ರಾಹುಲ್ ವಿರುದ್ಧ ದೂರು ದಾಖಲಾಗುತ್ತಿದ್ದಂತೆ ಧ್ವನಿ ಬದಲಿಸಿದ ಕಾಂಗ್ರೆಸ್!

ಡಿಜಿಟಲ್ ಕನ್ನಡ ಟೀಮ್:

‘ಗೌರಿ ಅವರ ಹತ್ಯೆಗೆ ಆರೆಸ್ಸೆಸ್ ಅಥವಾ ಬಿಜೆಪಿ ಕಾರಣವೆಂದು ನಾವು ಹೇಳಿಯೇ ಇಲ್ಲ…’ ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡಿದ್ದು, ಆ ಮೂಲಕ ಈ ಕೊಲೆಯ ಹಿಂದೆ ಬಿಜೆಪಿ ಆರೆಸ್ಸೆಸ್ ಅನ್ನು ದೂಷಿಸುವುದರಿಂದ ಯೂಟರ್ನ್ ಹೊಡೆದಿದ್ದಾರೆ.

ಗೌರಿ ಲಂಕೇಶ್ ಅವರ ಹತ್ಯೆಯಾದ ನಂತರ ಎಡಪಂಥೀಯರು ಹಾಗೂ ರಾಹುಲ್ ಗಾಂಧಿ ಸೇರಿದಂತೆ ಕೆಲವು ಕಾಂಗ್ರೆಸ್ ನಾಯಕರು ಈ ಹತ್ಯೆಯ ಹಿಂದೆ ಬಲಪಂಥಿಯರ ಕೈವಾಡವಿದೆ. ದೇಶದಲ್ಲಿ ಬಿಜೆಪಿ ಹಾಗೂ ಆರೆಸ್ಸೆಸ್ ಸಿದ್ಧಾಂತವನ್ನು ಪ್ರಶ್ನಿಸಿದರೆ ಅವರನ್ನು ಹತ್ಯೆ ಮಾಡಲಾಗುತ್ತದೆ ಎಂಬ ಗಂಭೀರ ಆರೋಪದ ಮಾಡಿದ್ದರು. ಆ ಮೂಲಕ ಗೌರಿ ಲಂಕೇಶ್ ಅವರ ಹತ್ಯೆಯ ವಿಚಾರವನ್ನು ಮುಂದಿಟ್ಟುಕೊಂಡು ಬಿಜೆಪಿ ಹಾಗೂ ಆರೆಸ್ಸೆಸ್ ವಿರುದ್ಧ ಟೀಕೆ ಮಾಡಲಾಗುತ್ತಿತ್ತು.

ಈ ಪ್ರಕರಣದ ತನಿಖೆ ಆರಂಭವಾಗುವ ಮುನ್ನವೇ ‘ದೇಶದಲ್ಲಿ ಬಿಜೆಪಿ ಆರೆಸ್ಸೆಸ್ ಸಿದ್ಧಾಂತವನ್ನು ವಿರೋಧಿಸಿದರೆ ಅದನ್ನು ನಿಯಂತ್ರಿಸುತ್ತಾರೆ ಹಾಗೂ ಇಂತಹ ಹತ್ಯೆಯನ್ನು ಮಾಡುತ್ತಾರೆ’ ಎಂದು ರಾಹುಲ್ ಗಾಂಧಿ ಮಾಧ್ಯಮದವರ ಮುಂದೆ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆಗೆ ವ್ಯಾಪಕ ಟೀಕೆ ಬಂದಿತ್ತಲ್ಲದೇ, ಅವರ ಹೇಳಿಕೆಯನ್ನು ರಾಜ್ಯ ಕಾಂಗ್ರೆಸ್ ನಾಯಕರು ಸಮರ್ಥಿಸಿಕೊಳ್ಳಲು ಹಿಂದೇಟು ಸಹ ಹಾಕಿದ್ದರು. ರಾಹುಲ್ ಅವರ ಇಂತಹ ಹೇಳಿಕೆಯನ್ನು ಪ್ರಶ್ನಿಸಿ ಚಿಕ್ಕಮಗಳೂರಿನಲ್ಲಿ ನಿನ್ನೆಯಷ್ಟೇ ದೂರು ದಾಖಲಾಗಿತ್ತು. ಈ ದೂರು ದಾಖಲಾಗುತ್ತಿದ್ದಂತೆ ಈಗ ಕಾಂಗ್ರೆಸ್ ತನ್ನ ಧ್ವನಿ ಬದಲಿಸುತ್ತಿದೆ.

ಈಗ ರಾಹುಲ್ ಅವರ ಹೇಳಿಕೆಗೆ ತೇಪೆ ಹಚ್ಚುವ ಪ್ರಯತ್ನದಲ್ಲಿ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಈ ಕುರಿತು ಎಎನ್ಐಗೆ ಪ್ರತಿಕ್ರಿಯೆ ನೀಡಿರುವ ಮಲ್ಲಿಕಾರ್ಜುನ ಖರ್ಗೆ ಹೇಳಿರುವುದಿಷ್ಟು…

‘ಗೌರಿ ಲಂಕೇಶ್ ಅವರ ಕೊಲೆಯ ಹಿಂದೆ ಬಿಜೆಪಿ ಹಾಗೂ ಆರೆಸ್ಸೆಸ್ ಕೈವಾಡವಿದೆ ಎಂದು ನಾವು ಹೇಳಿಯೇ ಇಲ್ಲ. ಆದರೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರುವುದು ಖಚಿತ. ಈ ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದಾಗಿ ಇತ್ತೀಚಿನ ಹತ್ಯೆಗಳಾಗುತ್ತಿವೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ರಾಮಲಿಂಗಾ ರೆಡ್ಡಿ ಅವರೊಂದಿಗೆ ಮಾತನಾಡಿದ್ದೇನೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಸಹ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಮುಖ್ಯಮಂತ್ರಿಯವರನ್ನು ಸಂಪರ್ಕಿಸಿದ್ದಾರೆ.’

Leave a Reply