ಎಐಡಿಎಂಕೆಯಿಂದ ಶಶಿಕಲಾ- ದಿನಕರನ್ ವಜಾ, ಶಾಶ್ವತವಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ್ರು ದಿ.ಜಯಲಲಿತಾ!

ಡಿಜಿಟಲ್ ಕನ್ನಡ ಟೀಮ್:

ಕಳೆದ ಎಂಟು ತಿಂಗಳಿನಿಂದ ತಮಿಳುನಾಡು ರಾಜ್ಯ ರಾಜಕೀಯವನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಹರಸಾಹಸ ಪಟ್ಟಿದ್ದ ಶಶಿಕಲಾ ಹಾಗೂ ಟಿಟಿವಿ ದಿನಕರನ್ ಅವರನ್ನು ಎಐಎಡಿಎಂಕೆ ಪಕ್ಷದಿಂದ ಉಚ್ಛಾಟಿಸಲಾಗಿದೆ. ಆ ಮೂಲಕ ತಮಿಳುನಾಡು ರಾಜಕೀಯದಲ್ಲಿ ಮನ್ನಾರ್ ಗುಡಿ ಮಾಫಿಯಾಗೆ ತೆರೆ ಎಳೆದಂತಾಗಿದೆ.

ಕಳೆದ ಜನವರಿಯ ನಂತರ ಇದೇ ಮೊದಲ ಬಾರಿಗೆ ಎಐಎಡಿಎಂಕೆ ಪಕ್ಷದ ಪದಾಧಿಕಾರಿಗಳ ಸಭೆ ನಡೆದಿದ್ದು, ಸಾಕಷ್ಟು ಮಹತ್ವ ಪಡೆದುಕೊಂಡಿತ್ತು. ಮಂಗಳವಾರ ಚೆನ್ನೈನಲ್ಲಿ ನಡೆದ ಈ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಿಕೆ.ಶಶಿಕಲಾ ಅವರನ್ನು ವಜಾಗೊಳಿಸಿದ್ದು, ಆ ಸ್ಥಾನಕ್ಕೆ ಶಾಶ್ವತವಾಗಿ ದಿವಂಗತ ಜಯಲಲಿತಾ ಅವರನ್ನು ಆಯ್ಕೆ ಮಾಡಲಾಗಿದೆ. ಇನ್ನು ಉಪಕಾರ್ಯದರ್ಶಿ ಸ್ಥಾನದಿಂದ ಟಿಟಿವಿ ದಿನಕರನ್ ಅವರನ್ನು ಕೆಳಗಿಳಿಸಲಾಗಿದೆ. ಇನ್ನು ಜಯಲಲಿತಾ ಅವರು ಸಾಯುವ ಮುನ್ನ ಪಕ್ಷದ ಪ್ರಮುಖ ಹುದ್ದೆಗಳಲ್ಲಿ ಯಾರನ್ನು ನೇಮಿಸಿದ್ದರೊ ಅವರನ್ನು ಮತ್ತೆ ಅದೇ ಸ್ಥಾನಕ್ಕೆ ಆಯ್ಕೆ ಮಾಡಲು ಈ ಸಭೆಯಲ್ಲಿ ನಿರ್ಧರಿಸಲಾಗಿದೆ.

ಈಗಾಗಲೇ ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ಈಗ ಪಕ್ಷದ ಪ್ರಮುಖ ಹುದ್ದೆಯಿಂದ ಹೊರಹಾಕಿರುವ ಮೂಲಕ ಅವರ ರಾಜಕೀಯ ಭವಿಷ್ಯ ಕಮರಿದೆ.

Leave a Reply