ಮಳೆಯ ಆರ್ಭಟಕ್ಕೆ ಬೆಂಗಳೂರು ತತ್ತರ, ಮುಂದಿನ ದಿನಗಳಲ್ಲೂ ಇದೇ ಪರಿಸ್ಥಿತಿ !

ಡಿಜಿಟಲ್ ಕನ್ನಡ ಟೀಮ್:

ನಿನ್ನೆ ರಾತ್ರಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಪರಿಸ್ಥಿತಿ ಸಂಪೂರ್ಣವಾಗಿ ಹದಗೆಟ್ಟಿದೆ. ಬೀದಿ ಬೀದಿಗಳಲ್ಲೂ ಮರಗಳು ನೆಲಕ್ಕುರುಳಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ನಿನ್ನೆ ರಾತ್ರಿ ಸುರಿದ ಮಳೆಗೆ ನಾಲ್ವರು ಬಲಿಯಾಗಿದ್ದು, ಸರ್ಕಾರದಿಂದ ಮೃತರ ಕುಟುಂಬಕ್ಕೆ ₹ 5 ಲಕ್ಷ ಪರಿಹಾರವೂ ಘೋಷಣೆಯಾಗಿದೆ.

ಈ ಬಾರಿಯ ಮುಂಗಾರಿನಲ್ಲಿ ಈ ತಿಂಗಳ ಆರಂಭಿಕ ಎಂಟು ದಿನಗಳಲ್ಲಿ ಉತ್ತಮ ಮಳೆಯಾಗಿದ್ದು, ಬೆಂಗಳೂರಿನಲ್ಲೇ 209.6 ಎಂಎಂನಷ್ಟು ಮಳೆಯಾಗಿದೆ ಎಂದು ಸ್ಕೈಮೇಟ್ ವರದಿ ಮಾಡಿದೆ. ಇನ್ನು ಅರಬ್ಬಿ ಸಮುದ್ರದಿಂದ ಸೈಕ್ಲೋನ್ ಪರಿಸ್ಥಿತಿ ಎದುರಾಗಿದ್ದು, ಕರ್ನಾಟಕ ಸೇರಿದಂತೆ ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇದೆ. ಇಂದು ಕೂಡ ಮಳೆಯ ಅಬ್ಬರ ಮುಂದುವರಿಯುವ ನಿರೀಕ್ಷೆ ಇದ್ದು, ಮುಂದಿನ ಒಂದು ವಾರಗಳ ಕಾಲ ಮಳೆ ಸುರಿಯಲಿದೆ ಎಂದು ಊಹಿಸಲಾಗಿದೆ. ಸ್ಕೈಮೇಟ್ ಮಳೆಯ ಪ್ರಮಾಣ ಕುರಿತು ಪ್ರಕಟಿಸಿರುವ ಗ್ರಾಫಿಕ್ಸ್ ಚಿತ್ರ ಹೀಗಿದೆ.

ಕರ್ನಾಟಕ, ಕೇರಳ ಹಾಗೂ ಮಹಾರಾಷ್ಟ್ರಗಳಲ್ಲಿ ಹೆಚ್ಚು ಮಳೆಯಾದರೆ, ಈಶಾನ್ಯ ಭಾಗದ ರಾಜ್ಯಗಳ ಪೈಕಿ ಅಸ್ಸಾಂನಲ್ಲಿ ಹೆಚ್ಚು ಮಳೆಯಾಗುತ್ತಿದೆ. ಉಳಿದಂತೆ ಈಶಾನ್ಯ ರಾಜ್ಯಗಳು ಹಾಗೂ ಛತ್ತೀಸಘಡದ ದಕ್ಷಿಣ ಭಾಗ, ಪಶ್ಚಿಮ ಬಂಗಾಳ ಸೇರಿದಂತೆ ದಕ್ಷಿಣ ರಾಜ್ಯಗಳಾದ ಆಂಧ್ರ ಪ್ರದೇಶ, ತೆಲಂಗಾಣ, ತಮಿಳು ನಾಡಿನಲ್ಲೂ ಮಳೆಯಾಗಲಿದೆ.

Leave a Reply