ಆಸೀಸ್ ವಿರುದ್ಧ ಏಕದಿನ ಕ್ರಿಕೆಟ್ ಸರಣಿಗೆ ಟೀಂ ಇಂಡಿಯಾ ಪ್ರಕಟ, ಇದು ‘ಆರ್ ಸಿಬಿ ಕೋಟಾ’ ಎಂದು ಅಭಿಮಾನಿಗಳು ಟೀಕಿಸುತ್ತಿರೋದೇಕೆ?

ಡಿಜಿಟಲ್ ಕನ್ನಡ ಟೀಮ್:

ಇದೇ ತಿಂಗಳು 17ರಿಂದ ಆರಂಭವಾಗಲಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಆರಂಭಿಕ ಮೂರು ಪಂದ್ಯಗಳಿಗೆ ಟೀಂ ಇಂಡಿಯಾ ಆಟಗಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಈ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ಅವರಿಗೆ ವಿಶ್ರಾಂತಿ ನೀಡಲಾಗಿದ್ದು, ಶ್ರೀಲಂಕಾ ಪ್ರವಾಸದಲ್ಲಿ ಆಡಿದ್ದ ಮಧ್ಯಮ ವೇಗಿ ಶಾರ್ದುಲ್ ಠಾಕೂರ್ ತಂಡದಿಂದ ಹೊರಗುಳಿದಿದ್ದಾರೆ.

ಇನ್ನು ಭಾರತದ ಪ್ರಮುಖ ವೇಗಿಗಳಾದ ಉಮೇಶ್ ಯಾದವ್, ಮೊಹಮದ್ ಶಮಿ ತಂಡಕ್ಕೆ ಮರಳಿದ್ದಾರೆ. ಇನ್ನು ಟೀಂ ಇಂಡಿಯಾದ ಮಧ್ಯಮ ಕ್ರಮಾಂಕದ ಆಸರೆಗಳು ಎಂದೇ ಖ್ಯಾತಿ ಪಡೆದಿದ್ದ ಯುವರಾಜ್ ಸಿಂಗ್ ಹಾಗೂ ಸುರೇಶ್ ರೈನಾ 16 ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿಲ್ಲದಿರುವುದು ಅಭಿಮಾನಿಗಳ ನಿರಾಸೆಗೆ ಕಾರಣವಾಗಿದೆ.

ಯುವಿ ಹಾಗೂ ರೈನಾ ಅಲಭ್ಯತೆ ಒಂದೆಡೆಯಾದರೆ, ತಂಡದಲ್ಲಿ ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಆರ್ಸಿಬಿ ತಂಡದ ಆಟಗಾರರಾದ ಯುಜ್ವೇಂದ್ರ ಚಹಲ್, ಕೇದಾರ್ ಜಾಧವ್, ಕೆ.ಎಲ್ ರಾಹುಲ್ ಸ್ಥಾನ ಪಡೆದಿರುವುದನ್ನು ಅಭಿಮಾನಿಗಳು ಈ ಆಯ್ಕೆಯನ್ನು ಆರ್ ಸಿಬಿ ಕೋಟಾ ಎಂದು ಹೇಳುವ ಮೂಲಕ ಟೀಕಿಸಿದ್ದಾರೆ.

ಈ ಹಿಂದೆ ಮಹೇಂದ್ರ ಸಿಗ್ ಧೋನಿ ಟೀಂ ಇಂಡಿಯಾ ನಾಯಕನಾಗಿದ್ದಾಗ ರೈನಾ, ಜಡೇಜಾ, ಅಶ್ವಿನ್ ಆಯ್ಕೆಯನ್ನು ಪ್ರಶ್ನಿಸಿ ಅಭಿಮಾನಿಗಳು ಸಿಎಸ್ ಕೆ ತಂಡ ಎಂದು ಟೀಕೆ ಮಾಡಿದ್ದರು. ಈಗ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಟೀಂ ಇಂಡಿಯಾ ನಾಯಕನಾದ ನಂತರ ಬೆಂಗಳೂರು ತಂಡದ ಆಟಗಾರರಿಗೆ ತಂಡದಲ್ಲಿ ಸ್ಥಾನ ಸಿಗುತ್ತಿರುವುದನ್ನು ಅಭಿಮಾನಿಗಳು ಖಂಡಿಸಿದ್ದಾರೆ. ಈ ಹಿಂದೆ ಧೋನಿ ಟೀಂ ಇಂಡಿಯಾ ನಾಯಕರಾಗಿದ್ದಾಗ ತಂಡದ ಆಯ್ಕೆಯನ್ನು ಟೀಕಿಸಿದವರಲ್ಲಿ ಆರ್ ಸಿಬಿ ಅಭಿಮಾನಿಗಳೇ ಹೆಚ್ಚು. ಈಗ ಆರ್ ಸಿಬಿ ಕೋಟಾ ಎಂದು ಇತರೆ ಆಟಗಾರರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಟೀಕಿಸುತ್ತಿದ್ದಾರೆ.

ಸದ್ಯದ ಮಟ್ಟಿಗೆ ಈ ಟೀಕೆಗಳನ್ನು ಬದಿಗಿಟ್ಟು ತಂಡದ ಆಯ್ಕೆ ವೇಳೆ ಯುವಿ, ರೈನಾ ಕೈ ಬಿಡಲು ಕಾರಣವೇನು? ಆರ್ ಸಿಬಿ ಆಟಗಾರರಿಗೆ ಮಣೆ ಹಾಕಲು ಕಾರಣ ಏನಿರಬಹುದು ಎಂದು ನೋಡುವುದು ಉತ್ತಮ.

ಸುರೇಶ್ ರೈನಾ ಕಳಪೆ ಫಾರ್ಮ್ ಕಾರಣದಿಂದಾಗಿ ತಂಡದಿಂದ ಹೊರಗುಳಿದಿದ್ದು, ಈವರೆಗೂ ದೇಶಿ ಕ್ರಿಕೆಟ್ ನಲ್ಲಿ ಮತ್ತೆ ತಮ್ಮ ಲಯವನ್ನು ಸಾಬೀತುಪಡಿಸುವ ಅಗತ್ಯವಿದೆ. ಐಪಿಎಲ್ ನಲ್ಲೂ ನಿರೀಕ್ಷಿತ ಮಟ್ಟದಲ್ಲಿ ರನ್ ಗಳಿಸದ ರೈನಾ, ಮುಂಬರುವ ರಣಜಿ ಋತುವಿನಲ್ಲಿ ತಾಲೀಮು ಹೆಚ್ಚು ಬೆವರು ಸುರಿಸಬೇಕು. ಇನ್ನು ಯುವರಾಜ್ ಸಿಂಗ್ ಅವರ ಸ್ಥಾನಕ್ಕೆ ಕುತ್ತು ತಂದಿರುವುದು ಮನೀಷ್ ಪಾಂಡೆ ಹಾಗೂ ಅಜಿಂಕ್ಯ ರಹಾನೆ. ಈಗಾಗಲೇ ರೋಹಿತ್, ಧವನ್ ಹಾಗೂ ರಾಹುಲ್ ನಡುವೆ ಆರಂಭಿಕ ಸ್ಥಾನಕ್ಕೆ ಪೈಪೋಟಿ ನಡೆಯುತ್ತಿದೆ. ರಾಹುಲ್ ಮೂರು ಮಾದರಿಯಲ್ಲೂ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವುದು ಅಜಿಂಕ್ಯ ರಹಾನೆ ಆರಂಭಿಕನಾಗಿ ಆಡುವುದಕ್ಕೆ ಬ್ರೇಕ್ ಹಾಕಿದೆ. ಹೀಗಾಗಿ ರಹಾನೆ ಮಧ್ಯಮ ಕ್ರಮಾಂಕದ ಆಟಗಾರನಾಗಿದ್ದಾರೆ. ಇನ್ನು ಯುವ ಆಟಗಾರ ಮನೀಷ್ ಪಾಂಡೆ ತನ್ನ ಅತ್ಯುತ್ತಮ ಟೆಪ್ರಮೆಂಟ್, ಫೀಲ್ಡಿಂಗ್ ಹಾಗೂ ಬ್ಯಾಟಿಂಗ್ ನಿಂದ ತಂಡಕ್ಕೆ ಭರವಸೆ ಮೂಡಿಸಿದ್ದಾರೆ. 2019ರ ವಿಶ್ವಕಪ್ ಗಮನದಲ್ಲಿಟ್ಟುಕೊಂಡು ತಂಡ ಕಟ್ಟುತ್ತಿರುವ ಹಿನ್ನೆಲೆಯಲ್ಲಿ ಆಸ್ಟ್ರೇಲಿಯಾ ಹಾಗೂ ನ್ಯೂಜಿಲೆಂಡ್ ವಿರುದ್ಧದ ಮಹತ್ವದ ಸರಣಿಗಳಲ್ಲಿ ಈ ಯುವ ಆಟಗಾರರಿಗೆ ಸ್ಥಾನ ಕಲ್ಪಿಸುವುದು ಅವಶ್ಯಕ. ಹೀಗಾಗಿ ಯುವರಾಜ್ ಸಿಂಗ್ ಅವರ ಹೆಸರನ್ನು ಆಯ್ಕೆ ಸಮಿತಿ ಪಕ್ಕಕ್ಕಿರಿಸುವಂತೆ ಮಾಡಿದೆ.

ಇನ್ನು ಸ್ಪಿನ್ನರ್ ವಿಭಾಗದಲ್ಲಿ ಯುಜ್ವೇಂದ್ರ  ಚಹಲ್ ಹಾಗೂ ಅಕ್ಷರ್ ಪಟೇಲ್ ಸ್ಥಾನ ಪಡೆದಿದ್ದಾರೆ. ಅಶ್ವಿನ್ ಹಾಗೂ ಜಡೇಜಾ ತಂಡಕ್ಕೆ ಆಯ್ಕೆಯಾದರೆ ಸಹಜವಾಗಿ ಚಹಲ್ ಹಾಗೂ ಅಕ್ಷರ್ ತಂಡದಿಂದ ಹೊರಗುಳಿಯಬೇಕು. ಈ ಇಬ್ಬರು ಪ್ರಮುಖ ಸ್ಪಿನ್ನರ್ ಗಳ ಸ್ಥಾನ ತುಂಬಲು ಚಹಲ್, ಅಕ್ಷರ್ ಪಟೇಲ್ ಜತೆಗೆ ಕುಲ್ದೀಪ್ ಯಾದವ್ ಸಹ ಪೈಪೋಟಿ ನೀಡುತ್ತಿದ್ದಾರೆ.

ಧೋನಿಯ ವಿಕೆಟ್ ಕೀಪಿಂಗ್ ಹಾಗೂ ಬ್ಯಾಟಿಂಗ್ ನಲ್ಲಿ ಮ್ಯಾಚ್ ಫಿನಿಷರ್ ಇನ್ನು ಸಿಗದಿರುವುದು ಹಾಗೂ ಮೈದಾನದಲ್ಲಿ ಧೋನಿಯ ಚುರುಕುತನ ಇನ್ನು ಮಾಸದಿರುವುದು ಧೋನಿಯ ಸ್ಥಾನಕ್ಕೆ ಸುರಕ್ಷಿತವಾಗಿದೆ. ಆದರೆ, ಯುವಿ ಹಾಗೂ ರೈನಾ ಈ ಹಿಂದೆ ಮ್ಯಾಚ್ ವಿನ್ನರ್ ಗಳಾಗಿದ್ದರೂ ಅವರ ಚುರುಕುತನ ಸ್ವಲ್ಪ ಮಟ್ಟಿಗೆ ಮಾಸಿದ್ದು, ಈ ಯುವ ಆಟಗಾರರಿಂದ ಪ್ರತಿಸ್ಪರ್ಧೆ ಎದುರಿಸುವಂತಾಗಿದೆ.

ಒಟ್ಟಿನಲ್ಲಿ ಅಭಿಮಾನಿಗಳ ನಿರಾಸೆ, ಟೀಕೆಯ ನಡುವೆ ಭವಿಷ್ಯದ ದೃಷ್ಟಿಯಲ್ಲಿ ತಂಡ ಕಟ್ಟುವ ಜತೆಗೆ ಪ್ರಮುಖ ಆಟಗಾರರ ಸ್ಥಾನವನ್ನು ಯಾವುದೇ ಕ್ಷಣದಲ್ಲಿ ತುಂಬ ಬೆಂಚ್ ಬಲವನ್ನು ಹೆಚ್ಚಿಸುವತ್ತ ಆಯ್ಕೆ ಮಂಡಳಿ ಗಮನ ಹರಿಸುತ್ತಿರುವುದು ಭರವಸೆ ಮೂಡಿಸಿದೆ.

ಆಸೀಸ್ ವಿರುದ್ಧದ ಆರಂಭಿಕ ಮೂರು ಏಕದಿನ ಸರಣಿಗೆ ಭಾರತ ತಂಡ ಹೀಗಿದೆ…

ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್ ರಾಹುಲ್, ಅಜಿಂಕ್ಯ ರಹಾನೆ, ಮಹೇಂದ್ರ ಸಿಂಗ್ ಧೋನಿ, ಮನೀಷ್ ಪಾಂಡೆ, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಯುಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ಮೊಹಮದ್ ಶಮಿ, ಉಮೇಶ್ ಯಾದವ್, ಕುಲ್ದೀಪ್ ಯಾದವ್, ಭುವನೇಶ್ವರ್ ಕುಮಾರ್, ಜಸ್ಪ್ರೀತ್ ಬುಮ್ರಾ.

Leave a Reply