ಗೌರಿ ಹತ್ಯೆಯಲ್ಲಿ ರಾಜಕೀಯ ಹಾಲು ಕರೆವ ವಿಕ್ಷಿಪ್ತರು!

ಯಾವುದಾದರೂ ಒಂದೂ ಘಟನೆ ಆಗುತ್ತಿದ್ದಂತೆ ಹಿಂದೆ ಮುಂದೆ ನೋಡದೆ ಅದರಲ್ಲಿ ಆದಷ್ಟು ಹಾಲು ಕರೆದುಕೊಳ್ಳಲು ಯತ್ನಿಸುವುದು ಈ ರಾಜಕೀಯ ಪಕ್ಷಗಳ ಜನ್ಮಕ್ಕಂಟಿದ ಶಾಪ. ಅದು ಎತ್ತೋ, ಕೋಣವೋ ಎಂದು ಕೂಡ ಯೋಚನೆ ಮಾಡಲು ಹೋಗುವುದಿಲ್ಲ. ಮೊದಲು ಕೆಚ್ಚಲು ಹುಡುಕುವುದು. ಅದೇನು ಕೈಗೆ ಸಿಗುತ್ತೋ ಅದನ್ನೇ ಕೆಚ್ಚಲು ಎಂದು ಭಾವಿಸಿ ಕರೆಯಲು ಕೈ ಹಾಕುವುದು. ಎಷ್ಟೋತ್ತಾದರೂ ಹಾಲು ಬಾರದೆ ಹೋದಾಗ ಅದೊಂದು ಗೊಡ್ಡು ಅಂತ ಶಪಿಸುತ್ತಾ ಬೇರೊಂದು ಕೆಚ್ಚಲು ಹುಡುಕುವುದು. ಅದೃಷ್ಟ ಚೆನ್ನಾಗಿದ್ದು ಯಾವುದಾದರೂ ಎಮ್ಮೆಯೋ, ಹಸುವೋ ಸಿಕ್ಕಿದರೆ ಒಂದಷ್ಟು ಕರೆದು ಅದನ್ನು ರಾಜಕೀಯವಾಗಿ ಬಳಸಿಕೊಳ್ಳುವುದು. ಇಲ್ಲದಿದ್ದರೆ ಒಂದಾದ ಮೇಲೊಂದು ಘಟನೆ ಅನ್ವೇಷಿಸುತ್ತಲೇ ಇರೋದು. ಆದರೆ ಎಲ್ಲಿಯೂ ಕೂಡ ತಾವು ಹಾಲಿಗಾಗಿ ಎತ್ತು, ಕೋಣದ ಬೆನ್ನತ್ತಿದ ಮೂರ್ಖರು ಎನ್ನುವುದನ್ನುಒಪ್ಪಿಕೊಳ್ಳಲು ಅವರು ಹೋಗುವುದಿಲ್ಲ.

ಹೋರಾಟಗಾರ್ತಿ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಒಂದಷ್ಟು ರಾಜಕೀಯ ಹುಡುಕಿದ, ಹುಡುತ್ತಿರುವ ನಾನಾ ಪಕ್ಷಗಳ ಪರಿಸ್ಥಿತಿಯೂ ಇದೇ ಆಗಿದೆ. ಈ ವಿಚಾರದಲ್ಲಿ ಕೆಲವು ಸಂಘಟನೆಗಳು, ವಿಚಾರವಾದಿಗಳೂ ಕೂಡ ರಾಜಕೀಯ ಪಕ್ಷಗಳಿಗೆ ಪೈಪೋಟಿ ನೀಡಲು ಮುಂದಾಗಿರುವುದು ಪರಿಸ್ಥಿತಿ ಅದೆಷ್ಟು ಹಳ್ಳ ಹಿಡಿದು ಹೋಗಿದೆ ಎಂಬುದರ ಸಂಕೇತ!

ಕಾರಣ ಅದೇನೇ ಇರಲಿ, ಗೌರಿ ಲಂಕೇಶ್ ಹತ್ಯೆ ಒಂದು ಜೀವವಿರೋಧಿ ಕೃತ್ಯ. ಖಂಡನಾರ್ಹ ಘಟನೆ. ಯಾರ ಜೀವ ತೆಗೆಯಲು ಯಾರಿಗೂ ಹಕ್ಕಿಲ್ಲ. ಹಿಂಸೆ ಎಲ್ಲಕ್ಕೂ ಉತ್ತರವಲ್ಲ. ಯಾವುದೇ ಕೋನದಿಂದಲೂ ಅದು ಸಮರ್ಥನೀಯವಲ್ಲ. ಆದರೆ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು, ಆ ಪಕ್ಷಗಳ ಪ್ರತಿನಿಧಿಗಳು ಹಾಗೂ ಕೆಲ ಸಂಘಟನೆಗಳು ನಡೆದುಕೊಂಡ ರೀತಿ, ವ್ಯಕ್ತಪಡಿಸಿದ ಅಭಿಪ್ರಾಯಗಳಂತೂ ಇವರೆಲ್ಲ ಬೌದ್ಧಿಕವಾಗಿ, ಮಾನವೀಯವಾಗಿ ಅದೆಷ್ಟು ದಿವಾಳಿಯೆದ್ದು ಹೋಗಿದ್ದಾರೆ ಎಂಬುದನ್ನು ಢಾಳಾಗಿ ಬಿಂಬಿಸಿದೆ. ಯಾವತ್ತಿಗೂ ವಾದ-ವಿವಾದಗಳು ಯಾವುದೇ ಒಂದು ವಿಚಾರದ ಮಹತ್ವವನ್ನು ಎತ್ತಿ ಹಿಡಿಯಬೇಕು, ಅದಕ್ಕೊಂದು ಘನತೆಯನ್ನು ತರಬೇಕು, ಅದರ ಮೇಲೆ ಸತ್ಯದ ಬೆಳಕು ಚೆಲ್ಲಬೇಕು. ಅದನ್ನು ಬಿಟ್ಟು ಒಂದು ಘಟನೆ, ವಿಚಾರವನ್ನಿಟ್ಟುಕೊಂಡು ಬೇಳೆ ಬೇಯಿಸಿಕೊಳ್ಳಲು ಹೋಗುವುದು ಅಭಿಪ್ರಾಯದೊಳಗೂ ಶೂನ್ಯತೆ ಅನಾವರಣ ಮಾಡಿಕೊಳ್ಳುವ ಮೂರ್ಖತನದ ಮೆರವಣಿಗೆಯಾಗುತ್ತದೆ.

ನಿಜ, ಎಡಪಂಥೀಯರ ಜತೆ ಗುರುತಿಸಿಕೊಂಡಿದ್ದ ಗೌರಿ ಲಂಕೇಶ್ ಹತ್ಯೆಯಾಗುತ್ತಿದ್ದಂತೆ ಮೊದಲು ಈ ಘಟನೆಯಲ್ಲಿ ರಾಜಕೀಯ ಅರಸಲು, ಬೆರೆಸಲು ಹೊರಟದ್ದು ಕಾಂಗ್ರೆಸ್ ರಾಷ್ಟ್ರೀಯ ಉಪಾಧ್ಯಕ್ಷ ರಾಹುಲ್ ಗಾಂಧಿ. ಈಗಾಗಲೇ ಹಲವಾರು ದೃಷ್ಟಾಂತಗಳೊಂದಿಗೆ ರಾಜಕೀಯವಾಗಿ ತಾವೆಷ್ಟು ಎಳಸು ಎಂಬುದನ್ನು ನಿರೂಪಿಸಿರುವ, ನಿರೂಪಿಸುತ್ತಿರುವ ರಾಹುಲ್ ಗಾಂಧಿ ಆ ಸಾಲಿಗೆ ಗೌರಿ ಲಂಕೇಶ್ ಹತ್ಯೆಯನ್ನೂ ಸೇರಿಸಿಕೊಂಡರು. ಈ ದೇಶದಲ್ಲಿ ಬಿಜೆಪಿ, ಸಂಘ ಪರಿವಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವವರಿಗೆ ಉಳಿಗಾಲವಿಲ್ಲ ಎಂದು ಸಾರಿಬಿಟ್ಟರು. ಹತ್ಯೆಗೆ ಯಾರು ಕಾರಣ, ಏನು ಕಾರಣ ಎಂಬುದರ ಪ್ರಾಥಮಿಕ ಮಾಹಿತಿಯೂ ಇಲ್ಲದಿರುವಾಗ, ಪೊಲೀಸರು ಆ ಕೋನದಲ್ಲಿ ತನಿಖೆ ಶುರುಮಾಡುವ ಮೊದಲೇ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು ಅವರೆಷ್ಟು ವಿಚಾರಶೂನ್ಯರು, ಪೂರ್ವಾಗ್ರಹ ಪೀಡಿತರು ಎಂಬುದರ ಧ್ಯೋತಕ.

ಪ್ರಕರಣದಲ್ಲಿ ನಿಖರ ಕೈವಾಡ ಇರುವವರ ಬಗ್ಗೆ ಕಿಂಚಿತ್ತಾದರೂ ಮಾಹಿತಿ, ಸುಳಿವು, ಆಧಾರ ಇಟ್ಟುಕೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದರೆ, ಟೀಕೆ ಮಾಡಿದ್ದರೆ ಅದಕ್ಕೊಂದು ಅರ್ಥ ಇರುತ್ತಿತ್ತು. ಆದರೆ ಇವರದೂ ಅಷ್ಟೇ. ಬರೀ ಎತ್ತು, ಕೋಣ ಅಷ್ಟೇ ಅಲ್ಲ, ಕಳ್ಳಿಗಿಡದಲ್ಲೂ ಹಾಲು ಹುಡುಕುವ ಪ್ರಯತ್ನ. ಕಳ್ಳಿ ಗಿಡದಲ್ಲಿ ಹಾಲು ಬರೋಲ್ಲ, ಅದು ವಿಷದ ಹಾಲು ಎಂದು ಇವರಿಗೆ ಹೇಳುವವರು ಯಾರು? ಹಿಂದೆ-ಮುಂದೆ ನೋಡದೆ ಹೇಳಿಕೆ ಕೊಟ್ಟು ಬಿಟ್ಟರು. ಆದರೆ ಪ್ರಕರಣ ನಡೆದು ನಾಲ್ಕೈದು ದಿನ ಕಳೆದರೂ ಹಂತಕರ ಬಗ್ಗೆ ಖಚಿತ ಮಾಹಿತಿಯೇ ಇಲ್ಲ. ಎಲ್ಲ ಸಾಧ್ಯ-ಸಾಧ್ಯತೆಗಳ ಬಗ್ಗೆ ತನಿಖೆ ಸುತ್ತುತ್ತಿದೆ. ಈ ಮಧ್ಯೆ ಶಿವಮೊಗ್ಗ ಮತ್ತು ಚಿಕ್ಕಮಗಳೂರಿನಲ್ಲಿ ಈ ಹೇಳಿಕೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ವಿರುದ್ಧ ದೂರುಗಳು ದಾಖಲಾಗುತ್ತಿದ್ದಂತೆ ಕಾಂಗ್ರೆಸ್ ಪ್ಲೇಟೇ ಬದಲಾಗಿದೆ. ಲೋಕಸಭೆಯಲ್ಲಿ ಕಾಂಗ್ರೆಸ್ ಮುಖಂಡ ಮಲ್ಲಿಕಾರ್ಜು ಖರ್ಗೆ ಅವರು ತಮ್ಮ ಪಕ್ಷವಾಗಲಿ, ತಮ್ಮ ಪಕ್ಷದ ನಾಯಕರಾಗಲಿ ಗೌರಿ ಲಂಕೇಶ್ ಹತ್ಯೆಯಲ್ಲಿ ಇಂಥವರದೇ ಕೈವಾಡ ಇದೆ ಎಂದು ಹೇಳಿಲ್ಲ, ಯಾರನ್ನೂ ಹೊಣೆ ಮಾಡಿಲ್ಲ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಆ ಮೂಲಕ ಕಾಂಗ್ರೆಸ್ ಮರ್ಯಾದೆ ಉಳಿಸಿಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಬಾಯಿಗೆ ಬಂದ ಹೇಳಿಕೆ ಕೊಟ್ಟು ಇಂಥ ಸ್ಥಿತಿ ಮೈಮೇಲೆ ಎಳೆದುಕೊಳ್ಳೋದು ಭವಿಷ್ಯದ ಪ್ರಧಾನಿ ಎಂದು ಬಿಂಬಿಸಿಕೊಂಡಿರುವ ರಾಹುಲ್ ಗಾಂಧಿ ಅವರಿಗೆ ಯಾಕೆ ಬೇಕಿತ್ತು? ಸ್ವಲ್ಪ ನಾಲಿಗೆ ಮತ್ತು ಮಿದುಳಿಗೆ ಸಂಪರ್ಕ ಇಟ್ಟುಕೊಂಡು ಮಾತಾಡಬೇಕು ಎನ್ನುವುದನ್ನ ಇವರಿಗೆ ಯಾರು ಕಲಿಸಿಕೊಡಬೇಕು?

ಇಲ್ಲಿ ಇನ್ನೊಂದು ವಿಷಯವಿದೆ. ಗೌರಿ ಲಂಕೇಶ್ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇಟ್ಟಿದ್ದ ಸಂಸ ಬಯಲು ರಂಗ ಮಂದಿರಕ್ಕೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಂತರ ಲಿಂಗಾಯತ ರುದ್ರಭೂಮಿಯಲ್ಲಿ ನಡೆದ ಅಂತಿಮ ಸಂಸ್ಕಾರದಲ್ಲೂ ಭಾಗವಹಿಸಿದ್ದು, ಸರಕಾರಿ ಗೌರವ ಸಮರ್ಪಣೆ ಮಾಡಿದ್ದರ ಹಿಂದೆಯೂ ಹೈಕಮಾಂಡ್ ಒತ್ತಡ ಕೆಲಸ ಮಾಡಿದೆ. ಈ ಒತ್ತಡದ ಹಿಂದೆಯೂ ರಾಜಕೀಯ ಲೆಕ್ಕಾಚಾರಗಳಿವೆ. ಇಲ್ಲದಿದ್ದರೆ ಸಿದ್ದರಾಮಯ್ಯನವರು ಎರಡೆರಡು ಬಾರಿ ದರ್ಶನ ಪಡೆಯುವ ನಿಲುವು ತಾಳುತ್ತಿರಲಿಲ್ಲ. ಅದು ಅವರ ಜಾಯಮಾನವೂ ಅಲ್ಲ. ಹೆಚ್ಚೆಂದರೆ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರನ್ನೋ ಮತ್ಯಾರೋ ಸಚಿವರನ್ನು ಅಂತಿಮ ಸಂಸ್ಕಾರಕ್ಕೆ ಕಳುಹಿಸಿ ಸುಮ್ಮನಾಗುತ್ತಿದ್ದರು. ಒಟ್ಟಿನಲ್ಲಿ ಇಲ್ಲಿ ಒತ್ತಡ ಕೆಲಸ ಮಾಡಿರುವುದು ಸತ್ಯ.

ಇಲ್ಲಿ ಕಾಂಗ್ರೆಸ್ ಮಾತ್ರ ಇಂಥ ಯಡವಟ್ಟುಗಳನ್ನು ಮಾಡಿಲ್ಲ. ಬಿಜೆಪಿ ಕೂಡ ಈ ಯಡವಟ್ಟುಗಳಲ್ಲಿ ಪಾಲು ಪಡೆದಿದೆ. ಚೆಡ್ಡಿಗಳ ಮಾರಣ ಹೋಮ ಎಂದು ಗೌರಿ ಲಂಕೇಶ್ ತಮ್ಮ ಪತ್ರಿಕೆಯಲ್ಲಿ ಬರೆಯದೇ ಹೋಗಿದ್ದರೆ ಸಾಯುತ್ತಿರಲಿಲ್ಲವೇನೋ ಎಂದು ಹೇಳುವ ಮೂಲಕ ಬಿಜೆಪಿ ಶಾಸಕ ಜೀವರಾಜ್ ಕೂಡ ಅನಾಹುತವನ್ನು ತಮ್ಮ ಮತ್ತು ತಮ್ಮ ಪಕ್ಷದ ಮೈಮೇಲೆ ಎಳೆದುಕೊಂಡಿದ್ದಾರೆ. ಗೌರಿ ಲಂಕೇಶ್ ಹತ್ಯೆಯಾಗಲು ಈ ವರದಿ ಪ್ರಕಟಣೆಯೇ ಕಾರಣ, ಈ ವರದಿಯಿಂದ ಆಕ್ರೋಶಗೊಂಡ ಬಲಪಂಥೀಯರು ಈ ಹತ್ಯೆ ಮಾಡಿದ್ದಾರೆ ಎನ್ನುವ ಅರ್ಥವನ್ನು ಅವರ ಹೇಳಿಕೆ ಕೊಡುತ್ತಿದೆ. ಈ ಬಗ್ಗೆಯೂ ದೂರು ದಾಖಲಾಗಿದೆ. ಅವರನ್ನೂ ಕರೆದು ವಿಚಾರಣೆ ನಡೆಸಲು ನಿರ್ಧರಿಸಲಾಗಿದೆ. ಜೀವರಾಜ್ ಅವರ ಈ ಹೇಳಿಕೆ ಪರಾಮರ್ಶಿಸಿದರೆ ಅವರಿಗೆ ಹತ್ಯೆ ಕಾರಣ ಮತ್ತು ಹಂತಕರ ಬಗ್ಗೆ ಸ್ಪಷ್ಟ ಮಾಹಿತಿ ಇದೆ ಎಂದಾಗುತ್ತದೆ. ಆ ಬಗ್ಗೆ ಸುಳಿವು ಕೊಡುವುದು ಅವರ ಜವಾಬ್ದಾರಿಯಾಗುತ್ತದೆ. ಅಲ್ಲದೇ ಆರೋಪಿಗಳ ಸಾಲಿನಲ್ಲಿ ಅವರೂ ನಿಲ್ಲುತ್ತಾರೆ. ಅವರನ್ನು ವಿಚಾರಣೆಗೆ ಒಳಪಡಿಸುವ ನಿರ್ಧಾರ ಸರಿಯಾಗಿಯೇ ಇದೆ. ಮಾತಿನ ಓಘದಲ್ಲಿ ಆ ರೀತಿ ಹೇಳಿರುವುದಾಗಿ ಸಮಜಾಯಿಷಿ ಕೊಟ್ಟರೂ ಅವರಲ್ಲೂ ಅನಾವರಣಗೊಳ್ಳುವುದು ರಾಹುಲ್ ಗಾಂಧಿ ಅವರ ಎಳಸುತನ ಮತ್ತು ಎಡಬಿಡಂಗಿತನವೇ. ಜನಪ್ರತಿನಿಧಿಗಳು ಜನರಿಗೆ ಮಾದರಿ ಆಗಬೇಕು ಎನ್ನುತ್ತಾರೆ. ಇಂಥ ಮಾದರಿಗಳನ್ನು ತೆಗೆದುಕೊಂಡು ಏನು ಮಾಡುವುದು?

ಇನ್ನು ಕುಟುಂಬ ಸದಸ್ಯರು ಬಯಸಿದರೆ ಗೌರಿ ಹತ್ಯೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲು ಸಿದ್ಧವಿರುವುದಾಗಿ ಸಿದ್ದರಾಮಯ್ಯನವರು ಹೇಳಿರುವುದು. ಸಚಿವ ಕೆ.ಜೆ. ಜಾರ್ಜ್, ಪೊಲೀಸ್ ಅಧಿಕಾರಿಗಳಾದ ಮೊಹಾಂತಿ, ಎ.ಎಂ. ಪ್ರಸಾದ್ ಅವರ ಹೆಸರು ಹೇಳಿ ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಅವರ ಕುಟುಂಬ ಸದಸ್ಯರು ಇನ್ನಿಲ್ಲದಂತೆ ಬೇಡಿಕೊಂಡರೂ ಸಿದ್ದರಾಮಯ್ಯನವರು ಒಪ್ಪಲಿಲ್ಲ. ಆದರೆ ಗೌರಿ ಪ್ರಕರಣದ ಬಗ್ಗೆ ಒಂಚೂರು ಹಿಂದೆ-ಮುಂದೆ ಯೋಚಿಸಲಿಲ್ಲ. ಏಕೆಂದರೆ ಒಂದೊಮ್ಮೆ ಗೌರಿ ಹತ್ಯೆಯಲ್ಲಿ ಬಲಪಂಥೀಯರೋ, ನಕ್ಸಲರೋ ಯಾರೇ ಭಾಗಿ ಆಗಿದ್ದರೂ ಅದರಿಂದ ಸಿದ್ದರಾಮಯ್ಯನವರು ಹಾಗೂ ಅವರು ಪ್ರತಿನಿಧಿಸುವ ಕಾಂಗ್ರೆಸ್ ರಾಜಕೀಯವಾಗಿ ಕಳೆದುಕೊಳ್ಳುವುದು ಏನೂ ಇಲ್ಲ. ಹೀಗಾಗಿ ಸಿಬಿಐ ತನಿಖೆಗೆ ಮುಂದಾಗಿದ್ದಾರೆ. ಆದರೆ ಡಿವೈಎಸ್ಪಿ ಗಣಪತಿ ಪ್ರಕರಣ ಸರಕಾರದ ಪ್ರತಿನಿಧಿಗಳ ಕುತ್ತಿಗೆಗೆ ಸುತ್ತಿಕೊಳ್ಳುತ್ತದೆ ಎಂದು ಗೊತ್ತಿತ್ತು. ಹೀಗಾಗಿ ತಮ್ಮ ಸರಕಾರದ ಸುಪರ್ಧಿಯಲ್ಲಿರುವ ಸಿಐಡಿ ತನಿಖೆಗೆ ಕೊಟ್ಟು ಕೈ ತೊಳೆದುಕೊಂಡರು. ಸಿಐಡಿ ಅವರೆಲ್ಲರನ್ನೂ ಆರೋಪ ಮುಕ್ತರನ್ನಾಗಿ ಮಾಡಿದ್ದೂ ಆಯಿತು. ಆದರೆ ಆರೋಪಿಗಳ ಗ್ರಹಚಾರ ನೆಟ್ಟಗಿದ್ದಂತಿಲ್ಲ. ಇದೀಗ ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದ್ದು, ಅವರೆಲ್ಲರನ್ನೂ ಆತಂಕ ಆಳುತ್ತಿದೆ. ಗೌರಿ ಪ್ರಕರಣದಲ್ಲಾದರೆ ಆರೋಪಿಗಳು ಸಿಕ್ಕರೂ ಲಾಭ, ಸಿಗದಿದ್ದರೂ ಲಾಭ. ಸಿಕ್ಕರೆ ಬಲ ಪಂಥೀಯರೋ, ನಕ್ಸಲರೋ ಸಿಗುತ್ತಾರೆ. ಸಿಗದಿದ್ದರೆ ಮಹಾರಾಷ್ಟ್ರದ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾಾರೆ, ಕರ್ನಾಟಕದ ಪ್ರೊ. ಎಂ.ಎಂ. ಕಲ್ಬುರ್ಗಿ ಹತ್ಯೆ ಪ್ರಕರಣಗಳ ಊಹೆಯನ್ನು ಬಲಪಂಥೀಯರ ಕುತ್ತಿಗೆಗೆ ಕಟ್ಟಿ ಕಾಲ ದೂಡಬಹುದು. ಇದರಲ್ಲೂ ರಾಜಕೀಯ ಲಾಭ ದಕ್ಕಿದಷ್ಟೂ ದಕ್ಕಲಿ ಎಂಬುದೇ ಆಗಿದೆ.

ಇನ್ನು ಹೋಮ್ ಮಿನಿಸ್ಟರ್ ರಾಮಲಿಂಗಾರೆಡ್ಡಿ ಅವರು ಗೌರಿ ಹತ್ಯೆ ಪ್ರಕರಣದ ಬಗ್ಗೆ ಮಹತ್ವದ ಸುಳಿವು ಸಿಕ್ಕಿದ್ದು, ಸದ್ಯದಲ್ಲೇ ಹಂತಕರನ್ನು ಬಂಧಿಸುವುದಾಗಿ ಹೇಳಿದ್ದಾರೆ. ಇದು ಕೂಡ ಕಣ್ಣೊರೆಸುವ ತಂತ್ರವೇ. ಪ್ರಕರಣದ ತನಿಖೆ ನಡೆಸುತ್ತಿರುವ ಹಿರಿಯ ಅಧಿಕಾರಿಗಳ ಪ್ರಕಾರ ತನಿಖೆ ಇದ್ದಲ್ಲಿಯೇ ಇದೆ. ಅದು ಕ್ಷಿಪ್ರಗತಿಯಲ್ಲಿ ಸಾಗುವುದು ಪಕ್ಕಕ್ಕಿರಲಿ, ಕನಿಷ್ಟ ಪಕ್ಷ ಕುಂಟುತ್ತಲೂ ಇಲ್ಲ, ತೆವಳುತ್ತಲೂ ಇಲ್ಲ. ಆದರೂ ಶೀಘ್ರವೇ ಹಂತಕನ್ನು ಬಂಧಿಸುವುದಾಗಿ ಗೃಹ ಸಚಿವರು ನೀಡಿರುವ ಹೇಳಿಕೆ ಮತ್ತದೇ ರಾಜಕೀಯ ಪ್ರಕಟಣೆಗಷ್ಟೇ ಸೀಮಿತ. ಪ್ರೊ. ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಯಾದಾಗಲೂ ರಾಜ್ಯ ಸರಕಾರ ಪ್ರಕಟಿಸಿದ ‘ಶೀಘ್ರ’ ಎಂಬುದು ಎರಡು ವರ್ಷ ಕಳೆದರೂ ಇನ್ನೂ ಬಂದಿಲ್ಲ. ರಾಮಲಿಂಗಾರೆಡ್ಡಿ ಅವರ ‘ಶೀಘ್ರ’ ಯಾವಾಗ ಸಮೀಪಿಸುತ್ತದೋ ನೋಡಬೇಕು. ಆದರೆ ರಾಮಲಿಂಗಾರೆಡ್ಡಿ ಅವರು ಈ ವಿಚಾರದಲ್ಲಿ ತಾವು ‘ಗಂಡು’ ಎಂದು ಸಾಬೀತು ಮಾಡಿದ್ದಾರೆ. ಗೃಹ ಇಲಾಖೆ ಸಲಹೆಗಾರ, ನಿವೃತ್ತ ಪೊಲೀಸ್ ಅಧಿಕಾರಿ ಕೆಂಪಯ್ಯ ಅವರನ್ನು ಹೊರಗಿಟ್ಟು ಗೌರಿ ಹತ್ಯೆ ತನಿಖೆ ಕುರಿತು ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿರುವುದು. ಈವರೆಗೂ ಇದ್ದ ಗೃಹ ಸಚಿವರಾರೂ ಈ ಧೈರ್ಯ ತೋರಿರಲಿಲ್ಲ. ಅಷ್ಟರ ಮಟ್ಟಿಗೆ ರಾಮಲಿಂಗಾರೆಡ್ಡಿ ಅವರು ತಾವು ಏನೆಂಬುದನ್ನು ಸಾಬೀತು ಮಾಡುವುದರ ಜತೆಗೆ ಗೃಹ ಸಚಿವ ಖಾತೆಯ ‘ಮರ್ಯಾದೆ’ ಉಳಿಸಿದ್ದಾರೆ.

ಇನ್ನು ವಿಚಾರವಾದಿಗಳ ವಿಚಾರಕ್ಕೆ ಬರೋಣ. ಗೌರಿ ಹತ್ಯೆ ನಡೆದ ಕೆಲ ಕ್ಷಣಗಳಲ್ಲೇ ಅವರ ಮನೆ ಮುಂದೆ ಸೇರಿದ ವಿಚಾರವಾದಿಗಳು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಧಿಕ್ಕಾರ ಹಾಕಿದ್ದು. ಚೀನಾ ಪ್ರವಾಸದಲ್ಲಿದ್ದ ಮೋದಿ ವಿರುದ್ಧ ಧಿಕ್ಕಾರ ಹಾಕಲು ಅವರಿಗೆ ಉಮೇದಿ ತಂದ ವಿಚಾರವಾದರೂ ಏನು ಎಂಬುದು ಗೊತ್ತಾಗಲಿಲ್ಲ. ರಾಹುಲ್ ಗಾಂಧಿ, ಜೀವರಾಜ್ ಮಾಡಿದ ತಪ್ಪನ್ನೇ ಇವರೂ ಮಾಡಿದರು. ಯಾರನ್ನಾದರೂ ದೂಷಿಸಬೇಕಾದರೆ ಯಾವುದಾದರೂ ಒಂದು ಸಾಕ್ಷ್ಯವೋ, ಸುಳಿವೋ ಬೇಕಲ್ಲ. ಇವರಿಗೆ ಅದ್ಯಾವ ಅಶರೀರ ಆಧಾರ ಅದೆಲ್ಲಿಂದ ಸಿಕ್ಕಿತೋ ಗೊತ್ತಿಲ್ಲ. ಮೋದಿ ವಿರುದ್ಧ ಘೋಷಣೆ ಹಾಕಿ ಕಂಠಶೋಷಣೆ ಮಾಡಿಕೊಂಡರು. ಈ ಹತ್ಯೆಯಲ್ಲಿ ಪ್ರಧಾನಿ ಕೈವಾಡ ಇರುವ ಬಗ್ಗೆ ಇವರ ಬಳಿ ಮಾಹಿತಿ ಇದ್ದರೆ ಅದನ್ನು ವಿಶೇಷ ತನಿಖಾ ತಂಡಕ್ಕೆ ಕೊಟ್ಟಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಉಪಕಾರ ಮಾಡಿದಂತಾಗುತ್ತದೆ. ಅವರ ಶೀಘ್ರ ಬಂಧನ ಸಂಕಲ್ಪಕ್ಕೆ ಇವರದೂ ಕೊಡುಗೆ ಸೇರುತ್ತದೆ. ಅದನ್ನು ಬಿಟ್ಟು ಬರೀ ವಿರೋಧಕ್ಕಾಗಿ ವಿರೋಧ ಮಾಡಿದರೆ ವಿಚಾರಗಳು ಕಾಲಿ ಎನಿಸುತ್ತವೆ. ವಿರೋಧ ಮಾಡಿದರೂ ಜಗಮೆಚ್ಚಿ ಅಹುದೌಹುದು ಎನ್ನುವಂತಿರಬೇಕು!

ಇಲ್ಲಿ ಮತ್ತೊಂದು ಬೆಳವಣಿಗೆ ಆಗಿದೆ. ವಿಚಾರವಾದಿಗಳ ಒಂದು ಗುಂಪು ಮೋದಿ ವಿರುದ್ಧ ಆಕ್ರೋಶ ಚೆಲ್ಲಿದರೆ ಮತ್ತೊಂದು ಗುಂಪು ಪ್ರಗತಿಪರರಿಗೆ ರಕ್ಷಣೆ ನೀಡುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ. ರಾಜ್ಯದಲ್ಲಿ ವಿಚಾರವಾದಿಗಳ ಹತ್ಯೆ ಎಂಬುದು ಸಾಮಾನ್ಯ ಸಂಗತಿ ಆಗಿಹೋಗಿದೆ ಎಂದು ಕೆಂಡ ಕಾರಿದೆ. ಅಲ್ಲಿಗೆ ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಹತ್ಯೆ ವಿಚಾರದಲ್ಲಿ ವಿಚಾರವಾದಿಗಳಲ್ಲೇ ವಿಭಿನ್ನ ನಿಲುವು. ಒಬ್ಬರು ಮೋದಿ ಕಾರಣ ಎಂದರೆ, ಮತ್ತೊಬ್ಬರು ಸಿದ್ದರಾಮಯ್ಯ ಸರಕಾರ ಹೊಣೆ ಎನ್ನುತ್ತಿದೆ. ಇದರಲ್ಲಿ ಯಾವುದು ನಿಜ, ಯಾವುದು ಸುಳ್ಳು ಎಂಬುದರ ಬಗ್ಗೆ ಅವರಲ್ಲೇ ಒಮ್ಮತವಿಲ್ಲ. ಅವರಿಗೇ ಗೊತ್ತಿಲ್ಲ.

ಈ ಎಲ್ಲ ಬೆಳವಣಿಗೆ ನೋಡಿದರೆ ಒಂದಂತೂ ಸುಸ್ಪಷ್ಟ. ಗೌರಿ ಲಂಕೇಶ್ ಹತ್ಯೆ ಇಲ್ಲಿ ನೆಪ ಮಾತ್ರ. ಎಲ್ಲರಿಗೂ ಬೇಕಿರುವುದು ತಮ್ಮ ರಾಜಕೀಯ ಮತ್ತು ವಿಚಾರಗಳ ಬೇಳೆ ಬೇಯಿಸಿಕೊಳ್ಳುವುದು. ಗೌರಿ ಹತ್ಯೆ ನಿಜ ಹಂತಕರನ್ನು ಪತ್ತೆ ಹಚ್ಚಿ, ಶಿಕ್ಷೆ ಕೊಡಿಸಿ ಅಂತ ಅವರ ಕುಟುಂಬ ಸದಸ್ಯರು ಮಾತ್ರ ಗೋಗರೆಯತ್ತಿದ್ದಾರೆ. ಉಳಿದರೆಲ್ಲರೂ ತಮ್ಮ ಅಸ್ತಿತ್ವದ ಉಳುಮೆ ಮಾಡಿಕೊಳ್ಳುತ್ತಿದ್ದಾರೆ. ಹಂತಕರು ಪತ್ತೆ ಆಗುವುದಾಗಲಿ, ಗೌರಿ ಹತ್ಯೆಯಲ್ಲಾಗಲಿ, ಕಲ್ಬುರ್ಗಿ ಹತ್ಯೆಯಲ್ಲಾಗಲಿ, ಕರಾವಳಿಯ ಶರತ್ ಮಡಿವಾಳರ ಹತ್ಯೆಯಲ್ಲಾಗಲಿ, ಬೆಂಗಳೂರಿನ ಶಿವಾಜಿನಗರದ ರುದ್ರೇಶ್ ಹತ್ಯೆಯಲ್ಲಾಗಲಿ ಮೆರೆದಿರುವ ಜೀವವಿರೋಧಿ ಹಿಂಸೆ ನಾಶವಾಗುವುದು ಅವರಿಗೆ ಬೇಕಿಲ್ಲ. ಎಡಪಂಥೀಯರ ಮೇಲೆ ಬಲಪಂಥೀಯರು, ಬಲಪಂಥೀಯರ ಮೇಲೆ ಎಡಪಂಥೀಯರು ಗೂಬೆ ಕೂರಿಸುವ ಮೂಲಕವೇ ಗೌರಿ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ!

ಲಗೋರಿ: ಪ್ರಗತಿಗಷ್ಟೇ ಅಲ್ಲ, ವಿನಾಶಕ್ಕೂ ವಿಚಾರವೇ ಸೋಪಾನ!

(ವಿಶ್ವವಾಣಿಯಲ್ಲಿ ಪ್ರಕಟಿತ)

Leave a Reply