ ಮಹತ್ವದ್ದಾಗಲಿದೆ.

ಶ್ರೀಲಂಕಾ ಪ್ರವಾಸದಲ್ಲಿ ಭಾರತ ತಂಡ ಆತಿಥೇಯರ ವಿರುದ್ಧ ಪ್ರತಿಸ್ಪರ್ಧೆ ಎದುರಿಸದೇ ಕ್ಲೀನ್ ಸ್ವೀಪ್ ಜಯ ಸಾಧಿಸಿದೆ. ಹೀಗಾಗಿ ಮುಂದಿನ ಎರಡು ಸರಣಿಗಳಲ್ಲಿ ಪ್ರಬಲ ಪೈಪೋಟಿಯನ್ನು ನಿರೀಕ್ಷಿಸಲಾಗಿದೆ.

ಈ ಸರಣಿಗಳು ಭಾರತದಲ್ಲಿ ನಡೆಯುತ್ತಿರುವುದರಿಂದ ರನ್ ಹೊಳೆ ಹರಿಯುವ ಸಾಧ್ಯತೆ ಹೆಚ್ಚಾಗಿವೆ. ಆದರೆ ಭಾರತ ವಿಶ್ವಕಪ್ ಟೂರ್ನಿಗೆ ಉತ್ತಮ ಸಿದ್ಧತೆಯಾಗಬೇಕಾದರೆ, ಈ ಎರಡು ತಂಡಗಳ ವಿರುದ್ಧದ ಸರಣಿಗೆ ಬಿಸಿಸಿಐ ವೇಗಕ್ಕೆ ನೆರವಾಗುವ ಪಿಚ್ ಒದಗಿಸಬೇಕಿದೆ. ಕಾರಣ ಮುಂದಿನ ವಿಶ್ವ ಕಪ್ ನಡೆಯುತ್ತಿರುವುದು ಇಂಗ್ಲೆಂಡ್ ನಲ್ಲಿ. ಅಲ್ಲಿನ ಪಿಚ್ ವೇಗ ಹಾಗೂ ಪುಟಿತಕ್ಕೆ ಹೆಚ್ಚು ಸಹಾಯವಾಗುವುದರಿಂದ ಭಾರತ ತಂಡ ಅಂತಹುದೇ ಮಾದರಿಯ ಪಿಚ್ ನಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್ ಬೌಲಿಂಗ್ ಅನ್ನು ಎದುರಿಸಬೇಕಾಗುತ್ತದೆ. ಕೇವಲ ಸರಣಿ ಗೆಲ್ಲಬೇಕು, ರನ್ ಹೊಳೆ ಹರಿಸಿ ಪ್ರೇಕ್ಷಕರನ್ನು ರಂಜಿಸಬೇಕೆಂಬ ಉದ್ದೇಶದೊಂದಿಗೆ ಬ್ಯಾಟಿಂಗ್ ಪಿಚ್ ಒದಗಿಸಿದರೆ, ಟೀಂ ಇಂಡಿಯಾದ ವಿಶ್ವಕಪ್ ತಯಾರಿಗೆ ಈ ಸರಣಿ ಯಾವುದೇ ರೀತಿಯಲ್ಲೂ ಸಹಾಯಕಾರಿಯಾಗುವುದಿಲ್ಲ.

ಈ ಎರಡೂ ಸರಣಿಗಳ ವೇಳಾಪಟ್ಟಿ ಹೀಗಿವೆ…

ಆಸ್ಟ್ರೇಲಿಯಾ ಪ್ರವಾಸ

ದಿನಾಂಕ       ಪಂದ್ಯ               ಸ್ಥಳ

ಸೆ.12    ಅಭ್ಯಾಸ ಪಂದ್ಯ          ಚೆನ್ನೈ

ಸೆ.17    ಮೊದಲ ಏಕದಿನ         ಚೆನ್ನೈ

ಸೆ.21    ಎರಡನೇ ಏಕದಿನ        ಕೋಲ್ಕತಾ

ಸೆ.24   ಮೂರನೇ ಏಕದಿನ        ಇಂದೋರ್

ಸೆ.28    ನಾಲ್ಕನೇ ಏಕದಿನ        ಬೆಂಗಳೂರು

ಅ.01    ಐದನೇ ಏಕದಿನ          ನಾಗ್ಪುರ

ಅ.07    ಮೊದಲ ಟಿ20           ರಾಂಚಿ

ಅ.10    ಎರಡನೇ ಟಿ20          ಗುವಾಹಟಿ

ಅ.13    ಮೂರನೇ ಟಿ20         ಹೈದರಾಬಾದ್

ನ್ಯೂಜಿಲೆಂಡ್ ಪ್ರವಾಸ

ಅ.17     ಅಭ್ಯಾಸ ಪಂದ್ಯ          ಮುಂಬೈ

ಅ.19    ಅಭ್ಯಾಸ ಪಂದ್ಯ           ಮುಂಬೈ

ಅ.22    ಮೊದಲ ಏಕದಿನ          ಮುಂಬೈ

ಅ.25    ಎರಡನೇ ಏಕದಿನ         ಪುಣೆ

ಅ.29    ಮೂರನೇ ಏಕದಿನ        ಯುಪಿಸಿಎ

ನ.01    ಮೊದಲ ಟಿ20            ದೆಹಲಿ

ನ.04   ಎರಡನೇ ಟಿ20            ರಾಜ್ಕೋಟ್

ನ.07    ಮೂರನೇ ಟಿ20          ತಿರುವನಂತಪುರ

Leave a Reply