ಲಿಂಗಾಯತ, ವೀರಶೈವ ಒಂದೇ ಎಂದ ಸಿದ್ದಗಂಗಾ ಶ್ರೀಗಳು, ಸಚಿವ ಎಂ.ಬಿ. ಪಾಟೀಲ್ ಗೆ ತೀವ್ರ ಮುಖಭಂಗ

ಡಿಜಿಟಲ್ ಕನ್ನಡ ಟೀಮ್:

ಲಿಂಗಾಯತ ಮತ್ತು ವೀರಶೈವ ಎರಡೂ ಒಂದೇ ಎಂದು ತುಮಕೂರು ಸಿದ್ದಗಂಗಾ ಶ್ರೀ ಡಾ. ಶಿವಕುಮಾರ ಶ್ರೀಗಳು ಹೇಳಿದ್ದು, ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಸಮುದಾಯ ವಿಭಜಿಸಲು ಹೊರಟಿರುವವರಿಗೆ ತಿರುಗೇಟು ನೀಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ಶ್ರೀಗಳನ್ನು ಭೇಟಿ ಮಾಡಿದ್ದ ರಾಜ್ಯ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಲಿಂಗಾಯತ ಪ್ರತ್ಯೇಕ ಧರ್ಮ ಮಾಡಲು ಶ್ರೀಗಳು ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಹೇಳಿಕೊಂಡಿದ್ದರು. ಆದರೆ ಅದರ ಬೆನ್ನಲ್ಲೇ ತುಮಕೂರು ಶ್ರೀಗಳು ನೀಡಿರುವ ಈ ಸ್ಪಷ್ಟನೆಯಿಂದ ಎಂ.ಬಿ. ಪಾಟೀಲ್ ಅವರಿಗೆ ತೀವ್ರ ಮುಖಭಂಗವಾಗಿದೆ.

ಸಿದ್ದಗಂಗಾ ಶ್ರೀಗಳು ಮಂಗಳವಾರ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಎಂ.ಬಿ. ಪಾಟೀಲ್ ಅವರು ಮಠಕ್ಕೆ ಭೇಟಿ ನೀಡಿದಾಗ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಚರ್ಚಿಸಿದರು. ಆಗ ಲಿಂಗಾಯತ ಪದ ಗ್ರಾಮೀಣ ಭಾಗದಲ್ಲಿ ಬಳಕೆಯಲ್ಲಿದ್ದು, ನಗರ ಪ್ರದೇಶ ಹಾಗೂ ವಿದ್ಯಾವಂತರು ವೀರಶೈವ ಎಂದು ಕರೆಯುತ್ತಿದ್ದಾರೆ. ಹೀಗಾಗಿ ಈ ಎರಡೂ ಪದಗಳು ಒಂದೇ ಆಗಿದ್ದು, ಎಲ್ಲಾ ಧಾರ್ಮಿಕ ಹಾಗೂ ಸಮಾಜದ ಮುಖಂಡರು ಒಂದೆಡೆ ಕುಳಿತು ಸರ್ವಸಮ್ಮತ ನಿರ್ಧಾರಕ್ಕೆ ಬರುವುದು ಸೂಕ್ತ ಎಂದು ಅಭಿಪ್ರಾಯ ತಿಳಿಸಿದ್ದೆ. ಆದರೆ ಸಚಿವ ಪಾಟೀಲರು ಲಿಂಗಾಯತ ಪದದ ಪರವಾಗಿ ತಾವು ಬೆಂಬಲ ಸೂಚಿಸಿರುವುದಾಗಿ ಮಾಧ್ಯಮಗಳಿಗೆ ಹೇಳಿರುವುದು ಸರಿಯಲ್ಲ. ಸಮಾಜವನ್ನು ಈ ರೀತಿ ಇಬ್ಭಾಗ ಮಾಡುವ ಯಾವುದೇ ಪ್ರಯತ್ನವೂ ಸರಿಯಲ್ಲ ಎಂದು ತಿಳಿಸಿದ್ದಾರೆ.

ಈ ಮಧ್ಯೆ ಎಂ.ಬಿ. ಪಾಟೀಲ್ ಅವರು ಶ್ರೀಗಳನ್ನು ಭೇಟಿ ಮಾಡಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ, ಮಾಜಿ ಸಚಿವ ವಿ. ಸೋಮಣ್ಣ ಅವರೂ ಸ್ವಾಮೀಜಿಗಳನ್ನು ಭೇಟಿ ಮಾಡಿದ್ದರು. ಸೋಮಣ್ಣ ಲಾಗಾಯ್ತಿನಿಂದಲೂ ಮಠ ಮತ್ತು ಶ್ರೀಗಳ ಜತೆ ನಿಕಟ ಸಂಪರ್ಕ ಹೊಂದಿರುವವರು. ಶ್ರೀಗಳನ್ನು ಭೇಟಿ ಮಾಡಿದ ಬೆನ್ನಲ್ಲೇ ಯಡಿಯೂರಪ್ಪನವರು ಎಂ.ಬಿ. ಪಾಟೀಲರ ಹೇಳಿಕೆಯಲ್ಲಿನ ಸತ್ಯ ಏನೆಂಬುದು ಒಂದೆರಡು ದಿನದಲ್ಲಿ ಬಯಲಾಗುತ್ತದೆ ಎಂದು ಹೇಳಿದ್ದರು. ಇದೀಗ ಸ್ವಾಮೀಜಿಗಳು ಸ್ಪಷ್ಟನೆ ಕೊಟ್ಟಿದ್ದಾರೆ. ಎಂ.ಬಿ. ಪಾಟೀಲರ ನಿಲುವಿಗೆ ತಮ್ಮ ಬೆಂಬಲ ಇಲ್ಲ ಎಂದಿದ್ದಾರೆ.

ಮೂಲಗಳ ಪ್ರಕಾರ ಎಂ.ಬಿ. ಪಾಟೀಲ್ ಹೇಳಿಕೆ ನಂತರ ಸಮುದಾಯದ ಹಲವು ಮುಖಂಡರು ಶ್ರೀಗಳನ್ನು ಸಂಪರ್ಕಿಸಿದ್ದರು. ಶ್ರೀಗಳಾದ ತಾವು ಯಾರ ಪರವೂ ನಿಲ್ಲದೆ ತಟಸ್ಥವಾಗಿರುವುದು ಸಮಾಜದ ಹಿತದೃಷ್ಟಿಯಿಂದ ಒಳಿತು ಎಂದೂ ಕೋರಿದ್ದರು. ಸ್ವಾಮೀಜಿಗಳು ಆಗಲೇ ತಾವು ಯಾರ ಪರವೂ ಇಲ್ಲ ಎಂದು ಸ್ಪಷ್ಟಪಡಿಸಿದ್ದರು. ಇದೀಗ ಮಾಧ್ಯಮಗಳ ಮೂಲಕ ಅದನ್ನು ಪುನರುಚ್ಛರಿಸಿದ್ದಾರೆ. ಈ ಮಧ್ಯೆ ಎಂ.ಬಿ ಪಾಟೀಲ್ ಅವರು ತಾವು ಸುಳ್ಳು ಹೇಳಿಲ್ಲ, ಶ್ರೀಗಳು ಆ ರೀತಿ ಹೇಳಿದ್ದು ನಿಜ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

1 COMMENT

Leave a Reply