ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ, ಪ್ರತಿರೋಧ ಸಮಾವೇಶದ ಒಕ್ಕೊರಲ ಧ್ವನಿ

ಡಿಜಿಟಲ್ ಕನ್ನಡ ಟೀಮ್:

ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಹಿನ್ನೆಲೆಯಲ್ಲಿ ಬೆಂಗಳೂರಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಪ್ರತಿರೋಧ ಸಮಾವೇಶವು ಹಿಂದುತ್ವ ಹಾಗೂ ಕೋಮುವಾದಿಗಳನ್ನು ಇನ್ನಿಲ್ಲದಂತೆ ತರಾಟೆಗೆ ತೆಗೆದುಕೊಂಡಿದೆ.

ಹಿಂದೂ ಭಯೋತ್ಪಾದಕರಿಂದಲೇ ಗೌರಿ ಹತ್ಯೆ ನಡೆದಿದೆ. ದಾಬೋಲ್ಕರ್, ನರೇಂದ್ರ ಪನ್ಸಾರೆ, ಡಾ. ಎಂ.ಎಂ. ಕಲ್ಬುರ್ಗಿ ಮಾದರಿಯಲ್ಲೇ ಈ ಹತ್ಯೆ ನಡೆದಿದ್ದು, ಹಿಂದುತ್ವದ ವಿರುದ್ಧ ಧ್ವನಿ ಎತ್ತುವವರನ್ನು ವ್ಯವಸ್ಥಿತವಾಗಿ ಮುಗಿಸಲಾಗುತ್ತಿದೆ ಎಂದು ಈ ಸಮಾವೇಶದಲ್ಲಿ ನೇರ ಆರೋಪ ಮಾಡಲಾಯಿತು.

ಗೌರಿ ಲಂಕೇಶ್ ಹತ್ಯೆಯಾಗಿ ಎಂಟು ದಿನ ಕಳೆದಿವೆ. ಆದರೂ ಹಂತಕರ ಬಗ್ಗೆ ಕಿಂಚಿತ್ತೂ ಸುಳಿವು ಸಿಕ್ಕಿಲ್ಲ. ಈ ಮಧ್ಯೆ ಗೌರಿ ಲಂಕೇಶ್ ಹತ್ಯೆ ವಿರೋಧಿ ಹೋರಾಟ ವೇದಿಕೆ ಆಯೋಜಿಸಿದ್ದ ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ಪ್ರಗತಿಪರರು, ಸಾಹಿತಿಗಳು, ಕಲಾವಿದರು, ಪತ್ರಕರ್ತರು, ವಿದ್ಯಾರ್ಥಿಗಳು,ಹೋರಾಟಗಾರರು ಭಾಗವಹಿಸಿದ್ದರು. ಈ ಹತ್ಯೆ ಪ್ರವೃತ್ತಿ ಹತ್ತಿಕ್ಕದಿದ್ದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಒಕ್ಕೊರಲಿನಿಂದ ಹೇಳಿದರು.

ಬೆಂಗಳೂರಿನ ಸಿಟಿ ರೈಲ್ವೆ ನಿಲ್ದಾಣದಿಂದ ಸೆಂಟ್ರಲ್ ಕಾಲೇಜು ಮೈದಾನದವರೆಗೆ ನಡೆದ ರಾಲಿಯಲ್ಲಿ  “ನಾನೂ  ಗೌರಿ, ನಾವೆಲ್ಲರೂ ಗೌರಿ” ಎಂಬ ಘೋಷಣೆ ಮೊಳಗಿತು. ಇದು ಸಮಾವೇಶದ ಕೊನೆಯವರೆಗೂ ಮಾರ್ದನಿಸುತಿತ್ತು.

ನರ್ಮದಾ ಬಚಾವೋ ಆಂದೋಲನದ ಮುಖ್ಯಸ್ಥೆ ಮೇಧಾ ಪಾಟ್ಕರ್ ಮಾತನಾಡಿ, ದಮನಿತರ, ಅಸಹಾಯಕರ ಪರವಾಗಿ ನಿಲ್ಲುವವರನ್ನು ಸಹಿಸಿಸುವ ಮನಃಸ್ಥಿತಿ ಈಗಿಲ್ಲ. ನೇರವಂತಿಕೆಗೆ ಕಡಿವಾಣ ಹಾಕಲಾಗುತ್ತಿದೆ. ಅದೇ ಕಾರಣಕ್ಕೆ ಜೆ ಏನ್ ಯು ನಲ್ಲಿ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಲಾಗಿತ್ತು. ಇತಿಹಾಸಜ್ಞ ರಾಮಚಂದ್ರಗುಹ ತಮ್ಮ ಅಭಿಪ್ರಾಯ ವ್ಯಕ್ತಿಪಡಿಸಿದ್ದಕ್ಕಾಗಿ ಅವರ ಮೇಲೆ ಕೇಸ್ ಹಾಕಿದ್ದಾರೆ.ನಮ್ಮ ಮೇಲೆ ಕೇಸ್ ಹಾಕ್ತೀರಾ ಹಾಕಿಕೊಳ್ಳಿ . ನಮ್ಮೆಲ್ಲರ ಮೇಲೂ ಹಾಕಿ ಅಂತ ಸಾವಾಲೆಸದ್ರು. ಪ್ರಶ್ನೆ ಮಾಡುವ ಹಕ್ಕನ್ನೇ ಕಿತ್ತುಕೊಳ್ಳಲಾಗುತ್ತಿದೆ. ಗೋವಾದ ಒಂದು ವೆಬ್ಸೈಟ್ ಹಿಂದೂ ಧರ್ಮದ ವಿರುದ್ಧ ಮಾತನಾಡುವವರನ್ನು ನಾವು ಕೊಲ್ತಿವಿ ಅಂತ ಹೇಳಿಕೊಂಡಿದ್ದರು ಇಷ್ಟು ದೊಡ್ಡ ದೇಶದ ಪ್ರಧಾನಿಯಾಗಿರುವವರು ಒಂದೇ ಒಂದು ಮಾತೂ ಆಡಲಿಲ್ಲ. ಅದರ ಅರ್ಥವೇನು ಅವರ ಪರವಾಗಿ ಇದ್ದೇವೆ ಅನ್ನುವ ಸಂದೇಶ ರವಾನಿಸಿದಂತಲ್ಲದೆ ಮತ್ತೇನು ಎಂದು ಪ್ರಧಾನಿ ನರೇಂದ್ರ ಮೋದಿ ಹೆಸರೇಳದೆ ಪರೋಕ್ಷವಾಗಿ ಚುಚ್ಚಿದರು.

ಕಮ್ಯುನಿಸ್ಟ್ ಮುಖಂಡ ಸೀತಾರಾಮ ಯೆಚೂರಿ, ಗೌರಿ ಹತ್ಯೆಯನ್ನು ನಾವೇ ಮಾಡಿದ್ದೇವೆ ಎನ್ನುವುದಕ್ಕೆ ಆಧಾರವೇನು ಎಂದು ಪ್ರಶ್ನಿಸುತ್ತಿರುವ ಹಿಂದುತ್ವವಾದಿಗಳಿಗೆ ಉತ್ತರವಿಲ್ಲಿದೆ. ನಮ್ಮ ದೇಶ ವಿವಿಧ ಭಾಷೆ, ಧರ್ಮ ,ಸಂಸ್ಕೃತಿಯುಳ್ಳದ್ದು. ವಿವಿಧತೆಯಲ್ಲಿ ಏಕತೆಯನ್ನು ತಂದು ಒಂದು ರಾಷ್ಟ್ರವಾಗಿಸಲು ಗಾಂಧೀ ಪ್ರಯತ್ನಿಸಿದರೆ ಇವರು ಕೇವಲ ಹಿಂದೂ ರಾಷ್ಟ್ರ ಮಾಡಲು ಹೊರಟಿದ್ದರು. ಭಿನ್ನ ನಿಲುವು ತಳೆದಿದ್ದ್ದ ಗಾಂಧಿಯನ್ನೇ ಕೊಂದರು. ತಮ್ಮ ವಿಚಾರಗಳನ್ನು ವಿರೋಧಿಸಿದವರನ್ನು ಕೊಂದ  ಇತಿಹಾಸ  ಇದೆಯಲ್ಲ. ಅದೇ  ಆಧಾರದಲ್ಲಿ ಗೌರಿ ಹತ್ಯೆ ಗೈದಿರುವವರು ನೀವೇ ಎಂದು ಹೇಳುತ್ತಿದ್ದೇವೆ ಎಂದರು.

ಸಾಹಿತಿ ದೇವನೂರು ಮಹಾದೇವ , ಬಹುತ್ವವೇ ನಮ್ಮ ದೇಶದ ಧರ್ಮ. ಈಗ  ಬಹುತ್ವವನ್ನು ನಿರಾಕರಿಸುತ್ತಿದ್ದಾರೆ. ಬಹುತ್ವ ಇರುವಲ್ಲಿ ಮಾತ್ರ ಸಮತೆ ಮಮತೆ ಸಾಧ್ಯ ಎಂದರು.

ನಿಜಗುಣ ಸ್ವಾಮೀಜಿ- ಈ ದೇಶದಲ್ಲಿ ಹೆಣ್ಣು ಮಕ್ಕಳನ್ನು ದೇವರು ಅಂತ ಪೂಜೆ ಮಾಡುವವರು, ದೇವಸ್ಥಾನಗಳಲ್ಲಿ ದೇವಿಗೆ ಸೀರೆ ಉಡಿಸುವವರು ನೀವು ದ್ರೌಪದಿಯ ಸೀರೆ ಎಳೆದವರು. ನಿಮ್ಮಿಂದ ಗೌರಿಗೆ ನ್ಯಾಯ ಸಿಗುವುದೇ ? ಸೀತೆಯನ್ನು ಅಗ್ನಿಪರೀಕ್ಷೆಗೆ ನೂಕಿದವರು ನೀವು. ಹಿಂದುತ್ವವಾದಿಗಳು ದಲಿತ ಮಹಿಳೆಯರನ್ನು ಆನೆಯ ಕಾಲಿಗೆ ಕಟ್ಟಿ ಎಳೆಸಿದವರು . ಇವರು ಇವತ್ತಿನವರೆಗೆ ಏನೇನು ಮಾಡಿದ್ದಾರೆ ಎನ್ನುವ ಇತಿಹಾಸವನ್ನು ಹೇಳಬೇಕಿದೆ. ಗೌರಿ ಲಂಕೇಶ್ ಬಂಡವಾಳಶಾಹಿಗಳಾ? ಯಾವುದಾದರೂ ಪಕ್ಷದ ಜೊತೆ ಗುರುತಿಸಿಕೊಂಡಿದ್ರ , ಫ್ಯಾಕ್ಟರಿ ನಡೆಸುತ್ತಿದ್ದರಾ ?ಜಾಹಿರಾತು ಇಲ್ಲದ ಪತ್ರಿಕೆ ನಡೆಸಿದ್ರು. ಅಂಥದ್ದನ್ನ ನೀವೆಲ್ಲ ನಾಶ ಮಾಡೋದಿಕ್ಕೆ ಹೊರಟಿದ್ದೀರಿ. ಬಹಳ ದಿವಸ ಇದೆಲ್ಲ ಉಳಿಯುವುದಿಲ್ಲ ಅಂತ ಆಕ್ರೋಶ ವ್ಯಕ್ತಪಡಿಸಿದರು.

ನಿಡುಮಾಮಿಡಿ ಸ್ವಾಮೀಜಿ -ಹಿಂದುತ್ವದ ಭಯೋತ್ಪಾದಕರೇ ಗೌರಿಯ ಹತ್ಯೆ ಮಾಡಿದ್ದಾರೆ. ಬಾಡಿಗೆ ಹಂತಕರನ್ನು ಹಿಡಿಯುವುದು ನಮಗೆ ಮುಖ್ಯವಲ್ಲ. ಅದರ ಪ್ರಯೋಜಕರನ್ನು ಹಿಡಿಯಬೇಕು. ಶಿಕ್ಷೆಯಾಗಬೇಕು . ಸಿದ್ದರಾಮಯ್ಯನವರ ಸರ್ಕಾರ ತನಿಖೆಗೆ ಸಹಕಾರ ಇತ್ತಿದೆ. ಇದು ಕೇವಲ ಆರಂಭ ಶೂರತ್ವ ಆಗಬಾರದು. ಕಲ್ಬುರ್ಗಿ ವಿಷಯದಲ್ಲೇ ನ್ಯಾಯ ಒದಗಿಸಿದ್ದರೆ ಗೌರಿ ಸಾಯುತ್ತಿರಲಿಲ್ಲ. ಶಿಕ್ಷೆ ಆಗುವ ತನಕ ಸರ್ಕಾರ ಬದ್ಧತೆಯಿಂದ ಕೆಲಸ ಮಾಡಬೇಕು.

ಕಾಂಗ್ರೇಸ್ ಪಕ್ಷ ಕುದಿವ ನೀರು . ಕಮ್ಯುನಿಷ್ಟ್ ಶುದ್ಧ ನೀರು ಆದ್ರೆ ಅದು ಪಾತಾಳದಲ್ಲಿ ಕುಡಿಯಲಿಕ್ಕೂ ಇಲ್ಲ ತೊಳೆಯಲಿಕ್ಕೂ ಇಲ್ಲ. ಪ್ರಾಂತೀಯ ಪಕ್ಷಗಳು ನಿಂತ ನೀರು . ಆದ್ರೆ ಬಿಜೆಪಿ ಬೆಂಕಿ . ಈ ಎಲ್ಲ ನೀರು ಸೇರಿ ಬೆಂಕಿಯನ್ನು ನಂದಿಸಬೇಕು .

ಹೀಗೆ ಸಮಾವೇಶದಲ್ಲಿ ಮಾತಾನಾಡಿದ ಕೆ. ನೀಲ , ಸ್ವಾಮಿ ಅಗ್ನಿವೇಶ್, ಜಿಗ್ನೇಶ್ ಸೇರಿದಂತೆ ಬಹುತೇಕ  ಎಲ್ಲರ ನುಡಿಗಳಲ್ಲೂ  ಗೌರಿ ಹತ್ಯೆಗೆ  ಹಿಂದೂ ಮೂಲಭೂತವಾದಿಗಳೇ ಕಾರಣ ಎಂಬ ಅಭಿಪ್ರಾಯ ಕೇಳಿ ಬಂತು. ಜೊತೆಗೆ ಗೌರಿ ಹಂತಕರನ್ನು ಶೀಘ್ರವೇ ಬಂಧಿಸಬೇಕೆಂಬ ಒತ್ತಾಯವೂ ಹರಿದು ಬಂತು.

1 COMMENT

  1. ಇಡೀ ಹೋರಾಟ ಕೇವಲ ಮೋದಿ, ಆರ್​ಎಸ್​ಎಸ್​, ಬಿಜೆಪಿ ಟೀಕಿಸುವುದೋ ಅಥವ ಬೈಯ್ಯುವುದನ್ನು ಬಿಟ್ಟರೇ ಬೇರೇನನನ್ನು ಸಾಧಿಸಲಿಲ್ಲ. ಇಲ್ಲಿ ಬಂದವರು ಕೇವಲ ತಮ್ಮ ಬಾಯಿ ಚಪಲ ತೀರಿಸಿಕೊಳ್ಳಲು ಎಲುಬಿಲ್ಲದ ನಾಲಿಗೆಯಲ್ಲಿ ಏನೇನೋ ಅಲುಬಿದರು. ಎಲ್ಲಕ್ಕಿಂದ ದುರಾದೃಷ್ಟ ಎಂದರೆ ಜೆಗ್ನೇಶ್ ಮೇವಾನಿ ಎಂಬ ಅವಿವೇಕಿ ಮಾತುಗಳು. ನಿಜಗುಣನಂದ, ನಿಡುಮಾಮಿಡಿ ಸ್ವಾಮಿಗಳೇಂಬ ಎಡಬಿಡಂಗಿ ಸರ್ಕಾರಿ ಪೋಷಿತ ಶ್ರೀಗಳ ನುಡಿಮುತ್ತುಗಳು. ಹತ್ಯೆ ಮಾಡಿದವರನ್ನು ಪತ್ತೆ ಹಚ್ಚಿ ಎಂದು ಇಲ್ಲಿನ ಸಿದ್ದರಾಮಯ್ಯಗೆ ಗಟ್ಟಿಯಾಗಿ ಕೇಳುವ ಧೈರ್ಯ ಯಾವನೂ ತೋರಿಸದೇ ಹೋಗಿದ್ದು, ಇದೊಂಥರ ಸರ್ಕಾರಿ ಕೃಪಾ ಪೋಷಿತ ಪ್ರತಿಭಟನೆತ ಪ್ರತಿರೋಧ ಸಮಾವೇಶವಾಯ್ತು. ಸಾಧಿಸಿದ್ದು ಮಾತ್ರ ಶೂನ್ಯ

Leave a Reply