ಮಿಲಿಟರಿ ಪೊಲೀಸ್ ಪಡೆಗೆ 800 ಮಹಿಳಾ ಸಿಬ್ಬಂದಿ ನೇಮಕಕ್ಕೆ ನಿರ್ಧಾರ, ನಿರ್ಮಲಾ ಸೀತಾರಾಮನ್ ಅಧಿಕಾರದಲ್ಲಿ ಮಹಿಳೆಯರಿಗೆ ಸಿಗಲಿದೆಯೇ ಹೆಚ್ಚಿನ ಪ್ರಾಧಾನ್ಯ?

ಡಿಜಿಟಲ್ ಕನ್ನಡ ಟೀಮ್:

ಭಾರತೀಯ ರಕ್ಷಣಾ ಇಲಾಖೆಯ ಪೂರ್ಣಪ್ರಮಾಣದ ಸಚಿವರಾಗಿ ನಿರ್ಮಲಾ ಸೀತಾರಾಮನ್ ಅಧಿಕಾರ ಸ್ವೀಕರಿಸಿದ್ದು ಎಲ್ಲರಿಗೂ ಅಚ್ಚರಿ ಮೂಡಿಸಿತ್ತು. ಸೀತಾರಾಮನ್ ಅವರು ರಕ್ಷಣಾ ಇಲಾಖೆಯ ಜವಾಬ್ದಾರಿ ಹೊತ್ತ ಕೆಲವೇ ದಿನಗಳಲ್ಲಿ ಮಿಲಿಟರಿ ಪೊಲೀಸ್ ಪಡೆಗೆ 800 ಮಹಿಳಾ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಭಾರತೀಯ ಸೇನೆ ನಿರ್ಧರಿಸಿದೆ. ಹೀಗಾಗಿ ಸೀತಾರಾಮನ್ ಅವರ ಅಧಿಕಾರ ಅವಧಿಯಲ್ಲಿ ರಕ್ಷಣಾ ಪಡೆಗಳಲ್ಲಿ ಮಹಿಳೆಯರಿಗೆ ಹೆಚ್ಚು ಅವಕಾಶ ಕಲ್ಪಿಸುವ ಭರವಸೆ ಮೂಡಿದೆ.

ಸೇನಾ ಪಡೆಗಳ ನೇಮಕದಲ್ಲಿರುವ ಲಿಂಗ ತಾರತಮ್ಯ ತೊಡೆದುಹಾಕಬೇಕು ಹಾಗೂ ಮಹಿಳೆಯರಿಗೂ ಉತ್ತಮ ಅವಕಾಶ ನೀಡಬೇಕು ಎಂಬ ವಿಷಯ ಸಾಕಷ್ಟು ಸದ್ದು ಮಾಡಿದರೂ ಅದು ಕೇವಲ ಚರ್ಚಾ ಹಂತಕ್ಕೆ ಸೀಮಿತವಾಗಿತ್ತು. ಆದರೆ ಸೀತಾರಾಮನ್ ಅವರು ಅಧಿಕಾರ ವಹಿಸಿಕೊಂಡ ಮರು ದಿನವೇ ಈ ನಿರ್ಧಾರ ಹೊರಬಂದಿರುವುದು ಸಾಕಷ್ಟು ಗಮನ ಸೆಳೆದಿದೆ.

ಈ ಬಗ್ಗೆ ಭಾರತೀಯ ಸೇನೆಯ ಅಡ್ಜಂಟ್ ಜೆನರಲ್ ಅಶ್ವಿನಿ ಕುಮಾರ್ ಮಾಹಿತಿ ನೀಡಿದ್ದು, ‘ಪ್ರತಿ ವರ್ಷ 52 ಮಹಿಳೆಯರಂತೆ ಒಟ್ಟು 800 ಮಹಿಳೆಯರನ್ನು ಮಿಲಿಟರಿ ಪೊಲೀಸ್ ಪಡೆಗೆ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ’ ಎಂದಿದ್ದಾರೆ.

ಈ ನಿರ್ಧಾರ ಜಾರಿಯಾಗುವ ಮೂಲಕ ಮಿಲಿಟರಿ ಪೊಲೀಸ್ ಪಡೆಗಳಲ್ಲಿ ಮಹಿಳೆಯರನ್ನು ನೇಮಿಸಿಕೊಂಡ ದೇಶಗಳ ಪಟ್ಟಿಗೆ ಭಾರತವೂ ಸೇರಲಿದ್ದು, ಈ ಹಿಂದೆ ಜರ್ಮನಿ, ಆಶ್ಟ್ರೇಲಿಯಾ, ಕೆನಡಾ, ಅಮೆರಿಕ, ಬ್ರಿಟನ್, ಡೆನ್ಮಾರ್ಕ್, ಫಿನ್ ಲ್ಯಾಂಡ್, ಫ್ರಾನ್ಸ್, ನಾರ್ವೆ, ಸ್ವೀಡನ್ ಹಾಗೂ ಇಸ್ರೇಲ್ ಸೇನೆಯಲ್ಲಿ ಈ ಅವಕಾಶ ಕಲ್ಪಿಸಲಾಗಿತ್ತು.

ಸದ್ಯಕ್ಕೆ ಭೂ ಸೇನೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇದೇ ರೀತಿ ನೌಕಾ ಪಡೆ ಹಾಗೂ ವಾಯು ಪಡೆಗಳಲ್ಲೂ ಮಹಿಳೆಯರಿಗೆ ಅವಕಾಶ ಕಲ್ಪಿಸುವ ಪ್ರಯತ್ನಗಳು ಯಾವ ರೀತಿ ನಡೆಯುತ್ತಿವೆ ಎಂಬುದನ್ನು ನೋಡೋಣ ಬನ್ನಿ. ಸದ್ಯಕ್ಕೆ ನೌಕಾಪಡೆಯಲ್ಲಿ ಕಾನೂನು, ನಾವೆಲ್ ಆರ್ಕಿಟೆಕ್ಚರ್, ಲಾಜಿಸ್ಟಿಕ್ಸ್ ಹಾಗೂ ಇಂಜಿನೀಯರಿಂಗ್ ವಿಭಾಗಗಳಲ್ಲಿ ಮಹಿಳೆಯರಿಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಡಲಾಗಿದೆ. ಈಗ ಮುಂದಿನ ದಿನಗಳಲ್ಲಿ ಮಹಿಳೆಯರನ್ನೇ ಹೊಂದಿರುವ ಹಡಗುಗಳನ್ನು ನಿಯೋಜಿಸಲು ನೌಕಾ ಪಡೆ ಸಿದ್ಧತೆ ನಡೆಸುತ್ತಿದೆ.

ಇನ್ನು ವಾಯು ಪಡೆಯಲ್ಲಿ ಕಳೆದ ವರ್ಷ ಮೂವರು ಮಹಿಳಾ ಫೈಟರ್ ಪೈಲೆಟ್ ಗಳ ನೇಮಕ ಗಮನ ಸೆಳೆದಿತ್ತು. ಅವಾನಿ ಚತುರ್ವೇದಿ, ಭಾವನಾ ಕಾಂತ್, ಮೋಹನಾ ಸಿಂಗ್ ಅವರು ಭಾರತದ ಮೊದಲ ಮಹಿಳಾ ಫೈಟರ್ ಜೆಟ್ ಪೈಲೆಟ್ ಗಳಾಗಿ ಹೊರಹೊಮ್ಮಿ, ವಾಯು ಪಡೆಯಲ್ಲೂ ಮಹಿಳೆಯರಿಗೆ ಅವಕಾಶ ಸಿಗಲಿದೆ ಎಂಬುದನ್ನು ತೋರಿಸಿಕೊಟ್ಟಿದ್ದರು. ಇದು ಪ್ರಾಯೋಗಿಕ ಹಂತದಲ್ಲಿ ನಡೆದಿತ್ತು. ಮುಂದಿನ ದಿನಗಳಲ್ಲಿ ಈ ರೀತಿಯ ಮಹಿಳಾ ಫೈಟರ್ ಜೆಟ್ ಪೈಲೆಟ್ ಗಳನ್ನು ಅವರ ಕಾರ್ಯವೈಖರಿ ಆಧಾರದ ಮೇಲೆ ಪೂರ್ಣ ಪ್ರಮಾಣದ ಫೈಟರ್ ಪೈಲೆಟ್ ಗಳನ್ನಾಗಿ ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ.

Leave a Reply