ಆಧಾರ್ ಜೋಡಿಸದಿದ್ರೆ ನಿಮ್ಮ ಸಿಮ್ ಕಾರ್ಡ್ ನಿಷ್ಕ್ರಿಯ, ಇದನ್ನು ಮಾಡುವ ಪ್ರಕ್ರಿಯೆ ಹೇಗೆ?

ಡಿಜಿಟಲ್ ಕನ್ನಡ ಟೀಮ್:

ಖಾಸಗಿ ಹಕ್ಕು ಮೂಲಭೂತ ಹಕ್ಕಗಳಲ್ಲಿ ಒಂದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದರೂ ಸರ್ಕಾರ ಮಾತ್ರ ಆಧಾರ್ ಕಡ್ಡಾಯ ನಿರ್ಧಾರವನ್ನು ಮುಂದುವರಿಸುತ್ತಲೇ ಇದೆ. ಪ್ರತಿಯೊಬ್ಬರು ತಮ್ಮ ಮೊಬೈಲ್ ಸಂಖ್ಯೆಯನ್ನು ಆಧಾರ್ ಕಾರ್ಡಿಗೆ ಜೋಡಿಸುವುದನ್ನು ಕೇಂದ್ರ ಸರ್ಕಾರ ಕಡ್ಡಾಯ ಮಾಡಿದೆ. ಒಂದು ವೇಳೆ 2018ರ ಫೆಬ್ರವರಿಯೊಳಗೆ ಆಧಾರ್ ಜೋಡಿಸದಿದ್ದರೆ ಆ ಮೊಬೈಲ್ ಸಂಖ್ಯೆ ಇರುವ ಸಿಮ್ ಕಾರ್ಡ್ ಗಳು ನಿಷ್ಕ್ರಿಯೆಗೊಳ್ಳಲಿವೆ.

ಇದೇ ವರ್ಷ ಫೆಬ್ರವರಿಯಲ್ಲಿ ಲೋಕನೀತಿ ಫೌಂಡೇಶನ್ ಪ್ರಕರಣದ ವಿಚಾರಣೆ ವೇಳೆ ಸುಪ್ರಿಂ ಕೋರ್ಟ್ ನೀಡಿರುವ ಆದೇಶದಂತೆಯೇ ಮೊಬೈಲ್ ಸಂಖ್ಯೆ ಹಾಗೂ ಆಧಾರ್ ಸಂಖ್ಯೆ ಜೋಡಿಸಲಾಗುತ್ತಿದೆ ಎಂದು ಕೇಂದ್ರ ಸಮರ್ಥನೆ ನೀಡಿದೆ. ಈ ತೀರ್ಪು ಪ್ರಕರಟವಾದ ಒಂದು ವರ್ಷದ ಒಳಗಾಗಿ ಎಲ್ಲರು ತಮ್ಮ ಮೊಬೈಲ್ ಸಂಖ್ಯೆಗಳನ್ನು ತಮ್ಮ ಆಧಾರ್ ಕಾರ್ಡಿಗೆ ಜೋಡಿಸಬೇಕು ಎಂದು ಸರ್ಕಾರ ಆದೇಶಿಸಿದೆ. ಸರ್ಕಾರದ ಈ ನಿರ್ಧಾರದಿಂದ ಅಪರಾಧಿಗಳು, ವಂಚಕರು ಮತ್ತು ಭಯೋತ್ಪಾದಕರನ್ನು ಪತ್ತೆ ಹಚ್ಚಲು ನೆರವಾಗುತ್ತದೆ. ಅಲ್ಲದೆ ಸಿಮ್ ಬಳಕೆದಾರರು ನೀಡಲಾಗುವ ಆಧಾರ್ ಕಾರ್ಡಿನ ಬಯೋಮೆಟ್ರಿಕ್ ಮಾಹಿತಿಯನ್ನು ಮೊಬೈಲ್ ಕಂಪನಿಗಳು ತಮ್ಮ ಬಳಿ ಇಟ್ಟುಕೊಳ್ಳುವಂತಿಲ್ಲ ಎಂಬ ಸೂಚನೆಯನ್ನೂ ನೀಡಲಾಗಿದೆ.

ಸಿಮ್- ಆಧಾರ್ ಜೋಡಣೆ ಹೇಗೆ?

ಈ ಪ್ರಕ್ರಿಯೆಗಳಲ್ಲಿ ಎರಡು ರೀತಿಯ ವಿಧಾನವಿದೆ. ನೀವು ಮೊದಲ ಬಾರಿಗೆ ಆಧಾರ್ ಕಾರ್ಡ್ ಅನ್ನು ಸಿಮ್ ಕಾರ್ಡಿಗೆ ಜೋಡಿಸುತ್ತಿದ್ದರೆ ಒಂದು ಪ್ರಕ್ರಿಯೆ, ನಿಮ್ಮ ಮೊಬೈಲ್ ಸಂಖ್ಯೆ ಬದಲಾಗಿದ್ದರೆ, ನಿಮ್ಮ ಆಧಾರ್ ಕಾರ್ಡಿಗೆ ಹಳೇ ಮೊಬೈಲ್ ಸಂಖ್ಯೆ ಬದಲಿಗೆ ಹೊಸ ಸಂಖ್ಯೆ ಜೋಡಣೆ.

  • ಮೊದಲ ಬಾರಿಗೆ ಆಧಾರ್ ಜೋಡಣೆ ಮಾಡುವ ಪ್ರಕ್ರಿಯೆ ಹೀಗಿದೆ… ಈ ಪ್ರಕ್ರಿಯೆಯನ್ನು ಆಫ್ ಲೈನ್ ಮೂಲಕ ಮಾಡುವುದಾಗಿದೆ. ನಿಮ್ಮ ಸಮೀಪವಿರುವ ಆಧಾರ್ ಕೇಂದ್ರಕ್ಕೆ ಭೇಟಿ ನೀಡಿ ಅಥವಾ ಯುಐಡಿಎಐ ವೆಬ್ ಸೈಟಿಗೆ ಭೇಟಿ ನೀಡಿ ಆಧಾರ್ ಅಪ್ ಡೇಟ್/ ಮಾಹಿತಿ ಸರಿಪಡಿಸುವ ಅರ್ಜಿಯನ್ನು ಪಡೆಯಬೇಕು. ನಂತರ ಆ ಅರ್ಜಿಯನ್ನು ಸರಿಯಾಗಿ ತುಂಬಿ ಮೊಬೈಲ್ ಸಂಖ್ಯೆ ಜೋಡಣೆ ಎಂದು ನಮೂದಿಸಿ ಆಧಾರ್ ಕೇಂದ್ರದಲ್ಲಿರುವ ಅಧಿಕಾರಿಗೆ ಸಲ್ಲಿಸಬೇಕು. ಈ ಅರ್ಜಿಯ ಜತೆಗೆ ನಿಮ್ಮ ಆಧಾರ್ ಕಾರ್ಡ್ ಹಾಗೂ ಇತರೆ ಗುರುತಿನ ಚೀಟಿ (ಡಿಎಲ್, ಪ್ಯಾನ್ ಕಾರ್ಡ್, ಮತದಾನ ಗುರುತಿನ ಚೀಟಿ, ಇತ್ಯಾದಿ) ಯ ನಕಲು ಪ್ರತಿಯನ್ನು ಸಲ್ಲಿಸಬೇಕು.
    ಈ ಅರ್ಜಿ ಸಲ್ಲಿಸಿದ ನಂತರ ಆಧಾರ್ ಕೇಂದ್ರದಲ್ಲಿ ನಿಮ್ಮ ಬಯೋಮೆಟ್ರಿಕ್ ಮಾಹಿತಿಯ ಪರಿಶೀಲನೆ ನಡೆಸಲಾಗುವುದು. ಈ ಪರಿಶೀಲನೆ ನಂತರ ನಿಮಗೆ ಅರ್ಜಿ ಸಲ್ಲಿಸಿದರ ಒಂದು ರಸೀದಿ ನೀಡಲಾಗುವುದು. ನಂತರ 2-5 ಕೆಲಸದ ದಿನಗಳಲ್ಲಿ ಈ ಅಪ್ ಡೇಟ್ ಆಗಲಿದ್ದು, ಯುಐಡಿಎಐ ನಿಯಮ ಪ್ರಕಾರ 10 ದಿನಗಳವರೆಗೂ ಕಾಲಾವಕಾಶ ತೆಗೆದುಕೊಳ್ಳಬಹುದು.
  • ಹಳೇಯ ಸಂಖ್ಯೆ ಜತೆ ಹೊಸ ಸಂಖ್ಯೆ ಜೋಡಣೆ… ಈ ಒಂದು ಪ್ರಕ್ರಿಯೆಯನ್ನು ನೀವು ಆನ್ ಲೈನ್ ಮೂಲಕವೇ ಮಾಡಬೇಕಿದೆ. ಆದರೆ ನಿಮ್ಮ ಆಧಾರ್ ಕಾರ್ಡಿನಲ್ಲಿ ದಾಖಲೆಯಾಗಿರುವ ನಿಮ್ಮ ಮೊಬೈಲ್ ಸಂಖ್ಯೆ ಚಾಲ್ತಿಯಲ್ಲಿರಲೇಬೇಕು. ಕಾರಣ ಈ ಪ್ರಕ್ರಿಯೆ ವೇಳೆ ಒನ್ ಟೈಮ್ ಪಾಸ್ ವರ್ಡ್ ಅನ್ನು ಈಗಾಗಲೇ ದಾಖಲಾಗಿರುವ ಮೊಬೈಲ್ ಸಂಖ್ಯೆಗೆ ಖಲುಹಿಸಲಾಗುತ್ತದೆ.
    ಯುಐಎಡಿಐ ವೆಬ್ ಸೈಟಿಗೆ ಭೇಟಿ ನೀಡಿ ಅಲ್ಲಿ ಆಧಾರ್ ಅಪ್ ಡೇಟ್ ಎಂಬ ಗುಂಡಿ ಒತ್ತಬೇಕು. ಆಗ ಅದು ಆಧಾರ್ ಬಳಕೆದಾರರ ಸ್ವಯಂ ಸೇವೆ ವಿಭಾಗಕ್ಕೆ ಕರೆದೊಯ್ಯುತ್ತದೆ. ಆಗ ನಿಮ್ಮ ಕಾರ್ಡಿಗೆ ದಾಖಲಾಗಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಅದನ್ನು ನಮೂದಿಸಿದ ನಂತರ ನಿಮ್ಮ ಆಧಾರ್ ಕಾರ್ಡ್ ಮಾಹಿತಿ ಬದಲಾವಣೆಯ ಪ್ರಕ್ರಿಯೆಗೆ ದಾರಿ ಮಾಡಿಕೊಡುತ್ತದೆ. ಅಲ್ಲಿ ಅಪ್ ಡೇಟ್ ಆಗಬೇಕಿರುವ (Select field(s) to update) ಎಂಬುದರ ಕೆಳಗೆ ಮೊಬೈಲ್ ಸಂಖ್ಯೆ ಎಂಬ ಗುಂಡಿ ಇರುತ್ತದೆ. ಅಲ್ಲಿ ನೀವು ಹೊಸದಾಗಿ ಜೋಡಿಸಬೇಕಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು. ಈ ಪ್ರಕ್ರಿಯೆ ಮೂಲಕ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆ ಜೋಡಣೆಯಾಗಲಿದೆ.

Leave a Reply