ಗೌರಿ ಹತ್ಯೆಗೆ ಬಿಜೆಪಿ-ಆರೆಸ್ಸೆಸ್ ದೂರುತ್ತಿರುವವರಿಗೆ ಕೇಂದ್ರ ಸಚಿವ ರವಿಶಂಕರ್ ಪ್ರಸಾದ್ ಕೇಳಿದ ಪ್ರಶ್ನೆಗಳೇನು?

ಡಿಜಿಟಲ್ ಕನ್ನಡ ಟೀಮ್:

‘ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದ್ದ ಗೌರಿ ಲಂಕೇಶರಿಗೆ ರಾಜ್ಯ ಸರ್ಕಾರ ಭದ್ರತೆ ನೀಡಲಿಲ್ಲವೇಕೆ? ತನಿಖೆ ಆರಂಭವಾಗುವ ಮುನ್ನ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಾರ್ವಜನಿಕವಾಗಿ ಬಿಜೆಪಿ ಆರೆಸ್ಸೆಸ್ ಮೇಲೆ ಆರೋಪ ಹೊರಿಸಿದ್ದಾರೆ. ಇದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಸಮರ್ಥಿಸಿಕೊಳ್ಳುತ್ತಾರಾ?’ ಇದು ಕೇಂದ್ರ ಮಾಹಿತಿ ಹಾಗೂ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ರಾಜ್ಯ ಸರ್ಕಾರಕ್ಕೆ ಕೇಳಿರುವ ಪ್ರಶ್ನೆ.

ಗೌರಿ ಲಂಕೇಶ್ ಹತ್ಯೆಯ ಪ್ರಕರಣ ಈಗ ಸಂಪೂರ್ಣವಾಗಿ ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಹತ್ಯೆಯಾದ ಮರು ದಿನವೇ ರಾಹುಲ್ ಗಾಂಧಿ ಸೇರಿದಂತೆ ಕೆಲವು ಎಡಪಂಥೀಯ ಮುಖಂಡರು ಈ ಹತ್ಯೆಯ ಹಿಂದೆ ಬಲಪಂಧೀಯರ ಕೈವಾಡವಿದೆ ಎಂದು ಹೇಳಿಕೆಗಳನ್ನು ನೀಡುತ್ತಲೇ ಬಂದಿದ್ದಾರೆ. ಈ ಪ್ರಕರಣದ ಹಿಂದೆ ನಕ್ಸಲರ ಕೈವಾಡದ ಶಂಕೆ ಇದ್ದರೂ ತನಿಖೆ ಆರಂಭವಾಗುವ ಮುನ್ನವೇ ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಆರೋಪ ಮಾಡುತ್ತಿರುವುದನ್ನು ರವಿಶಂಕರ್ ಪ್ರಸಾದ್ ಪ್ರಶ್ನಿಸಿದ್ದಾರೆ. ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರವಿಶಂಕರ್ ಪ್ರಸಾದ್, ಕರ್ನಾಟಕ ರಾಜ್ಯ ಸರ್ಕಾರ ಹಾಗೂ ಬಲಪಂಥೀಯರ ಮೇಲೆ ಆರೋಪ ಮಾಡುತ್ತಿರುವವರಿಗೆ ಪ್ರಶ್ನೆಗಳ ಮಳೆ ಸುರಿಸಿದ್ದಾರೆ. ಈ ಬಗ್ಗೆ ಅವರು ಪ್ರಶ್ನಿಸಿರುವುದು ಹೀಗೆ…

‘ಗೌರಿ ಲಂಕೇಶ್ ಅವರ ಹತ್ಯೆಯ ನಂತರ ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ರಾಜಕೀಯ ಆರೋಪ ಮಾಡಲಾಗುತ್ತಿದೆ. ಗೌರಿ ಲಂಕೇಶ್ ಅವರು ನಕ್ಸಲರನ್ನು ಮುಖ್ಯವಾಹಿನಿಗೆ ಕರೆತರುವ ಪ್ರಯತ್ನದಲ್ಲಿದ್ದರು ಎಂದು ಸಾಕಷ್ಟು ವರದಿಗಳು ಬಂದಿವೆ. ಅವರ ಈ ಪ್ರಯತ್ನದ ಬಗ್ಗೆ ರಾಜ್ಯ ಸರ್ಕಾರಕ್ಕೆ ಮಾಹಿತಿ ನೀಡಿರಲಿಲ್ಲವೇ? ಅವರು ನಕ್ಸಲರನ್ನು ಮುಖ್ಯವಾಹಿನಿಗೆ ತರುವ ಪ್ರಯತ್ನದಲ್ಲಿದ್ದಾರೆ ಎಂದು ತಿಳಿದಿದ್ದರು ರಾಜ್ಯ ಸರ್ಕಾರ ಅವರಿಗೆ ಸೂಕ್ತ ತನಿಖೆಯನ್ನು ನೀಡಲಿಲ್ಲವೇಕೆ?

ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ ತನಿಖೆ ಆರಂಭವಾಗುವ ಮುನ್ನವೇ ರಾಹುಲ್ ಗಾಂಧಿ ಅವರು ಸಾರ್ವಜನಿಕವಾಗಿ ಬಿಜೆಪಿ ಹಾಗೂ ಸಂಘ ಪರಿವಾರದ ಮೇಲೆ ನೇರ ಆರೋಪ ಮಾಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರ ನೇಮಿತ ವಿಶೇಷ ತನಿಖಾ ತಂಡದಿಂದ ವಿಚಾರಣೆ ಪ್ರಾಮಾಣಿಕವಾಗಿ ನಡೆಯುತ್ತದೆಯೇ? ಗೌರಿ ಲಂಕೇಶ್ ಸಹೋದರ ಇಂದ್ರಜಿತ್ ಅವರೇ ಸಾರ್ವಜನಿಕವಾಗಿ ತಮ್ಮ ಸಹೋದರಿ ನಕ್ಸಲರ ವಿಷಯವಾಗಿ ಕೆಲಸ ಮಾಡುತ್ತಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಇಂತಹ ಪರಿಸ್ಥಿತಿಯಲ್ಲೂ ರಾಹುಲ್ ಗಾಂಧಿ ಅವರು ಯಾವ ಆಧಾರದ ಮೇಲೆ ಈ ಆರೋಪ ಮಾಡಿದ್ದಾರೆ? ರಾಹುಲ್ ಹೇಳಿಕೆಯನ್ನು ಕರ್ನಾಟಕ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಒಪ್ಪಿಕೊಳ್ಳುತ್ತಾರಾ?

ದೇಶದಲ್ಲಿ ಯಾವುದೇ ಕೊಲೆಯನ್ನು ನಾವು ಬೆಂಬಲಿಸುವುದಿಲ್ಲ. ಗೌರಿ ಅವರ ಹತ್ಯೆಯ ಪ್ರಕರಣವನ್ನು ನಮ್ಮ ಪಕ್ಷವೂ ತೀವ್ರವಾಗಿ ಖಂಡಿಸುತ್ತದೆ. ನಾನು, ಅನಂತಕುಮಾರ್, ಸ್ಮೃತಿ ಇರಾನಿ ಸೇರಿದಂತೆ ನಮ್ಮ ಪಕ್ಷದ ಅನೇಕ ನಾಯಕರು ಇದನ್ನು ಖಂಡಿಸಿದ್ದಾರೆ. ಗೌರಿ ಲಂಕೇಶ್ ಹತ್ಯೆಯ ವಿಚಾರವಾಗಿ ಎದ್ದಿರುವ ವಿರೋಧ ಇತ್ತೀಚಿನ ದಿನಗಳಲ್ಲಿ ಕರ್ನಾಟಕ ಹಾಗೂ ಕೇರಳ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಕಾರ್ಯಕರ್ತರ ಹತ್ಯೆಯಾದಾಗ ಎದ್ದಿರಲಿಲ್ಲವೇಕೆ?

ಉದಾರವಾದವನ್ನು ಪ್ರತಿಪಾದಿಸುವ ನಮ್ಮ ಸ್ನೇಹಿತರು ಈ ಹತ್ಯೆಗಳಾದಾಗ ಮೌನಕ್ಕೆ ಶರಣಾಗಿದ್ದೇಕೆ? ಎಂಎಂ ಕಲ್ಬುರ್ಗಿ ಅವರ ಹತ್ಯೆಯಾಗಿ 2 ವರ್ಷವಾದರೂ ಹಂತಕರ ಬಂಧನವಾಗಿಲ್ಲ ಏಕೆ? ಇದಕ್ಕೆ ಯಾರು ಹೊಣೆ? ಈ ಎಲ್ಲ ಪ್ರಕರಣಗಳಿಂದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉದಾರವಾದಿಗಳ ದ್ವಂದ್ವ ನಿಲುವು ಸಾಬೀತಾಗಿದೆ.

ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಹಾಗೂ ಈ ಪ್ರಕರಣಗಳಲ್ಲಿ ಸಿದ್ದರಾಮಯ್ಯನವರು ಜವಾಬ್ದಾರಿಯುತವಾಗಿ ಕ್ರಮ ಕೈಗೊಳ್ಳಬೇಕು.’

Leave a Reply